ಜೀವನದ ಯಶಸ್ಸಿಗೆ ಶಿಸ್ತು ಬಹುದೊಡ್ಡ ಅಡಿಪಾಯ

Upayuktha
0

ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ವಿದ್ಯಾರ್ಥಿಗಳಿಗೆ ನಿವೃತ್ತ ಲೆಫ್ಟಿನೆಂಟ್ ಜನರಲ್ ರಾಜು  ಉಪನ್ಯಾಸ



ವಿದ್ಯಾಗಿರಿ: ಶಿವಮೊಗ್ಗದಲ್ಲಿ  ಪಿ.ಜಿ.ಆರ್.ಸಿಂಧ್ಯಾ ಅವರ ನೇತೃತ್ವದಲ್ಲಿ ಮೊದಲ ಬಾರಿ ಸ್ಕೌಟ್ಸ್ ಮತ್ತು ಗೈಡ್ಸ್ ಅನ್ನು ಕಂಡು ಆಶ್ಚರ್ಯಪಟ್ಟಿದೆ. ಏಕೆಂದರೆ,  ಸ್ಕೌಟ್ಸ್ ಮತ್ತು ಗೈಡ್ಸ್ ಎನ್ನುವುದು ವಿದ್ಯಾರ್ಥಿಗಳಲ್ಲಿ ಶಿಸ್ತು, ಸಂಯಮ,  ಶಾಂತ ಭಾವನೆ ಮತ್ತು ಸಮಯಪ್ರಜ್ಞೆಯನ್ನು ಸೃಷ್ಟಿಸುವಲ್ಲಿ ಮಾದರಿಯಾಗಿದೆ ಎಂದು ಭಾರತೀಯ ಸೇನೆಯ ನಿವೃತ್ತ ಲೆಫ್ಟಿನೆಂಟ್ ಜನರಲ್ ಬಿ ಎಸ್ ರಾಜು ಹೇಳಿದರು.


ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್, ಕರ್ನಾಟಕ ದಕ್ಷಿಣ ಕನ್ನಡ ಜಿಲ್ಲಾ ಸಂಸ್ಥೆ, ಮೂಡುಬಿದಿರೆ ಸ್ಥಳೀಯ ಸಂಸ್ಥೆ ಹಾಗೂ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಸಹಭಾಗಿತ್ವದಲ್ಲಿ ೩೦ನೇ ಆಳ್ವಾಸ್ ವಿರಾಸಾತ್ ಸಂದರ್ಭದಲ್ಲಿ ನಡೆಯುತ್ತಿರುವ ರಾಜ್ಯ ಮಟ್ಟದ ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ಮತ್ತು ರೋವರ್ಸ್ - ರೇಂಜರ್ಸ್ ಸಾಂಸ್ಕೃತಿಕ ಉತ್ಸವದಲ್ಲಿ ಶುಕ್ರವಾರ ಅವರು ಉಪನ್ಯಾಸ ನೀಡಿದರು.


ಸ್ಕೌಟ್ಸ್ ಮತ್ತು ಗೈಡ್ಸ್ನ ಧ್ಯೇಯವಾಕ್ಯವನ್ನು ಅರ್ಥೈಸಿಕೊಂಡು ಸಾಗುವುದು ಉತ್ತಮ. ಜೀವನದಲ್ಲಿ ಎಲ್ಲಾ ರೀತಿಯಲ್ಲಿಯೂ ಪ್ರಗತಿ ಕಾಣಲು ಮತ್ತು ಯಶಸ್ಸನ್ನು ಗಳಿಸಲು ಶಿಸ್ತು ಎನ್ನುವುದು ಏಕಮಾತ್ರ ಸಾಧನವಾಗಿದೆ ಎಂದು ಅವರು ಹೇಳಿದರು.


ಸಣ್ಣಪುಟ್ಟ ಕೆಲಸವನ್ನು ಸರಿಯಾಗಿ ಅರ್ಥೈಸಿಕೊಳ್ಳುತ್ತಾ, ಉತ್ತಮ ರೀತಿಯಲ್ಲಿ ಅದನ್ನು ಸ್ವೀಕರಿಸುವ ಮನೋಭಾವನೆ ಬಂದಾಗ ದೊಡ್ಡ ದೊಡ್ಡ ಕೆಲಸವನ್ನು ಸವಾಲಿನಿಂದ ಎದುರಿಸಲು ಸಾಧ್ಯವಾಗುತ್ತದೆ ಎಂದು ತಮ್ಮ ಸೇನಾ ವೃತ್ತಿಯ  ಮಜಲುಗಳನ್ನು  ವಿವರಿಸಿದರು.


ವಿದ್ಯಾರ್ಥಿಗಳು ನಿರಂತರ ಚಲನೆಯಿಂದ ತಮ್ಮ ಗುರಿಯೆಡೆಗೆ ಸಾಗಬೇಕು. ಜೀವನದಲ್ಲಿ ಸತತ ಕಠಿಣ ಪರಿಶ್ರಮ, ಶುಚಿತ್ವ, ಸಹಭಾಗಿತ್ವ ಮತ್ತು ಜಿಜ್ಞಾಸ ಮನೋಭಾವನೆ ಹೆಚ್ಚು ಅನಿವಾರ್ಯ. ನಿಮ್ಮದೇ ಆಸಕ್ತಿ ಕ್ಷೇತ್ರದಲ್ಲಿ ನಿರಂತರವಾಗಿ ತೊಡಗಿಕೊಂಡು ಕಾರ್ಯ ಪ್ರವೃತ್ತರಾಗಿ ಎಂದು ಸಲಹೆ ನೀಡಿದರು.


ಸುತ್ತಮುತ್ತಲಿನ ವಾತಾವರಣ ಸುಂದರವಾಗಿದ್ದರೆ, ಅತ್ಯುತ್ತಮದ  ವ್ಯಕ್ತಿತ್ವ ನಿರ್ಮಾಣವಾಗುತ್ತದೆ. ಪ್ರತಿಯೊಬ್ಬರಲ್ಲೂ ಪ್ರತಿಭೆ ಎನ್ನುವುದು ಅಡಕವಾಗಿರುತ್ತದೆ.  ಅದನ್ನು ಕ್ಲಪ್ತ ಸಮಯದಲ್ಲಿ ಸೂಕ್ತ ವೇದಿಕೆಯ ಮೂಲಕ ಅನಾವರಣಗೊಳಿಸುವುದು ಬಹಳ ಅವಶ್ಯಕ ಎಂದರು.


ಯಾವುದೇ ಸಂದರ್ಭದಲ್ಲಿಯೂ ಕಠಿಣ ಕೆಲಸ ಬಂದಾಗ ಅದನ್ನು ನಗುಮುಖದಿಂದ ಸ್ವೀಕರಿಸಿ, ಎದುರಿಸಿದಾಗ ನಿಮ್ಮ ತಾಕತ್ತಿನ ಶಕ್ತಿ ಎಂತದ್ದು ಎಂದು ಅರಿವಾಗುತ್ತದೆ ಎಂದರು.


ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ  ಡಾ ಎಂ ಮೋಹನ ಆಳ್ವ, ನಿವೃತ್ತ ಲೆಫ್ಟಿನೆಂಟ್ ಜನರಲ್ ಬಿ ಎಸ್ ರಾಜು ಅವರ ಧರ್ಮಪತ್ನಿ ಶಕುಂತಲಾ ರಾಜು ,ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ಕರ್ನಾಟಕ ರಾಜ್ಯ ಮುಖ್ಯ ಆಯುಕ್ತ ಪಿ.ಜಿ.ಆರ್.ಸಿಂಧ್ಯಾ ,ರಾಜ್ಯ ಕಾರ್ಯದರ್ಶಿ ಗಂಗಪ್ಪ ಗೌಡ,  ಶಿಬಿರದ ಮೇಲ್ವಿಚಾರಕಿ ಮಲ್ಲೇಶ್ವರಿ ಜೂಜಾರೆ ಮತ್ತು ನಿತಿನ್ ಅಮೀನ್, ದಕ್ಷಿಣ ಕನ್ನಡ ಜಿಲ್ಲಾ ಕೋಶಾಧಿಕಾರಿ ನವೀನ್ ಚಂದ್ರ ಅಂಬೂರಿ ಇದ್ದರು. ಆಳ್ವಾಸ್ ಪದವಿ ಪೂರ್ವ ಕಾಲೇಜಿನ ರೇಂಜರ್ಸ್ ಮೇಘನಾ ಕಾರ್ಯಕ್ರಮ ನಿರೂಪಿಸಿ ವಂದಿಸಿದರು.


 ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 

إرسال تعليق

0 تعليقات
إرسال تعليق (0)
Mandovi Motors Presents MONSOON BONANZA
Mandovi Motors Presents MONSOON BONANZA
To Top