ಧರ್ಮಸ್ಥಳದಲ್ಲಿ “ನಮ್ಮೂರು ನಮ್ಮ ಕೆರೆ” ಕಾರ್ಯಕ್ರಮ: 800 ನೇ ಕೆರೆ ಹಸ್ತಾಂತರ

Upayuktha
0
ಒಂದು ಸಾವಿರ ಕೆರೆಗಳಿಗೆ ಕಾಯಕಲ್ಪ



ಧರ್ಮಸ್ಥಳದಲ್ಲಿ ಮಂಗಳವಾರ ನಡೆದ “ನಮ್ಮೂರು ನಮ್ಮ ಕೆರೆ” ಸಮಾರಂಭದಲ್ಲಿ ಧರ್ಮಾಧಿಕಾರಿ ಡಿ. ವೀರೇಂದ್ರ ಹೆಗ್ಗಡೆಯವರು 800ನೆ ಚೌಡನಹಳ್ಳಿ ಕೆರೆಯನ್ನು ಮಾಜಿ ಶಾಸಕ ಲಿಂಗೇಕರ ಅವರಿಗೆ ಹಸ್ತಾಂತರಿಸಿದರು.


ಉಜಿರೆ: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಆಶ್ರಯದಲ್ಲಿ “ನಮ್ಮೂರು ನಮ್ಮ ಕೆರೆ” ಕಾರ್ಯಕ್ರಮದಡಿ ಈಗಾಗಲೆ ರಾಜ್ಯದಲ್ಲಿ 800 ಕೆರೆಗಳನ್ನು ಪುನಶ್ಚೇತನಗೊಳಿಸಿದ್ದು 2025ರ ಏಪ್ರಿಲ್ ಅಂತ್ಯದೊಳಗೆ ಇನ್ನೂ 200 ಕೆರೆಗಳಿಗೆ ಕಾಯಕಲ್ಪ ನೀಡಲು ಉದ್ದೇಶಿಸಲಾಗಿದೆ ಎಂದು ಧರ್ಮಸ್ಥಳದ ಧರ್ಮಾಧಿಕಾರಿ ಡಿ. ವೀರೇಂದ್ರ ಹೆಗ್ಗಡೆಯವರು ಪ್ರಕಟಿಸಿದರು.


ಅವರು ಮಂಗಳವಾರ ಧರ್ಮಸ್ಥಳದಲ್ಲಿ ಧರ್ಮಶ್ರೀ ಸಭಾಭವನದಲ್ಲಿ ಪುನಶ್ಚೇತನಗೊಳಿಸಿದ 800ನೆ ಕೆರೆಯಾದ ಚೌಡನಹಳ್ಳಿ ಕೆರೆಯನ್ನು ಮಾಜಿಶಾಸಕ ಲಿಂಗೇಶ್ ಅವರಿಗೆ ಹಸ್ತಾಂತರಿಸಿ ಮಾತನಾಡಿದರು. ಕೆರೆಯನ್ನು ರಕ್ಷಣೆ ಮಾಡಿದರೆ ಪವಿತ್ರ ಗಂಗೆಯನ್ನು ರಕ್ಷಣೆ ಮಾಡಿದಷ್ಟೆ ಪುಣ್ಯ ಸಿಗುತ್ತದೆ. ಜಲ ಸಂರಕ್ಷಣೆ ಮತ್ತು ಸ್ವಚ್ಛಪರಿಸರ ರಕ್ಷಣಾ ಕಾರ್ಯದಲ್ಲಿ ಎಲ್ಲರೂ ಸಕ್ರಿಯವಾಗಿ ಭಾಗವಹಿಸಬೇಕು. ಕೆರೆಗಳಿಗೆ ಕಸ, ಕಲ್ಮಶ, ತ್ಯಾಜ್ಯವನ್ನು ಹಾಕಬಾರದು. ಕೆರೆಗಳಿಗೆ ಕಾಯಕಲ್ಪ ನೀಡುವುದು ತಮಗೆ ಅತ್ಯಂತ ಪ್ರಿಯವಾದ ಕಾಯಕವಾಗಿದ್ದು, ಕೆರೆಯ ಸುತ್ತಲೂ ಹಣ್ಣುಹಂಪಲಿನ ಗಿಡಗಳನ್ನು ಬೆಳೆಸಬೇಕು ಎಂದು ಅವರು ಸಲಹೆ ನೀಡಿದರು. ಎಲ್ಲಾ ಕೆಲಸವನ್ನು ಸರ್ಕಾರ, ಗ್ರಾಮ ಪಂಚಾಯಿತಿ ಮಾಡಬೇಕೆಂದು ನಿರೀಕ್ಷಿಸದೆ, ನಮ್ಮ ಊರು, ನಮ್ಮ ಕೆರೆ ಮತ್ತು ಪರಿಸರ ಸಂರಕ್ಷಣೆ ಎಲ್ಲರ ಕರ್ತವ್ಯವೂ, ಹೊಣೆಗಾರಿಕೆಯೂ ಆಗಿದೆ ಎಂದು ಅವರು ಹೇಳಿದರು.


ಹೇಮಾವತಿ ವೀ. ಹೆಗ್ಗಡೆ ಮಾತನಾಡಿ, ಕೆರೆಯು ಆಯಾ ಊರಿನ ಕಲ್ಪವೃಕ್ಷವಾಗಿದ್ದು ಸಕಲ ಜೀವರಾಶಿಗಳಿಗೂ ಉಪಯುಕ್ತವಾಗಿದೆ. ಪ್ರತಿ ದೇವಾಲಯದಲ್ಲಿ ಕ್ಷೇತ್ರಪಾಲ ರಕ್ಷಣೆ ಮಾಡಿದಂತೆ ಕೆರೆ ಸಮಿತಿಯವರು ಊರಿನ ಕೆರೆಯನ್ನು ಜತನದಿಂದ ಕಾಪಾಡಬೇಕು ಎಂದು ಅವರು ಕಿವಿಮಾತು ಹೇಳಿದರು.


ಶಿವಾನಂದ ಕಳವೆ ಸಂಪನ್ಮೂಲ ವ್ಯಕ್ತಿಯಾಗಿ ಕೆರೆಗಳ ಸಂರಕ್ಷಣೆ ಬಗ್ಯೆ ಮಾಹಿತಿ, ಮಾರ್ಗದರ್ಶನ ನೀಡಿದರು. ಕೆರೆ ಸಮಿತಿಯ ಸದಸ್ಯ ಕಿತ್ತೂರಿನ ಮಲ್ಲಿಕಾರ್ಜುನ ಹುದಲಿ ಅನಿಸಿಕೆ ವ್ಯಕ್ತಪಡಿಸಿದರು. ಗ್ರಾಮಾಭಿವೃದ್ಧಿ ಯೋಜನೆಯ ಕಾರ್ಯನಿರ್ವಾಕ ನಿರ್ದೇಶಕ ಅನಿಲ್‌ಕುಮಾರ್, ಎಸ್.ಎಸ್. ಉಪಸ್ಥಿತರಿದ್ದರು. ಪ್ರಾದೇಶಿಕ ನಿರ್ದೇಶಕ ಆನಂದ ಸುವರ್ಣ ಸ್ವಾಗತಿಸಿದರು. ಎಂಜಿನಿಯರ್ ನಿಂಗರಾಜ್ ಧನ್ಯವಾದವಿತ್ತರು. ನಿರ್ದೇಶಕ ಶಿವಾನಂದ ಆಚಾರ್ಯ ಕಾರ್ಯಕ್ರಮ ನಿರ್ವಹಿಸಿದರು.



ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 

Post a Comment

0 Comments
Post a Comment (0)
Maruti Suzuki Festival of Colours
Maruti Suzuki Festival of Colours
To Top