ಮಾಯಾನಗರಿ ಬೆಂಗಳೂರು ತನ್ನ ಮಡಿಲಲ್ಲಿ ಹಲವು ವಿಶೇಷತೆಗಳನ್ನು ಇಟ್ಟುಕೊಂಡಿದೆ. ಅದು ಆಧುನೀಕರಣಕ್ಕೆ ಎಷ್ಟೇ ತೆರೆದುಕೊಂಡರೂ, ಸಂಪ್ರದಾಯ ಮಾತ್ರ ಯಾವತ್ತಿಗೂ ಬಿಟ್ಟುಕೊಟ್ಟಿಲ್ಲ. ಐಟಿಬಿಟಿಯ ಗುಂಗಲ್ಲೂ ಕರಗ ಕುಣಿಯುತ್ತದೆ. ಅಣ್ಣಮ್ಮದೇವಿಯ ಉತ್ಸವಗಳು ಮೆರವಣಿಗೆ ಏಳುತ್ತವೆ. ಚಳಿಗಾಲ ಶುರುವಾಗುತ್ತಿದ್ದಂತೆಯೇ ಬಸವನಗುಡಿಯ ಬೀದಿ ಕಡಲೆಕಾಯಿ ಪರಿಷೆಗಾಗಿ ಸಜ್ಜುಗೊಳ್ಳು ತ್ತದೆ. ಈಗ ಮತ್ತೊಂದು ಚಳಿಗಾಲ ಬಂದಿದೆ. ಬಸವನಗುಡಿಯ ಪ್ರತಿ ತಿರುವುಗಳು ಪರಿಷೆಯ ಸೊಗಸನ್ನರಿಸಿ ಬರುವವರಿಗಾಗಿ ಎದುರು ನೋಡುತ್ತಿವೆ.
ಕಡಲೆಕಾಯಿ ಪರಿಷೆ ಎಂದಾಕ್ಷಣ ನನಗೆ ಬಾಲ್ಯದ ನೆನಪಾಗುತ್ತದೆ. ಕತ್ತೆತ್ತಿ ನೋಡಿದರೂ ಕೊಂಬು ಕಾಣದ ಬಸವಣ್ಣ. ಬಸವಣ್ಣ ಮಿತಿ ಮೀರಿ ಬೆಳೆಯುತ್ತಾನೆಂದು ಅವನ ತಲೆಗೆ ಮಳೆ ಹೊಡೆದಿದ್ದರಂತೆ. ಅದೇನಾದರೂ ಕಾಣುತ್ತದೋ ಎಂದು ಮೆಟ್ಟಿಂಗಾಲು ಇಟ್ಟು ನೋಡಿದರೂ ನನಗೆ ಮುಖ ಸಹ ಪೂರ್ತಿ ಕಾಣುತ್ತಿರಲಿಲ್ಲ. ಹಲವು ರೀತಿಯ ಕಡಲೆಕಾಯಿಗಳ ರಾಶಿಗಳು, ಜಗಮಗಿಸುವ ದೀಪಾಲಂಕಾರ, ಎಲ್ಲಿ ಕಳೆದುಹೋಗುವೆವೋ ಎಂಬ ಭಯ ಹುಟ್ಟಿಸುತ್ತಿದ್ದ ಜನಸಂದಣಿ. ಇವುಗಳ ನಡುವೆ ಅಮ್ಮನ ಬೆಚ್ಚನೆ ಕೈಹಿಡಿದು ಪೀಪಿಯನ್ನೋ ಬತ್ತಾಸನ್ನೋ ಕೊಡಿಸಲು ದುಂಬಾಲು ಬೀಳುತ್ತಿದ್ದ ಚಿತ್ರ ಕಣ್ಣಮುಂದೆ ಬರುತ್ತದೆ. ಇಂದೂ ಈ ಚಿತ್ರ ಅಷ್ಟೇನೂ ಬದಲಾಗಿಲ್ಲ - ನನ್ನ ಮಟ್ಟಿಗೆ, ಹೆದರಿಕೆಯ ಭಾಗವೊಂದನ್ನು ಬಿಟ್ಟು ! ಬತ್ತಾಸು, ಕಲ್ಯಾಣಸೇವೆ ಈಗಲೂ ನನಗೆ ಪ್ರಿಯವೇ ! ಅದರ ರುಚಿಯ ಜೊತೆಗೆ ನನಗೆ ಅದನ್ನು ತಯಾರಿಸುವ ಹಳ್ಳಿಜನರ ಭಾವನೆಗಳೂ ಅಷ್ಟೇ ಸಿಹಿಯನ್ನೂ ನೀಡುತ್ತವೆ.
ಐತಿಹಾಸಿಕ ಹಿನ್ನೆಲೆ
ಬಸವನಗುಡಿ ಬೆಂಗಳೂರಿನ ಐತಿಹಾಸಿಕ ದೇವಾಲಯಗಳ ಪೈಕಿ ಪ್ರಮುಖವಾದದ್ದು. ದೊಡ್ಡ ಬಸವಣ್ಣನ ದೇವಾಲಯ ಎಂಬುದಾಗಿ ಕರೆಯುತ್ತಾರೆ. ಇಂತಹ ದೇವಾಲಯದಲ್ಲಿ ಪ್ರತಿವರ್ಷ ನಡೆಯುವ ಕಡಲೆಕಾಯಿ ಪರಿಷೆಯ ಹಿಂದೆಯೂ ಐತಿಹಾಸಿಕ ಕತೆಯಿದೆ.
ಹಿಂದೆ ಇದು ರೈತರು ಕೃಷಿ ಮಾಡುತ್ತಿದ್ದ ಪ್ರದೇಶವಾಗಿತ್ತು. ಇಲ್ಲಿ ಹೆಚ್ಚಾಗಿ ಕಡಲೆಕಾಯಿ ಬೆಳೆಯುತ್ತಿದ್ದರು. ಹೀಗಿರುವಾಗ ಸಮೃದ್ಧವಾಗಿ ಬೆಳೆದಿದ್ದ ಬೆಳೆಯನ್ನು ರಾತ್ರಿ ವೇಳೆಯಲ್ಲಿ ಕಾದು ಕುಳಿತು ನೋಡಲಾಗಿ ಬೃಹತ್ ಗಾತ್ರದಲ್ಲಿದ್ದ ಬಸವ ತೇಜೋಮಯವಾಗಿ ಕಂಗೊಳಿಸುತ್ತಿತ್ತು. ಜನರಿಗೆ ಅದನ್ನು ನೋಡುತ್ತಿದ್ದಂತೆ, ಇದು ಸಾಮಾನ್ಯವಾದ ಎತ್ತಲ್ಲ, ಇದು ಶಕ್ತಿಯುತವಾದ ನಂದಿಯ ಪ್ರತಿರೂಪವೆಂಬ ಭಾವನೆ ಮೂಡಿತು.
ಕೂಡಲೇ ಎಲ್ಲ ರೈತರು, `ದಯಮಾಡಿ ತಮ್ಮ ಬೆಳೆಯನ್ನು ಹಾಳು ಮಾಡಬೇಡ, ಇದೇ ಸ್ಥಳದಲ್ಲಿ ನಿನಗೊಂದು ಗುಡಿ ಕಟ್ಟಿ ನಿನ್ನ ಮೂರ್ತಿಯನ್ನು ಪ್ರತಿಷ್ಠಾಪಿಸುತ್ತೇವೆ. ಕಡಲೆಕಾಯಿ ಬೆಳೆ ಸಮೃದ್ಧವಾಗಿ ಬೆಳೆದು ಅದರ ಕೃಷಿ ಚಟುವಟಿಕೆ ಮುಗಿದ ನಂತರ ಕಾರ್ತಿಕಮಾಸದ ಕೊನೆಯ ಸೋಮವಾರ ನಿನ್ನ ಹೆಸರಿನಲ್ಲಿ ಕಡಲೆಕಾಯಿ ಪರಿಷೆ ನಡೆಸುತ್ತೇವೆ ಎಂದು ಬಸವಣ್ಣನಿಗೆ ಮೊರೆಯಿಡುತ್ತಾರೆ.
ರೈತಭಕ್ತರ ಈ ಮೊರೆಯನ್ನು ಆಲಿಸಿದ ಬಸವಣ್ಣ ಅಂದಿನಿAದ ರೈತರ ಬೆಳೆಯನ್ನು ನಾಶಗೊಳಿಸದೆ ಕಾಪಾಡುತ್ತಾನೆ. ಅಂದಿನಿಂದ ರೈತರು ತಾವು ಬೆಳೆದ ಕಡಲೆಕಾಯಿಯನ್ನು ತೆಗೆದುಕೊಂಡು ಬಂದು ಪ್ರತಿವರ್ಷ ಜಾತ್ರೆಯನ್ನು ನಡೆಸುತ್ತಿದ್ದಾರೆ.
ಬನ್ನಿ ಮೂರು ದಿನಗಳು ಹೈಟೆಕ್ ನಗರಕ್ಕೆ ಗ್ರಾಮ ವಾತಾವರಣ ತಂದು ಕೊಡುವ ಈ ಐತಿಹಾಸಿಕ ಪರಿಷೆಯಲ್ಲಿ ಪಾಲ್ಗೊಳ್ಳೋಣ.
ಪ್ರೊಟೀನ್‌ನ ಆಗರ:
ಶೇಂಗಾ ಪ್ರೋಟಿನ್‌ನ ಆಗರ. ಚಳಿಗಾಲದಲ್ಲಿ ಇದರ ಸೇವನೆಯಿಂದ ದೇಹಕ್ಕೆ ಬೇಕಾದ ಕೊಬ್ಬಿನಾಂಶ ಸಿಗುತ್ತದೆ. ಇದನ್ನು ಹಸಿಯಾಗಿ, ಹುರಿದು, ಬೇಯಿಸಿ ತಿನ್ನಬಹುದು. ಅಥವಾ ಚಿಕ್ಕಿ, ಉಂಡೆ, ಬರ್ಫಿ, ಚಟ್ನಿಪುಡಿ, ಬೆಣ್ಣೆ ಮಾಡಿ ಸೇವಿಸಬಹುದು.
ಶೇಂಗಾ ಬೀಜದಲ್ಲಿ ಪಾಲೆಟ್ ಅಂಶ ಅತ್ಯಧಿಕವಾಗಿದೆ. ಆದ್ದರಿಂದ ಇದರ ಮಹಿಳೆಯರಿಗೆ ವಿಶೇಷವಾಗಿ ಗರ್ಭಿಣಿಯರಿಗೆ ಒಳ್ಳೆಯದು. ಅಲ್ಲದೆ ಕಾಲು ಕಪ್ ಶೇಂಗಾಬೀಜ ಸೇವನೆಯಿಂದ ದೇಹಕ್ಕೆ ಬೇಕಾಗಿರುವ ಒಟ್ಟು ಮ್ಯಾಂಗನೀಸ್‌ನ ಶೇ 35 ಭಾಗವನ್ನು ಪಡೆದುಕೊಳ್ಳಬಹುದು. ಮ್ಯಾಂಗನೀಸ್ ದೇಹದ ಚಯಾಪಚಯ ಕ್ರಿಯೆಗೆ, ಕ್ಯಾಲ್ಷಿಯಂ ಉತ್ಪತ್ತಿಗೆ ಮತ್ತು ರಕ್ತದಲ್ಲಿ ಸಕ್ಕರೆ ಮಟ್ಟದ ನಿಯಂತ್ರಣಕ್ಕೆ ಅತ್ಯಗತ್ಯವಾಗಿದೆ.
ಶೇಂಗಾದಲ್ಲಿ ಟ್ರೈಪ್ಟಾಫನ್ ಎಂಬ ಅಂಶವಿದೆ. ಇದು ಮೆದುಳಿನಲ್ಲಿ ನಡವಳಿಕೆಯನ್ನು ನಿಯಂತ್ರಿಸುವ ಸಿರೋಟಿನ್ ಉತ್ಪತ್ತಿಗೆ ಅತ್ಯಗತ್ಯವಾಗಿರುವ ಅಮಿನೊ ಆ್ಯಸಿಡ್ ಆಗಿದೆ. ಆದ್ದರಿಂದ ಖಿನ್ನತೆ ಮುಂತಾದ ಸಮಸ್ಯೆಯಿದ್ದವರಿಗೆ ಶೇಂಗಾಬೀಜ ಸೇವನೆ ಒಳ್ಳೆಯದು. ಶೇಂಗಾವನ್ನು ಬ್ರೆöÊನ್ ಫುಡ್ ಎಂದು ಕರೆಯಬಹುದು. ಯಾಕೆಂದರೆ ಇದು ಸ್ಮರಣ ಶಕ್ತಿಯನ್ನು ಹೆಚ್ಚಿಸಲು ಸಹಕಾರಿಯಾಗಿದೆ. ಇದರಲ್ಲಿ ವಿಟಮಿನ್ ಬಿ3 ಅಥವಾ ನಿಯಾಸಿನ್ ಎಂಬ ಅಂಶ ಇದ್ದು ಇದು ಮೆದುಳನ್ನು ಚುರುಕಾಗಿಸುತ್ತದೆ. ಇದು ರಕ್ತದಲ್ಲಿರುವ ಕೊಲೆಸ್ಟಾçಲ್ ಮಟ್ಟವನ್ನು ನಿಯಂತ್ರಿಸಲು ಕೂಡಾ ಸಹಕಾರಿಯಾಗಿದೆ. ಇದರಲ್ಲಿರುವ ತಾಮ್ರದಂಶ ಕೆಟ್ಟ ಕೊಲೆಸ್ಟಾçಲ್ ಅನ್ನು ಕಡಿಮೆಗೊಳಿಸುತ್ತದೆ. ಶೇಂಗಾವನ್ನು ನಿಯಮಿತವಾಗಿ ಸೇವಿಸುತ್ತಿದ್ದರೆ ಹೃದಯದ ಆರೋಗ್ಯವೂ ಉತ್ತಮವಾಗಿರುತ್ತದೆ. ಹೃದಯಘಾತ ಇತ್ಯಾದಿ ಸಮಸ್ಯೆಗಳನ್ನೂ ತಪ್ಪಿಸಬಹುದು. ಆದ್ದರಿಂದ ವಾರಕ್ಕೆ ನಾಲ್ಕು ದಿನ ಒಂದು ಹಿಡಿ ಶೇಂಗಾ ಬೀಜವನ್ನು ತಿನ್ನುವ ಅಭ್ಯಾಸವನ್ನು ರೂಢಿಸಿಕೊಳ್ಳಿ. ಕೆಲವು ಸಂಶೋಧನೆಗಳ ಪ್ರಕಾರ ಶೇಂಗಾವನ್ನು ಸೇವಿಸುತ್ತಿದ್ದರೆ ಆಲ್‌ಜೈಮರ್ ಮುಂತಾದ ಸಮಸ್ಯೆಯನ್ನು ತಡೆಗಟ್ಟಬಹುದು, ಇದರಲ್ಲಿರುವ ನಿಯಾಸಿನ್ ಅಂಶವೇ ಇದಕ್ಕೆ ಕಾರಣ. ಇಷ್ಟು ಮಾತ್ರವಲ್ಲ, ಶೇಂಗಾ ಸೇವನೆಯಿಂದ ಕ್ಯಾನ್ಸರ್ ಬರುವ ಸಾಧ್ಯತೆಯನ್ನೂ ಕಡಿಮೆ ಮಾಡಿಕೊಳ್ಳಬಹುದು.
ಇಕೋ ಫ್ರೆಂಡ್ಲಿ ಪರಿಷೆ
ನಿಮಗೊಂದು ವಿಷಯ ಗೊತ್ತಾ, ಬೆಂಗಳೂರಿನ ಕಸ ವಿಲೇವಾರಿಗೆಂದೇ ಬೃಹತ್ ಬೆಂಗಳೂರು ಮಹಾನಗರಪಾಲಿಕೆ (ಬಿಬಿಎಂಪಿ) ದಕ್ಷಿಣ ಭಾರತದ ಉಳಿದ ರಾಜ್ಯಗಳಿಗಿಂತ ಹೆಚ್ಚಾಗಿ ಹಣವನ್ನು ವ್ಯಯ ಮಾಡುತ್ತಿದೆ. ಪ್ರಸ್ತುತ ಬೆಂಗಳೂರಿನಲ್ಲಿ 198 ವಾರ್ಡ್ಗಳಿವೆ. ಬೆಂಗಳೂರು ನಗರವೊಂದರಲ್ಲೇ ಪ್ರತಿನಿತ್ಯ 4000ಟನ್ ತ್ಯಾಜ್ಯ ಉತ್ಪಾದನೆಯಾಗುತ್ತಿದೆ. ಪ್ರಸ್ತುತ ತ್ಯಾಜ್ಯ ವಿಲೇವಾರಿಗೆಂದೇ ಬಿಬಿಎಂಪಿ ವಾರ್ಷಿಕ 450 ಕೋಟಿ ರೂಗಳನ್ನು ವ್ಯಯ ಮಾಡುತ್ತಿದೆ. ಬೆಂಗಳೂರಿಗೆ ಹೋಲಿಸಿದರೆ ಗ್ರೇಟರ್ ಹೈದರಾಬಾದ್ ಮುನಿಷಿಪಲ್ ಕಾರ್ಪೋರೇಷನ್ (ಬಿಜೆಎಂಸಿ) ವ್ಯಾಪ್ತಿಯಲ್ಲಿ ಪ್ರತಿನಿತ್ಯ 3,800 ಟನ್‌ನಷ್ಟು ತ್ಯಾಜ್ಯ ಉತ್ಪಾದನೆಯಾಗುತ್ತಿದೆ. ತ್ಯಾಜ್ಯ ನಿರ್ವಹಣೆಗಾಗಿ 100 ಕೋಟಿ ರೂಗಳನ್ನು ಜೆಜೆಎಂಸಿ ವ್ಯಯ ಮಾಡುತ್ತಿದೆ. ಅಮತೆಯೇ ಚಿನ್ಯೆöÊ6000 ಟನ್‌ಗಳಷ್ಟು ತ್ಯಾಜ್ಯ ನಿರ್ವಹಣೆಗೆ 400 ಕೋಟಿ ರೂಗಳನ್ನು ವ್ಯಯ ಮಾಡುತ್ತಿದೆ. ಮೇಲಿನ ಅಂಕಿ ಅಂಶಗಳನ್ನು ಗಮನಿಸಿದಾಗ ತ್ಯಾಜ್ಯ ನಿರ್ವಹಣೆ ನಮಗೆಷ್ಟರ ಮಟ್ಟಿಗೆ ಕಷ್ಟವಾಗುತ್ತಿದೆ ಎಂದು ನೀವೇ ಊಹಿಸಿಕೊಳ್ಳಿ, ದೈನಂದಿನ ದಿನಗಳಲ್ಲೇ ತ್ಯಾಜ್ಯ ಉತ್ಪಾದನೆಯ ಪ್ರಮಾಣ ಈ ಮಟ್ಟಿಗಿದ್ದರೆ ಜಾತ್ರೆ, ಹಬ್ಬಗಳ ಸಂದರ್ಭದಲ್ಲಿ ಹೇಗಿರಬಹುದು?
ನೀವೇ ಊಹಿಸಿಕೊಳ್ಳಿ, ಪರಿಸರ ಕಾಳಜಿಯ ದೃಷ್ಟಿಯಿಂದಲೇ ಮುಜರಾಯಿ ಇಲಾಖೆ ಈ ಬಾರಿ ಹಲವು ಕ್ರಮಗಳನ್ನು ಕೈಗೊಂಡಿದೆ. ಪರಿಷೆಯ ನೆವದಲ್ಲಿ ಬಸವನಗುಡಿಯ ಪರಿಸರ ಮಾಲಿನ್ಯ ಕಾಪಾಡಿಕೊಳ್ಳುವ ನಿಟ್ಟಿನಲ್ಲಿ ಮುಜರಾಯಿ ಇಲಾಖೆ ಕ್ರಿಯಾಯೋಜನೆ ರೂಪಿಸಿದೆ.
ಕ್ರಿಯಾಯೋಜನೆಯ ಪ್ರಕಾರ ಈ ಬಾರಿ ಪರಿಷೆಗೆ ಬರುವವರು ಕಡಲೆಕಾಯಿಯನ್ನು ಕಾಗದದ ಚೀಲದಲ್ಲಿ ಕೊಂಡೊಯ್ಯಲು ಅನುವಾಗುವಂತೆ ಏರ್ಪಾಟುಗಳನ್ನು ಮಾಡಿದೆ. ಪರಿಸರ ಸ್ನೇಹಿ ಯೋಜನೆಗೆ ಬಿಎಂಎಸ್ ತಾಂತ್ರಿಕ ಕಾಲೇಜಿನ ವಿದ್ಯಾರ್ಥಿಗಳು ಕೈಜೋಡಿಸಿರುವುದು ವಿಶೇಷ. ಕಡಲೆಕಾಯಿ ಪರಿಷೆಯಲ್ಲಿ ಮಳಿಗೆಗಳನ್ನು ಹಾಕಿಕೊಂಡಿರುವ ವ್ಯಾಪಾರಸ್ಥರಲ್ಲೂ ಅರಿವು ಮೂಡಿಸುವ, ನಿಗಾ ವಹಿಸುವ ಯತ್ನ ನಡೆದಿದೆ. ಈ ಹಿನ್ನೆಲೆಯಲ್ಲಿ ಅವರಿಗೆ ಗುರುತಿನ ಚೀಟಿ ನೀಡಲಾಗಿದೆ, ಪ್ಲಾಸ್ಟಿಕ್ ಚೀಲಗಳ ಬದಲಿಗೆ ಪೇಪರ್ ಬ್ಯಾಗ್‌ಗಳನ್ನು ನೀಡಲಾಗಿದೆ. ಪೇಪರ್ ಬ್ಯಾಗ್ ವಿತರಣಾ ಕಾರ್ಯದ ಹೊಣೆಯನ್ನು ಬಿ.ಎಂ.ಎಸ್.ಕಾಲೇಜಿನ ವಿದ್ಯಾರ್ಥಿಗಳು ಕೈಗೆತ್ತಿಕೊಂಡಿದ್ದಾರೆ.
ಈ ಬಾರಿ ಸುಮಾರು 1.75 ಲಕ್ಷ ಪರಿಸರ ಸ್ನೇಹಿ ಬ್ಯಾಗ್‌ಗಳನ್ನು ವಿತರಿಸುವ ನಿರೀಕ್ಷೆಯಿಂದ ಕಡಲೆಕಾಯಿ ಪರಿಷೆಗೆ ಆನೇಕಲ್, ಮಾಗಡಿ, ಬೆಂಗಳೂರು ಗ್ರಾಮಾಂತರ, ಚಿಂತಾಮಣಿ, ಶ್ರೀನಿವಾಸಪುರ ಹೀಗೆ ರಾಜ್ಯದ ನಾನಾ ಭಾಗಗಳಿಂದ ಲೋಡ್‌ಗಟ್ಟಲೆ ಕಡಲೆಕಾಯಿ ಬರುತ್ತದೆ. ಅದಲ್ಲದೆ ಸಮೀಪದ ಸೇಲಂ, ಆಂಧ್ರದಿಂದಲೂ ವರ್ತಕರು ಬರುತ್ತಾರೆ. ಪರಿಸರ ಸ್ನೇಹಿ ಬ್ಯಾಗ್‌ಗಳು ಒಂದು, ಮೂರು ಹಾಗೂ ಐದು ಲೀಟರ್ ಸಾಮರ್ಥ್ಯದಲ್ಲಿ ದೊರೆಯಲಿದೆ. ಪರಿಸರ ಸ್ನೇಹಿ ಪರಿಷೆಯನ್ನು ಆಚರಿಸೋಣ.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ