ನಮ್ಮ ತಯಾರಿಕೆಯ ಗೊಬ್ಬರದ ಬಗ್ಗೆ ವಿಚಾರಣೆ ಮಾಡುವವರಲ್ಲಿ ಬಹುತೇಕ ರೈತರು ನಾವು ಹಾಕಲು ಹೇಳುವ ಗೊಬ್ಬರದ ಪ್ರಮಾಣ ಕೇಳಿದಾಗ ದಿಗಿಲಾಗುತ್ತಾರೆ!
ಸಾಮಾನ್ಯವಾಗಿ ಬಹುತೇಕ ಎಲ್ಲಾ ಪ್ಯಾಕೆಟ್ ಸಾವಯವ ಗೊಬ್ಬರದವರು ಒಂದು ಫಸಲು ಬರುವ ಅಡಿಕೆ ಮರಕ್ಕೆ ಮೂರು ಕೆಜಿ ಗೊಬ್ಬರ ಹಾಕಿ ಎಂಬ ಸಲಹೆ ನೀಡುತ್ತಾರೆ. ಆದರೆ ಒಂದು ಫಸಲು ಬರುವ ಅಡಿಕೆ ಮರಕ್ಕೆ ಮೂರು ಕೆಜಿ ಈ ಕೃತಕ ಸಾವಯವ ಗೊಬ್ಬರ ಸಾಕಾ? ಅವರು ಅದಾವ ಲೆಕ್ಕಾಚಾರದಲ್ಲಿ ಅಷ್ಟು ಕಡಿಮೆ ಗೊಬ್ಬರ ಹಾಕಲು ಹೇಳುತ್ತಾರೆ ಗೊತ್ತಿಲ್ಲ! ದೊಡ್ಡ ಅಡಿಕೆ ಮರದ ಬುಡ ಬಿಡಿಸಿ ಈ ಕಂಪನಿ ಪ್ಯಾಕೆಟ್ ಗೊಬ್ಬರವನ್ನು ಮೂರು ಕೆಜಿ ಸುತ್ತಲೂ ಹಾಕಿದರೆ ಒಂದು ರೌಂಡು ಕೂಡ ಬರದು.
ಈ ಕೃತಕ ಬಣ್ಣ ಬಣ್ಣದ ಸಾವಯವ ಗೊಬ್ಬರದ ಹೆಸರಿನ ಗೊಬ್ಬರದ ಕಂಪನಿಗಳಿಗೆ ಮಲೆನಾಡು ಕರಾವಳಿಯ ಮಳೆಗಾಲ ಬೇಸಿಗೆ ಕಾಲದ ಏನು ಗೊತ್ತು? ನೂರೈವತ್ತು ಇನ್ನೂರು ಇಂಚು ಮಳೆ ಬೀಳುವ ಮಲೆನಾಡು ಕರಾವಳಿಯ ಅಡಿಕೆ ತೋಟಗಳಿಗೆ ಈ ಎರಡು ಕೆಜಿ ಮೂರು ಕೆಜಿ ಸಾವಯವ ಗೊಬ್ಬರಗಳು ಯಾವ ಮೂಲೆಗೂ ಸಾಲದು. ಮೊನ್ನೆ ಎಲೆಚುಕ್ಕಿ ಬಾಧೆಯ ಚೆರ್ಚೆ ಬಂದಾಗ ಬಹಳಷ್ಟು ಜನರು ನಾವೂ ಸಾವಯವ ಗೊಬ್ಬರ ಹಾಕಿ ಬೇಸಾಯ ಮಾಡುತ್ತೇವೆ. ಆದರೆ ನಮ್ಮ ಅಡಿಕೆ ತೋಟಕ್ಕೂ ಎಲೆಚುಕ್ಕಿ ಶಿಲೀಂಧ್ರ ಬಾಧಿಸಿದೆ ಎನ್ನುವ ಮಾತನಾಡಿದ್ದನ್ನ ನಾನು ಕೇಳಿದ್ದೆ.
ಈ ಪ್ರೆಸ್ ಮಡ್ ಗೊಬ್ಬರವಾಗಿ ಬಂದಮೇಲೆ ಕೃಷಿ ಯಲ್ಲಿ ಸಾಕಷ್ಟು ಬದಲಾವಣೆ ಆಗುತ್ತಾ ಹೋಗಿದೆ. ಕಳೆದ ದಶಕದ ತನಕ ಕೃಷಿ ಬೇಸಾಯಕ್ಕಾದರೂ ಸಗಣಿ ಗೊಬ್ಬರ ಮತ್ತು ಆ ಮೂಲಕ "ಗೊಬ್ಬರಕ್ಕಾಗಿಯಾದರೂ ಗೋಪಾಲನೆ" ನೆಡಿತಿತ್ತು. ಆದರೆ ಪ್ರೆಸ್ ಮಡ್ ಗೊಬ್ಬರದ ರೂಪದಲ್ಲಿ ಬಂದ ನಂತರ ಕೃಷಿಕರಿಗೆ "ಸಾವಯವ ಗೊಬ್ಬರಕ್ಕೆ" ಸುಲಭದ ಪರಿಹಾರವಾಗಿ ಪ್ರೆಸ್ ಮಡ್ ಸಿಕ್ಕಿತು. ಇದು ಕೊಟ್ಟಿಗೆ ಗೊಬ್ಬರದ ತರಹದ ತನಕ ತೋಟದ ತನಕ ಕೊಂಡೊಯ್ಯಲು ಕಷ್ಟ ಅಲ್ಲ. ಜೊತೆಗೆ ಟಾಟಾ ಸಾಲ್ಟ್ ನಂತೆ ಫ್ರಿ ಫ್ಲೋ. ಕೂಲಿ ಕಾರ್ಮಿಕರಿಗೆ ಅಡಿಕೆ ಮರಕ್ಕೆ ಹಾಕಲು ಸುಲಭ! ಕಡಿಮೆ ಮಣ್ಣು ಸಾಕು.
ಯಾವುದೇ ಬದಲಾವಣೆಯ ಪರಿಣಾಮಗಳು ತಕ್ಷಣಕ್ಕೆ ಗೊತ್ತಾಗೋಲ್ಲ. ಮೊದಲ ಕೆಲವು ವರ್ಷಗಳಲ್ಲಿ ಅಡಿಕೆ ಫಸಲು ರೋಗಬಾಧೆಯ ಮೇಲೆ ಯಾವುದೇ ದುಷ್ ಪ್ರಭಾವ ಈ ಗೊಬ್ಬರದಿಂದ ಆಗಲಿಲ್ಲ. ಆ ನಂತರದ ಕೆಲವು ವರ್ಷಗಳಿಂದ ಮಲೆನಾಡು ಕರಾವಳಿಯ ಅಡಿಕೆ ಬೆಳೆಗೆ ಬದಲಾದ ಹವಾಮಾನದಿಂದ ಅಡಿಕೆ ಕೊಳೆಯಂತಹ ಸಾಮಾನ್ಯ ಬಾಧೆಯನ್ನ ತಡೆದುಕೊಳ್ಳಲಾಗುತ್ತಿಲ್ಲ. 50 ವರ್ಷಗಳ ಹಿಂದೆಯೇ ಕಾಣಿಸಿಕೊಂಡು ತಣ್ಣಗಾಗಿದ್ದ ಎಲೆಚುಕ್ಕಿ ಶಿಲೀಂಧ್ರ ಮತ್ತೆ ವಕ್ಕರಿಸಿದಾಗ ಅದರ ತೀವ್ರತೆಯನ್ನು ಅಡಿಕೆ ಬೆಳೆ ಎದುರಿಸಲಾರದೇ ಸೋತು ಶರಣಾಗುತ್ತಿದೆ!
ಗೊಬ್ಬರ ಬೇಸಾಯದ ಮಾಧ್ಯಮಗಳು ಯಾವುದೇ ಬೆಳೆಯ ರೋಗ ನಿವಾರಣೆ ಮಾಡಲಾರದು. ಆದರೆ ಯಾವುದೇ ರೋಗ ಬಾಧೆ ಎದುರಿಸಲು ಬೆಳೆಗೆ ಶಕ್ತಿ ನೀಡುವುದು ಉತ್ತಮ ಸಾರಯುಕ್ತ ಗೊಬ್ಬರಗಳು.
ಈ ಪ್ರೆಸ್ ಮಡ್ ಪ್ಯಾಕೆಟ್ ಗೊಬ್ಬರದ ಕಂಪನಿ ಯಾನೆ ಪ್ರಾಯೋಜಿಕ ಸಹಕಾರಿ ಸಂಘಗಳ ಮಾರುಕಟ್ಟೆ ವ್ಯವಸ್ಥೆ ರೈತರಿಗೆ ಬೇಸಾಯ ಮಾಡುವ ಕೂಲಿ ಕಾರ್ಮಿಕರಿಗೆ ಅಪ್ಯಾಯಮಾನವಾಗಿ ಗೊಬ್ಬರ ಬಳಸುವ ಸಲಹೆ ನೀಡುತ್ತಾವೆಂದರೆ ಕೇಳಿದರೆ ರೈತರಿಗೆ ಅಷ್ಟು ಖುಷಿಯಾಗುತ್ತದೆ! ಒಂದು ಸಧೃಡ ಫಸಲು ಬರುವ ಅಡಿಕೆ ಮರಕ್ಕೆ ಕೇವಲ ಮೂರು ಕೆಜಿ ಪ್ರೆಸ್ ಮಡ್ ಹಾಕಲು ಸಲಹೆ ನೀಡುತ್ತಾರೆ! ಈ ಕಳಿಯದ ಬಿಸಿ ಬಿಸಿ ಪ್ರೆಸ್ ಮಡ್ ಪುಡಿಯನ್ನು ಇಬ್ಬರು ಕೂಲಿ ಕಾರ್ಮಿಕರು ಒಂದು ಫೈಬರ್ ಬುಟ್ಟಿಯಲ್ಲಿ ಹಾಕಿ ಊಟದ ಮನೆಯಲ್ಲಿ ಊಟಕ್ಕೆ ಕೂತವರಿಗೆ ಬಡಿಸುವವರು ಕೋಸಂಬರಿ ಬಡಿಸಿದಂತೆ ಹಾಕುತ್ತಾ ಹೋಗುತ್ತಾರೆ.
ಒಂದು ಹತ್ತು ವರ್ಷಗಳ ವಯಸ್ಸಿನ ಅಡಿಕೆ ಮರ ಸುಮಾರು ಒಂದು ಟನ್ ತೂಕ ಇರಬಹುದು. ಇಂತಹ ದೊಡ್ಡ ಮರಕ್ಕೆ ಮೂರು ಕೆಜಿ ಗೊಬ್ಬರ ಸಾಕ? ಈ ಗೊಬ್ಬರ ಕರಗಿ ಗೊಬ್ಬರ ಆದಾಗ ಇಪ್ಪತ್ತು ಮೂವತ್ತು ಗ್ರಾಂ ಕ್ಯಾಲೋರಿ ಯಾನೆ ಪೋಷಕಾಂಶಗಳನ್ನು ನೀಡಬಹುದು.
ಹೋಗಲಿ ಒಂದು ನೂರು ಗ್ರಾಮ್ ಪೋಷಕಾಂಶ ಒಂದು ಮರಕ್ಕೆ ಸಿಗುತ್ತದೆ ಅಂತಾದರೆ ಅಷ್ಟು ಕಡಿಮೆ ಪೋಷಕಾಂಶ ಅಷ್ಟು ದೊಡ್ದ ಮರಕ್ಕೆ ಸಾಕ? ಆನೆ ಹೊಟ್ಟೆಗೆ ಅರೆಕಾಸಿನ ಮಜ್ಜಿಗೆಯಂತೆ ಆಗೋಲ್ವ?
ವರ್ಷಕ್ಕೆ ಸುಮಾರು ನೂರೈವತ್ತು ಇನ್ನೂರು ಇಂಚು ಮಳೆಯಾಗುವ ಮಲೆನಾಡು ಕರಾವಳಿಯ ಅಡಿಕೆ ಕೃಷಿ ಗೆ ನಿಧಾನವಾಗಿ ಕರಗುವ, ಕರಗುತ್ತಾ ಶಕ್ತಿ ಪೋಷಕಾಂಶಗಳನ್ನು ನೀಡುವ "ನಾರುಯುಕ್ತ" ಗೊಬ್ಬರ ಬೇಕು.
ಮೊನ್ನೆ ಸಿಪಿಸಿಆರ್ ಐ ಅಡಿಕೆ ಸಂಶೋಧನಾ ಕೇಂದ್ರ ದ ವಿಜ್ಞಾನಿ ಡಾ ಭವಿಷ್ಯ ರವರು ಹೇಳಿದಂತೆ "ಮೊದಲು ಹಟ್ಟಿ ಗೊಬ್ಬರ, ಸುಡುಮಣ್ಣು ಬೂದಿಗಳೇ ಮುಖ್ಯ ಗೊಬ್ಬರಗಳಾಗಿತ್ತು. ಹಟ್ಟಿಗೊಬ್ಬರದಲ್ಲಿ ಸಸ್ಯಕ್ಕೆ ಮಿತವಾಗಿ ಘನ ಪೋಷಕಾಂಶಗಳ ಜೊತೆಗೆ ಸೂಕ್ಷ್ಮ ಪೋಷಕಗಳೂ ಲಭಿಸುತಿತ್ತು. ಈ ಮೂಲಕ ಕೃಷಿ ಸಾಗುತಿತ್ತು. ಆಗಿನ ಕೃಷಿಕರಿಗೆ ಈಗಿನ ಥಿಯರಿಗಳು ಗೊತ್ತಿಲ್ಲದಿದ್ದರೂ ಅನುಭವ ನೋಟವಿತ್ತು ಎಂದರು. ಹಾಗೂ ಅವರ ಮನೆಯ ತೋಟದಲ್ಲೇ ಮುನ್ನೂರ ಐವತ್ತು ಅಡಿಕೆ ಮರಗಳಲ್ಲಿ ಹದಿನೈದು ಕ್ವಿಂಟಾಲ್ ಅಡಿಕೆ ಕೊಯಿದಿದ್ದರು. ಅದರೆ ಈಗ ತೋಟದಲ್ಲಿ ರಾಸಾಯನಿಕ ಕೃಷಿಯೊಂದಿಗೆ ಎಂಟತ್ತು ಕ್ವಿಂಟಾಲ್ ಅಡಿಕೆ ಬರುತ್ತಿದೆ" ಎಂದು ಉದಾಹರಣೆ ಸಹಿತ ಸಾಂಪ್ರದಾಯಿಕ ಬೇಸಾಯ ಪದ್ದತಿ ಕೈಬಿಟ್ಟ ತದನಂತರದ ದಿನಗಳಲ್ಲಿ ಮಲೆನಾಡು ಕರಾವಳಿಯ ಕೃಷಿಯ ಇಳುವರಿ ಮತ್ತು ರೋಗಬಾಧೆ ಹೇಗೆ ಕಾಡುತ್ತಿದೆ ಎಂದು ವಿಶ್ಲೇಷಣೆ ಮಾಡಿದರು.
ಕೃಷಿಕ ಬಂಧುಗಳೇ,
ಅಡಿಕೆ ಬೇಸಾಯಕ್ಕೆ ದಯವಿಟ್ಟು ಸ್ವಲ್ಪ ಪ್ರಮಾಣದಲ್ಲಾದರೂ ಸ್ಥಳೀಯ ವಾಗಿ ಲಭ್ಯವಿರುವ ಹಟ್ಟಿ ಗೊಬ್ಬರ ಬಳಸಿ. ಕಂಪನಿಯವರು ಸಲಹೆ ನೀಡ್ತಾರೆ ಅಂತ ಅಡಿಕೆ ಮರದ ಬೇಸಾಯಕ್ಕೆ ದಯವಿಟ್ಟು ಎರಡು ಕೆಜಿ ಮೂರು ಕೆಜಿ ಯಷ್ಟು ಕಡಿಮೆ ಪ್ರಮಾಣದ ಗೊಬ್ಬರ ಹಾಕಬೇಡಿ.
ಇದು ಯಾತಕ್ಕೂ ಸಾಕಾಗೋಲ್ಲ!! ಇಷ್ಟು ಕಡಿಮೆ ಸಾವಯವ ಪದಾರ್ಥಗಳನ್ನು ಬೇಸಾಯಕ್ಕೆ ಬಳಸಿದರೆ ನಿಧಾನವಾಗಿ ಅಡಿಕೆ ಕೃಷಿ ಸೋಲುತ್ತಾ ಹೋಗುತ್ತದೆ.
ನಮ್ಮ ಬಳಿ ನಮ್ಮ ಗೊಬ್ಬರ ಕೇಳಿಕೊಂಡು ಬರುವ ರೈತ ಬಾಂಧವರಿಗೆ ನಾವು ಕನಿಷ್ಠ ಆರು ಕೆಜಿಯಾದರೂ ನಮ್ಮ ತಯಾರಿಕೆಯ ಗೊಬ್ಬರ ಅಡಿಕೆ ಮರದ ಬುಡಕ್ಕೆ ಹಾಕಿ ಸಾದ್ಯವಾದರೆ ಇತರ ಕರಗುವ ಸಾವಯವ ಒಳಸುರಿ ಗಳನ್ನು ಇದರ ಜೊತೆಯಲ್ಲಿ ಹಾಕಿ ಎನ್ನುವ ಸಲಹೆ ನೀಡ್ತೀವಿ. ಬಹಳಷ್ಟು ರೈತರು ಗೊಬ್ಬರ ಬೆಲೆಯನ್ನು ಲೆಕ್ಕಾಚಾರ ಮಾಡಿ ಇದು ತುಟ್ಟಿ ಎನ್ನುವ ಮಾತನಾಡುತ್ತಾರೆ. ಆದರೆ ಇದು ಅನಿವಾರ್ಯ ಬೇಸಾಯ ಕ್ರಮ.
ಒಂದು ಅಡಿಕೆ ಮರ ಕನಿಷ್ಠ ಎರಡು ಕೆಜಿ ಒಣ ಅಡಿಕೆ ನೀಡಬೇಕು. ಆ ಲೆಕ್ಕಾಚಾರದಲ್ಲಿ ಒಂದು ಅಡಿಕೆ ಮರ ಈ ಹೊತ್ತಿನ ದರದ ಲೆಕ್ಕಾಚಾರದಲ್ಲಿ ಸುಮಾರು ಒಂಬೈನೂರು ರೂಪಾಯಿ ಆದಾಯ ನೀಡಬಹುದು. ಒಂಬೈನೂರು ರೂಪಾಯಿಯಿಂದ ಸಾವಿರ ರೂಪಾಯಿ ಫಸಲು ನೀಡುವ ಒಂದು ಅಡಿಕೆ ಮರಕ್ಕೆ ಕನಿಷ್ಠ ನೂರು ರೂಪಾಯಿ ಯನ್ನೂ ಕೃಷಿಕ ಹಾಕದಿದ್ದರೆ ಹೇಗೆ?
ಪ್ರೆಸ್ ಮಡ್ + ರಾಸಾಯನಿಕ ಬೇಸಾಯ ಕ್ರಮದಲ್ಲಿ ಐವತ್ತು ಅರವತ್ತು ರೂಪಾಯಿಯಲ್ಲಿ ಮುಗಿದು ಹೋಗಿ ಒಂದಷ್ಟು ವರ್ಷಗಳಿಂದ ಅಡಿಕೆ ಬೆಳೆಗಾರರಿಗೆ ಅತ್ಯಂತ ಕಡಿಮೆ ಬಂಡವಾಳಕ್ಕೆ ಅತಿ ಹೆಚ್ಚಿನ ಉತ್ಪತ್ತಿ ನೀಡಿತ್ತು.
ಆದರೆ ಈ ಉತ್ಪತ್ತಿ ಕಾರಣ ಹಿಂದಿನ ಕಾಲದ ಮಣ್ಣಿನ ಪಳೆಯುಳಿಕೆ ಪೋಷಕಾಂಶಗಳ ಸಾರ ಮತ್ತು ರಾಸಾಯನಿಕ ಗೊಬ್ಬರದ ಕಾರಣ!
ಆದರೆ ಯಾವಾಗ ಈ ಪಳೆಯುಳಿಕೆ ಬುತ್ತಿ ಯ ಸಾರ ಖಾಲಿಯಾಗುತ್ತಾ ಬಂತೋ ಆ ಕಾಲದಿಂದ ರೋಗಿಗಳು ಮಿತಿಮೀರಿದ ದುಷ್ಪರಿಣಾಮ ಬೀರಿ ಮಲೆನಾಡು ಕರಾವಳಿಯ ಅಡಿಕೆ ಕೃಷಿ ಬದುಕು ಭವಿಷ್ಯವನ್ನೇ ಮುರುಟಿಸುತ್ತಿದೆ.
ರೈತ ಬಾಂಧವರೇ, ದಯವಿಟ್ಟು ಈ ಬಗ್ಗೆ ಗಮನ ಕೊಡಿ. ಯಾವುದೂ ತಕ್ಷಣಕ್ಕೆ ಬದಲಾವಣೆಯಾಗೋಲ್ಲ. ಈ ವಿಪರೀತ ಮಳೆ ಬದಲಾದ ಹವಾಮಾನದ ಈ ಕಾಲದಲ್ಲಿ ಸಾಧ್ಯವಾದಷ್ಟು ನಿಧಾನವಾಗಿ ಕರಗುವ ಸಾವಯವ ಗೊಬ್ಬರ ಬಳಸಿ. ಸಾಧ್ಯವಾದಷ್ಟು ಚಿಕ್ಕ ಪ್ರಮಾಣದಲ್ಲಾದರೂ ಸಗಣಿ ಗೊಬ್ಬರ ಬಳಸಿ. ಈ ಮೂಲಕ ಗೋವು ಉಳಿಯಲಿ. ಈ ಮೂಲಕ ಮಲೆನಾಡು ಕರಾವಳಿಯ ಅಡಿಕೆ ಬೆಳೆ ಉಳಿದು ಅಡಿಕೆ ಕೃಷಿಕನೂ ಉಳಿಯಲಿ.
- ಪ್ರಬಂಧ ಅಂಬುತೀರ್ಥ
9481801869 / 8073573139
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ