ಖಾರ ಮಸಾಲೆ: 'ಎಲ್ಲರಿಗೂ ಚಿನ್ಹೆ ಹಾಕಿದ್ರೆ ಆಗ ಬರ್ತಾರ ದಾರಿಗೆ'

Chandrashekhara Kulamarva
0



'ಏನೈತಿ ಬಿಸಿ ಬಿಸಿ ಬಾತ್?' ಕೇಳಿದ ಬಾಶಾ

'ಈಗ ಮುಂಜಾಳೆ ಮುಂಜಾಳೆ ಏನ್ ಭಾತ್ ತಿಂತಾರಯ್ಯ ಮೂಳ?' ಎಂದು ಬೈದ ಕಾಕಾ

'ಏ ಕಾಕಾ,ಬಾತ್ ಅಂದ್ರs ತಿನ್ನೊದು ಅಲ್ಲ,ಬಾತ್ ಬೋಲೆ ತೋ ಮಾತು..... ಸುದ್ದಿ ಸಮಾಚಾರ' ಎಂದು ಸಮಜಾಯಿಷಿ ನೀಡಿದ ಬಾಶಾ

'ಇಂವಾ ಏನಲೇ, ಆ ಕಿಸ್ಕಿಂಗ್ನಗತ್ಲೆ ಮಾತಾಡ್ತಾನು?' ಕೇಳಿದ ಕಾಳ್ಯಾ

'ಏ ನಾ ಕ್ಯಾ ಬಾತ ಕರ್ಯಾ? ನನಗ ಅಂವಗ ಒಂದೇ ತಕ್ಕಡ್ಯಾಗ ತೂಗಬ್ಯಾಡಲೇ ಯಬರೇಶಿ' ಎಂದು ಸಿಟ್ಟಿಲೇ ಕಟಕಟನೇ ಹಲ್ಲು ಕಡಿದ ಬಾಶಾ


'ಹೌಂದು ಮತ್ತೆ, ಆ ಹಿಂಹುಲಿ ವಿರುದ್ಧ ಆ ಹೊನ್ನಾಳಿನ್ನ ಬೈಲಿಕ್ಕೆ ಬಿಟ್ಟಾರಲಾ ಹಂಗs ಇದೂ' ಎಂದ ಕಾಳ್ಯಾ

'ಏ ಅದು ಬಾರೇನೇ ಐತಿ ಇದೂ ಬ್ಯಾರೇನೇ ಐತಿ' ಎಂದ ಡುಮ್ಯಾ

'ಏ ನಂದೇ ಇದೂ ನಂದೇ ಅಂತ ಅಂತತಿ ಬಂಡೆ' ಎಂದು ನಕ್ಕ ಟಕಳ್ಯಾ

' ಎಲ್ಲಾರ ತೆಲಿನೂ ನಿನ್ನಂಗ ಸಾಫ್ ಆಗಿಲ್ಲಲೇ ಟಕಳು!' ಎಂದ ರಬಡ್ಯಾ

'ಏ ನನ್ನ ತೆಲಿ ಸುದ್ದಿಗೆ ಬರ್ಬ್ಯಾಡ ನೋಡು, ಇಲ್ಲಾಂದ್ರ......' ಎಂದು ಅಬ್ಬರಿಸಿದ ಟಕಳ್ಯಾ


'ಇಲ್ಲಾಂದ್ರs ಕ್ಯಾ ಕರ್ತಾ ಬಾ ನೀನು?' ಎಂದ ಬಾಶಾ

'ಒದ್ದ ಬಿಡ್ತಿನಿ' ಎಂದ ಟಕಳ್ಯಾ

'ಅಲ್ಲೋ ಮಳ್ಳ ಹಳೇ ಮಳ್ಳs, ಇಂವಗ ಒದ್ದರs ಏನು ಬರತೈತಿ? ಹೋಗಿ ಆ ಬಂಡೆ ಮನಿ ಬಾಗಿಲಕ್ಕ ಒದಿ ಅಂದ್ರs ನೀ ಮಂತ್ರಿ ಆಕ್ಕಿದಿ' ಎಂದು ಜೋರಾಗಿ ನಕ್ಕಳು ರಾಶಿ

'ಯಾಕವ್ವ? ಒದ್ದರ ಮಂತ್ರಿ ಆಕ್ಕಾರೇನು?' ಕೇಳಿದ ಟಕಳ್ಯಾ

'ಹೌಂದು ಮತ್ತs, ಬಂಡೆನೇ ಹೇಳಿಲ್ಲೇನು? ಹೋಗಿ ಒದ್ದೆ, ಮಂತ್ರಿ ಆದೆ ಅಂತ' ಎಂದ ಧಡಂಧುಡಕಿ


'ಅಂದ್ರs ಹಿಂದ್ಕ ನಮ್ಮಲ್ಲಿ, ತಮಟೆ ಚಳುವಳಿ, ಬಾರಕೋಲ ಚಳುವಳಿ ಅಂತ ಆಗಿದ್ದೂ ಅಲಾ, ಹಂಗೇನೂ ಇದ್ನೂ?' ಕೇಳಿದ ಸ್ಪೀಡ ಬ್ರೇಕರ

'ಹೌಂದಪಾ ಹೌಂದು, ಎಲ್ಲಾರೂ ಏನರೇ ಒಂದs ಮಾಡೇ ಗಿಟ್ಟಿಸಿಕೊಂಡಾರ, ಯಾರಿಗೂ ಏನೂ ಪುಕ್ಕಟೆ ಸಿಕ್ಕಿಲ್ಲ' ಎಂದ ಗಬರೂ

'ಇದು ಯಾರಲೇ ತಮ್ಮಾ? ಹೊಸ ತಳಿ ಐತೇಲಾ?' ಕೇಳಿದ ಕಾಕಾ

'ಕಾಕಾ, ಇಂವಾ ಗಬರೂ ಅಂತ, ಇವನ ನೆಕ್ಸ್ಟ ಪಂಚಾಯತಿ ಕಮಿಟಿ ಚೇರಮನ್ ಮಾಡವ್ರು ಆದಾರ' ಎಂದಳು ರಾಣಿ

'ಯಾವ ಪಂಚಾಯತಿ?' ಕೇಳಿದ ರಬಡ್ಯಾ


'ಅದೇ ಈಗ ಗ್ರಾಮ ಪಂಚಾಯತಿ ಎಲೆಕ್ಷನ್ಕೂ ಪಕ್ಷದ ಚಿನ್ಹ ಕೊಡವ್ರು ಅದಾರು, ಅದರ ಬಗ್ಗೆ ರಿಪೋರ್ಟ ಕೊಡಲಿಕ್ಕೆ ಚೇರ್ಮನ್!' ಎಂದ ಧಡಂಧುಡಕಿ

'ಅಂದ್ರs ಅಲ್ಲಿ ಈಗ ಮೊದ್ಲ, ಪಕ್ಷದ ಚಿನ್ಹೆ ಇಲ್ಲದನ, ಪಕ್ಷ ಪಕ್ಷ ಅಂತ ಬಡದಾಡ್ತಿದ್ರು, ಇನ್ನೇನು ಕೇಳೂದು, ಈಗ ಡೈರೆಕ್ಟ್ ಲೈಸನ್ಸ್ ಕೊಟ್ಟಂಗ ಆತು ತೊಗೋರಿ' ಎಂದು ನಕ್ಕ ಡುಮ್ಯಾ

' ಎಲ್ಲಾರೂ ಮಾಡುದೂ ಹೊಟ್ಟೆಗಾಗಿ ಗೇಣು ಬಟ್ಟೆಗಾಗಿ' ಎಂದ ಟಕಳ್ಯಾ

' ಎಲ್ಲಾರೂ ಹೊಟ್ಟೆ ಬಟ್ಟೆಗಾಗಿ ಮಾಡಿದ್ರs ನೀ ತೆಲಿ ಸಲಾಗಿ ಮಾಡ್ತಿದಿ ನೋಡು' ಎಂದ ಗಬರೂ


'ಏ ನನ್ನ ತೆಲಿ ಸುದ್ದಿಗಿ ಬರ್ಬ್ಯಾಡ ನೋಡ ನೀ, ಮತ್ತs ನನ್ನ ತೆಲಿ ಕೆಟ್ತಂದ್ರs ನಾ ಮನಶ್ಯಾನೇ ಅಲ್ಲ ನೋಡು' ಎಂದ ಸಿಟ್ಟಿನಿಂದ ಟಕಳ್ಯಾ

'ಮತ್ತs ನೀ ಈಗ ಮನಶ್ಯಾ ಅಂತ ತಿಳಿದಿ ಏನು?' ಅಂತ ಟಕಳ್ಯಾನ್ನ ಕೆಣಕಿದ ಗಬರೂ

'ಏ ಇರ್ಲಿ ಸುಮ್ಮನೇ ಇರ್ರೆಲೇ, ಹಂಗ್ಯಾಕ ಹಿಂಹುಲಿ ಮತ್ತs ಮರಿಸಿಟ್ಟೂರಿ ಜಗಳಾಡಿದಂಗ ಜಗಳಾಡಕತ್ತಿರಿ?' ಎಂದು ಕಾಕಾ ಬೈದ


'ಹಂ ರಾಜ್ಯದಾಗ ಚಳಿ ಭಾಳ ಆಗೇತಿ, ಮೆಕ್ಕಿತೆನಿ ಸುಟ್ಟಕೋಳೂದು ಜಾಸ್ತಿ ಆಗೇತಿ!' ಎಂದು ಹೇಳಿ ರಬಡ್ಯಾ ಒಂದು ನಮೂನಿ ಅರ್ಥಗರ್ಭಿತವಾಗಿ ನಕ್ಕ

'ಹಂ ನಡಿರಿ ಹಂಗಾರ ಎಲ್ಲಾರೂ, ಚಳಿಗಾಲದ ಅಧಿವೇಶನದಾಗ ಯಾರ್ಯಾರೂ ಎಷ್ಟೆಷ್ಟು ಬೆಂಕಿ ಕಾಸಗೊಳಿಕತ್ತಾರು, ಅದರಾಗ ಎಷ್ಟ ಮೆಕ್ಕೆತೆನಿ ಸುಟ್ಟಾವು ಅಂತ ನೋಡಿ ಬರಾಮು ನಡ್ರಿ' ಅಂತ ಎಲ್ಲಾರನ್ನೂ ಕರಕೊಂಡು ಬೆಳಗಾವಿಗಿ ಹೊಂಟ ನಮ್ಮ ಗಬರೂ


-ಶ್ರೀನಿವಾಸ ಜಾಲವಾದಿ, ಸುರಪುರ



ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 

Post a Comment

0 Comments
Post a Comment (0)
To Top