ಭವಿಷ್ಯದಲ್ಲಿ ಬರಲಿದೆ ಎಐ ಚಾಲಿತ ವೈಯಕ್ತೀಕರಿಸಿದ ಚಿಕಿತ್ಸೆ

Upayuktha
0

ಐಐಎಸ್ಸಿ ವಿಜ್ಞಾನಿ ಪ್ರೊ.ದೀಪಕ್ ಅಭಿಮತ




ವರದಿ: ರಾಮಚಂದ್ರ ಮುಳಿಯಾಲ


ಬೆಂಗಳೂರು: ಜೈವಿಕ ತಂತ್ರಜ್ಞಾನ ಕ್ಷಿಪ್ರಗತಿಯಲ್ಲಿ ಬೆಳೆಯುತ್ತಿದ್ದು, ಎಲ್ಲರಿಗೂ ಸೂಕ್ತವಾಗುವ ಒಂದು ಚಿಕಿತ್ಸೆಯ ಬದಲಾಗಿ, ಪ್ರತಿ ವ್ಯಕ್ತಿಗೆ ಸೂಕ್ತವಾಗುವ ನಿರ್ದಿಷ್ಟ ಚಿಕಿತ್ಸೆ ಬರಲಿದೆ ಎಂದು ಐಐಎಸ್ಸಿ ವಿಜ್ಞಾನಿ ಪ್ರೊ.ದೀಪಕ್ ಕೆ.ಸೈನಿ ಹೇಳಿದ್ದಾರೆ.


ಬೆಂಗಳೂರಿನಲ್ಲಿ ನಡೆಯುತ್ತಿರುವ ಟೆಕ್ ಶೃಂಗಸಭೆಯ ಎರಡನೇ ದಿನವಾದ ಬುಧವಾರ ನಡೆದ “ಸ್ವಾಸ್ಥ್ಯ, ದೀರ್ಘಾಯುಷ್ಯ ಮತ್ತು ಅರಿವಿನಲ್ಲಿ ಜೈವಿಕ ತಂತ್ರಜ್ಞಾನದ ನಾವೀನ್ಯತೆ” ಕುರಿತ ಸಂವಾದದಲ್ಲಿ ಅವರು ಮಾತನಾಡಿದರು.


ಎಐ ಚಾಲಿತ ರೋಗನಿರ್ಣಯ, ಒಮಿಕ್ಸ್ ದತ್ತಾಂಶ ಮತ್ತು ಪ್ರತಿ ರೋಗಿಗೆ ಹೊಂದಿಕೊಳ್ಳುವ ನೈಜ ಸಮಯದ ನಿಗಾದ ನೆರವಿನೊಂದಿಗೆ ಭವಿಷ್ಯದ ಚಿಕಿತ್ಸಾಕ್ರಮವೇ ಬದಲಾಗಿದೆ. ವೈಯಕ್ತೀಕರಿಸಿದ ಚಿಕಿತ್ಸೆ ಬರಲಿದೆ ಎಂದು ಸೈನಿ ಹೇಳಿದರು.


2050ರ ವೇಳೆಗೆ ಜಗತ್ತಿನ ವೃದ್ಧರ ಸಂಖ್ಯೆ 2.1 ಶತಕೋಟಿಯಾಗಲಿದ್ದರೆ, ಆ ವೇಳೆಗೆ ಭಾರತದಲ್ಲಿ ವೃದ್ಧರ ಸಂಖ್ಯೆ 342 ದಶಲಕ್ಷ ತಲುಪಲಿದೆ. ವಯಸ್ಸು ಸಂಬಂಧಿತ ಚಿಕಿತ್ಸೆಗೆ ಬೇಡಿಕೆ ಹೆಚ್ಚಾಗಲಿದೆ. ಈ ನಿಟ್ಟಿನಲ್ಲಿ ತಂತ್ರಜ್ಞಾನದ ಗಮನ ಹರಿದಿದ್ದು, ವೃದ್ಧಾಪ್ಯದ ಆರೋಗ್ಯಸೇವೆಯತ್ತ ದೊಡ್ಡಮಟ್ಟದಲ್ಲಿ ಹೂಡಿಕೆ ನಡೆಯುತ್ತಿದೆ.


ವಯಸ್ಸಾಗುವಿಕೆಯ ಮೂಲಭೂತ ಸಂಶೋಧನೆ, ದೀರ್ಘಾಯುಷ್ಯವನ್ನು ಉತ್ತೇಜಿಸುವ ಸಾಧ್ಯತೆಯ ಅಧ್ಯಯನ ನಡೆಯುತ್ತಿದೆ. ಬಳಿಕ ವೈದ್ಯಕೀಯ ಅಧ್ಯಯನದ ಫಲಿತಾಂಶಗಳನ್ನು ಗುರುತಿಸುವುದು, ವೈದ್ಯಕೀಯ ಮಾನದಂಡಗಳನ್ನು ನಿಗದಿಗೊಳಿಸುವುದು ಫಲಿತಾಂಶಗಳನ್ನು ವೈದ್ಯಕೀಯ ಅಭ್ಯಾಸದೊಂದಿಗೆ ಸಮಗ್ರಗೊಳಿಸುವುದು ನಂತರದ ಹಂತವಾಗಿದೆ ಎಂದು ಅವರು ವಿವರಿಸಿದರು.

 

ಮಿದಳು ಮತ್ತು ಮನಸ್ಸು ಎಂಬುದು ಮಾನವ ದೇಹದ ಎರಡು ಅದ್ಭುತ ಅಂಗಗಳಾಗಿವೆ. ಮಿದುಳಿನ ವಯಸ್ಸಾಗುವಿಕೆಯನ್ನು ತಡೆಯಲು ಜೆನೆಟಿಕ್ಸ್ ಅರ್ಥಮಾಡಿಕೊಳ್ಳುವ ಮೂಲಕ ಸಾಧ್ಯವೇ ಎಂಬ ಕುರಿತು ಅಧ್ಯಯನ ನಡೆಯುತ್ತಿದೆ. ಮಾನಸಿಕ ಆರೋಗ್ಯಕ್ಕೆ ಕಾರಣವಾಗುವ ಜೆನೆಟಿಕ್ಸ್ ಅಂಶಗಳ ಮೇಲೂ ಅಧ್ಯಯನ ಆಗುತ್ತಿದೆ. ಮುಂದಿನ 20 ವರ್ಷಗಳಲ್ಲಿ ಬುದ್ಧಿಮಾಂದ್ಯತೆಯ ಪ್ರಮಾಣ ಹೆಚ್ಚಲಿದ್ದು, ಇದಕ್ಕೆ ಸಮರ್ಪಕ ಚಿಕಿತ್ಸೆಗಾಗಿ ದತ್ತಾಂಶದ ಕ್ರೋಢೀಕರಣ ಆಗಬೇಕಿದೆ ಎಂದು ನಿಮ್ಹಾನ್ಸ್‌ನ ಪ್ರೊಫೆಸರ್ ಸಂಜೀವ್ ಜೈನ್ ಹೇಳಿದರು.


ಜೈವಿಕ ತಂತ್ರಜ್ಞಾನ ಕ್ಷೇತ್ರದ ದತ್ತಾಂಶ ನಿರ್ವಹಣೆಯಲ್ಲಿ ಗೌಪ್ಯತೆಯು ಅತಿಮುಖ್ಯ ಅಂಶವಾಗಿದೆ. ಉದ್ಯಮಗಳು ಅದನ್ನು ಅನುಸರಿಸಬೇಕು. ಪ್ರಶಸ್ತವಾದ ಆರೋಗ್ಯ ಸೇವೆಗೆ ದತ್ತಾಂಶ ಸಂಗ್ರಹ ತುಂಬಾ ಅಗತ್ಯವಾಗಿದೆ. ವೈಯಕ್ತೀಕರಿಸಿದ ದತ್ತಾಂಶ ಇದ್ದಾಗ ಔಷಧಗಳ ಅಡ್ಡಪರಿಣಾಮಗಳನ್ನು ತಗ್ಗಿಸುವುದು ಸುಲಭವಾಗಲಿದೆ ಎಂದು ಸಂಜೀವ್ ಜೈನ್ ಅವರು ಅಭಿಪ್ರಾಯ ವ್ಯಕ್ತಪಡಿಸಿದರು.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 

Post a Comment

0 Comments
Post a Comment (0)
Maruti Suzuki Festival of Colours
Maruti Suzuki Festival of Colours
To Top