ಪಣಜಿ: ಕಳೆದ ಅನೇಕ ವರ್ಷಗಳಿಂದ ಪಣಜಿ -ಮಾಪ್ಸಾ-ಬಿಚೋಲಿ ಮಾರ್ಗವಾಗಿ ಉತ್ತರ ಕರ್ನಾಟಕದ ವಿವಿಧ ಊರುಗಳಿಗೆ ಸಂಪರ್ಕಿಸುವ ವಾಯುವ್ಯ ಕರ್ನಾಟಕ ಹಾಗೂ ಕಲ್ಯಾಣ ಕರ್ನಾಟಕ ಸಾರಿಗೆಯ ಹಲವು ಬಸ್‌ಗಳು ಬಂದ್ ಆಗಿವೆ. ಇದರಿಂದಾಗಿ ಗೋವಾಕ್ಕೆ ಕೆಲಸ ಕಾರ್ಯಗಳಿಗೆ ಅವಲಂಭಿಸಿರುವ ಓಡಾಟ ನಡೆಸುವ ಜನತೆಗೆ ಹೆಚ್ಚಿನ ಅನಾನುಕೂಲ ಉಂಟಾಗಿದೆ. ಇದಂದಾಗಿ ಕೂಡಲೇ ಈ ಮಾರ್ಗಕ್ಕೆ ಬಸ್ ಓಡಾಟ ಆರಂಭಿಸುವಂತೆ ಕರ್ನಾಟಕ ರಾಜ್ಯ ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ರವರಿಗೆ ಅಖಿಲ ಗೋವಾ ಕನ್ನಡ ಮಹಾಸಂಘದ ಅಧ್ಯಕ್ಷ ಹನುಮಂತಪ್ಪ ಶಿರೂರ ರೆಡ್ಡಿ ಮನವಿ ಮಾಡಿದ್ದಾರೆ.
ಗೋವಾದಲ್ಲಿ ಉತ್ತರ ಕರ್ನಾಟಕದ ವಿವಿಧ ಊರುಗಳ ಜನರು ಹೆಚ್ಚಿನ ಸಂಖ್ಯೆಯಲ್ಲಿ ವಿವಿಧ ಉದ್ಯೋಗಕ್ಕೆ ಬಂದು ಹೋಗುತ್ತಿರುತ್ತಾರೆ. ಆದರೆ ಕಳೆದ ಹಲವು ದಿನಗಳಿಂದ ಉತ್ತರ ಕರ್ನಾಟಕದ ವಿವಿಧ ಊರುಗಳಿಗೆ ಗೋವಾ ರಾಜಧಾನಿ ಪಣಜಿಯಿಂದ ಹೋಗಿ ಬರುವ ಬಸ್ ಗಳನ್ನು ಬಂದ್ ಮಾಡಲಾಗಿದೆ. ಇದರಿಂದಾಗಿ ಗೋವಾದ ಮಾಪ್ಸಾ, ಸಾಖಳಿ, ಬಿಚೋಲಿಯಿಂದ ಕರ್ನಾಟಕಕ್ಕೆ ತೆರಳುವ ಜನರಿಗೆ ತೊಂದರೆಯುಂಟಾಗುತ್ತಿದೆ. ಈಗಾಗಲೇ ಈ ಮಾರ್ಗದಲ್ಲಿ ಓಡಾಟ ನಡೆಸುವ ಕರ್ನಾಟಕದ ಸಾರಿಗೆ ಬಸ್‌ಗಳು ಬಿಚೋಲಿ ಬಸ್ ನಿಲ್ದಾಣಕ್ಕೆ ಬರದೆಯೇ ಬೈಪಾಸ್ ರಸ್ತೆಯಿಂದ ಓಡಾಟ ನಡೆಸುತ್ತಿರುವುದರಿಂದ ಈಗಿರುವ ಕೆಲ ಬಸ್‌ಗಳ ಸೌಲಭ್ಯದಿಂದ ಬಿಚೋಲಿ ಬಸ್ ನಿಲ್ದಾಣದಲ್ಲಿ ಬಸ್‌ಗಾಗಿ ಕಾಯುತ್ತಿರುವ ಪ್ರಯಾಣಿಕರು ವಂಚಿತರಾಗುತ್ತಿದ್ದಾರೆ.
ಈಗ ಓಡಾಟ ನಡೆಸುವ ಕೆಲವೇ ಕೆಲವು ಬಸ್ ಗಳನ್ನು ಹಿಡಿಯಬೇಕಾದರೆ ಕನ್ನಡಿಗರು ಬಿಚೋಲಿ ಬಸ್ ನಿಲ್ದಾಣದಿಂದ ಸುಮಾರು 2 ಕಿ.ಮಿ.ಗಳಿಗಿಂತ ಹೆಚ್ಚು ದೂರ ಬಾಡುಗೆ ವಾಹನಗಳಿಗೆ ಹಣ ತೆತ್ತು ಅಲ್ಲಿಗೆ ತಲುಪಬೇಕು. ಇದರಿಂದಾಗಿ ಬಡ ಕೂಲಿ ಕಾರ್ಮಿಕರಿಗೆ ತಮ್ಮ ಊರಿಗೆ ಹೋಗಿ ಬರಲು ಹೆಚ್ಚಿನ ಹಣ ವ್ಯಯಿಸುವ ಅನಿವಾರ್ಯತೆ ಎದುರಾಗಿದೆ ಎಂದು ಅಖಿಲ ಗೋವಾ ಕನ್ನಡ ಮಹಾಸಂಘದ ಅಧ್ಯಕ್ಷ ರೆಡ್ಡಿ ಕರ್ನಾಟಕದ ಸಾರಿಗೆ ಸಚಿವರಿಗೆ ಪತ್ರದ ಮೂಲಕ ಸಮಸ್ಯೆ ತೋಡಿಕೊಂಡಿದ್ದಾರೆ.
ಇದರಿಂದಾಗಿ ಈಗಾಗಲೇ ಓಡಾಟ ನಡೆಸುತ್ತಿರುವ ಕೆಲ ಬಸ್ಸುಗಳು ಬಿಚೋಲಿಯಲ್ಲಿ ಈ ಹಿಂದಿನಂತೆಯೇ ಬಸ್ ನಿಲ್ದಾಣಕ್ಕೆ ಬಂದು ಹೋಗುವಂತಾಗಬೇಕು ಮತ್ತು ಈಗಾಗಲೇ ಕರ್ನಾಟಕದ ವಿವಿಧ ಮಾರ್ಗಗಳಿಗೆ ಬಂದ್ ಆಗಿರುವ ಬಸ್ಸುಗಳ ಓಡಾಟ ಕೂಡಲೇ ಪುನರಾರಂಭಿಸಬೇಕು ಎಂದು ಅಖಿಲಗೋವಾ ಕನ್ನಡ ಮಹಾಸಂಘ ಹಾಗೂ ಕರ್ಮಭೂಮಿ ಕನ್ನಡ ಸಂಘ ಬಿಚೋಲಿ ಈ ಸಂಘಟನೆಗಳ ಕೂಲ ಕರ್ನಾಟಕದ ಸಾರಿಗೆ ಸಚಿವ ರಾಮಲಿಂಗಾ ರೆಡ್ಡಿ ರವರಿಗೆ ಮನವಿ ಮಾಡಿದ್ದಾರೆ.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ