ಬೆಳಗಾವಿ: ಬಿಪಿಎಲ್ ಪಡಿತರ ರದ್ದು ಮಾನದಂಡ ವಿಚಾರದಲ್ಲಿ ಶಾಸಕ ಡಾ.ಭರತ್ ಶೆಟ್ಟಿ ವೈ ಅವರು ಸರಕಾರವನ್ನು ಬೆಳಗಾವಿ ಅಧಿವೇಶನದಲ್ಲಿ ತರಾಟೆಗೆ ತೆಗೆದುಕೊಂಡಿದ್ದಾರೆ.
ಬಿಪಿಎಲ್ ಪಡಿತರ ಫಲಾನುಭವಿಗಳು ಯಾವುದೋ ಕಾರಣಕ್ಕೆ ಒಂದೆರಡು ಮೂರು ತಿಂಗಳು ಪಡಿತರ ಪಡೆದುಕೊಳ್ಳದಿದ್ದಲ್ಲಿ ಕಾರ್ಡ್ ರದ್ದಾಗುತ್ತಿದೆ. ಕೆಲವೊಂದು ಸಾಲ ಸೌಲಭ್ಯಕ್ಕಾಗಿ ಕೇವಲ ಆದಾಯ ರಿಟರ್ನ್ ಮಾಡಿದವರ ಕಾರ್ಡ್ ರದ್ದಾಗುತ್ತಿದೆ.
ಆಯುಷ್ಮಾನ್ ಜತೆ ಬಿಪಿಎಲ್ ಪಡಿತರ ಲಿಂಕ್ ಇರುವುದರಿಂದ ಮತ್ತೆ ಕಾರ್ಡ್ ಪಡೆಯಲು ಫಲಾನುಭವಿಯ ಫೈಲ್ ಜಿಲ್ಲಾ ಮಟ್ಟದಲ್ಲಿ ವಿಲೇವಾರಿ ಮಾಡುವ ಬದಲು ಬೆಂಗಳೂರಿಗೆ ಕಳಿಸಬೇಕಿದೆ.
ಈ ನಡುವೆ ಚಿಕಿತ್ಸೆ ಪಡೆಯುತ್ತಿರುವವರ ಪಾಡು ಏನು, ಸರಕಾರ ಬಿಪಿಎಲ್ ಕಾರ್ಡ್ ರದ್ದು ಮಾನದಂಡವನ್ನು ಪುನರ್ ಪರಿಶೀಲಿಸಬೇಕು. ರದ್ದಾದ ಬಿಪಿಎಲ್ ಪಡಿತರವನ್ನು ಮತ್ತೆ ನೈಜ ಫಲಾನುಭವಿಗೆ ದೊರಕಿಸಲು ಆಯಾ ಜಿಲ್ಲಾ ಮಟ್ಟದಲ್ಲಿ ಶೀಘ್ರ ವಿಲೇವಾರಿ ಮಾಡಲು ಕ್ರಮ ಕೈಗೊಳ್ಳಬೇಕು. ಬಡವರನ್ನು ಸರಕಾರ ವಿನಾಕಾರಣ ಸಮಸ್ಯೆಗೆ ಸಿಲುಕಿಸುವುದು ಸರಿಯಲ್ಲ ಎಂದು ಹೇಳಿದರು.
ಇದಕ್ಕೆ ಉತ್ತರಿಸಿದ ಆಹಾರ ಪೂರೈಕೆ ಸಚಿವ ಮುನಿಯಪ್ಪ ಆರೋಗ್ಯ ಸಂಬಂಧಿ ಚಿಕಿತ್ಸೆಗೆ ಸ್ಥಳೀಯ ಉಪ ನಿರ್ದೇಶಕರಿಗೆ ಅರ್ಜಿ ಸಲ್ಲಿಸಿದರೆ ತಕ್ಷಣ ಬೇಕಾದ ಕ್ರಮ ಕೈಗೊಳ್ಳಲಾಗುವುದು.
ಸರಕಾರಿ ನೌಕರರ ಹಾಗೂ 1,20,000 ಮೇಲ್ಪಟ್ಟವರ ಕಾರ್ಡ್ ರದ್ದಾಗುತ್ತಿದೆ ಎಂದು ಸಚಿವರು ಉತ್ತರಿಸಿದರು.
ಶಾಸಕ ಡಾ. ಭರತ್ ಶೆಟ್ಟಿ ವೈ ಅವರ ಪ್ರಶ್ನೆಗೆ ಧ್ವನಿ ಗೂಡಿಸಿದ ಸಭಾಪತಿ ಬಡವರು ಮನೆ ಕಟ್ಟಲು ಅನಿವಾರ್ಯವಾಗಿ ಆದಾಯ ರಿಟರ್ನ್ ಕಟ್ಟುತ್ತಾರೆ. ಅಂತಹವರ ಕಾರ್ಡ್ ರದ್ದು ಸರಿಯಲ್ಲ ಎಂದರು.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ







