ಏಕಾದಶಿ: ನಮ್ಮ ಭಾರತೀಯ ಪಂಚಾಂಗ ಅಥವಾ ಕ್ಯಾಲೆಂಡರ್ ಕೇವಲ ದಿನ ಎಣಿಕೆಯ ಮೇಲೆ ಅವಲಂಬಿತವಾಗಿಲ್ಲ! ಆದರೆ ಪಕೃತಿಯಲ್ಲಿ ಬರುವ ಹುಣ್ಣುಮೆ ಮತ್ತು ಅಮವಾಸ್ಯೆ ನಿಸರ್ಗ ಚಕ್ರವನ್ನು ಅವಲಂಬಿಸಿದೆ.
೧ ಪ್ರತಿಪದಾ ೨ ದ್ವಿತಿಯಾ ೩ ತೃತೀಯಾ ೪ ಚತುರ್ಥೀ ೫ ಪಂಚಮಿ ೬ ಷಷ್ಟಿ 7 ಸಪ್ತಮಿ 8 ಅಷ್ಟಮಿ 9 ನವಮಿ 10 ದಶಮಿ
11 ಏಕಾದಶಿ 12 ದ್ವಾದಶಿ 13 ತ್ರಯೋದಶಿ 14 ಚತುರ್ದಶಿ 15 ಅಮವಾಸ್ಯೆ ಅಥವಾ 15 ಹುಣ್ಣುಮೆ- ಹೀಗೆ ಹದಿನೈದು ದಿನಗಳ ಆವರ್ತನ!!
ಇದರಲ್ಲಿ ಪ್ರತಿ ಹದಿನೈದು ದಿನಗಳಿಗೊಮ್ಮೆ ಬರುವ ಏಕಾದಶಿ ಎಂಬ ತಿಥಿ!! ಅಂದು ಭಾರತೀಯ ಪರಂಪರೆಯ ಪ್ರಕಾರ ಏಕಾದಶಿ ಎಂಬ ವೃತ. ನಾವು ಸುಮ್ಮನೆ ಕುಳಿತರೂ ನಮ್ಮ ಕರುಳು ನಮ್ಮ ಆಹಾರವನ್ನು ಅರಗಿಸಿ ಶಕ್ತಿಯ ಬಿಡುಗಡೆ ಮಾಡಲು, ಕಠಿಣ ಪರಿಶ್ರಮ ಮಾಡುತ್ತಲೇ ಇರುತ್ತದೆ. ದಣಿದ ದೇಹ, ಮನಸ್ಸು ಮತ್ತು ಮೆದುಳಿಗೆ ವಿಶ್ರಾಂತಿ ಹೇಗೆ ಅವಶ್ಯಕವೋ ಹಾಗೆ ಕರುಳಿಗೆ, ಚಯಾಪಚಯ ಕ್ರಿಯೆಯಲ್ಲಿ
ಭಾಗಿಯಾಗುವ ಎಲ್ಲ ಅಂಗಾಂಶಗಳಿಗೂ ವಿಶ್ರಾಂತಿ ಅವಶ್ಯಕತೆ ಇದೆ.
ಹದಿನೈದು ದಿನಗಳಿಗೆ ಒಮ್ಮೆ ಬರುವ ಏಕಾದಶಿ ಎಂಬದು ಆಹಾರ ಸೇವನೆಗೆ ವರ್ಜವಾದ ದಿನ. ಅಂದು ನಮ್ಮ ಪಚನಾಂಗಕ್ಕೆ ವಿಶ್ರಾಂತಿ ನೀಡುವುದರಿಂದ ನಮ್ಮ ದೇಹವು ವಿವಿಧ ಹೆಚ್ಚಿನ ಕೆಲಸಗಳಲ್ಲಿ ತೊಡಗುತ್ತದೆ. ಹೇಗೆ ನಾವು ರಜೆಯ ದಿನ ಮನೆಯ ಹೆಚ್ಚಿನ ಸ್ವಚ್ಛತಾ ಕಾರ್ಯ ಕ್ರಮಕ್ಕೆ ಆದ್ಯತೆ ನೀಡುವೆವೋ ಹಾಗೆ.. ಏಕಾದಶಿ ಉಪವಾಸ ಮಾಡುವುದರಿಂದ ಕೆಲವು ಪ್ರಯೋಜನಗಳಿವೆ.
* ದೇಹದ ಹಾರ್ಮೋನುಗಳು ಸಂತುಲನ ಹೊಂದುವವು.
* ಜೀವಕೋಶಗಳ ದುರಸ್ತಿ ಕೆಲಸ ಮಾಡುವುದು.
* ಮೆದುಳಿಗೆ ಮತ್ತು ಕರುಳಿಗೆ ವಿಶ್ರಾಂತಿ ಸಿಗುವುದು.
* ದೇಹದ ಇನ್ಸುಲಿನ್ ವ್ಯವಸ್ಥೆ ಕಾಪಾಡುವುದು.
* ಸಕ್ಕರೆ ಕಾಯಿಲೆ ನಿಧಾನಗೊಳ್ಳುವುದು.
* ಮುಪ್ಪು ಮತ್ತು ಚರ್ಮದ ಸುಕ್ಕು ಮುಂದೂಡುವುದು.
*ರಕ್ತದ ಒತ್ತಡ ಮತ್ತು ಹೃದಯದ ಕಾಯಿಲೆಗಳಗೆ ಉಪಚಾರ ಸಿಗುವುದು.
* ದೇಹದ ತೂಕ, ಬೊಜ್ಜು ಕರಗುವುದು.
* ಹೊಸ ಜೀವಕೋಶಗಳ ಬೆಳವಣಿಗೆ.
* ಮಾನಸಿಕ ಸ್ಥಮಿತತೆಯನ್ನು ಹೆಚ್ಚಿಸುವುದು.
ಇದಲ್ಲದೆ ಕ್ಯಾನ್ಸರ್ ನಂತಹ ಕಾಯಿಲೆ ತಡೆಗಟ್ಟುವ ಶಕ್ತಿ ಉಪವಾಸ ಕ್ಕೆ ಇದೆ.
ಉಪವಾಸ ಗಳಲ್ಲಿ ಹಲವು ವಿಧ. ಒಮ್ಮಿಂದೊಮ್ಮೆಲೇ ಉಪವಾಸ ಮಾಡುವದು ಕಷ್ಟ!! ಅದನ್ನು ಹಂತಹಂತವಾಗಿ ಸಾಧಿಸಬಹುದು.
ಅಲ್ಪೋಪಹಾರ, ಮಿತವಾದ ಮತ್ತು ಸಾತ್ವಿಕವಾದ ಆಹಾರವನ್ನು ಅಗತ್ಯ ಕ್ಕೆ ತಕ್ಕಂತೆ ಲಘುವಾಗಿ ಸೇವಿಸಿ ಉಪವಾಸ ಮಾಡುವುದು. ಮುಂದಿನ ಹಂತ, ಕೇವಲ ಫಲಗಳನ್ನು ಮಾತ್ರ ಸೇವಿಸಿ ಬೇಯಿಸಿದ ತಿಂಡಿ, ಲವಣವನ್ನು ತ್ಯಜಿಸಿ, ಹಾಲು ಮತ್ತು ಹಣ್ಣುಗಳನ್ನು ಮಾತ್ರ ಸೇವಿಸುವುದು. ಲವಣವನ್ನು ತ್ಯೆಜಿಸುವುದರಿಂದ ದೇಹದ ರಕ್ತದ ಒತ್ತಡ ಸ್ಥಿಮಿತವಾಗುತ್ತದೆ. ಮುಂದಿನ ಹಂತ ಕೇವಲ, ನೀರು, ಪಾನಕ, ಎಳೆನೀರು, ಮಜ್ಜಿಗೆಯಂತಹ ದ್ರವ ಪದಾರ್ಥಗಳನ್ನು ಮಾತ್ರ ಸೇವಿಸಿ, ಘನ ಆಹಾರ ಪದಾರ್ಥಗಳನ್ನು ತ್ಯೆಜಿಸುವುದು.
ಇನ್ನು ಕೊನೆಯ ಹಂತ, ನಿರ್ಜಲ ಅಥವಾ ನಿರಾಹಾರ ಏಕಾದಶಿ ವೃತ, ಅಂದರೆ ಅಂದು ಅನ್ನ, ಆಹಾರ, ನೀರು ಎಲ್ಲವನ್ನೂ ತ್ಯೆಜಿಸಿ ಉಪವಾಸ ಇರುವುದು, ಇದು ನಮ್ಮ ದೇಹದ ರೋಗ ನಿರೋಧಕ ಶಕ್ತಿ ಹೆಚ್ಚಿಸುವುದು. ದೇಹ ಶುದ್ಧ ವಾಗುವುದು ಹಾಗೂ ಮಾನಸಿಕ ಆರೋಗ್ಯ ಸುಧಾರಿಸುವುದು. ಒಂದೇ ಬಾರಿಗೆ ಏಕಾದಶಿ ಅಥವಾ ಉಪವಾಸ ಮಾಡಿದರೆ, ತಲೆಸುತ್ತು, ವಾಂತಿ, ಸಂಕಟ, ಕೈ ಕಾಲು ನಡುಕ, ಸುಸ್ತು ಆಗುವ ಸಂಭವ ಇರುತ್ತದೆ. ಅದಕ್ಕೆ ಹಂತಹಂತವಾಗಿ ದೇಹವನ್ನು ಉಪವಾಸ ಕ್ಕೆ ಒಗ್ಗಿಸಬೇಕು! ರವಿವಾರ ಹೇಗೆ ಶಾಲೆ, ಕಾಲೇಜು, ಕಛೇರಿಗಳಿಗೆ ರಜೆ ಇರುತ್ತ ಅಲ್ಲವೋ ಹಾಗೆ ಪುರಾತನ ಭಾರತೀಯ ಶಾಸ್ತ್ರಜ್ಞ ರು ಏಕಾದಶಿ ಅಂದು ದೇಹದ ಚಯಾಪಚಯ ಕ್ರಿಯೆಗೆ ಸಾರ್ವತ್ರಿಕ ರಜೆ ಘೋಷಿಸಿ, ಸಾಧ್ಯವಾದಷ್ಟು ಅನ್ನ ಆಹಾರ ತ್ಯಾಗ ಮಾಡಲು ಹೇಳಿರುವರು.ಇದು ಮೇಲ್ನೋಟಕ್ಕೆ ಸಂಪ್ರದಾಯದಂತೆ ಕಂಡುಬಂದರೂ ಆರೋಗ್ಯ ವನ್ನು, ಸದೃಢ ದೇಹದಲ್ಲಿ, ಉತ್ಕೃಷ್ಟ ಚಿಂತನೆಯನ್ನು ಕಾಪಾಡಲು ಮಾಡಿದ ಮಾರ್ಗ!!
ಹೀಗೆ ಆರೋಗ್ಯದ ದೃಷ್ಟಿಯಿಂದ, ಮಾನಸಿಕ ಸೌಖ್ಯ ಮತ್ತು ಸ್ವಾಸ್ಥ್ಯಕ್ಕಾಗಿ ಏಕಾದಶಿ, ಅಥವಾ ಉಪವಾಸ ಅವಶ್ಯಕ.ಒಂದುದಿನವಾದರೂ ಅಡುಗೆಮನೆಯ ಗೌಜಿಗೆ ರಜೆ ಬೇಡವೇ!? ಅನ್ನದ ಅಗುಳಿನ ಮಹತ್ವ ತಿಳಿಯ ಲಾದರೂ ಉಪವಾಸ ಮಾಡಲೇಬೇಕು. ಇದು ತಿನ್ನುವ ಹಂಬಲ ತಡೆದು ಮನೋ ನಿಗ್ರಹ ಮಾಡುವ ಕಲೆ! ಬಡವ, ಶ್ರೀಮಂತ, ಹೆಣ್ಣು, ಗಂಡು, ಮಕ್ಕಳು ಅಬಾಲ ವೃದ್ಧರಾದಿಯಾಗಿ ಎಲ್ಲರಿಗೂ ಹಸಿವು ಎನ್ನುವುದು ಸಹಜ ಪ್ರಕೃತಿ ಕ್ರಿಯೆ! ಇದನ್ನು ಕೂಡ ಒಂದು ದಿನ ನಿಗದಿಸಿ ಸಾರ್ವತ್ರಿಕವಾಗಿ ಮಾಡುವುದು ಏಕಾದಶಿಯ ಒಗ್ಗಟ್ಟು. ಎಲ್ಲರಿಗೂ ಅನ್ನದ ಅಹಮ್ಮಿಕೆ ಅರಿವಾಗಲೇಬೇಕು. ರೈತನ ಬೆವರು ಬೆಳೆಯುವುದು ಮುತ್ತನ್ನು!! ಸಮುದ್ರದಲ್ಲಿ ಬೆಳೆದ ಮುತ್ತು ಆಭರದಲ್ಲಿ ಅಲಂಕಾರವಾದರೆ, ಹೊಲದಲ್ಲಿ ಉತ್ತಿಬಿತ್ತಿದ ಒಂದು ಮುತ್ತು ಸಾವಿರವಾಗಿ ಹಸಿವಿನ ಅಗಿಗಿಷ್ಟಿಕೆಯಲ್ಲಿ ಬಿದ್ದು ದೇಹಕ್ಕೆ ಕಸುವು ತುಂಬುವುದು.
- ಸಾಕ್ಷಿ ಶ್ರೀಕಾಂತ ತಿಕೋಟಿಕರ
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ