ಪುಸ್ತಕ ಪರಿಚಯ: ಪೋಗದೆ ಇರೆಲೋ ರಂಗ- ಕಾದಂಬರಿ

Upayuktha
0



ಲೇಖಕರು: ಶ್ರೀಮತಿ ಪ್ರಸನ್ನಾ ವಿ. ಚೆಕ್ಕೆಮನೆ 

ಪ್ರಕಾಶಕರು: ನೈದಿಲೆ ಪ್ರಕಾಶನ, ಮೈಸೂರು (2024)

ಪುಟಗಳು: 228 

ಬೆಲೆ: 280/-



ಲೇಖಕಿಯ ಪರಿಚಯ:

ಗಡಿನಾಡು ಕಾಸರಗೋಡಿನ ನಿವಾಸಿಯಾಗಿರುವ ಪ್ರಸನ್ನಾ ವೆಂಕಟಕೃಷ್ಣ ಚೆಕ್ಕೆಮನೆ ಭರವಸೆಯ ಲೇಖಕಿಯಾಗಿ ತಮ್ಮ ಅನೇಕ ರಚನೆಗಳನ್ನು ಪ್ರಕಟಿಸುತ್ತ ಬಂದಿದ್ದಾರೆ. ಕಥೆ, ಕವನ,‌ ಕಾದಂಬರಿ ಹಾಗೂ ಇನ್ನಿತರ ಸಾಹಿತ್ಯ ಪ್ರಕಾರಗಳಲ್ಲಿ ತೊಡಗಿಸಿಕೊಂಡು ಇದುವರೆಗೆ ನೀಲಾಂಬರಿ, ತುಳಸೀಹಾರ, ಸ್ವಯಂವರ,‌ ಕರಿಮಣಿ ಮಾಲೆ, ಹೂ ಮಳೆಗೆ ಮಿನುಗುವ ಮೇಘಗಳು, ಇರಬೇಕಿತ್ತು ನೀ ಹತ್ತಿರ, ಯಾವ ಕಾಣಿಕೆ ನೀಡಲಿ ನಿನಗೇ.. ಮೊದಲಾದ ಹನ್ನೆರಡು ಪುಸ್ತಕಗಳನ್ನು ಈವರೆಗೆ ಪ್ರಕಟಿಸಿದ್ದಾರೆ. 


ಕಾದಂಬರಿಯ ಪರಿಚಯ:

ಪ್ರಣಯ,‌ ಪ್ರೀತಿ ಹಾಗೂ ವಿರಹದ ಸಂಕೇತವಾಗಿರುವ ಶ್ರೀಕೃಷ್ಣನನ್ನು ಆರಾಧಿಸಿ ಪೂಜಿಸಿ ಅನನ್ಯ ಭಕ್ತಿ ಮೆರೆವ ಸುಂದರ ಕಥಾನಕವಿದು. ಕಥಾನಾಯಕಿ ಕೃಷ್ಣನನ್ನೇ ಪತಿ ಎಂದು, ಪತಿಯನ್ನೇ ಕೃಷ್ಣನೆಂದು ಅವಿನಾಭಾವದಿಂದ ಆರಾಧಿಸುವ ಪಾತ್ರ ಚಿತ್ರಣ ಬಹಳ ಮನೋಜ್ಞವಾಗಿ ಮೂಡಿ ಬಂದಿದೆ. ಈ ಕಾದಂಬರಿಯ ನಾಯಕ-ನಾಯಕಿಯರ ಹೆಸರು ಕೃಷ್ಣವಂಶಿ- ಚಾರುಮಿತ್ರೆ, ಅದೆಷ್ಟು ಭಾವಪೂರ್ಣ-ಸಂವೇದನಾ ಶೀಲ ಎಂದರೆ ಕೇಳಿದಾಕ್ಷಣ ಭಕ್ತಿಸುಧೆ ಮನದೊಳಗೆ ಸ್ಫುರಿಸುತ್ತದೆ ಅಲ್ಲವೇ? ದೈವಭಕ್ತಿಯ ಪರಾಕಾಷ್ಠೆಯನ್ನು ಬಿಂಬಿಸುವ, ಆರಾಧನೆಯಲ್ಲೇ ಜೀವನಸುಖ ಕಾಣುವ, ಉತ್ಕಟ ಆಧ್ಯಾತ್ಮಿಕ ಬದುಕಿನ ಮುಗ್ಧ ಮನದ ಹುಡುಗಿ ಚಾರು ಕೃಷ್ಣನ ಅನನ್ಯ ಭಕ್ತೆಯಾಗಿ ಇಲ್ಲಿ ಮನಸೆಳೆಯುತ್ತಾಳೆ.


ಹರಿದಾಸರ ಪ್ರಸಿದ್ಧ ಗೀತೆ "ಪೋಗದೆ‌ ಇರೆಲೋ ರಂಗಾ...ಬಾಗಿಲಿಂದಾಚೆ...." ಹಾಡನ್ನು ಹಾಡುತ್ತಾ ತನ್ನ ಮೊದಲ ವಧುಪರಿಕ್ಷೆಯನ್ನು ಎದುರಿಸುವ ಚಾರುಮಿತ್ರಾಳ ಮನಸ್ಸಿನ ತಲ್ಲಣ ಹಾಗೂ ತಯಾರಿಯ ಸನ್ನಿವೇಶವು ಕಥೆಯ ಆರಂಭದಲ್ಲಿದೆ. ಜಾರಿ ಬಿದ್ದು ನಡೆಯಲಾಗದ ಅಮ್ಮನ ಸೇವೆ ಮಾಡುವ ಚಾರು ತನ್ನ ಮನೆಯಲ್ಲಿ ಸೋದರಮಾವ ಶಂಕರರೊಂದಿಗೆ ಮನೆ ನಡೆಸುತ್ತಾಳೆ. ಅಪ್ಪನಿಲ್ಲದಿದ್ದರೂ ಅವರ ಇಬ್ಬರು ಅಣ್ಣಂದಿರು ಹತ್ತಿರದಲ್ಲೇ ಮನೆ ಮಾಡಿ ಇರುವ ಕಾರಣ ಅವರೊಂದಿಗೂ ಬಾಂಧವ್ಯ ಹೆಣೆದಿರುತ್ತದೆ. ಆದರೆ ತಮ್ಮದೇ ಸ್ವಾರ್ಥ ಹಾಗೂ ಹಣದ ದುರಾಸೆಯ ದೊಡ್ಡಪ್ಪನ ಮನೆಯವರು ಯಾವುದೇ ಸಹಾಯ, ಸಹಕಾರ ನೀಡುವುದಿಲ್ಲ. ಶಂಕರಮಾವ ನಿಸ್ವಾರ್ಥದಿಂದ  ಅಕ್ಕ ಇಂದಿರಮ್ಳ ಹಾಗೂ ಚಾರುವಿನ ಜವಾಬ್ದಾರಿ ವಹಿಸಿಕೊಂಡಿದ್ದ. ವಧುಪರೀಕ್ಷೆಗೆ ಬಂದ ಶ್ರೀಮಂತ ಕುಟುಂಬದವರು ಒಪ್ಪಿಗೆ ಸೂಚಿಸಿದರೆ ತಾನು ತಾಯಿಯನ್ನು ತೊರೆದು ಹೋಗಬೇಕಾಗುವುದು ಎಂಬ ಕಾರಣಕ್ಕೆ ಚಾರು ಸುಂದರ ಇಂಜಿನಿಯರ್ ಹುಡುಗ ಕೃಷ್ಣವಂಶಿ ಯನ್ನು ನಿಬಂಧನೆ ಮೇರೆಗೆ ಮದುವೆಗೆ ಒಪ್ಪುತ್ತಾಳೆ. ಆತನು ವೈಯಕ್ತಿಕ ಭೇಟಿಯಲ್ಲಿ ತನಗೆ ನಗರದಲ್ಲಿ ಬೇರೊಂದು ಹುಡುಗಿಯ ಜೊತೆ ಲಿವ್ ಇನ್ ರಿಲೇಶನ್‌ಶಿಪ್ ಇರುವುದನ್ನು ತಿಳಿಸಿದಾಗ ಚಾರುಗೆ ತನ್ನ ಭವಬದುಕಿನ ದಾರಿಯ ಸಹಕಾರ ಆತನಿಂದ ಸಿಗಬಹುದು ಎಂಬ ನಿರೀಕ್ಷೆಯಿರುತ್ತದೆ. ಮಾವ ಹಾಗೂ ತಾಯಿಯ ಒತ್ತಾಯಕ್ಕೆ 'ಮದುವೆ' ಎಂಬ ನಾಟಕ ಮುಗಿಸಿ ಮತ್ತದೇ ತಾಯಿಯ ಚಾಕರಿಯ ಪಾತ್ರವನ್ನು ನಿರ್ವಹಿಸಲು ಆಕೆ ನಿರ್ಧರಿಸುತ್ತಾಳೆ. ಇತ್ತ ಕೃಷ್ಣವಂಶಿಗೂ ಮದುವೆ‌ ಮಾಡಿಕೊಳ್ಳಲು ಹೆತ್ತವರ ಒತ್ತಡವಿರುತ್ತದೆ. ಸಣ್ಣಪುಟ್ಟ ವಿರೋಧದ ನಡುವೆಯೂ ತಂದೆಯ ಕಡೆಯ ದೊಡ್ಡದಾದ ಆಸ್ತಿ ಸಿಗಬೇಕಾದರೆ ವಂಶಿ ಮದುವೆ ನಡೆಯಬೇಕೆಂಬ ವಿಲ್ ನ ಪ್ರಕಾರ ಕಾಟಾಚಾರದ ಈ ಮದುವೆ ನಡೆದು ಹೋಗುತ್ತದೆ. ಒಲವು, ಸ್ಪಂದನೆ ಭಾವನಾರಹಿತವಾಗಿ ಮಾಡುವ ಮದುವೆಯ ವಿಧಿವಿಧಾನಗಳು ಇಬ್ಬರ ಮನಸ್ಸನ್ನೂ ಗೊಂದಲಕ್ಕೀಡುಮಾಡುತ್ತದೆ. ನೀಲ ಮೇಘ ಶ್ಯಾಮನ ರಾಧೆಯಂತೆ ಚಾರುಮಿತ್ರಾ ಪರಿತಪಿಸುತ್ತಾಳೆ. 


ಮದುವೆ ಮುಗಿದ ತಕ್ಷಣ ಅವರಿಬ್ಬರ ನಡುವಿನ ಒಪ್ಪಂದದಂತೆ ಚಾರುವನ್ನು ತವರಿನಲ್ಲಿ ಬಿಟ್ಟು ವಂಶಿ ಬೆಂಗಳೂರಿಗೆ ಹೋದಾಗ ಅಲ್ಲಿ ಆತನ ಪ್ರೇಯಸಿ ಖುಷಿ ಮೆಹ್ತಾ ಕಾಯುತ್ತಿರುತ್ತಾಳೆ. ಕಾಡುವ ಚಾರುವಿನ ನೆನಪುಗಳೊಂದಿಗೆ ಆತ ಪ್ರೇಯಸಿಯೊಂದಿಗೆ ಕಳೆಯುವ ಕ್ಷಣಗಳು ಆತನಿಗೆ ಮುಳ್ಳಿನ ಮೇಲೆ ನಡೆದ ಅನುಭವ ಕೊಡುವುದನ್ನು ಲೇಖಕಿ ಇಲ್ಲಿ ಸಮರ್ಥವಾಗಿ ಕಟ್ಟಿಕೊಟ್ಟಿದ್ದಾರೆ. 


ಇಬ್ಬರ ನಡುವೆ ಒಪ್ಪಂದ ಶಂಕರ ಮಾವನಿಗೆ ತಿಳಿದ ಬಗೆ ಹೇಗೆ? ವಿಷಯ ತಿಳಿದ ತಾಯಿಯ ಮನಸ್ಥಿತಿ ಏನಾಯಿತು? ಚಾರುವಿನ ಡೈರಿಯಲ್ಲಿ ಏನಿತ್ತು? ವಂಶಿ ಯಾಕೆ ಕೊನೆಗಳಿಗೆಯಲ್ಲಿ ಅತ್ತೆಯನ್ನು ನೋಡಲು ಬರಲಿಲ್ಲ? ಚಾರುವನ್ನು ನಂತರ ಭೇಟಿಯಾಗಲು ಬಂದರು ಆಕೆ ಯಾಕೆ ವಂಶಿಯನ್ನು ನಿರಾಕರಿಸಿದಳು? ಶಂಕರ ಮಾವನ ಸಾವಿನ ಹಿನ್ನೆಲೆಯೇನು? ಮೀರಾ ಸಾಧುಗಳ ಬಗ್ಗೆ ವಿಷಯ ಕಲೆಹಾಕಿ ಚಾರು ಯಾವ ನಿರ್ಧಾರ ಕೈಗೊಂಡಳು?  ಒಡವೆ, ವಸ್ತ್ರ ತ್ಯಜಿಸಿ ವಿರಹಿ ಮೀರಾಳಂತೆ ಕೃಷ್ಣನ ತವರೂರಾದ ಮಥುರಾಗೆ ಪಯಣಿಸಿದ ಚಾರು ಆಲ್ಲಿ ಐಕ್ಯವಾದಳೆ? ಇತ್ತ ಪಶ್ಚಾತಾಪದಲ್ಲಿ ಬೇಯುತ್ತಾ ಮಿತ್ರಾಳನ್ನು ಹುಡುಕುತ್ತಾ ತೆರಳುವ ಪತಿ ಕೃಷ್ಣವಂಶಿಯ ಸ್ಥಿತಿ ಏನಾಯಿತು? ಹೀಗೆ ಅನೇಕ ಕುತೂಹಲಗಳನ್ನು ಭೇದಿಸುತ್ತಾ ಬಹಳ ರೋಚಕವಾಗಿ ಕಥೆ ಮುಂದೆ ಸಾಗುತ್ತದೆ. 


ಪುರಾಣದಲ್ಲಿರುವ ಶ್ರೀಕೃಷ್ಣನ ಮಹಿಮೆ, ರಾಧೆಯ ವಿರಹ ಹಾಗೂ ಮೀರಾಳ ಭಕ್ತಿಗಳೆಲ್ಲವನ್ನೂ ಬಿಂಬಿಸಿ ಪ್ರಸ್ತುತ ಜೀವನ ಶೈಲಿಯ ಹಿನ್ನೆಲೆಯಲ್ಲಿ ಒಂದು ಸುಂದರ ಕಥಾನಕವನ್ನು ಸೃಷ್ಟಿಸಿ, ಅಕ್ಷರಗಳ ಮೂಲಕ ಮನಸ್ಸಿನ ಸಂವೇದನೆಯನ್ನು ನಿರೂಪಿಸಿ ಒಂದು ಸುಂದರ ಕಾಲ್ಪನಿಕ ಜಗತ್ತಿಗೆ ನಮ್ಮನ್ನು ಕೊಂಡೊಯ್ಯುವ ಕಾದಂಬರಿಯಿದು. ಅಡಿಯಿಂದ ಮುಡಿಯವರೆಗೆ ತಮ್ಮದೇ ಭಾಷಾ ಸೊಗಡಿನ ವಿಶಿಷ್ಟ ಪದಗಳನ್ನು ನಾಜೂಕಿನಿಂದ ಹೆಣೆದು ಓದುಗರ ಮನಸ್ಸಿನ ಭಾವದಲೆಗಳನ್ನು ಎಬ್ಬಿಸುತ್ತ ರೋಚಕವಾಗಿ ಓದಿಸಿಕೊಂಡು ಹೋಗುವ ಲೇಖಕರ ಶೈಲಿ ಅದ್ಭುತ. ಕಥೆಯ ನಡುನಡುವೆ ಕಂಡುಬರುವ ಶಾಯರಿ, ದಾಸರಪದಗಳು ಕೃಷ್ಣಕೃಪೆ, ರಾಧಾಪ್ರಣಯ ಹಾಗೂ ಮೀರಾರಾಧನೆಯ ಉಪಮೆಗಳ ನೇರ ಅಳವಡಿಕೆ ಓದನ್ನು ಸಮೃದ್ಧವಾಗಿಸಿವೆ.. ಯಾವುದೇ ಅತಿರೇಕದ ದೃಶ್ಯ ಸನ್ನಿವೇಶಗಳಿಲ್ಲದೆ, ಭಾವುಕ ಪ್ರಪಂಚದಲ್ಲೊಮ್ಮೆ ಮನಹಗುರಾಗಿಸಿಕೊಂಡು ಓದಲು ಸೂಕ್ತವಾದ ಕಾದಂಬರಿಯಿದು ಎಂದು ಅನುಭವದಿಂದ ಹೇಳಬಲ್ಲೆ.


ಕಳೆದ ತಿಂಗಳು ಬಿಡುಗಡೆಯಾದ ಈ ಪುಸ್ತಕದ ಪ್ರತಿಗಾಗಿ ಆಸಕ್ತರು ಲೇಖಕಿ ಪ್ರಸನ್ನಾ ವೆಂಕಟಕೃಷ್ಣ ಚೆಕ್ಕೆಮನೆ ಅವರನ್ನು‌ ಸಂಪರ್ಕಿಸಬಹುದು.



-ಶೈಲಾ ಗೋವಿಂದ್


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 


Post a Comment

0 Comments
Post a Comment (0)
Mandovi Motors Presents MONSOON BONANZA
Mandovi Motors Presents MONSOON BONANZA
To Top