ತೆಂಕುತಿಟ್ಟು ಯಕ್ಷಗಾನ ರಂಗದಲ್ಲಿ ಮಿಂಚುತ್ತಿರುವ ಯುವ ಕಲಾವಿದ
ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರು ತಾಲೂಕು ಕಡಬ ಗ್ರಾಮದ ಆರ್ತಿಲ ಮನೆಯ ಎ.ಆನಂದ ರೈ ಹಾಗೂ ತಾರಾ ರೈ ಇವರ ಮಗನಾಗಿ 06.11.1994ರಂದು ಯತೀಶ್ ರೈ ಅವರ ಜನನ. ಮನೆಯಲ್ಲಿ ಬಡತನವಿತ್ತು ತಂದೆಯವರು ಕೂಲಿ ಕೆಲಸ ಮಾಡಿ ನಮ್ಮನ್ನು ಸಾಕುತ್ತಿದ್ದರು. ಹಾಗಾಗಿ 10 ನೇ ತರಗತಿಯಲ್ಲಿ ವಿದ್ಯಾಭ್ಯಾಸವನ್ನು ನಿಲ್ಲಿಸಿ ಯಕ್ಷಗಾನಕ್ಕೆ ಪಾದಾರ್ಪಣೆ ಮಾಡಿದೆ. ತಂದೆ ಆನಂದ ರೈ ಅವರ ಪ್ರೋತ್ಸಾಹ ನಾನು ಯಕ್ಷಗಾನ ರಂಗಕ್ಕೆ ಬರಲು ಪ್ರೇರಣೆಯಾಯಿತು ಎಂದು ಯತೀಶ್ ರೈ ಅವರು ಹೇಳುತ್ತಾರೆ.
ಶಾಲಾ ದಿನಗಳಲ್ಲಿ ಗುರು ಲಕ್ಷ್ಮಣ ಆಚಾರ್ಯ ಎಡಮಂಗಲ ಇವರ ಪ್ರಥಮ ಗುರುಗಳು. ಧರ್ಮಸ್ಥಳ ಕೇಂದ್ರ ಸೇರಿದ ಮೇಲೆ ಗುರುಗಳಾಗಿ ದಿವಾಣ ಶಿವಶಂಕರ ಭಟ್, ಬೆಳಾಲು ಲಕ್ಷ್ಮಣ ಗೌಡ ಇವರು ಯಕ್ಷಗಾನ ಕೇಂದ್ರದಲ್ಲಿ ಗುರುಗಳಾಗಿದ್ದರು.
ನೆಚ್ಚಿನ ಪ್ರಸಂಗಗಳು:-
ಅಭಿಮನ್ಯು ಕಾಳಗ, ಅಗ್ರಪೂಜೆ, ಶ್ರೀ ದೇವಿ ಮಹಾತ್ಮೆ, ಸುದರ್ಶನ ವಿಜಯ, ಷಣ್ಮುಖ ವಿಜಯ, ಬಬ್ರುವಾಹನ ಕಾಳಗ, ಭಾರ್ಗವ ವಿಜಯ ಇತ್ಯಾದಿ.
ನೆಚ್ಚಿನ ವೇಷಗಳು:-
ಯಕ್ಷ, ಪ್ರಹ್ಲಾದ, ಷಣ್ಮುಖ, ಚಂಡ, ಮುಂಡ, ಭಾರ್ಗವ, ರಾಮ, ಲವ, ಕುಶ, ಅಭಿಮನ್ಯು, ಬಬ್ರುವಾಹನ, ಕೃಷ್ಣ, ಸುಧನ್ವ, ವಿಷ್ಣು, ಸುದರ್ಶನ, ಬಾಲ ಸರಸ್ವತಿ.
ರಂಗಕ್ಕೆ ಹೋಗುವ ಮೊದಲು ಪ್ರಸಂಗದ ಬಗ್ಗೆ ಯಾವ ರೀತಿಯ ತಯಾರಿ ಮಾಡಿಕೊಳ್ಳುತ್ತೀರಿ:-
ಪಾತ್ರ ಯಾವುದು ಎಂದು ತಿಳಿದ ಕೂಡಲೇ ನನ್ನ ಹತ್ತಿರ ಇದ್ದ ಪುಸ್ತಕ ನೋಡಿ ತಿಳಿದುಕೊಂಡು ಹಿರಿಯ ಅನುಭವೀ ಕಲಾವಿದರಲ್ಲಿ ಮಾಹಿತಿ ಕೇಳಿ ನನ್ನ ಎದುರು ವೇಷಧಾರಿ ಜೊತೆಗೆ ಚರ್ಚಿಸಿ ತಯಾರಿ ಮಾಡಿಕೊಳ್ಳುತ್ತೇನೆ ಎಂದು ಹೇಳುತ್ತಾರೆ ಯತೀಶ್ ರೈ.
ಕಟೀಲು 4ನೇ ಮೇಳದಲ್ಲಿ ತಿರುಗಾಟ ಮಾಡಿದ ಸಂದರ್ಭದಲ್ಲಿ ಕಲಾವಿದರಾದ ಸುಬ್ರಾಯ ಹೊಳ್ಳ, ವಿಷ್ಣು ಶರ್ಮಾ, ಕುಬಣೂರು ಭಾಗವತರು, ರವಿಶಂಕರ್ ವಳಕ್ಕುಂಜ ಹಾಗೂ ಅನೇಕ ಹಿರಿಯ ಕಲಾವಿದರು ಇದ್ದರು. ಅವರ ಜೊತೆಗಿನ ತಿರುಗಾಟದ ಅನುಭವ ಹೇಳಿ:-
ಕುಬಣೂರು ಭಾಗವತರು ಅನೇಕ ಒಳ್ಳೆಯ ವೇಷಗಳನ್ನು ಮಾಡಲು ಅವಕಾಶ ಮಾಡಿಕೊಟ್ಟಿದ್ದಾರೆ. ಎಲ್ಲರನ್ನೂ ಸಮಾನ ರೀತಿಯಲ್ಲಿ ನೋಡುತ್ತಾ ಇದ್ದರು ಹಾಗೂ ತುಂಬಾ ಸೌಮ್ಯ ಸ್ವಭಾವದವರು. ಅವರ ಭಾಗವತಿಕೆಯಲ್ಲಿ ವೇಷ ಮಾಡಿದ್ದು ಯಾವತ್ತಿಗೂ ಮರೆಯಲಾಗದ ಒಂದು ಅನುಭವ.
ಸುಬ್ರಾಯ ಹೊಳ್ಳರ ಜೊತೆಗೆ ತ್ರಿಜನ್ಮ ಮೋಕ್ಷ ಪ್ರಸಂಗದಲ್ಲಿ ಯುದ್ಧದ ಸನ್ನಿವೇಶದಲ್ಲಿ ಅವರ ಹಿರಣ್ಯಾಕ್ಷ ಹಾಗೂ ದೇವೇಂದ್ರ ಬಲ ಇದ್ದಾಗ ತುಂಬಾ ಖುಷಿ ಆಗುತ್ತಿತ್ತು. ಹಾಗೂ ರತಿ ಕಲ್ಯಾಣ ಪ್ರಸಂಗದಲ್ಲಿ ಹೊಳ್ಳರ ಕೌಂಡ್ಲಿಕನಿಗೆ ನನ್ನ ಹನುಮಂತ. ಚೌಕಿಯಲ್ಲಿ ಅವರ ಬಳಿ ಪ್ರಸಂಗದ ಬಗ್ಗೆ ಹಾಗೂ ವೇಷದ ಬಗ್ಗೆ ಕೇಳಿ ತಿಳಿದುಕೊಳ್ಳುತ್ತಿದ್ದೆ.
ವಿಷ್ಣು ಶರ್ಮರ ಜೊತೆಗೆ ಕಂಸ ವಧೆ ಪ್ರಸಂಗದಲ್ಲಿ ಅವರ ಕೃಷ್ಣಕ್ಕೆ ನನ್ನ ಬಲರಾಮ, ದೇವಿ ಮಹಾತ್ಮೆ ಪ್ರಸಂಗದಲ್ಲಿ ಅವರ ವಿಷ್ಣುಗೆ ನನ್ನ ಈಶ್ವರ, ಭುವನ ಭಾಗ್ಯ ಪ್ರಸಂಗದಲ್ಲಿ ಅವರ ದುಷ್ಯಂತ ಹಾಗೂ ನನ್ನ ಸರ್ವಧಾಮನ ಹೀಗೆ ರಂಗದಲ್ಲಿ ಅನೇಕ ವೇಷಗಳನ್ನು ಜೊತೆಗೆ ಮಾಡಿದ್ದೇನೆ ಹಾಗೂ ಯಾವ ಪಾತ್ರದ ಬಗ್ಗೆ ಕೇಳಿದರೂ ತುಂಬಾ ಪ್ರೀತಿಯಿಂದ ಹೇಳಿಕೊಡುತ್ತಿದ್ದರು.
ರವಿಶಂಕರ್ ವಳಕ್ಕುಂಜ ಅವರು ಮೇಳದ ಎಲ್ಲಾ ಕಲಾವಿದರಿಗೂ ಹೇಳಿ ಕೊಡ್ತಾರೆ.. ಕಲಿಯುವ ಮಕ್ಕಳಿಗೆ ತುಂಬಾ ಸಂಭಾಷಣೆ, ವೇಷ ಹೇಗೆ ಎಷ್ಟೊತ್ತಿಗೆ ಪ್ರವೇಶ ಎಲ್ಲ ಹೇಳ್ತಾ ಇದ್ರು. ಮತ್ತೆ ನಾನು 4ನೇ ಮೇಳದಲ್ಲಿ ಯಾವುದೇ ವೇಷ ಬಂದಾಗಲೂ ಅವರಲ್ಲಿ ಕೇಳಿ ನಾನು ವೇಷ ತಯಾರಿ ನಡೆಸ್ತಾ ಇದ್ದೆ. ಅವರು ಎಷ್ಟೇ ವೇಷದಲ್ಲಿ ಬ್ಯುಸಿ ಇದ್ರು ಕೂಡ ತಾಳ್ಮೆಯಿಂದ ನಮಗೆ ಹೇಳಿಕೊಡುವರು. ಏನಾದ್ರೂ ಮನೆಯಿಂದ ತಿಂಡಿ ತಂದ್ರೂ ಎಲ್ಲಾ ಮಕ್ಕಳ ಜೊತೆ ಹಂಚಿ ತಿನ್ನೋದು ಅವರ ಗುಣ.
ಯಕ್ಷಗಾನದ ಇಂದಿನ ಸ್ಥಿತಿ ಗತಿ ಹಾಗೂ ಪ್ರೇಕ್ಷಕರ ಬಗ್ಗೆ ಅಭಿಪ್ರಾಯ:-
ಈಗಿನ ಕಾಲದಲ್ಲಿ ಯಕ್ಷಗಾನವನ್ನು ಜನರು ತುಂಬಾ ಚೆನ್ನಾಗಿ ಇಷ್ಟ ಪಡುತ್ತಾರೆ ಹಾಗೂ ಯಕ್ಷಗಾನ ಶ್ರೇಷ್ಠವಾದ ಕಲೆ. ಕಲೆಯನ್ನು ಗೌರವಿಸಿ ಕಲಾವಿದರನ್ನು ಪ್ರೋತ್ಸಾಹಿಸಿ.
1ವರ್ಷ ಧರ್ಮಸ್ಥಳ ಮೇಳ ಹಾಗೂ 9ವರ್ಷ ಕಟೀಲು ಮೇಳದಲ್ಲಿ ತಿರುಗಾಟ ಮಾಡಿ 4 ವರ್ಷಗಳ ಬಳಿಕ ಈ ವರ್ಷ ಕಟೀಲು ಮೇಳದಲ್ಲಿ ಮತ್ತೆ ತಿರುಗಾಟವನ್ನು ಮಾಡಲಿದ್ದಾರೆ.
ಯಕ್ಷಗಾನ ನೋಡುವುದು, ಮನೆಯಲ್ಲಿ ಇದ್ದರೆ ಟಿ.ವಿ ನೋಡುವುದು, ದಿನಪತ್ರಿಕೆ ಓದುವುದು, ಯಕ್ಷಗಾನದ ಹಾಡು ಕೇಳುವುದು ಇವರ ಹವ್ಯಾಸಗಳು.
ತಂದೆ, ತಾಯಿಯ ಪ್ರೋತ್ಸಾಹ, ಗುರುಗಳ ಮಾರ್ಗದರ್ಶನದಿಂದ ಯಕ್ಷಗಾನ ರಂಗದಲ್ಲಿ ಇಂದು ಸಾಧನೆ ಮಾಡಲು ಸಾಧ್ಯವಾಯಿತು ಎಂದು ಯತೀಶ್ ರೈ ಅವರು ಹೇಳುತ್ತಾರೆ.
ಇವರಿಗೆ ಇವರು ನಂಬಿರುವ ಕಲಾಮಾತೆ ಹಾಗೂ ಕಟೀಲು ಶ್ರೀ ಭ್ರಮರಾಂಬೆ ಕಲೆಯಲ್ಲಿ ಇನ್ನಷ್ಟು ಸಾಧಿಸುವ ಶಕ್ತಿಯನ್ನು ಕರುಣಿಸಲಿ, ಅವರಿಗೆ ಶುಭವನ್ನು ಕರುಣಿಸಲಿ ಎಂದು ಬೇಡುತ್ತಿದ್ದೇವೆ ಹಾಗೂ ಕಲಾಮಾತೆಯು ಸಕಲ ಭಾಗ್ಯಗಳನ್ನೂ ಅನುಗ್ರಹಿಸಲಿ ಎಂದು ಕಲಾಭಿಮಾನಿಗಳೆಲ್ಲರ ಪರವಾಗಿ ಹಾರೈಕೆಗಳು.
- ಶ್ರವಣ್ ಕಾರಂತ್, ಶಕ್ತಿನಗರ, ಮಂಗಳೂರು
ನಿರಂತರ ಅಪ್ಡೇಟ್ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


