ಮಹಿಳಾ ಸಬಲೀಕರಣ, ಸಮಾಜಮುಖಿ ಕಾರ್ಯಗಳಲ್ಲಿ ಹೆಗ್ಗಡೆಯವರೇ ಮಾದರಿ

Chandrashekhara Kulamarva
0

ಎಸ್‌ಡಿಎಂ ಮಹಿಳಾ ಐಟಿಐಯಲ್ಲಿ ಭಿತ್ತಿಪತ್ರಿಕೆ ಅನಾವರಣ




ಉಜಿರೆ: ಶ್ರೀ ಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿ ಡಿ. ವೀರೇಂದ್ರ ಹೆಗ್ಗಡೆ ಅವರು ಎಲ್ಲಾ ಕ್ಷೇತ್ರಗಳಲ್ಲಿ ಇತಿಹಾಸ ಸೃಷ್ಟಿಸಿದ್ದು, ಅವರ ಯೋಚನೆ ಹಾಗೂ ಯೋಜನೆ ಅಭಿನಂದನೀಯ ಮತ್ತು ಅನುಕರಣೀಯವಾಗಿದೆ. ಪ್ರತೀ ವಿಷಯದಲ್ಲೂ ಅವಕಾಶಗಳನ್ನು ಸಮಾಜಕ್ಕೆ ಅರ್ಪಿಸುವ ಪ್ರಯತ್ನ ಮಾಡುತ್ತಿದ್ದು, ಸಮಾಜದ ಎಲ್ಲಾ ವರ್ಗದ ಜನರನ್ನು ಮೇಲಕ್ಕೆ ತರಲು ಪ್ರಯತ್ನಿಸುವ ಅವರ ಕಾರ್ಯ ಶ್ಲಾಘನೀಯ ಎಂದು ಬೆಳ್ತಂಗಡಿ ತಾಲೂಕು ಪತ್ರಕರ್ತರ ಸಂಘದ ಅಧ್ಯಕ್ಷ ಚೈತ್ರೇಶ್ ಹೇಳಿದರು.


ಇಲ್ಲಿನ ಎಸ್‌ಡಿಎಂ ಮಹಿಳಾ ಐಟಿಐಯಲ್ಲಿ ಇಂದು (ನ. 6) ಭಿತ್ತಿಪತ್ರಿಕೆ ಅನಾವರಣಗೊಳಿಸಿ ಮಾತನಾಡಿದ ಅವರು, ಹೆಗ್ಗಡೆ ಅವರು ಹಲವಾರು ಸಮಾಜಮುಖಿ ಕಾರ್ಯಗಳನ್ನು ನಡೆಸಿಕೊಂಡು ಬರುತ್ತಿದ್ದಾರೆ. ಮಹಿಳಾ ಸಶಕ್ತೀಕರಣದ ಭಾಗವಾಗಿ ಮಹಿಳೆಯರಿಗೆ ಕೈಗಾರಿಕಾ ತರಬೇತಿ ಸಂಸ್ಥೆಯನ್ನೂ ಸ್ಥಾಪಿಸಿದ್ದಾರೆ. ಅಷ್ಟೇ ಅಲ್ಲದೆ, ರುಡ್ಸೆಟ್'ನಂತಹ ಸಂಸ್ಥೆಗಳ ಮೂಲಕ ಸಮಾಜಕ್ಕೆ ಸ್ವೋದ್ಯೋಗದ ಅವಕಾಶಗಳನ್ನೂ ಸೃಷ್ಟಿಸುತ್ತಿದ್ದಾರೆ ಎಂದು ಅವರು ಶ್ಲಾಘನೆ ವ್ಯಕ್ತಪಡಿಸಿದರು. 


ವಿದ್ಯಾರ್ಥಿನಿಯರು ಹೊರತಂದಿರುವ ಭಿತ್ತಿಪತ್ರಿಕೆ ಉತ್ತಮವಾಗಿ ಮೂಡಿಬಂದಿದೆ. ಒಂದೊಂದು ಭಿತ್ತಿಪತ್ರಿಕೆಯ ವಿಷಯವೂ ಸಮಾಜದ ಸ್ವಾಸ್ಥ್ಯ ಕಾಪಾಡುವ ಉದ್ದೇಶ ಹೊಂದಿದ್ದು ಎಸ್‌ಡಿಎಂ ಮಹಿಳಾ ಐಟಿಐ ಮಹಿಳೆಯರ ಸಶಕ್ತೀಕರಣಕ್ಕೆ ಎಷ್ಟು ಆದ್ಯತೆ ನೀಡುತ್ತಿದೆ ಎಂಬುದು ಇದರಿಂದ ತಿಳಿಯುತ್ತದೆ ಎಂದು ಅವರು ಬಣ್ಣಿಸಿದರು.


ಸಾಂಸ್ಕೃತಿಕ ಕಾರ್ಯಕ್ರಮ ಉದ್ಘಾಟಿಸಿದ ಎಸ್‌ಡಿಎಂ ಕಲಾ ಕೇಂದ್ರದ ಉಪನ್ಯಾಸಕಿ ವಿದುಷಿ ಚೈತ್ರ ಅವರು ಮಾತನಾಡಿ, “ಸಾಧ್ಯವಾದಷ್ಟು ಕಲೆಯಲ್ಲಿ ನಿಮ್ಮನ್ನು ನೀವು ತೊಡಗಿಸಿಕೊಳ್ಳಿ” ಎಂದು ವಿದ್ಯಾರ್ಥಿನಿಯರಿಗೆ ಕಿವಿಮಾತು ಹೇಳಿದರು.  


ಉತ್ತಮ ಭಿತ್ತಿಪತ್ರಿಕೆಗಳಿಗೆ ಪ್ರಥಮ ಹಾಗೂ ದ್ವಿತೀಯ ಬಹುಮಾನ ನೀಡಲಾಯಿತು. ಇದೇ ಸಂದರ್ಭದಲ್ಲಿ, ದೀಪಾವಳಿ ಪ್ರಯುಕ್ತ ಆಯೋಜಿಸಿದ್ದ ಗೂಡುದೀಪ ಸ್ಪರ್ಧೆಯ ವಿಜೇತರಿಗೆ ಪ್ರಥಮ ಹಾಗೂ ದ್ವಿತೀಯ ಬಹುಮಾನ ನೀಡಲಾಯಿತು.


ವೇದಿಕೆಯಲ್ಲಿ ಪ್ರಾಂಶುಪಾಲ ವಿ. ಪ್ರಕಾಶ್ ಕಾಮತ್ ಉಪಸ್ಥಿತರಿದ್ದರು. ಬಳಿಕ ವಿದ್ಯಾರ್ಥಿನಿಯರಿಂದ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 

Post a Comment

0 Comments
Post a Comment (0)
To Top