ಲೇಖಾ ಲೋಕ- 22: ಸಂಗೀತ, ರಂಗಭೂಮಿ ದಿಗ್ಗಜ ಹೊನ್ನಪ್ಪ ಭಾಗವತರ್

Chandrashekhara Kulamarva
0


ಸಾಂಸ್ಕೃತಿಕ ಶಿಖರವನ್ನೇರಿ ಏರಿ, ಸಂಗೀತ, ರಂಗಭೂಮಿ, ಚಲನಚಿತ್ರ ಪ್ರಕಾರಗಳಲ್ಲಿ ಹೆಸರು ಸಂಪಾದಿಸಿದ ಕೀತಿ೯ಗೆ ಭಾಜನರಾದವರು ಹೊನ್ನಪ್ಪ ಭಾಗವತರ್. ನಟನೆ, ಗಾಯನಕ್ಕೆ ಸರಿದೂಗಿಸಬಲ್ಲ ಎಲ್ಲಾ ಪ್ರತಿಭೆ ಪಡೆದುಕೊಂಡು, ಅದ್ಭುತ ಮೆರುಗು ನೀಡಿ, ತಮ್ಮ ಸ್ಪುರದ್ರೂಪಿ ವ್ಯಕ್ತಿತ್ವದ ಶರೀರ ಪಡೆದ ಮಹಾನ್ ನಟ. ಇವರು ಪ್ರದರ್ಶಿಸಿದ ನಟನೆ, ತೋರುವ ಮುಗ್ದತೆ, ಆಕಷ೯ಕ ನಿಲುವು, ಜಾನಪದ ಶೈಲಿಯ ಗಾಯನ ಅಮೋಘ! ಈ ಹಿಂದೆ ಬಿಡುಗಡೆಯಾದ ಮಹಾಕವಿ ಕಾಳಿದಾಸ ಚಲನಚಿತ್ರ ನೋಡಿದಾಗ, ಅದರಲ್ಲಿ ಬರುವ ಗೀತೆ, "ಚೆಲುವಯ್ಯ  ಚೆಲುವೊ, ತಾನಿ ತಂದನಾ " ಪ್ರಸಿದ್ಧ ಗೀತೆ ಈಗಲೂ ಹಸಿರಾಗಿದೆ. ಪ್ರಬುದ್ಧ ಕಾಳಿದಾಸನಾಗಿ, ನಟಿಸಿದ ಇವರ ಅದ್ಭುತ ಮುಖಚರ್ಯೆಯ ನಟನೆ ಅವಿಸ್ಮರಣೀಯ.


ಬೆಂಗಳೂರು ಗ್ರಾಮಾಂತರ ಜಿಲ್ಲೆಯ ನೆಲಮಂಗಲ ತಾಲೂಕಿನ ಪುಟ್ಟ ಗ್ರಾಮ ಚೌಡಸಂದ್ರದಲ್ಲಿ ಚಿಕ್ಕಲಿಂಗಪ್ಪ ಮತ್ತು ಕಲ್ಲಮ್ಮ ದಂಪತಿಗಳಿಗೆ ತಾ॥ 14-1-1915 ರಂದು ಜನಿಸಿದರು. ಬಾಲ್ಯದಲ್ಲಿಯೇ ತಮ್ಮ ತಂದೆಯವರನ್ನು ಕಳೆದುಕೊಂಡು ತಾಯಿಯ ತವರೂರಾದ ಮೋಟಗಾನಹಳ್ಳಿಯಲ್ಲಿ ಬೆಳೆದ ಮಹನೀಯರು. ಹಳ್ಳಿಯಲ್ಲಿ ಜರುಗುತ್ತಿದ್ದ ನಾಟಕ, ಸಂಗೀತ, ಭಜನೆ, ಬಯಲು ನಾಟಕಗಳು ಇವರನ್ನು ಆಕಷಿ೯ಸಿದವು. ಆಧ್ಯಾತ್ಮಿಕ, ಮತ್ತು ಲೌಕಿಕವಾದ  ಇಂತಹ ಕಾರ್ಯಕ್ರಮಗಳು ಹೊನ್ನಪ್ಪ ಭಾಗವತರ್ ಅವರ ಸೂಕ್ಷ್ಮವಾದ ಮನಸ್ಸು ತಟ್ಟಿದವು. ಬೆಂಗಳೂರಿಗೆ ಬಂದು, ಇವರ ಸಹೋದರನೊಂದಿಗೆ ಮಗ್ಗದ ಕೆಲಸದಲ್ಲಿ ನಿರತರಾದರು. ಇವರ ಅದ್ಭುತ ಕಂಠಸಿರಿಗೆ ಅಚ್ಚರಿಪಟ್ಟು ಸಂಗೀತ ಕ್ಷೇತ್ರದಲ್ಲಿ ಹೆಸರು ಮಾಡಿದ್ದ ಸಂಬಂಧಮೂರ್ತಿ ಭಾಗವತರು ಸಂಗೀತ ಕಛೇರಿಯಲ್ಲಿ ಅನೇಕ ಅವಕಾಶಗಳನ್ನು ನೀಡಲು ಕಾರಣರಾದರು.


ಹೊನ್ನಪ್ಪನವರು ಸಂಗೀತ ಕಾರ್ಯಕ್ರಮ ನೀಡಲು, 1937ರಲ್ಲಿ ತ್ಯಾಗರಾಜರ ಆರಾಧನೆಗೆ ಆಹ್ವಾನಿತರಾಗಿ ಅಧ್ಭುತ ಸಂಗೀತ ಲಹರಿ ಹರಿಸಿದರು. ಇವರ ಜೊತೆಗೆ ಪಾಲ್ಗಾಟ್ ಮಣಿ ಅಯ್ಯರ್ ಮೃದಂಗ ನುಡಿಸಿದ್ದು ವಿಶೇಷ! ಮಣಿ ಆಯ್ಯರ್ ಅವರಿಗೆ ಚಿತ್ರರಂಗದ ಸಂಪಕ೯ವಿದ್ದ ಕಾರಣ, ಹೊನ್ನಪ್ಪನವರಿಗೆ ಮದರಾಸಿನ ಶಂಕರ್ ಫಿಲಂಸ್ ನಲ್ಲಿ ತಯಾರಾದ ಚಿತ್ರ "ಅಂಬಿಕಾ ಪತಿ" ಚಿತ್ರದಲ್ಲಿ ನಟಿಸಲು ಅವಕಾಶ ದೊರೆಯಿತು. ತ್ಯಾಗರಾಜ ಭಾಗವತರ್ ಸಹ ಇವರೊಂದಿಗೆ ನಟಿಸಿದ್ದು ಇತಿಹಾಸವಾಯಿತು. 1944ರಲ್ಲಿ ತ್ಯಾಗರಾಜ ಭಾಗವತರ್ ಅವರಿಗೆ ಕೋರ್ಟಿನಿಂದ ಮಹಾಪರಾಧದ ತೀರ್ಪು ಬಂದು ಕೊಲೆ ಪ್ರಕರಣದಲ್ಲಿ ಅಪರಾಧಿ ಎಂದು ಅವರನ್ನು ಕಾರಾಗೃಹಕ್ಕೆ ಕಳಿಸಿದ ಸಂದರ್ಭದಲ್ಲಿ, ಅವರು ನಟಿಸಬೇಕಾಗಿದ್ದ ಹನ್ನೆರಡು ಚಿತ್ರಗಳಲ್ಲಿ ನಟಿಸ ಬೇಕಾದ ಅವಕಾಶ ಹೊನ್ನಪ್ಪನವರಿಗೆ ದೊರಕಿತು. ತ್ಯಾಗರಾಜ ಭಾಗವತರ್ ಅವರ ಆಶೀರ್ವಾದ ಪಡೆದು, ನಂತರ ಈ ಎಲ್ಲಾ ಚಿತ್ರಗಳಲ್ಲಿ ಅಭಿನಯಿಸಿ ಪ್ರಖ್ಯಾತರಾದರು. ಇವರಿಗೆ ತಮಿಳು ಚಿತ್ರಗಳಲ್ಲಿ ಅಪಾರ ಬೇಡಿಕೆಯಿದ್ದರೂ ಕನ್ನಡದ ಮೇಲೆ ಪ್ರೀತಿಯಿಂದ, ಗುಬ್ಬಿ ವೀರಣ್ಣನವರ ಸುಭದ್ರಾ ಚಿತ್ರದಲ್ಲಿ ಇವರ ಸಂಗೀತ, ನಟನೆಗೆ ಪ್ರೇಕ್ಷಕರು ಮೆಚ್ಚುಗೆ ವ್ಯಕ್ತಪಡಿಸಿದರು. ಸೊಗಸಾದ ಈ ಚಿತ್ರದಲ್ಲಿ 22 ಗೀತೆಗಳು ಅದ್ಭುತ ಯಶಸ್ಸು ಕಂಡು, ಕನ್ನಡ ಚಿತ್ರರಂಗವು ಚೇತರಿಕೆ ಪಡೆಯಲು ಸಹಾಯವಾಯಿತು.

ತಮಿಳು ಅವತರಿಕೆಯಲ್ಲೂ ಸಹ ಹೊನ್ನಪ್ಪ ಭಾಗವತರ್ ಅಭಿನಯಿಸಿ,ಇವರೊಂದಿಗೆ ಸಂಗೀತ ಕಲಾವಿದರಾದ ಟಿ.ಆರ್ ಮಹಾಲಿಂಗಂ ಕೃಷ್ಣನ ಪಾತ್ರ ವಹಿಸಿ,ಚಿತ್ರ ಯಶಸ್ಸು ಕಂಡಿತು. ತಮಿಳು ಚಿತ್ರದಲ್ಲಿ ಹೊನ್ನಪ್ಪ ಭಾಗವತರ್ ಸೂಪರ್ ಸ್ಟಾರ್ ಎನಿಸಿದರೂ, ಕನ್ನಡ ಚಿತ್ರರಂಗದ ಪ್ರೀತಿ ಕಡಿಮೆಯಾಗಿರಲಿಲ್ಲ. ಬೊಮ್ಮನ್. ಡಿ ಇರಾನಿ ಆವರೊಂದಿಗೆ ಭಕ್ತ ಕುಂಬಾರ ಚಿತ್ರ ನಿರ್ಮಿಸಿದರು. ಈ ಚಿತ್ರದಲ್ಲಿ ಪೂರ್ತಿ ಕನ್ನಡ  ವಾದ್ಯ ವೃಂದವನ್ನು ಬಳಸಿ, ಯಶಸ್ಸಿಗೆ ಕಾರಣರಾದರು.  ಮಹಾಕವಿ ಕಾಳಿದಾಸ ಚಿತ್ರಕ್ಕೆ ಕರ್ನಾಟಕೀ ಸಂಗೀತದ ನವರಸ ರಂಜಿನಿ, ಶುದ್ಧ ನ್ಯಾಸಿ ಅಂತಹ ಅಪರೂಪದ ರಾಗಗಳನ್ನು ಸಂಯೋಜನೆ ಮಾಡಿ, ವೀಣೆ, ಕೊಳಲು ಮೃಂದಂಗ ವಾದನಗಳನ್ನು ಉಪಯೋಗಿಸಿ, ಪರಿಣಾಮಕಾರಿಯಾಗಿ ಚಿತ್ರ ನಿರ್ಮಿಸಿ, ಯಶಸ್ಸು ಪಡೆದರು. ಇದರಲ್ಲಿ ವಸ್ತು, ವಿನ್ಯಾಸ ಅದ್ಭುತವಾಗಿತ್ತು! 


ಜಗಜ್ಯೋತಿ ಬಸವೇಶ್ವರ ಚಿತ್ರದಲ್ಲಿ ಅಭಿನಯಿಸಿದರು ಮತ್ತು ಇವರೊಂದಿಗೆ ಡಾ॥ ರಾಜ್ ಕುಮಾರ್ ಬಿಜ್ಜಳನ ಪಾತ್ರ ವಹಿಸಿದ್ದು ಸಾರ್ವಕಾಲಿಕ ದಾಖಲೆ ಆಯಿತು. ಕೈವಾರ ಮಹಾತ್ಮೆ, ಗುಣಸಾಗರಿ, ಪಂಚರತ್ನ ಮುಂತಾದವು ಇವರ ಅದ್ಭುತ ನಟನೆಗೆ ಸಾಕ್ಷಿಯಾಯಿತು. ವೈವಿಧ್ಯಮಯ ಚಿತ್ರಗಳಲ್ಲಿ ಅಭಿನಯಿಸಿ ಗಾಯನದಲ್ಲೂ ಖ್ಯಾತರಾದದ್ದು ವಿಶೇಷ. ಇವರು ವಾಗ್ಗೇಯಕಾರರಾಗಿ, ಸಹ "ರಾಮದಾಸ" ಎಂಬ ಅಂಕಿತದಿಂದ ಅನೇಕ ಕೀರ್ತನೆಗಳನ್ನು ರಚಿಸಿದರು. ಈ ಕೃತಿಗಳು "ಓಂಕಾರ ನಾದ ಸುಧಾ" ಎಂಬ ಕೃತಿಯಲ್ಲಿ ಪ್ರಕಟಗೊಂಡವು.


ನಟನೆಯಲ್ಲಿ ಪ್ರಖ್ಯಾತರಾದರೂ, ಸಂಗೀತದಲ್ಲಿ ಇವರ ಒಲವು, ಆಸಕ್ತಿಯ ಕ್ಷೇತ್ರವಾಗಿತ್ತು! ನಟನೆ, ಸಂಗೀತ, ಮತ್ತು ಹರಿಕಥಾ ವಿದ್ವಾಂಸರಾಗಿ, ಜನರ ಮೆಚ್ಚುಗೆಗೆ ಪಾತ್ರರಾದ ಮಹನೀಯರು. ಹೊನ್ನಪ್ಪ ಭಾಗವತರ್ ಅವರು ಉಮಾ ಮಹೇಶ್ವರಿ ಕಂಪನಿ ಸ್ಥಾಪಿಸಿ, ಅನೇಕ ನಾಟಕಗಳನ್ನು ಪ್ರದರ್ಶಿಸಿ ಖ್ಯಾತರಾದರು. ಶ್ರೀನಿವಾಸ ಕಲ್ಯಾಣ, ಜಗಜ್ಯೊತಿ ಬಸವೇಶ್ವರ ನಾಟಕಗಳು ಇವರಿಂದ ಪ್ರದರ್ಶನ ಗೊಂಡು ನಾಡಿನ ಜನರು ಮುದಗೊಂಡರು.


ರಂಗಭೂಮಿ, ಸಿನಿಮಾ, ಸಂಗೀತ, ಹರಿಕಥೆ, ಹೀಗೆ ಅನೇಕ ಪ್ರಕಾರ ಇವರ ಅಸಾಧಾರಣ ಪ್ರತಿಭೆಗೆ ಸಾಕ್ಷಿಯಾಗಿ, ಜನಾನುರಾಗಿಯಾಗಿ ನಾಡಿನ ಅದ್ಭುತ ಕಲಾವಿದರಾಗಿ ದಾಖಲೆ ಮಾಡಿದ ಮಹಾನುಭಾವರು. ಕು.ರಾ. ಸೀತಾರಾಮಶಾಸ್ತ್ರಿ, ಬಿ ಸರೋಜಾದೇವಿ ಮುಂತಾದವರ ಪ್ರತಿಭೆ ಬೆಳಕಿಗೆ ಬರಲು ಕಾರಣರಾದರು. ಚಿತ್ರರಂಗದಲ್ಲಿ ಹೊನ್ನಪ್ಪ ಭಾಗವತರ್ ಅವರು ಸೂರ್ಯನಂತೆ ಎಂದು ಡಾ॥ರಾಜ್ ಕುಮಾರ್ ಅಭಿಪ್ರಾಯಪಟ್ಟಿದ್ದು ಸಹ ದಾಖಲೆಯಾಯಿತು. ಪ್ರಖ್ಯಾತ ಕಾದಂಬರಿಗಳ ಲೇಖಕಿ, ಸಾಹಿತಿ ಎಂ.ಕೆ ಇಂದಿರಾ ಅವರ  ಕಾದಂಬರಿ ಆಧರಿಸಿ "ಸದಾನಂದ" ಎನ್ನುವ ಚಿತ್ರ ನಿರ್ಮಿಸಿ, ನಿರ್ದೇಶಿಸಿದ ಮಹನೀಯರು.


ಹೊನ್ನಪ್ಪ ಭಾಗವತರ್ ಅವರಿಗೆ ಕೇಂದ್ರ ಸಂಗೀತ ನಾಟಕ ಅಕಾಡೆಮಿ ಫೆಲೋಶಿಪ್ ದೊರಕಿದ ಗೌರವಕ್ಕೆ ಪಾತ್ರರಾದರು. ಮೊಟ್ಟಮೊದಲ ಕನ್ನಡಿಗ  ಈ ಗೌರವಕ್ಕೆ ಪಾತ್ರರಾದದ್ದು ಎಲ್ಲಾ ಜನರ ಸಂತೋಷಕ್ಕೆ ಕಾರಣ ಮತ್ತು ಹೆಗ್ಗಳಿಕೆಗೆ ಪಾತ್ರವಾಯಿತು. 1959ರಲ್ಲಿ ಉತ್ತಮ ನಟ ಎಂಬ ಗೌರವ ಹಾಗೂ ಇವರ ಮಹಾಕವಿ ಕಾಳಿದಾಸ, ಜಗಜ್ಯೋತಿ ಬಸವೇಶ್ವರ ಚಿತ್ರಗಳು ರಾಷ್ಟ್ರ ಪ್ರಶಸ್ತಿ ಪಡೆದಿದ್ದು ಕನ್ನಡ ಜನರ ಮನ ಸಂತೋಷಪಡಿಸಿತು. 


ಜನಸಮೂಹದಲ್ಲಿ ಸರಳ ವ್ಯಕ್ತಿಯಾಗಿ ಅದ್ಭುತ ನಟನೆ, ಸಂಗೀತ, ಪ್ರಖ್ಯಾತಿಯೊಂದಿಗೆ ತಮ್ಮ ಬದುಕನ್ನು, ಉನ್ನತ ಸಾಧನೆಯೊಂದಿಗೆ ನಾಡಿಗೆ ಕೀರ್ತಿ ತಂದು ಜನಮಾನಸದಲ್ಲಿ ಸದಾ ನೆಲೆಸಿ ರಾಷ್ಟ್ರ, ನಾಡಿನ ಗೌರವಕ್ಕೆ ಪಾತ್ರರಾದ ಮಹಾನುಭಾವರು. ಇವರಿಗೆ ರಾಷ್ಟ್ರೀಯ ಪ್ರಶಸ್ತಿ, ಅತ್ಯುತ್ತಮ ನಟ ಪ್ರಶಸ್ತಿ, ಗಾನಕಲಾಭೂಷಣ ಪ್ರಶಸ್ತಿ, ಗಾನ ಕಲಾಗಂಧರ್ವ ಪ್ರಶಸ್ತಿ, ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ, ಸಂಗೀತ ನಾಟಕ ಅಕಾಡೆಮಿ ಪ್ರಶಸ್ತಿ, ಸೆಂಟರ್  ಫಾರ್ ಮ್ಯೂಸಿಕ್ ಡ್ರಾಮಾ ಪ್ರಶಸ್ತಿ ನೀಡಿ ಗೌರವಿಸಿವೆ. 


ಇವರ ಸಾಧನೆಯ ಕೃತಿ "ಹೊನ್ನಪರ್ವತ" ಶ್ರೀಧರಮೂರ್ತಿ ಅವರು ಬರೆದು ಬಿಡುಗಡೆ ಮಾಡಿದ್ದಾರೆ. ಕನ್ನಡ ನಾಡಿನ ಅಧ್ಭುತ ಕಲಾವಿದರಾಗಿ 1992ರ ಅಕ್ಟೋಬರ್ 2 ರಂದು ನಟನಾಲೋಕವನ್ನು ಅಗಲಿ ನಿಧನರಾದರು. 2015ರಲ್ಲಿ ಇವರ ಜನ್ಮ ಶತಮಾನೋತ್ಸವ ಜರುಗಿ ಕನ್ನಡಿಗರು ತಮ್ಮ ಗೌರವವನ್ನು ಅರ್ಪಿಸಿ ಕೃತಾರ್ಥರಾದರು.


Post a Comment

0 Comments
Post a Comment (0)
To Top