ಕುಂಬಳೆ: "ಆಧುನಿಕ ಶಿಕ್ಷಣಪದ್ಧತಿಯಿಂದ ನಮ್ಮ ಭಾರತೀಯ ಮೂಲದ ವಿದ್ಯಾಪರಂಪರೆಗೆ ಚ್ಯುತಿ ಬಂದಿದೆ. ನಮ್ಮ ಸಮಾಜ ಧಾರ್ಮಿಕ ಕಾರ್ಯಗಳತ್ತ ವಿಮುಖರಾಗುತ್ತಿರುವ ಸಂಕಷ್ಟಮಯ ಪರಿಸ್ಥಿತಿ ನಿರ್ಮಾಣವಾಗಿದೆ. ಇದನ್ನು ಮನಗಂಡು ಇಂದಿನ ಸಂಕ್ರಮಣ ಕಾಲಘಟ್ಟದಲ್ಲಿ ಸರ್ವಸಮಾಜದ ಉನ್ನತಿಗಾಗಿ ಶ್ರೀಗುರುಗಳು ವಿಷ್ಣುಗುಪ್ತ ವಿಶ್ವವಿದ್ಯಾಪೀಠವನ್ನು ಸ್ಥಾಪಿಸುವ ಮನಮಾಡಿದ್ದಾರೆ. ನಮ್ಮ ಭಾರತೀಯ ಸಂಸ್ಕೃತಿಯ 64 ಕಲೆಗಳು ಭಗವಂತನೆಡೆಗೆ ಸಾಗುವ ದಾರಿಯನ್ನು ತೋರುತ್ತಿದ್ದವು. ಅಂದು ಭಾರತ ವಿಶ್ವಗುರುವಾಗಿತ್ತು. ನಮ್ಮ ಜೀವನದ ಪರಮೋದ್ಧೇಶವನ್ನು ಪೂರೈಸುವ ಈ 64 ಕಲೆಗಳು ಒಂದೇ ಸೂರಿನಲ್ಲಿ ದೊರಕುವುದು ವಿಷ್ಣುಗುಪ್ತ ವಿಶ್ವವಿದ್ಯಾಪೀಠದಲ್ಲಿ ಮಾತ್ರ. ಭಗವಂತನೆಡೆಗೆ ಸಾಗುವ ಹಾದಿಯನ್ನು ತೋರುವ ವಿದ್ಯೆಯ ಬೆಳಕು ನೀಡುವ ವಿಷ್ಣುಗುಪ್ತ ವಿಶ್ವವಿದ್ಯಾಪೀಠದ ಶಿಕ್ಷಣವು ಉಳಿದ ಶಿಕ್ಷಣಗಳಿಂದ ಭಿನ್ನವಾಗಿರುವುದು ಇದೇ ಕಾರಣಕ್ಕೆ. ವಿವಿವಿ ಯ ಬಗ್ಗೆ ಸಂಚಲನ ಮೂಡಿಸುವಲ್ಲಿ ಈ ಸ್ವರ್ಣಪಾದುಕಾ ಸಂಚಾರವು ಯಶಸ್ವಿಯಾಗುತ್ತಿದೆ ಎಂದು ಶ್ರೀರಾಮಚಂದ್ರಾಪುರ ಮಠದ ಆಚಾರ ವಿಚಾರ ಪ್ರಮುಖರಾದ ಗಜಾನನ ಭಟ್ಟರು ನುಡಿದರು.
ಭಟ್ಟರ ಭಿಕ್ಷಾ ಸೇವೆ ಅನನ್ಯ ಗುರುಸೇವೆಯ ಫಲದಿಂದ ದೊರಕಿದೆ. ಶ್ರೀಗುರುಗಳಿಗಾಗಿ ಪೊಸಡಿಗುಂಪೆಯಲ್ಲಿ ಮೊತ್ತಮೊದಲು ಜಾಗ ದಾನ ಮಾಡಿದ ಮನೆ ಇದು. ವೆಂಕಟ್ರಮಣ ಭಟ್ಟರ ಪುತ್ರ ಹರೀಶ ಸಹಾ ಶ್ರೀಗುರು ಸೇವೆಯಲ್ಲಿ ಸದಾ ನಿರತನಾಗಿದ್ದಾನೆ. ಹಾಗಾಗಿಯೇ ಈ ಪರ್ವದಿನದಂದು ಈ ಮನೆಯವರಿಗೆ ಶ್ರೀಗುರು ಪರಂಪರೆಯ ಪ್ರಾತಿನಿಧ್ಯ ವಹಿಸಿರುವ ಶ್ರೀಸ್ವರ್ಣಪಾದುಕಾ ಭಿಕ್ಷೆ ನಡೆಸುವ ಅವಕಾಶ ಒದಗಿ ಬಂದಿದೆ. ದ್ವಾದಶಿಯ ವಿಶೇಷ ಪರ್ವದ ದಿನದಂದು ಭಿಕ್ಷೆ ಎಂದರೆ ಎರಡು ಭಿಕ್ಷೆಯ ಫಲ. ಯೋಗನಿದ್ರೆಯಿಂದ ಎಚ್ಚತ್ತು ಶ್ರೀಹರಿಯು ಜಗತ್ತನ್ನು ಅನುಗ್ರಹಿಸುವ ಉತ್ಥಾನ ದ್ವಾದಶಿಯ ಸುದಿನದಂದು ಇಂತಹ ಸುಯೋಗ ಲಭಿಸಿದ್ದು ಈ ಮನೆಯವರ ಪುಣ್ಯದ ಫಲ. ಅವರ ಸತ್ಸಂಕಲ್ಪಗಳೆಲ್ಲವೂ ಈಡೇರಲಿ" ಎಂದು ಅವರು ಹರಸಿದರು.
ಅವರು ಬುಧವಾರ ಎಡಕ್ಕಾನ (ನ.13) ವೆಂಕಟ್ರಮಣ ಭಟ್ಟರ ನಿವಾಸದಲ್ಲಿ ನಡೆದ ಶ್ರೀ ಸ್ವರ್ಣಪಾದುಕಾ ಭಿಕ್ಷಾಂಗ ಸೇವೆಯ ಸಂದರ್ಭದಲ್ಲಿ ನಡೆದ ಸಭಾ ಕಾರ್ಯಕ್ರಮದಲ್ಲಿ ಧಾರ್ಮಿಕ ಉಪನ್ಯಾಸ ನೀಡಿದರು.
ಇದಕ್ಕೂ ಮುನ್ನ ದಿನಾಂಕ 12 ರಂದು ಮಂಗಳವಾರ ಸಾಯಂ ಸಂಧ್ಯೆಯಲ್ಲಿ ಎಣ್ಮಕಜೆ ವಲಯದಿಂದ ಶ್ರೀಸ್ವರ್ಣಪಾದುಕೆಯು ಗುಂಪೆ ವಲಯಕ್ಕೆ ಆಗಮಿಸಿದ ಸಂದರ್ಭದಲ್ಲಿ ಎಡಕ್ಕಾನ ವೆಂಕಟ್ರಮಣ ಭಟ್, ಸುಲೋಚನಾ ದಂಪತಿಗಳು ಧೂಳೀಪೂಜೆ ನೆರವೇರಿಸಿದರು.
ಬುಧವಾರ ಮುಂಜಾನೆ 7.30 ಕ್ಕೆ ಗುಂಪೆ ವಲಯದ ಪರವಾಗಿ ಸ್ವರ್ಣಪಾದುಕಾ ಪೂಜೆಯನ್ನು ಬಾಳಿಕೆ ನಿವಾಸಿಗಳಾಗಿರುವ ತುರ್ತಿ ಜಯರಾಮ ಭಟ್ , ಸಾವಿತ್ರಿ ದಂಪತಿಗಳು ನೆರವೇರಿಸಿದರು.
ಭಿಕ್ಷಾಂಗ ಪಾದುಕಾಪೂಜೆಯನ್ನು ಎಡಕ್ಕಾನ ವೆಂಕಟ್ರಮಣ ಭಟ್ಟರ ಪುತ್ರ ಹರೀಶ, ವಿಜಯಲಕ್ಷ್ಮಿ ದಂಪತಿಗಳು ನಡೆಸಿಕೊಟ್ಟರು. ಈ ಸಂದರ್ಭದಲ್ಲಿ ಗುಂಪೆ ವಲಯದ ಶಿಷ್ಯಬಂಧುಗಳು ಅಷ್ಟಾವಧಾನ ಸೇವೆ ನಡೆಸಿಕೊಟ್ಟರು.
ಗುರಿಕ್ಕಾರರು, ಮಂಡಲ ವಿವಿವಿ ಪದಾಧಿಕಾರಿಗಳು, ವಲಯ ಪದಾಧಿಕಾರಿಗಳು ಹಾಗೂ ಶಿಷ್ಯಬಂಧುಗಳು ಪಲ್ಲಕಿ ಉತ್ಸವದಲ್ಲಿ ಪಾಲ್ಗೊಂಡು ಪುನೀತಭಾವ ತಳೆದರು.
ಅಪರಾಹ್ನ ಎಡಕ್ಕಾನ ನಿವಾಸಿಗಳಾಗಿರುವ ನೂಜಿಬೈಲು ವೆಂಕಟೇಶ್ವರ ಭಟ್, ಜಯಲಕ್ಷ್ಮಿ ಭಟ್ ಇವರ ನಿವಾಸದಲ್ಲಿ ಸ್ವರ್ಣಪಾದುಕಾಪೂಜೆ ನೆರವೇರಿತು.
ಸಾಯಂಕಾಲ ಶ್ರೀಸ್ವರ್ಣಪಾದುಕಾ ಸವಾರಿಯು ಪೆರಡಾಲ ವಲಯದತ್ತ ಮುಂದುವರಿಯಿತು.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ