ಸಂವಿಧಾನ ವಿರೋಧಿ ವಕ್ಫ್ ಬೋರ್ಡ್ ತೆಗೆದು ಹಾಕಿ: ಕಲ್ಯಾಣ ಸ್ವಾಮಿಗಳು

Upayuktha
0


ಬಳ್ಳಾರಿ: ಸಂವಿಧಾನಕ್ಕೆ ತದ್ವಿರುದ್ಧವಾದ ವಕ್ಫ್ ಬೋರ್ಡ್ ನಿಂದ ರೈತ ಸಮುದಾಯ ಅಷ್ಟೇ ಅಲ್ಲದೆ ಮಠ, ಮಂದಿರಗಳ ಆಸ್ತಿ ಕಬಳಿಕೆ ಆಗುತ್ತಿದ್ದು ಇದನ್ನು ಪ್ರಶ್ನಿಸುವಂತಿಲ್ಲ ಎನ್ನುವ ಉದ್ದೇಶ ಹೊಂದಿದೆ. ಇಂತಹ ಸಂವಿಧಾನ ವಿರೋಧಿಯಾದ ವಕ್ಫ್ ಬೋರ್ಡ್ ಅನ್ನು ತೆಗೆದು ಹಾಕಬೇಕೆಂದು ಮಠಾಧೀಶರ ಧರ್ಮ ಪರಿಷತ್‌ ರಾಜ್ಯ ಸರ್ಕಾರವನ್ನು ಆಗ್ರಹಿಸಿದೆ. 


ಇಲ್ಲಿನ ಕೊಟ್ಟೂರು ಸ್ವಾಮಿ ಮಠದ ಪ್ರೌಢದೇವರಾಯ ಸಭಾ ಮಂಟದದಲ್ಲಿ ಜರುಗಿದ ವಿಜಯನಗರ-ಬಳ್ಳಾರಿ ಮಠಾಧೀಶರ ಧರ್ಮ ಪರಿಷತ್ತಿನ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಕಮ್ಮರಚೇಡು ಸಂಸ್ಥಾನ ಮಠದ ಪೂಜ್ಯ ಕಲ್ಯಾಣ ಸ್ವಾಮಿಗಳು, ನಾಡಿನ ಮಠ-ಮಂದಿರ-ದೇವಸ್ಥಾನಗಳ ಹಾಗೂ ಬಡ ರೈತರ ಪಹಣಿಗಳಲ್ಲಿ ನಮೂದಾಗಿರುವ ವಕ್ಸ್ ಹೆಸರನ್ನು ಆದಷ್ಟು ಬೇಗ ತೆಗೆಸಿ, ಅನ್ನದಾತರ ಸಂಕಷ್ಟ ದೂರ ಮಾಡಬೇಕೆಂದು ಬಳ್ಳಾರಿ ಜಿಲ್ಲಾಧಿಕಾರಿಗಳ ಮೂಲಕ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಮನವಿ ಮಾಡುವುದಾಗಿ ಹೇಳಿದರು. 


ಕನ್ನಡ ನಾಡಿನ ವೀರಶೈವ-ಲಿಂಗಾಯತ ಮಠಗಳು ಅಕ್ಷರ-ಅನ್ನದಾಸೋಹದ ಜೊತೆಗೆ ನಾಡಿನ ಸಮಸ್ತ ನಾಗರಿಕರ ಕಷ್ಟಗಳನ್ನು ತಮ್ಮ ಕಷ್ಟಗಳೆಂದು ಭಾವಿಸಿ ಸ್ಪಂದಿಸುತ್ತ ಬಂದಿವೆ. ಇರುವ ಸಣ್ಣಪುಟ್ಟ ಜಮೀನುಗಳಲ್ಲಿ ವ್ಯವಸಾಯವನ್ನು ಮಡುತ್ತ ಜೀವನೋಪಾಯ ಸಾಗಿಸುತ್ತಿರುವ ರೈತರ ಜಮೀನುಗಳಲ್ಲಿ ವಕ್ಫ್ ಹೆಸರು ಹೇಗೆ ಬಂದಿದೆ? ಯಾಕಾಗಿ ಬಂದಿದೆ? ಇದರಿಂದ ಯಾರಿಗೆ ಲಾಭ? ರಾಜ್ಯ ಸರ್ಕಾರ ಒಂದು ಸಮುದಾಯದ ಜನರನ್ನು ಓಲೈಸುವಲ್ಲಿ ಹಿಂದೂ ಧರ್ಮದ ಅನೇಕ ಸಮುದಾಯಗಳನ್ನು ಎದುರು ಹಾಕಿಕೊಳ್ಳುವುದು ಸರಿಯಲ್ಲ. ಜಾತ್ಯತೀತವಾಗಿ ಸಮಾಜೋಧಾರ್ಮಿಕ ಸೇವೆ ಸಲ್ಲಿಸುತ್ತಿರುವ ಮಠ-ಮಂದಿರ-ದೇವಸ್ಥಾನಗಳ ಜಮೀನುಗಳಲ್ಲಿ ವಕ್ಸ್ ಬೋರ್ಡ್ ಯಾವುದೇ ನೋಟಿಸ್‌ನ್ನು ನೀಡದೇ ಪಹಣಿಗಳಲ್ಲಿ ತನ್ನ ಹೆಸರನ್ನು ಏಕಪಕ್ಷೀಯವಾಗಿ ನಮೂದಿಸಿ ಕೊಳ್ಳುತ್ತಿರುವುದು ನಿಜವಾಗಿಯೂ ಅತ್ಯಂತ ಕಳವಳಕಾರಿ ವಿಷಯವಾಗಿದೆ. ಕಡಿಮೆ ಹಿಡುವಳಿದಾರರಾದ ಎಲ್ಲ ಜಾತಿ-ಧರ್ಮಗಳ ರೈತರ ಪಹಣಿಗಳಲ್ಲಿ ವಕ್ಸ್ ಹೆಸರು ಸೇರ್ಪಡೆ ಯಾಗುತ್ತಿರುವುದನ್ನು ಕೇಳಿ ಬಹಳಷ್ಟು ಆಘಾತವಾಗಿದೆ ಎಂದು ನೊಂದು ನುಡಿದರು. 


ಯಾವುದೇ ಪ್ರಾಮಾಣಿಕ (ಧರ್ಮಾತೀತವಾಗಿ) ರೈತರಿಗೆ ಮತ್ತು 'ಸೋಹಂ ಎಂದೆನಿಸದೇ, ದಾಸೋಹಂ ಎಂದೆನಿಸಯ್ಯಾ' ಎಂಬ ಶರಣ ತತ್ವವನ್ನು ಪಾಲಿಸುತ್ತಿರುವ ಮಠಗಳಿಗೆ, ಮಂದಿರಗಳಿಗೆ ಈ ವಕ್ಸ್ ಕಾಯ್ದೆಯಿಂದ ತೊಂದರೆ ಆಗಬಾರದೆಂಬುದು ನಮ್ಮೆಲ್ಲರ ಆಶಯವಾಗಿದೆ. ಬಡವ, ದೀನ-ದಲಿತ, ಹಿಂದುಳಿದ ಮತ್ತು ರೈತರ ಬಗೆಗೆ ಅನುಕಂಪಾತ್ಮಕ ಪ್ರೇಮವನ್ನು ಹೊಂದಿದ ಸಿದ್ದರಾಮಯ್ಯನವರ ಅಧಿಕಾರದ ಅವಧಿಯಲ್ಲಿ ಹಿಗಾಗುತ್ತಿರುವುದು ನಿಜಕ್ಕೂ ಶೋಚನೀಯ. ಪ್ರಾಮಾಣಿಕವಾಗಿ ಭೂಮಿಯಲ್ಲಿ ಉಳುಮೆ ಮಾಡಿಕೊಂಡು ಬರುತ್ತಿರುವ ರೈತರಿಗೆ ಅನ್ಯಾಯವಾಗಬಾರದು. ನಮ್ಮ ಮಠಾಧೀಶರ ಧರ್ಮ ಪರಿಷತ್ತು ಇದಕ್ಕಾಗಿ ಹಳ್ಳಿಗಳಿಗೆ ತೆರಳಿ ಜಾಗೃತಿ ಮೂಡಿಸುವ ಕೆಲಸ ಮಾಡಲಿದೆ ಎಂದರು. ಮುಖ್ಯಮಂತ್ರಿಗಳು ಇದಕ್ಕಾಗಿ ಸೂಕ್ತ ಕಾನೂನನ್ನು ತಂದು ಆದಷ್ಟು ಬೇಗ ಸರಿಪಡಿಸಬೇಕು. ಇಲ್ಲದೇ ಹೋದಾರೆ  ಬಳ್ಳಾರಿ ಮತ್ತು ವಿಜಯನಗರ ಜಿಲ್ಲಾ ಮಠಾಧೀಶರ ಧರ್ಮ ಪರಿಷತ್‌ನ ಸರ್ವ ಪೂಜ್ಯರುಗಳು ನಾಡಿನಾದ್ಯಂತ ಸಂಚರಿಸಿ ರೈತರ ಹಾಗೂ ಪಕ್ಷಾತೀತ ಹೋರಾಟಗಳಿಗೆ ಬೆಂಬಲ ನೀಡಬೇಕಾಗುತ್ತದೆ ಎಂದು ಎಚ್ಚರಿಸಿದರು. 


ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ಉಳುಮೆ ಮಾಡುವ ರೈತರ ಮೇಲೆ ಪೊಲೀಸರು ಲಾಠಿ ಚಾರ್ಜ್ ಮಾಡಿರುವುದನ್ನು ಖಂಡಿಸಿದ ಕಲ್ಯಾಣ ಸ್ವಾಮಿಗಳು, ರಾಜ್ಯದ ಯಾವುದೇ ಮೂಲೆಯಲ್ಲಿರುವ ರೈತರು ತಮ್ಮ ಸಮಸ್ಯೆಗೆ 70195  50844 ಸಂಖ್ಯೆಗೆ ಸಂಪರ್ಕಿಸಿದರೆ ಖಂಡಿತವಾಗಿಯೂ ರೈತರ ಬೆನ್ನಿಗೆ ನಿಂತು ಸರ್ಕಾರದ ಕಿವಿ ಹಿಂಡುವ ಕೆಲಸ ಮಾಡುತ್ತೇವೆ. ಗ್ಯಾರಂಟಿ ಹೆಸರಿನಲ್ಲಿ ಜನರಿಗೆ ಯೋಜನೆಗಳನ್ನು ನೀಡುವ ನೆಪದಲ್ಲಿ ರೈತರ ಜಮೀನುಗಳ ದಾಖಲೆಗಳಲ್ಲಿ ವಕ್ಫ್ ಹೆಸರು ನಮೂದಿಸುತ್ತಿರುವುದು ಅತ್ಯಂತ ಆತಂಕದ ವಿಷಯ. ವಕ್ಫ್ ಬೋರ್ಡ್ ನಮ್ಮ ದೇಶದಲ್ಲಿಯೇ ಇರಬಾರದು. ಮುಖ್ಯಮಂತ್ರಿ ಸಿದ್ದರಾಮಯ್ಯನವರು ಸಚಿವ ಜಮೀರ್ ಅಹ್ಮದ್ ಅವರಿಗೆ ಎಲ್ಲ ಜಿಲ್ಲೆಗಳಿಗೆ ತೆರಳಿ ರೈತರ, ಮಠ, ಮಂದಿರಗಳ ದಾಖಲೆಗಳಲ್ಲಿರುವ ವಕ್ಫ್ ಹೆಸರನ್ನು ತೆಗೆಸಲು ಸೂಚಿಸಬೇಕು. ಸಚಿವ ಜಮೀರ್ ಕೂಡ ಎಲ್ಲ ಜತಿ ಜನರ ಮತಗಳನ್ನು ಪಡೆದು ಜನಪ್ರತಿನಿಧಿಯಾಗಿದ್ದಾರೆ. ಇವರು ಒಂದು ಜಾತಿಗೆ ಸೀಮಿತರಾದವರಲ್ಲ ಎನ್ನುವುದನ್ನು ಅರಿತುಕೊಳ್ಳಬೇಕು. ದೇಶದ ಹಿತಕ್ಕಾಗಿ, ಸಂವಿಧಾನದ ರಕ್ಷಣೆಗಾಗಿ ಮತ್ತು ಪ್ರಜಾಪ್ರಭುತ್ವ ಉಳಿವಿಕೆಗಾಗಿ ಮಠಾಧೀಶರು ಎಂಥ ತ್ಯಾಗಕ್ಕೂ ಸಿದ್ಧ. ಹೀಗಾಗಿ, ಈ ಪತ್ರಿಕಾಗೋಷ್ಠಿ ನಡೆಸಲಾಗಿದೆ. ಕಾಂಗ್ರೆಸ್ ಸರ್ಕಾರ ಒಂದು ಧರ್ಮವನ್ನು ಓಲೈಸುತ್ತಿದೆ. ಈ ಕಾರಣಕ್ಕಾಗಿ ಮನೆ ಮನೆಯಲ್ಲೂ ಜನರು ಹಿಡಿಶಾಪ ಹಾಕುತ್ತಿದ್ದಾರೆ. ಶಾಂತಿಯ ನೆಲೆವೀಡಾದ ನಾಡಿನಲ್ಲಿ ಇಂತಹ ಪ್ರಕರಣಗಳು ನಡೆಯುತ್ತಿರುವುದು ದೇಶಕ್ಕೆ ಅಗೌರವ ಮೂಡಿಸುತ್ತಿವೆ ಎಂದರು.  


ಶ್ರೀ ಜಗದ್ಗುರು ಕೊಟ್ಟೂರು ಸ್ವಾಮಿ ಸಂಸ್ಥಾನ ಮಠದ ಪೂಜ್ಯ ಬಸವಲಿಂಗ ಸ್ವಾಮಿಗಳು ಮಾತನಾಡಿ, ಹಾಲಕೆರೆ ಮಠದ ನರೇಗಲ್ ಬಳಿ 11 ಎಕರೆ ವಕ್ಫ್ ಬೋರ್ಡ್ ಎಂದು ನಮೂದಾಗಿತ್ತು. ಅಲ್ಲಿನ ದರಗಾದ ಮೌಲ್ವಿಯೊಬ್ಬರು ತಹಶೀಲ್ದಾರರಿಗೆ ಲಿಖಿತ ಪತ್ರ ನೀಡಿ, ಇದು ಮಠಕ್ಕೆ ಸಂಬಂಧಿಸಿದ ಜಾಗ. ಇದು ವಕ್ಫ್ ಗೆ ಸಂಬAಧಿಸಿದಲ್ಲ ಎಂದು ಸ್ಪಷ್ಟೀಕರಣ ನೀಡಿದ್ದಾರೆ. ಮಠಗಳು ಹಿಂದೂ, ಮುಸ್ಲಿಂ, ಕ್ರೈಸ್ತರೆಂಬ ಭೇದವಿಲ್ಲದೇ ಸಮಾಜಮುಖಿಯಾಗಿ ಕೆಲಸ ಮಾಡುತ್ತಿವೆ. ಧರ್ಮ ಪರಿಷತ್ತು ಸಮಾಜಮುಖಿಯಾಗಿ ಕೆಲಸ ಮಾಡುತ್ತಿದೆ. ವಕ್ಫ್ ಬೋರ್ಡ್ ನಿಂದ ಆಗಿರುವ ಗೊಂದಲಗಳನ್ನು ಸರ್ಕಾರ ನಿವಾರಣೆ ಮಾಡಬೇಕೆಂದರು. 


ಹರಗಿನದೋಣಿ ಪಂಚವಣ್ಣಿ ಹಿರೇಮಠ ಸಂಸ್ಥಾನದ ಅಭಿನವ ಸಿದ್ಧಲಿಂಗ ಶಿವಾಚಾರ್ಯ ಸ್ವಾಮಿಗಳು ಮಾತನಾಡಿ, ಕುಡಿತಿನಿಯ ಪುರಾತನ ದುರ್ಗೇಶ್ವರ ದೇವಸ್ಥಾನವನ್ನು ದರಗಾವನ್ನಾಗಿ ಪರಿವರ್ತಿಸಲಾಗಿದೆ. ಪರಿಪೂರ್ಣವಾಗಿ ಇದು ಹಿಂದೂ ದೇವಸ್ಥಾನ ಎನ್ನುವುದಕ್ಕೆ ಎಲ್ಲ ಕುರುಹುಗಳಿವೆ. ಭಾರತೀಯ ಪುರಾತತ್ವ ಮತ್ತು ಪ್ರಾಚ್ಯವಸ್ತು ಇಲಾಖೆ ಅಧಿಕಾರಿಗಳು ದೇವಸ್ಥಾನವನ್ನು ಸಂಶೋಧನೆ ನಡೆಸಿದ್ದಾರೆ. ಅದನ್ನು ಮರಳಿ ಪಡೆಯುವಲ್ಲಿ ಮಠವು ಎಲ್ಲ ರೀತಿಯಿಂದ ಶ್ರಮಿಸುತ್ತಿದೆ ಎಂದರು. 


ನಂದೀಪುರ ಮಠದ ಪೂಜ್ಯರು ಮಾತನಾಡಿ, ಅನೇಕತೆಯಲ್ಲಿ ಏಕತೆ ಸಾರುವ ಭಾರತದಲ್ಲಿ ಇಂತಹ ಘಟನೆಗಳಿಗೆ ಆಸ್ಪದ ನೀಡಬಾರದು. ಬಾಗಲಕೋಟೆ ಜಿಲ್ಲೆಯಲ್ಲಿ ಪೊಲೀಸರು ರೈತರ ಮೇಲೆ ಲಾಠಿ ಪ್ರಹಾರ ನಡೆಸಿದ್ದಾರೆ. ಹತ್ತಕ್ಕೂ ಹೆಚ್ಚು ರೈತರ ಮೇಲೆ ಪ್ರಕರಣ ದಾಖಲಿಸಿದ್ದಾರೆ. ಇಂತಹ ಪ್ರಕರಣ ನಡೆಯುತ್ತಿರುವುದು ದುರಂತ. ರಾಜ್ಯ ಕಾಂಗ್ರೆಸ್ ಸರ್ಕಾರ ಮತ ಬ್ಯಾಂಕ್ ಗಾಗಿ ಮಲತಾಯಿ ಧೋರಣೆ ಅನುಸರಿಸುತ್ತಿದೆ. ಈ ಬೆಳವಣಿಗೆ ಮುಂದಿನ ದಿನಗಳಲ್ಲಿ ಕಂಟಕ ತರಲಿದೆ ಎಂದು ಕಳವಳ ವ್ಯಕ್ತಪಡಿಸಿದರು. 


ಸುದ್ದಿಗೋಷ್ಠಿಯಲ್ಲಿ ಬಳ್ಳಾರಿ-ವಿಜಯನಗರ ಜಿಲ್ಲಾ ಧರ್ಮ ಪರಿಷತ್‌ನ ಶ್ರೀಗಳಾದ ಕೊಟ್ಟೂರು ಶ್ರೀ ಚಾನುಕೋಟಿ ಮಠದ ಡೋಣೂರು ಡಾ.ಸಿದ್ಧಲಿಂಗ ಶಿವಾಚಾರ್ಯ ಸ್ವಾಮೀಜಿ, ಹಗರಿಬೊಮ್ಮನಹಳ್ಳಿ ತಾಲೂಕಿನ ಬೆಣ್ಣಿಹಳ್ಳಿಯ ಹಿರೇಮಠದ ಶ್ರೀ ಶಿವಪಂಚಾಕ್ಷರಿ ಶಿವಾಚಾರ್ಯ ಸ್ವಾಮಿಗಳು, ಅಡವಿಹಳ್ಳಿ ಹಾಲೇಶ್ವರ ಬೃಹನ್ಮಠದ ವೀರಗಂಗಾಧರ ಹಾಲಸ್ವಾಮಿಗಳು, ಮುತ್ತಗಿಯ ಮರುಳಸಿದ್ಧೇಶ್ವರ ಸೇವಾಶ್ರಮ ಶ್ರೀಕ್ಷೇತ್ರದ ಶಿವಯೋಗಿ ಹಾಲಸ್ವಾಮಿಗಳು, ಕುರುಗೋಡು ನಾಗಲಾಪುರದ ಕೊಟ್ಟೂರು ಸ್ವಾಮಿ ಶಾಖಾ ಮಠದ ನಿರಂಜನ ಪ್ರಭು ಸ್ವಾಮಿಗಳು, ಹೆಚ್.ವೀರಾಪುರ, ಎಮ್ಮಿಗನೂರು ಮಠದ ಜಡೇಸಿದ್ಧ ಸ್ವಾಮಿಗಳು, ಸೋಮಸಮುದ್ರದ ಸಿದ್ಧಲಿಂಗ ದೇಶಿಕರು, ಶ್ರೀಧರಗಡ್ಡೆಯ ಮರಿಕೊಟ್ಟೂರು ದೇಶಿಕರು, ತುಂಗಭದ್ರಾ ರೈತ ಸಂಘದ ಅಧ್ಯಕ್ಷ ದರೂರು ಪುರುಷೋತ್ತಮಗೌಡ, ಪಾಲಿಕೆ ಸದಸ್ಯ ಗುಡಿಗಂಟೆ ಹನುಮಂತು, ರಾಜಕೀಯ ಧುರೀಣರಾದ ರಾಜೇಶ್, ಸಮಾಜ ಸೇವಕರಾದ ಗೌರಿಶಂಕರ್ ಸೇರಿದಂತೆ ವಿವಿಧ ಸಂಘ ಸಂಸ್ಥೆಗಳ ಮುಖಂಡರು ಮತ್ತು ಪ್ರಮುಖರು ಇದ್ದರು.



  ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 

Post a Comment

0 Comments
Post a Comment (0)
Maruti Suzuki Festival of Colours
Maruti Suzuki Festival of Colours
To Top