ಪ್ರಕಾಶ್‌ಕುಮಾರ್ ಕೊಡೆಂಕಿರಿಯವರಿಗೆ ಬೆಂಗಳೂರು ‘ಕನ್ನಡ ಪುಸ್ತಕ ಹಬ್ಬ’ದ ಪುರಸ್ಕಾರ

Upayuktha
0


ಪುತ್ತೂರು: ಪುತ್ತೂರಿನ ಸಾಹಿತ್ಯ ಪ್ರಕಾಶಕ, ಪರಿಚಾರಕ ಪ್ರಕಾಶ್‌ಕುಮಾರ್ ಕೊಡೆಂಕಿರಿ ಇವರು ಬೆಂಗಳೂರಿನ ‘ಕನ್ನಡ ಪುಸ್ತಕ ಹಬ್ಬ’ದ ವಿಶೇಷ ಗೌರವ ಪುರಸ್ಕಾರಕ್ಕೆ ಆಯ್ಕೆಯಾಗಿದ್ದಾರೆ. ಪುಸ್ತಕ ಹಬ್ಬದ ಸಮಾರೋಪ ಸಮಾರಂಭವು ದಶಂಬರ 1 ರಂದು ಬೆಂಗಳೂರಿನ ಕೇಶವಶಿಲ್ಪ ಸಭಾಂಗಣದಲ್ಲಿ ನಡೆಯಲಿದ್ದು ಗೌರವ ಪ್ರದಾನ ನಡೆಯಲಿದೆ. ರಾಷ್ಟ್ರೋತ್ಥಾನ ಪರಿಷತ್ತಿನ ಅಧ್ಯಕ್ಷ ಎಂ.ಪಿ.ಕುಮಾರ್, ಪದ್ಮಶ್ರೀ ಪುರಸ್ಕೃತ ಮನೋವೈದ್ಯ ಡಾ.ಸಿ.ಆರ್.ಚಂದ್ರಶೇಖರ್ ಇವರ ಉಪಸ್ಥಿತಿಯಲ್ಲಿ ಸಮಾರಂಭ ಸಂಪನ್ನವಾಗಲಿದೆ.


ಬೆಂಗಳೂರಿನ ರಾಷ್ಟ್ರೋತ್ಥಾನ ಸಾಹಿತ್ಯವು ಕರ್ನಾಟಕ ರಾಜ್ಯೋತ್ಸವದ ಪ್ರಯುಕ್ತ ಅಕ್ಟೋಬರ್ 26 ರಿಂದ ದಶಂಬರ 1 ರ ತನಕ ಪುಸ್ತಕ ಹಬ್ಬದ’ವನ್ನು ಆಯೋಜಿಸಿದೆ.


ಪ್ರಕಾಶ್ ಕುಮಾರ್ ಕೊಡೆಂಕಿರಿ : ತಮ್ಮ ‘ಜ್ಞಾನಗಂಗಾ ಪುಸ್ತಕ ಮಳಿಗೆ’ಯ ಮೂಲಕ ಸದಭಿರುಚಿಯ ಪುಸ್ತಕಗಳನ್ನು ಓದುಗರ ಕೈಗೆ ನೀಡಿದವರು. ‘ಭೀಷ್ಮಾರ್ಜುನ, ಸುಭದ್ರಾರ್ಜುನ, ಕುಮಾರವಿಜಯ’ ಯಕ್ಷಗಾನ ಪ್ರಸಂಗಗಳು; ರಾಮರಾಜ್ಯದ ರೂವಾರಿ, ಸಾಮಗ ಪಡಿದನಿ, ಕಡಂಬಿಲ ಅಡುಗೆ, ಶಿಕ್ಷಣ ನೋಟ, ನಮ್ಮ ಶಿಕ್ಷಣ ಪದ್ಧತಿಯ ಸಮಸ್ಯೆಗಳು, ಬಣ್ಣದ ಬದುಕಿನ ಸ್ವಗತ, ಸಾವಿರಾರು ಗಾದೆಗಳು, ಅನ್ನದ ಮರ, ಮಣ್ಣಿಗೆ ಮಾನ, ಕಥಾಕಿರಣ, ಚಿಂತನಗಾಥಾ.. ಇವೇ ಮೊದಲಾದ ಅರವತ್ತಕ್ಕೂ ಕೃತಿಗಳಿಗೂ ಮಿಕ್ಕಿ ಪುಸ್ತಕಗಳನ್ನು ಪ್ರಕಾಶಿಸಿದ್ದಾರೆ.  


ರಸಋಷಿ ದೇರಾಜೆ ಸೀತಾರಾಮಯ್ಯನರ ‘ದೇರಾಜೆ ಭಾರತ’ ಹಾಗೂ ‘ದೇರಾಜೆ ರಾಮಾಯಣ’ ಪುಸ್ತಕಗಳನ್ನು ಪ್ರಕಾಶಿಸಿ ಸಾಹಿತ್ಯ ಲೋಕಕ್ಕೆ ಸಮರ್ಪಿಸಿದ್ದಾರೆ. ಕೀರ್ತಿಶೇಷ ಬೋಳಂತಕೋಡಿ ಈಶ್ವರ ಭಟ್ಟರ ‘ಶೋಭಾ ಪುಸ್ತಕ ಭಂಡಾರ'ದಲ್ಲಿ ಅವರ ಸಹಾಯಕನಾಗಿದ್ದು ಅಕ್ಷರ ಪ್ರೀತಿಯನ್ನು ಹೆಚ್ಚಿಸಿಕೊಂಡವರು. ಶಾಲೆ, ಮನೆ, ಸಮಾರಂಭಗಳಲ್ಲಿ ಪುಸ್ತಕ ಪ್ರದರ್ಶನ ಹಾಗೂ ಮಾರಾಟದ ಪರಿಕಲ್ಪನೆಯನ್ನು ಹುಟ್ಟು ಹಾಕಿದವರು. 


ಕನ್ನಡ, ಸಾಹಿತ್ಯವನ್ನು ತಲೆತುಂಬಿಕೊಂಡು, ಪುಸ್ತಕದೊಂದಿಗೆ ಕಾಲಿಗೆ ಚಕ್ರ ಕಟ್ಟಿಕೊಂಡು ಓಡಾಡುವ ಪ್ರಕಾಶ್ ಕೊಡೆಂಕಿರಿಯವರಿಗೆ ಸಲ್ಲುವ ನಿಜಾರ್ಥದ ಗೌರವವಿದು. 



 ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 

Post a Comment

0 Comments
Post a Comment (0)
To Top