ಕಂಪ್ಯೂಟರ್, ಲ್ಯಾಪ್ಟಾಪ್, ಐಫೋನ್ ಕೈ ಕಾಲುಗಳಿಗೆ ಸದಾ ತಗಲುವಂತಿದ್ದರೂ, ದಿನಕ್ಕೊಮ್ಮೆ ಯಾದರೂ ಪೆನ್ನೊಂದನ್ನು ಎತ್ತಿ. ಮುದ್ದಾಡಿ ಒಂದರ್ಧ ಗಂಟೆಯಾದರೂ ಬರೆಯದಿದ್ದರೆ, ನನಗೆ ಸಮಾಧಾನವಾಗದು. ಅಷ್ಟು ಎಕ್ಸರ್‌ಸೈಸ್ ಮಾಡದಿದ್ದರೆ ಮಧ್ಯಾಹ್ನವೂ ನಿದ್ದೆ ಬಾರದೆ. ರಾತ್ರೆಯಿಡೀ ಕಣ್ಣು ಕೂರದೆ ಪರದಾಡಬೇಕಾದಂತಹ ನನ್ನ ಜಾತಕವೂ ಇದಕ್ಕೆ ಸೇರಿಕೊಂಡಿದೆ. ಕ್ಷಮಿಸಿ, ನನ್ನದು ಪೆನ್ನೋದ್ಯಮವಲ್ಲ. ಪತ್ರಿಕೋದ್ಯಮ, ಆದರೆ ನಾನೊಬ್ಬ ಪೆನ್ನಾಭಿಮಾನಿ. ಹಗಲು ಕೆಲಸ ಮಾಡುವಾಗಲೂ, ರಾತ್ರಿ ಕನಸಿನಲ್ಲಿಯೂ ಪೆನ್ನೇ ಬರುವ ವೃತ್ತಿ, ಪ್ರವೃತ್ತಿ ನನ್ನದಾಗಿದೆಯೆಂದು ಹೇಳಲು ನನಗೆ ಸದಾ ಸಂಭ್ರಮವೆನಿಸುತ್ತದೆ.
ನಾನು ಮುಟ್ಟಿದ ಮೊದಲ ಪೆನ್ನು ನಾನು ಶಾಲೆಗೆ ಹೋಗುವ ವೇಳೆಗೆ ಬಂದಿತ್ತು, ಅದನ್ನಾಗ ಒಮ್ಮೆ ಮುಟ್ಟಿದೆ, ಆದರೆ, ಬರೆಯಲು ಯಾರೂ ಕೊಡಲೊಪ್ಪಲಿಲ್ಲ, ಏಕೆಂದರೆ, ನಾನು ಕಾಗದದ ತುಂಬಾ ಗೀಚು ಹಾಕಿ ಶಾಯಿ ಮುಗಿಸಿಬಿಡುತ್ತೇನೆಂಬ ಭಯ ಹಿರಿಯರಿಗೆ. ಈಗ ನನ್ನ ಬಳಿ ಜಗತ್ತಿನ 57 ದೇಶಗಳ 48 ಸಾವಿರಕ್ಕೂ ಮೀರಿದ ಲೇಖನಿ ಗಣಿಯೇ ಇದೆ.
ಪೆನ್ ಇಲ್ಲವೇ ಕಲಮು, ಲೇಖನಿ ಎಂದೆಲ್ಲ ಕರೆಯಲಾಗುವ ಈ ಬರವಣಿಗೆ ಸಂಬಂಧಿತ ಉಪಕರಣ ಅಥವಾ ಪದದ ವ್ಯುತ್ಪತ್ತಿ ಹೇಗಾಗಿರಬಹುದೆಂದು ಕುತೂಹಲಿಸಿ ನೋಡಲು ಅನುವಾದಾಗ, ಐದಾರು ನಮೂನೆಯ ಇಂಗ್ಲೀಷು ಡಿಕ್ಷನರಿಗಳು ಅಭ್ಯಾಸ ಬಲದಲ್ಲಿ ಕೈಕಚ್ಚಿದವು. ಆದರೂ ಕೂಡಾ. ಕನ್ನಡ-ಕನ್ನಡವೆಂದು ಉಸುರಿ- ಗಟ್ಟಿ ಅನುಭವದೊಂದಿಗೆ, ವಯಸ್ಸಿನಲ್ಲಿ ಶತಕ ಬಾರಿಸಿರುವ ಮಹಾನ್ ಡಿಕ್ಷನರಿಗರಾದ ಪ್ರೊ. ಜಿ. ವೆಂಕಟಸುಬ್ಬಯ್ಯ ನವರನ್ನು ಸ್ತುತಿಸಿ 'ಇಗೋ ಕನ್ನಡ ಸಾಮಾಜಿಕ ನಿಘಂಟನ್ನು ಹುಡುಕಿ ತೆರೆದೆ. ಅದರಲ್ಲಿ ಹೀಗಿತ್ತು.
"ಲೇಖನಾ- ಸಂಸ್ಕೃತದಲ್ಲಿ ಲೇಖನ ಎಂಬ ಶಬ್ದವಿದೆ. ಅದು ನಪುಂಸಕ ಲಿಂಗವಂತೆ. ಲೇಖನಿ ಎಂದರೆ ಸ್ತ್ರೀಲಿಂಗ, ಲೇಖನ- ಬರಹ, ಚಿತ್ರ ಬರೆಯುವುದು, ಕತ್ತರಿಸುವುದು ಉದ್ದೇಗಗೊಳಿಸುವುದು, ಕತ್ತರಿಸುವ ಸಾಧನ, ವಾಂತಿ ಮಾಡುವುದು, ಹುಲ್ಲು ಎಂಬ ವಿವಿಧಾರ್ಥಗಳಿವೆ. ಆದುದರಿಂದ ಲೇಖನಾ ಎಂದು ಹೆಣ್ಣುಮಗುವಿಗೆ ಹೆಸರಿಡುವುದು ಸರಿಯಾಗುತ್ತದೆಯೇ ಎಂಬುದನ್ನು ಆಲೋಚಿಸಬೇಕು."
ಅಷ್ಟಕ್ಕೇ ಬಿಡುವ ಜಾಯಮಾನ ನನ್ನದಲ್ಲ. ಮುಂದುವರಿದೆನು. " ಲೇಖನಿ, ಲೇಖಣಿ, ಲೇಖನೀ ಎಂಬ ಸಂಸ್ಕೃತ ಶಬ್ದವು ಕನ್ನಡದಲ್ಲಿ ಲೇಖನಿ ಎಂದಾಗುತ್ತದೆ. ಅದಕ್ಕೆ ಬರೆಯುವ ಸಾಧನ ಎಂದರ್ಥ, ಲೇಖಣಿ ಎಂಬುದು ಇದರಿಂದ ಬಂದ ಶಬ್ದ. ಲೇಖನಿಕ ಎಂದರೆ ಸಂಸ್ಕೃತದಲ್ಲಿ ಲೇಖನಿಕಾ ಶಬ್ದದ ಆಧಾರದಲ್ಲಿ ಲೇಖನಿಕೆ. ಲೆಕ್ಕಣಿಕೆ ಎಂಬ ಶಬ್ದಗಳನ್ನು ರೂಪಿಸಿಕೊಂಡು ಉಪಯೋಗಿಸಿದ್ದಾರೆ. ಪ್ರಯೋಗದಲ್ಲಿರುವ ಶಬ್ದಗಳವು. ಅವುಗಳನ್ನು ಕೈಬಿಡಬೇಕಾಗಿಲ್ಲ" ಎಂದೂ ಸೇರಿಸಲ್ಪಟ್ಟಿತ್ತು.
ನನಗೆ ಸರಕಾರವೇ. ಮಕ್ಕಳಿಲ್ಲವೆಂದು ಕನ್ನಡ ಶಾಲೆಗಳನ್ನು ಮುಚ್ಚಹೊರಟಿರುವ ಕಲಿಕಾಲವಿದು. ನಮ್ಮದು ಕನ್ನಡದ್ದೇ ಉಸಿರಾದರೂ, ವಿಂಡೋ ತೆರೆಯುತ್ತಿರುವ ಊರಲ್ಲವೇನು, ಮತ್ತು ಲ್ಯಾಪ್‌ಟಾಪ್, ಟಾಬ್ಲೆಟ್, ಸ್ಮಾರ್ಟ್ ಫೋನ್ ಬಳಸುವ ಕಾಲವಲ್ಲವೇನು? ಸಹಜವಾಗಿಯೇ, ಇಂಗ್ಲೀಷು ಪದಕೋಶದ ಪುಟಗಳನ್ನೂ ತಿರುವು ಹಾಕದೆ ಇರಲು ಮನಸ್ಸಾಗಲಿಲ್ಲ. ಐ ಡಿಡ್ ದ್ಯಾಟ್ ಅಲ್ಲೋ.
ಡಿಕ್ಷನರಿ ಆಫ್ ಪ್ರೈಸಸ್ ಅಂಡ್ ಫೇಬಲ್ ನಲ್ಲಿ "ಪೆನ್ ಅಂಡ್ ಫೆದರ್" ಎಂಬ ಹೆಡ್ ಲೈನ್ ಕಣ್ಣಿಗೆ ಗೋಚರಿಸಿತು. ಪೆನ್ಸ್ ಆರ್ ವೆರೈಟೀಸ್ ಆಫ್ ದಿ ಸೇಮ್ ವರ್ಕ್. ದಿ ರೂಟ್ ಬೀಯಿಂಗ್ ದಿ ಸಾಂಸ್ಕೃಟ್- (ಅಂದರೆ ಕನ್ನಡದಲ್ಲಿ ಸಂಸ್ಕೃತ) ಪ್ಯಾಟ್, ಟು ಡ್ರೈ ವಿ ಹ್ಯಾವ್ ಸಾಂಸ್ಕೃಟ್ ಪತ್ರ- ಎ ವಿಂಗ್ ಆರ್ ದಿ ಇನ್‌ಸ್ಟ್ರುಮೆಂಟ್ ಫಾರ್ ಫ್ಲೈಯಿಂಗ್, ಲ್ಯಾಟಿನ್- ಪೇಟ್ನಾ ಆರ್ ಫೆನ್ನಾ, ಪೆನ್, ಗ್ರೀಕ್- ಫೈರಾನ್. ಟ್ಯಾಬೋಟಿನ್- ಫಾತ್ರಾ, ಅಂಗೋಸಾಕ್ಷನ್ ಫೆದರ್' ಎಂದು ಇದ್ದುದು ಗಮನ ಸೆಳೆಯಿತು, ಪೆನ್ ಮ್ಯಾನ್ಶಿಪ್, ಪೆನ್ನಾಲಿ ಎಂಬಿತ್ಯಾದಿ ಪೆನ್ ಪದ ಪ್ರಾರಂಭದಿಂದ ಉಂಟಾಗಿರುವ ಐವತ್ತಕ್ಕೂ ಹೆಚ್ಚು ಪದಗಳು ಅಲ್ಲಿ ದಾಖಲಾಗಿದ್ದವು. ನನ್ನಲ್ಲೊಂದು ಅಲ್ಲಾಡಿಸಲಾಗದ ನಂಬಿಕೆ ಮೂಡಿದೆ. ಅದೇನೆಂದರೆ "ದಿ ಮೋಸ್ಟ್ ಎಗ್ಸ್ಟಿಂಗ್ ಹಾಬಿ ಇನ್ ದಿ ವರ್ಲ್ಡ್ ಈಸ್ ರೀಡಿಂಗ್ ಹಾಗೂ ದಿ ಮೋಸ್ಟ್ ಫರ್ಫೆಕ್ಟ್ ಇನ್ವೆನ್ಷನ್ ಆಫ್ ಮ್ಯಾನ್ (ವುಮನ್ ಕೂಡಾ ಸೇರಿ) ಈಸ್ ದಿ ಪೆನ್" ಅಂತ. ಓದುವಿಕೆಗಿಂತ ಗಮ್ಮತ್ತೇನಿದೆ ಎಂದು ಎಷ್ಟು ಬೇಕಾದರೂ ಸೋದಾಹರಣ ಭಾಷಣ ಬಿಗಿಯಬಹುದು. ನಾನು ಅದನ್ನು ಹಿಂದೊಮ್ಮೆ ಸೂಕ್ಷ್ಮವಾಗಿ ಪ್ರಸ್ತಾಪಿಸಿದ್ದೆ ಕೂಡಾ. ಹಾಗೆಯೇ ಮನುಷ್ಯ ಕಂಡು ಹುಡುಕಿ ಬದುಕಿಗೆ ಒದಗಿಸಿಕೊಟ್ಟ ಅಗತ್ಯ ವಸ್ತುಗಳಲ್ಲಿ ಅತ್ಯಂತ ಪ್ರಭಾವಶಾಲಿ ಪೆನ್ನು, ಅದುವೇ ಮೋಸ್ಟ್ ಪರ್ಫೆಕ್ಟ್ ಇನ್ನೋವೇಶನ್ ಕೂಡಾ.
ಏಕೆಂದರೆ ಮಾನವ ಸಂಶೋಧಿಸಿದ ಉಳಿದೆಲ್ಲ ವಸ್ತುಗಳ ಆಕಾರ, ಉಪಯೋಗ ಬದಲಾಗುತ್ತಲೇ ಬಂದಿವೆ. ಹಾಗೂ, ಸಂಶೋಧಿತಗೊಂಡಾಗ ಇದ್ದ ರೀತಿಗೂ, ಅದರ ಬಳಕೆಗೂ, ಸ್ವರೂಪಕ್ಕೂ ಗುರುತು ಹಿಡಿಯಲಾಗದಷ್ಟು ಬದಲಾವಣೆ ಹೊಂದಿವೆ. ಆದರೆ, ಬರವಣಿಗೆಗೆಂದು ಕಂಡು ಹಿಡಿಯಲಾದ ಲೇಖಣಿಯನ್ನು ಹಿಡಿದು ಬರೆಯುವ ಕ್ರಮ ಬದಲಾಗಿಲ್ಲ. ಆರಂಭಿಕ ಹಂತದ ಹ್ಯಾಂಡಲ್ ಅಥವಾ ಸ್ಟೀಲೋ ವನ್ನು ಹಿಡಿಯುತ್ತಿದ್ದುದು ಕೈನ ತೋರುಬೆರಳು ಮತ್ತು ಹೆಬ್ಬೆಟ್ಟುಗಳ ನಡುವೆ. ಹೆಬ್ಬೆಟ್ಟಿನ ಆಧಾರದಲ್ಲಿ-ತೋರು ಬೆರಳಿನ ಮಾರ್ಗದರ್ಶನದಲ್ಲಿ ಬರವಣಿಗೆಯೆಂಬುದು ಮುನ್ನಡೆಯುತ್ತದೆ.
ಇಂದಿಗೂ ಪೆನ್ನು- ಲೇಖನಿ ಹಿಡಿದು ಬರೆಯುವ ಕ್ರಮವಂತೂ ಅದುವೇ, ಉದ್ದೇಶವೂ ಅದುವೇ. ಹೊಸ ಸಂಶೋಧನೆಗಳೆಂದು ಕಂಪ್ಯೂಟರ್, ಇಂಟರ್ನೆಟ್ಟುಗಳೂ ಬಂದು. ಬದುಕಿನಲ್ಲಿ ಅಲ್ಲೋಲಕಲ್ಲೋಲ ಮಾಡಿಸಿಬಿಟ್ಟಿವೆ. ಆದರೆ, ಬರವಣಿಗೆ. ಓದುವಿಕೆಯನ್ನು ಮಾಯಗೊಳಿಸಲು ಶಕ್ತವಾಗಿಲ್ಲ.
ನೆನಪಿದೆಯಾ, ಹೋದ ಶತಮಾನಾಂತ್ಯದಲ್ಲಿ, ಖಾಯಂ ಆಗಿ ಅಮೇರಿಕಾಧ್ಯಕ್ಷನಷ್ಟೇ ಜಾಗತಿಕ ಪ್ರಭಾವ ಹೊಂದಿರುವ ಮೈಕ್ರೋಸಾಫ್ಟ್ ಕಂಪನಿಯ ಮುಖ್ಯಸ್ಥ ಬಿಲ್ ಗೇಟ್ಸ್ ಹೋದ ಶತಮಾನಾಂತ್ಯದಲ್ಲಿ ಉದುರಿಸಿದ ಅಣಿಮುತ್ತು ಮತ್ತು ಕಳೆದ ಒಂದು ದಶಕದಲ್ಲಿ ಶತಮಾನ. ಮಗುಚಿದಾಕ್ಷಣ ಏನಾಗಿ ಬಿಟ್ಟಿತೆಂಬ ವಾಸ್ತವ ನಮ್ಮ ಮುಂದಿದೆ.
ಬಿಲ್‌ರು ಬಿಲ್ಲಿನಿಂದ ಬಿಟ್ಟ ಬಾಣ ಹೀಗಿತ್ತು "ಈ ಶತಮಾನ ಕಳೆಯುವಷ್ಟರಲ್ಲಿ ಐ ವುಡ್ ಲೈನ್ ಟು ಸೀ ಎ ವರ್ಲ್ಡ್ ವಿದೌಟ್ ಪೆನ್ ಅಂಡ್ ಪೇಪರ್'' ಅಂತ. ಇನ್ನೂ ಪೇಪರ್ ಇಲ್ಲದ ಜಗತ್ತು ಸೃಷ್ಟಿಯಾಗಿಲ್ಲ. ಬೇಗ ನಿಜವಾದರೆ ಒಳ್ಳೆಯದು. ಏಕೆಂದರೆ, ಅದರಿಂದ ಮುದ್ರಣ ಕಾಗದದ ತಯಾರಿಕೆಗೆ ಬಳಕೆಯಾಗುವ ಪಲ್ಪ್ ಉಳಿದು ಪರಿಸರ ನಾಶ ಕಡಿಮೆಯಾದೀತು.
ಆದರೆ, ಪೆನ್ ಕಥೆ ಮುಗಿಯವುದು ಬಿಡಿ. ಬಿಲ್ ಕಂಪ್ಯೂಟರ್ ನ ಕೀ ಬೋರ್ಡ್ ಹೋಗಿ (ಕೀ ಬೋರ್ಡು ನಿರಂತರ ಬಬಳಸುವುದರಿಂದ ಪ್ರೊಫೆಶನಲ್ ಹಜಾರ್ಡ್ಸ್ ಉಂಟಾಗುತ್ತದೆಂದು ಕಂಡುಂದಿದೆ). ಪೆನ್ನಿನಂತೆಯೇ ಬಳಕೆಯಾಗುವ ಸ್ಟೀಲೋ, ಪೆನ್ ಡ್ರೈವ್ ಗಳು ಬಂದಿವೆ. ಮತ್ತು ತೋರುವ ಬೆರಳಿನಿಂದಲೇ (ಇಂಡೆಕ್ಸ್ ಫಿಂಗರ್) ಬರೆಯಬಹುದಾದ ಸೆನ್ಸಿಟಿವ್ ಸ್ಕ್ರೀನ್‌ಗಳೂ ಬಂದಿವೆ. ಇವೆರಡನ್ನೂ ಪ್ರಾಚೀನ ಲೇಖನಿಯ ಮಾದರಿಯಲ್ಲೇ ಬಳಸಬೇಕು.
ನನಗಿನ್ನೂ ನೆನಪಿದೆ. ಮೊದಲ ಬಾರಿಗೆ ಶಾಲೆಗೆ ಸೇರಿಸಿದಾಗ ನನ್ನ ಅಕ್ಷರಾಭ್ಯಾಸ ಆದುದು ತೋಟದಬೈಲು ಶಾಲೆಯಲ್ಲಿ ವಿಜಯದಶಮಿಯಂದು ಸರಸ್ವತೀಪೂಜೆಯೊಂದಿಗೆ ಹರಿವಾಣದಲ್ಲಿಟ್ಟ ಅಕ್ಕಿಯ ಮೇಲೆ ಬೆರಳಿನಿಂದ ಅ ಆ ಇ ಈ ಬರೆದು. ಈಗಂತೂ ಕಂಪ್ಯೂಟರ್ ಸಂಬಂಧಿತ ಪರಿಕರಗಳಿಗೆಲ್ಲ ಪೆನ್ ಸಂಬಂಧಿತ ನಾಮಗಳು ಬಂದಿವೆ.
ಓದುವಿಕೆ ಮನಸ್ಸನ್ನೂ ಜ್ಞಾನ ಸಂಪನ್ನಗೊಳಿಸುವುದರೊಂದಿಗೆ. ಮುದಗೊಳಿಸುತ್ತದೆ. ಇಮ್ಯಾಜಿನೇಶನ್ನನ್ನು ಕೂಡಾ ಯಾವುದೂ ಎಣೆಯಿಲ್ಲದಂತೆ ಉಚ್ಛ್ರಾಯಕ್ಕೇರಿಸುತ್ತದೆ. ಇಂಗ್ಲಿಷ್‌ನಲ್ಲಿ ಹೇಳುವಂತೆ- ರೀಡಿಂಗ್ ಡ್ರೈವ್ ವನ್ಸ್ ಇಮ್ಯಾಜಿನೇಶನ್ ವೈಲ್ಡ್- ಇನ್ನಾವುದೇ ಚಟುವಟಿಕೆ ಮಾಡಲಾರದಂತಹ ಅದ್ಭುತ ರೀತಿಯಲ್ಲಿ ಎನ್ನಬಹುದು. ಹಾಗೆಯೇ ಪೆನ್ನಾಗಲೀ, ಸ್ಟೀಲೋವನ್ನಾಗಲೀ ಹಿಡಿದು ಬರೆಯುವುದು ಕೂಡಾ ಎಕ್ಸಲೆಂಟ್ ಬಾಡಿ-ಮೈಂಡ್ ಕೋ ಆರ್ಡಿನೇಟೆಡ್ ಎಕ್ಸರ್‍ಸೈಸ್ ಎಂದು ಪರಿಗಣಿತವಾಗಿದೆ.
ಏಕೆ ಗೊತ್ತೇನು? ಮನಸ್ಸು ಏನು ಬರೆಯಲಿ ಎಂದು ಸ್ಪಷ್ಟವಾಗಿ ಆಲೋಚಿಸುವ ಮುನ್ನ ಕೈ ಮುನ್ನಡೆಯದು. ಇನ್ನೆಲ್ಲ ಚಟುವಟಿಕೆಗಳಲ್ಲಿ ಮನಸ್ಸು ಕ್ರಮಬದ್ಧವಾಗಿ ಯೋಚಿಸುವ ಮುನ್ನವೇ ಅದಕ್ಕೆ ಬಳಕೆಯಾಗುವ ದೇಹ ಭಾಗ ಮುಂದಡಿಯಿಡುತ್ತಿರುತ್ತದೆ. ಬರವಣಿಗೆಯಲ್ಲಿ ಚಿತ್ತ ಹೇಳಿದುದನ್ನು ಚಿತ್ತು ಮಾಡದೆ ಅಕ್ಷರಕ್ಕಿಳಿಸುವಂತಹ ಬಂಟ ಕೈ ಆಗಿರುತ್ತದೆ. ನೋ ಥಿಂಕಿಂಗ್ ನೋ ರೈಟಿಂಗ್ ಅಲ್ಲವೇನು?
ಪೆನ್ನಿಗೆ ಜಾತಿ-ಧರ್ಮ, ದೇಶ-ಭಾಷೆ ಗಂಡು-ಹೆಣ್ಣೆಂಬ ಭೇದಭಾವವಿಲ್ಲ ಯಾರಿಗೆ ಯಾವ ಸಂದರ್ಭದಲ್ಲಿ ಬೇಕಾದರೂ ಪೆನ್ನೊಂದನ್ನು ಕಾಣಿಕೆಯಾಗಿ ಕೊಡಬಹುದು. ಅನಕ್ಷರಸ್ತರೂ, ಎಳೆ ಮಕ್ಕಳೂ ಕೂಡಾ ಪೆನ್ನು ಕೊಟ್ಟರೆ ಖುಷಿಯಿಂದ ಜೇಬಿಗೆ ಇಲ್ಲವೇ ಬಾಯಲ್ಲಿ ಇಟ್ಟುಕೊಳ್ಳುವುದನ್ನು ನೀವು ನೋಡಿಲ್ಲವೇನು? ಈಗ ಇಷ್ಟೊಂದು ಸಾರ್ವತ್ರಿಕ ಮಾನ್ಯತೆಯುಳ್ಳ ಇನ್ನೊಂದು ವಸ್ತುವನ್ನು ಹೆಸರಿಸಿ ನೋಡೋಣ...!
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ