ನವರಾತ್ರಿಯಲ್ಲಿ ಶ್ರೀದೇವಿ ಮಹಾತ್ಮೆಯ ಪಾರಾಯಣ

Upayuktha
0



ಬ್ರಹ್ಮಾನಂದಮ್ ಪರಮ ಸುಖದಂ ಕೇವಲಂ ಜ್ಞಾನಮೂರ್ತಿಂ,

ದ್ವಂದ್ವಾತೀತಂ ಗಗನ ಸದೃಶಂ ತತ್ವಮಸ್ಯಾಧಿಲಕ್ಷಂ,

ಏಕಮ್ ನಿತ್ಯಂ ವಿಮಲ ವಚನಂ ಸರ್ವಧಿ ಸಾಕ್ಷಿಭೂತಂ

ಭಾವಾತೀತಮ್ ತ್ರಿಗುಣರಹಿತಂ ಸದ್ಗುರುಂ ತಂ ನಮಾಮಿ


ಸಚ್ಚಿದಾನಂದ ಅಂದರೆ ಸತ್‌, ಚಿತ್ ಮತ್ತು ಆನಂದ ಸ್ವರೂಪಗಳನ್ನು ಹೊಂದಿರುವುದಕ್ಕೆ ಬ್ರಹ್ಮಾನಂದ ಎಂದು ಹೇಳುತ್ತಾರೆ. ಅಂತಹ ಪರಮ ಸುಖವನ್ನು ನೀಡುವ ಜ್ಞಾನಮೂರ್ತಿಯಾಗಿರುವ ದ್ವಂದ್ವಗಳಿಂದ ಅತೀತನಾಗಿರುವ ಆಕಾಶದಷ್ಟೇ ವಿಸ್ತಾರವಾದ ಜ್ಞಾನವನ್ನು ಉಳ್ಳವ, ಸದಾಚಾರ ತತ್ವಗಳನ್ನು ಜೀವನದಲ್ಲಿ ಅಳವಡಿಸಿಕೊಂಡಿರುವ ನಿತ್ಯವೂ ಸತ್ಯ ಶುದ್ಧ ಮನಸ್ಸುಳ್ಳ ಏಕೈಕ ವ್ಯಕ್ತಿ ಗುರು. ಮಾತು ತಪ್ಪದವನು ಸರ್ವಕ್ಕೂ ಸಾಕ್ಷಿಭೂತನಾಗಿರುವವನು, ಭಾವ ಬಂಧನಗಳಿಗೆ ಒಳಗಾಗದವನು ಸತ್ವ, ರಜ ಮತ್ತು ತಮೋ ಗುಣಗಳನ್ನು ಮೀರಿದ ಎಲ್ಲ ತಾಮಸ ಗುಣಗಳಿಗೆ ಅತೀತನಾಗಿರುವ ಸದ್ಗುರುವಿಗೆ ನಮಸ್ಕಾರಗಳು.


ನವರಾತ್ರಿ, ದಸರಾ ಎಂದು ಕರೆಯಲ್ಪಡುವ ಈ ಹಬ್ಬ ವನ್ನೂ ಆಚರಿಸುವ ಹಿನ್ನೆಲೆ, ಮತ್ತು ಉದ್ದೇಶದ ಕುರಿತು ಹೇಳುವುದಾದರೆ ನವರಾತ್ರಿ ಹಬ್ಬವನ್ನು 'ದುಷ್ಟ ಶಿಕ್ಷಣ ಶಿಷ್ಟ ರಕ್ಷಣ' ಎಂಬ ಮಹತ್ತರ ಆಶಯದೊಂದಿಗೆ ಆಚರಿಸುತ್ತಾರೆ.


ಸಾಂಸ್ಕೃತಿಕವಾಗಿ, ಸಾಹಿತ್ಯಿಕವಾಗಿ, ಭಾವನಾತ್ಮಕವಾಗಿ ಮತ್ತು ಸಾಮಾಜಿಕವಾಗಿ ನಮ್ಮ ಜನಮಾನಸದಲ್ಲಿ ಬೆರೆತು ಹೋಗಿರುವುದು ನಮ್ಮ ನಾಡ ಹಬ್ಬ ದಸರ. ದಸರಾ ಭಕ್ತಿ ಭಾವದ ವ್ಯಕ್ತ ರೂಪ. ದಸರಾ ಶಕ್ತಿ ಶೌರ್ಯಗಳ ವಿಶ್ವ ರೂಪ. ನಾಡು ನುಡಿಗಳನ್ನು ಮೀರಿ ನಮ್ಮೆಲ್ಲರನ್ನು ಒಗ್ಗೂಡಿಸುವ ಶಕ್ತಿ ರೂಪ.


ಹಿಂದೆ ಅಜ್ಞಾತವಾಸದಲ್ಲಿದ್ದ ಪಾಂಡವರು ಬನ್ನಿ ಗಿಡದ ಕೆಳಗೆ ಹುಗಿದಿಟ್ಟಿದ್ದ ತಮ್ಮ ಶಸ್ತ್ರಾಸ್ತ್ರಗಳನ್ನು ಹೊರತೆಗೆದು ಪೂಜೆ ಮಾಡಿ ದುಷ್ಟರ ವಿರುದ್ಧ ಹೋರಾಡಿ ವಿಜಯ ಪ್ರಾಪ್ತಿಗೊಳಿಸಿಕೊಂಡ ಸಮಯ ಈ ವಿಜಯ ದಶಮಿ. ದುಷ್ಟನಾದ ರಾಕ್ಷಸೇಂದ್ರ ರಾವಣನನ್ನು ರಾಮನು ಸಂಹರಿಸಿದ ದಿನ ಈ ವಿಜಯದಶಮಿ. ತಾಯಿ ಚಾಮುಂಡೇಶ್ವರಿ ದುಷ್ಟ ಮಹಿಷಾಸುರನೊಡನೆ 9 ದಿನಗಳ ಕಾಲ ಕಾದಾಡಿ ಹತ್ತನೆಯ ದಿನ ಆತನನ್ನು ವಧಿಸಿದ ದಿನ ಇವೆಲ್ಲ  ಪೌರಾಣಿಕ  ಹಿನ್ನೆಲೆಗಳಾದರೆ ವಿಜಯನಗರದ ಅರಸರು ನಾಡಹಬ್ಬವಾಗಿ ದಸರಾ ಇಲ್ಲವೇ ನವರಾತ್ರಿ ಎಂದು ಕರೆಯಲ್ಪಡುವ ಈ ಹಬ್ಬವನ್ನು ಆಚರಿಸುತ್ತಿದ್ದರು. ಮುಂದೆ ವಿಜಯನಗರ ಸಾಮ್ರಾಜ್ಯದ ಕೊನೆಯ ಅರಸು ರಾಮರಾಯನು ಯುದ್ಧದಲ್ಲಿ ಸೋತು 1565 ರಲ್ಲಿ ಮೈಸೂರಿಗೆ ವಲಸೆ ಹೋದನು. ಅಂದಿನಿಂದ ಒಡೆಯರ್ ವಂಶದ ಮೈಸೂರು ಮಹಾರಾಜರು ಈ ನವರಾತ್ರಿ ಹಬ್ಬವನ್ನು ನಾಡಹಬ್ಬವಾಗಿ ಆಚರಿಸಿದರು. ಸ್ವಾತಂತ್ರ್ಯ ಹೋರಾಟದ ಸಮಯದಲ್ಲಂತೂ ಈ ನಾಡ ಹಬ್ಬ ಮತ್ತಷ್ಟು ಮೆರುಗನ್ನು ಪಡೆಯಿತು. ನೆರೆಯ ಮಹಾರಾಷ್ಟ್ರ ರಾಜ್ಯದಲ್ಲಿ ಗಣಪತಿ ಹಬ್ಬವನ್ನು ಆಚರಿಸುತ್ತಾ ಸ್ವಾತಂತ್ರ್ಯ ಪಡೆಯುವ ಕಿಚ್ಚಿಗೆ ಪ್ರೋತ್ಸಾಹ ನೀಡುವ ಪ್ರಕ್ರಿಯೆಯನ್ನು ಕಂಡ ಕರ್ನಾಟಕದ ಸಣ್ಣಪುಟ್ಟ ರಾಜರು, ಆಳರಸರು ನವರಾತ್ರಿ ಹಬ್ಬವನ್ನು ಇನ್ನಷ್ಟು ವಿಜೃಂಭಣೆಯಿಂದ ಆಚರಿಸತೊಡಗಿದರು. ಸ್ವಾತಂತ್ರ್ಯಾ ನಂತರ ದೈವಾರಾಧನೆ ಮಾಡುತ್ತಾ, ಖಾಸಗಿಯಾಗಿ ದರ್ಬಾರನ್ನು ನಡೆಸುತ್ತಾ ಸಾರ್ವಜನಿಕವಾಗಿ ಜಂಬೂ ಸವಾರಿಯನ್ನು ಮಾಡುತ್ತಾ ತನ್ಮೂಲಕ ಮೈಸೂರು ದಸರೆಯನ್ನು ಒಡೆಯರ್ ರಾಜಮನೆತನದವರು ಮತ್ತು ಮೈಸೂರು ಭಾಗದ ಜನರು ಅದ್ದೂರಿಯಾಗಿ ಆಚರಿಸುತ್ತಾರೆ. ಅಂದು ಮಹಾರಾಜರು ಜಂಬೂ ಸವಾರಿಯಲ್ಲಿ ಆನೆಯ ಮೇಲೆ ಏರುತ್ತಿದ್ದರೆ ಇಂದು ತಾಯಿ ಚಾಮುಂಡಿ ದೇವಿಯನ್ನು ಪಟ್ಟದ ಆನೆಯ ಮೇಲೆ ಪ್ರತಿಷ್ಠಾಪಿಸಿ ಅರಮನೆಯ ಬನ್ನಿಮಂಟಪದವರೆಗೆ ಭವ್ಯ ಮೆರವಣಿಗೆಯಲ್ಲಿ ಕೊಂಡೊಯ್ದು ಶಮೀವೃಕ್ಷವನ್ನು ಪೂಜಿಸಿ ಬನ್ನಿಯನ್ನು ಮುಡಿಯುತ್ತಾ ವಿಜಯದಶಮಿಯನ್ನು ಆಚರಿಸುತ್ತಾರೆ. ಈ ವಿಜಯದಶಮಿಯಂದು 'ದುಷ್ಟ ಶಿಕ್ಷಣ ಶಿಷ್ಟ ರಕ್ಷಣ' ಎಂಬ ಧ್ಯೇಯ ಎಲ್ಲೆಡೆ ಮೊಳಗುವಂತೆ ಮಾಡುತ್ತಾರೆ. 


ಮಹಾನವಮಿ ಅಮಾವಾಸ್ಯೆಯ ನಂತರ ಬರುವ ಅಶ್ವಿಜ ಮಾಸದ ಮೊದಲನೆಯ ದಿನವೇ ಘಟಸ್ಥಾಪನೆ. ಪದ್ಧತಿ ಇರುವ ಎಲ್ಲಾ ಧರ್ಮಗಳ ಮನೆ ಮನೆಗಳಲ್ಲಿಯೂ ಕಳಶವನ್ನು ತುಂಬಿ ಅದರ ಮೇಲೆ ವೀಳ್ಯದ ಎಲೆ, ಸಿಪ್ಪೆಯನ್ನು ಹೊಂದಿರುವ ತೆಂಗಿನಕಾಯಿಯನ್ನು ಇರಿಸಿ ದೇವಿಯನ್ನು ಪ್ರತಿಷ್ಠಾಪಿಸಿ ಪೂಜಿಸುತ್ತಾರೆ. ಇನ್ನೂ ಕೆಲವರು ಮಣ್ಣಿನಲ್ಲಿ ಸುಮಾರು 9 ವಿಧದ ಧಾನ್ಯಗಳನ್ನು ಹಾಕಿ ಅದಕ್ಕೆ ನೀರು ಚುಮುಕು ಹೊಡೆದು ಅದರ ಮೇಲೆ ಒಂದು ಮಣ್ಣಿನ ಕೊಡವನ್ನು ಕಳಸದಂತೆ ಪ್ರತಿಷ್ಠಾಪಿಸುತ್ತಾರೆ. ದಿನಗಳೆದಂತೆ ಈ ನವಧಾನ್ಯಗಳು ಮೊಳಕೆ ಒಡೆದು ಕಳಸದ ಸುತ್ತ ಬೆಳೆದು ಕಣ್ಣಿಗೆ ತುಂಬು ಆನಂದವನ್ನು ಉಂಟು ಮಾಡುತ್ತವೆ.ದೇವರ ಮುಂದೆ ದೊಡ್ಡ ನಂದಾದೀಪವನ್ನು  ಹಚ್ಚಿಟ್ಟು ಅದನ್ನು ನವರಾತ್ರಿಯ/ದಸರೆಯ ವರೆಗೂ  ನಂದದಂತೆ ಕಾಯುತ್ತಾರೆ. ಹೀಗೆ ಘಟಸ್ಥಾಪನೆ ಮಾಡಿದ ನಂತರ ಶ್ರೀದೇವಿಯನ್ನು ಆಹ್ವಾನಿಸಿ ಪೂಜಿಸಿ ಷೋಡಶೋಪಚಾರ ಮಾಡಿ ನೈವೇದ್ಯ ಮಾಡುತ್ತಾರೆ. ಕೆಲವರ ಮನೆಗಳಲ್ಲಿ ಕಡ್ಡಾಯವಾಗಿ ದೇವಿ ಪುರಾಣವನ್ನು, ಇನ್ನೂ ಕೆಲವರು ಲಲಿತಾ ಸಹಸ್ರನಾಮಾವಳಿಯನ್ನು ಮತ್ತು ಕೆಲವರು ಶ್ರೀನಿವಾಸ ಕಲ್ಯಾಣವನ್ನು ಪಾರಾಯಣ ಮಾಡುತ್ತಾರೆ. ದೇವಾಲಯಗಳಲ್ಲಿಯೂ ಕೂಡ ದೇವಿಯನ್ನು ಪ್ರತಿಷ್ಠಾಪಿಸಿ 9 ದಿನಗಳವರೆಗೆ ಸತತವಾಗಿ ವಿವಿಧ ದೇವತೆಗಳ ರೂಪದಲ್ಲಿ ಪೂಜಿಸಿ ಗಂಡಾರತಿ ಇಲ್ಲವೇ ಕಾಕಡಾರತಿ ಮೂಲಕ ಭಜಿಸಿ ದೇವಿ ಪುರಾಣವನ್ನು, ಸಪ್ತಶತಿ ಪಾಠ, ಲಲಿತೋಪಾಖ್ಯಾನ, ದುರ್ಗಾ ಸಪ್ತಶತಿ ಪಾರಾಯಣ ಮಾಡುತ್ತಾರೆ. ನವರಾತ್ರಿಯ ಮೊದಲ ದಿನ ಯೋಗ ನಿದ್ರ ದೇವಿ, ಎರಡನೇ ದಿನ ದೇವಜಾತದುರ್ಗ, ಮೂರನೇ ದಿನ ಮಹಿಶಾಸುರ ಮರ್ದಿನಿ, ನಾಲ್ಕನೇ ದಿನ ಸಿಂಹ ವಾಹಿನಿಯಾದ ಚಾಮುಂಡೇಶ್ವರಿ ಶೈಲಜಾ ಪುತ್ರಿ,, ಐದನೇ ದಿನ ದೂಮ್ರದೇವಿ, ಆರನೇ ದಿನ ಚಂಡಮುಂಡಾಸುರರನ್ನು ವಧೆ ಮಾಡಿದ ದುರ್ಗಾದೇವಿ, ಏಳನೇ ದಿನ ರಕ್ತ ಬೀಜಾಸುರನನ್ನು ಕೊಂದ ದುರ್ಗಾದೇವಿಯನ್ನು ಶಾರದೆಯ ರೂಪದಲ್ಲಿ, ಎಂಟನೇ ದಿನ ನಿಶುಂಭನನ್ನು ಸಂಹರಿಸಿದ ದುರ್ಗಾದೇವಿಯನ್ನು ಲಕ್ಷ್ಮಿ ರೂಪದಲ್ಲಿ ಪೂಜಿಸುತ್ತಾರೆ. ಈ ದಿನವನ್ನು ದುರ್ಗಾಷ್ಟಮಿ ಎಂದು ಕೂಡ ಕರೆಯುತ್ತಾರೆ. ಉತ್ತರ ಭಾರತದಲ್ಲಿ ಸಪ್ತಮಿ ಅಷ್ಟಮಿ ನವಮಿ ಮೂರು ದಿನಗಳನ್ನು ಸೇರಿಸಿ ತ್ರಿದಿನ ದುರ್ಗಾಪೂಜೆ ಎಂದು ಪೂಜಿಸುತ್ತಾರೆ. ಸಪ್ತಮಿಯ ದಿನ (ಮೂಲ ನಕ್ಷತ್ರ)ದಂದು  ಶಾರದೆಯನ್ನು ಪೂಜಿಸಲು ಬಗೆ ಬಗೆಯ ಪುಸ್ತಕಗಳನ್ನು ಇಟ್ಟು ಪವಿತ್ರ ಗ್ರಂಥಗಳನ್ನು, ಚಿನ್ನ, ಬೆಳ್ಳಿ ಗಳನ್ನು ಇಟ್ಟು ಪೂಜಿಸಲಾಗುತ್ತದೆ. ಎಂಟನೆಯ ದಿನದಂದು ಲಕ್ಷ್ಮಿ ಪೂಜೆ ಮಾಡುತ್ತಾರೆ. ಒಂಬತ್ತನೆಯ ದಿನ ನವಮಿಯಂದು ಪಾಂಡವರು  ಬನ್ನಿ ವೃಕ್ಷದ ಕೆಳಗೆ ಮುಚ್ಚಿಟ್ಟ ತಮ್ಮ ಸರ್ವ ಶಸ್ತ್ರಾಸ್ತ್ರಗಳನ್ನು ತೆಗೆದು ಪೂಜಿಸಿದ ದಿನ... ಅದುವೇ ಆಯುಧ ಪೂಜೆ. ಇಂದಿನ ದಿನ ಎಲ್ಲರೂ ತಮ್ಮ ತಮ್ಮ ಮನೆಯಲ್ಲಿರುವ ಕತ್ತಿ, ಖಡ್ಗ, ಕಟಾರಿ, ಅಳತೆಯ ಮತ್ತು ತೂಕದ ವಸ್ತುಗಳು, ಕೃಷಿ ಕೆಲಸದ ಸಾಮಗ್ರಿಗಳನ್ನು ಇಟ್ಟು ಪೂಜಿಸುತ್ತಾರೆ. ನವರಾತ್ರಿಯ ಅಥವಾ ದಸರೆಯ ಕೊನೆಯ ದಿನ ವಿಜಯದಶಮಿ. ಅಂದು ತಾಯಿ ಚಾಮುಂಡಿಯು ದುಷ್ಟ ಮಹಿಶಾಸುರನನ್ನು ಕೊಂದ ದಿನ, ರಾಮ ರಾವಣನನ್ನು ವಧಿಸಿದ ದಿನ. ಈ ದಿನದ ನೆನಪಿಗಾಗಿ ವಿಜಯದಶಮಿಯನ್ನು ಆಚರಿಸುವರು.


ವಿಜಯದಶಮಿಯ ಈ ಹಬ್ಬ ಸ್ತ್ರೀಶಕ್ತಿಯ ಪಾರಮ್ಯವನ್ನು ಸೂಚಿಸುವ ಹಬ್ಬ. ಎಲ್ಲೆಡೆಯು ತಾಯಿದುರ್ಗೆಯನ್ನು ಹಲವು ವಿಧಧ ನಾಮಗಳಿಂದ ಕರೆಯುತ್ತಾ ವಿವಿಧ ಬಗೆಗಳಲ್ಲಿ ಪೂಜಿಸುತ್ತಾರೆ.ನವರಾತ್ರಿಯ ನಿಮಿತ್ತ ಕೆಲವರಂತೂ ಇಡೀ ದಿನಕ್ಕೆ ಕೇವಲ ಒಪ್ಪತ್ತಿನ ಊಟವನ್ನು ಮಾಡುತ್ತಾ ಸಂಪೂರ್ಣ ಮೌನಕ್ಕೆ ಶರಣಾಗುತ್ತಾರೆ. ಲೌಕಿಕವಾಗಿ ಮೇಲಿನ ಎಲ್ಲ ಪೂಜೆಯ ಆಚರಣೆಗಳು ಸರಿಯಾದುದಷ್ಟೇ.... ಆದರೆ ಈ ನವರಾತ್ರಿಯ ಆಚರಣೆಯ ಮೂಲ ಉದ್ದೇಶವೇ ಬೇರೆ. ಈ ಇಡೀ ಬ್ರಹ್ಮಾಂಡವನ್ನು ಸೃಷ್ಟಿಸಿದ್ದು ಶ್ರೀದೇವಿ. ಆಕೆಯೇ ಹರಿಹರ ಬ್ರಹ್ಮಾದಿಗಳನ್ನು ಕೂಡ ಸೃಷ್ಟಿಸಿದಳು.


ಶ್ರೀದೇವಿ ಪುರಾಣದಲ್ಲಿ ಮೊದಲ ಅಧ್ಯಾಯದಲ್ಲಿ ಬರುವ ಶಿವಪುರ ಎಂದರೆ 25 ತತ್ವಗಳಿಂದ ನಿರ್ಮಿತವಾದ ಸ್ಥೂಲ ದೇಹ. ಅದರಲ್ಲಿ ರಜತಾದ್ರಿ ಬೆಳ್ಳಗೆ ಹೊಳೆಯುವಂತಹ ಸತ್ತ್ವ ಗುಣವನ್ನು ಸೂಚಿಸುವಂತದ್ದು... ಅಸ್ತಿಗಳೆ ಶಶಿಕಾಂತ ಇಲ್ಲವೇ ಚಂದ್ರಕಾಂತ  ಶಿಲೆ ಮತ್ತು ಬಂಡೆಗಳು. ಚರ್ಮವೇ ಮುಸುಕಿದ ತಪ್ಪಲು ದೇಹದ ಎರಡು ಸಂಧಿಗಳೆ ಕೊಳಗಳು, ಬೆವರು ಮೂತ್ರಗಳೆ ನೀರೂಟೆ, ರೋಮವೇ ತೃಣ, ಸೂಕ್ಷ್ಮವೇ ಕೆಸರು, ಅಷ್ಟಮದವೇ ಕಾಡುಕೋಣ, ಸಪ್ತ ವ್ಯಸನಗಳೇ ಕಾಡಾಕಳು, ಆನಂದಮಯಕೋಶವೇ ಜ್ಞಾನಿಗಳ ಆಶ್ರಮ. ಸುಮನ ಸುಬುದ್ದಿ ಸುಚಿತ್ರ ನಿರಹಂಕಾರಗಳೇ ಬ್ರಹ್ಮ ಧ್ಯಾನ ಮಾಡುವ ಋಷಿಗಳು, ವಿಷಯಾಸಕ್ತಿಯುಳ್ಳ ಮನಗಳೆ ಬೆಕ್ಕು, ಇಂದ್ರಿಯವೇ ಶುಭ್ರವರ್ಣದ ಇಲಿ, ಚಂಚಲ ಗುಣವೇ ಸಾರಂಗ, ವೈರಾಗ್ಯ ಮನವೇ ಮುಂಗುಲಿ, ವಿಕಾರಮಯ ಮನವೇ ಸರ್ಪ, ಸಂಕಲ್ಪ ಮನವೇ ಉಡ, ಜೀವವೇ ಶುಕ್ರ, ಮನವೇ ಮರ್ಕಟ ಏಳು ಪದರಿನ ಚರ್ಮವೇ ಏಳು ಸುತ್ತಿನ ಕೋಟೆ ಭುಜಗಳೇ ಕೊತ್ತಳ 100 ಸಣ್ಣ ನಾಡಿಗಳೆ ನೂರು ಬಾಜಾರಗಳು ರಕ್ತಾಶಯವೇ ಬಾವಿ, ಸಪ್ತಧಾತುಗಳೆ ನವರತ್ನ ಶುದ್ದ ಮತ್ತು ಸತ್ವ ಪ್ರಧಾನವಾದ ವಿದ್ಯ.... ಅಂದರೆ ನಮ್ಮ ಇಡೀ ದೇಹದಲ್ಲಿ ಆವರಿಸಿಕೊಂಡಿರುವ ಗುಣಗಳನ್ನು ಅಂಗ ಮತ್ತು ಪ್ರತ್ಯಂಗಗಳ ರೂಪದಲ್ಲಿ ವರ್ಣಿಸಲಾಗಿದೆ.


ಶ್ರೀದೇವಿಯು ಪರಬ್ರಹ್ಮ ಸ್ವರೂಪಿಣಿ .... ಪಂಚ ಭೂತಗಳಿಂದ ಉಂಟಾದವಳು ದೇವಿ. ಉರಿ ಮತ್ತು ಹೊಗೆಗಳು ಅಗ್ನಿಯಲ್ಲಿ ವ್ಯಾಪಿಸುತ್ತವೆಯಷ್ಟೇ.... ಹಾಗೆಯೇ ಧ್ಯಾನ ಶಕ್ತಿ ಮತ್ತು ಮಾಯೆಗಳು ಬ್ರಹ್ಮ ಸ್ವರೂಪದಲ್ಲಿ ವ್ಯಕ್ತವಾಗುತ್ತವೆ. ದೇವಿಯು ಚಿತ್ತ ಮತ್ತು ಶಕ್ತಿಯನ್ನು ಹೊಂದಿದ ಚೈತನ್ಯ ಸ್ವರೂಪಳು. ಮಾಯೆ ಎಂದರೆ ವಿದ್ಯೆ ಮತ್ತು ಅವಿದ್ಯೆ ಎಂಬ ಎರಡು ಪ್ರಕಾರಗಳು. ಶ್ರೀದೇವಿಯು ಸೃಷ್ಟಿಸಿದ ವಿಷ್ಣು ಬ್ರಹ್ಮ ರುದ್ರರಲ್ಲಿ


ಬ್ರಹ್ಮನು ರಜೋಗುಣ ಉಳ್ಳವನಾಗಿ ಸೃಷ್ಟಿಯ ಉತ್ಪತ್ತಿಗೆ ಕಾರಣನಾಗಿದ್ದರೆ ತಮೋ ಗುಣವುಳ್ಳ ವಿಷ್ಣು ಸೃಷ್ಟಿಯ ಸಂರಕ್ಷಣ ಕರ್ತನು, ಅಂತರಂಗದಲ್ಲಿ ಸತ್ವ ಗುಣ ಬಹಿರಂಗದಲ್ಲಿ ತಮೋ ಗುಣವುಳ್ಳ ರುದ್ರನು ಸೃಷ್ಟಿಯ ಲಯ ಕರ್ತನು. 


ಈ ಮೂವರಲ್ಲೂ ಸತ್ಯ ಶಮೆ-ದಮೆ ಶಾಂತಿ ಯೋಗ ಮತ್ತು ಅಣಿಮಾದಿ ವಿದ್ಯೆಗಳು ಇದ್ದವು. ಶ್ರೀದೇವಿಯು ಹರಿಹರ ಬ್ರಹ್ಮಾದಿ ದೇವಾನುದೇವತೆಗಳಿಗೆ ಒಡೆಯಳು.


ದೇವಿಯ ಆಜ್ಞೆಯಂತೆ ಆಕೆಯು ಸೃಷ್ಟಿಸಿದ ಹರಿ,ಹರ ಬ್ರಹ್ಮಾದಿಗಳು 14 ಲೋಕಗಳನ್ನು ಪಾಲಿಸಿದರು. ಈ 14 ಲೋಕಗಳು ಪಂಚ ಕರ್ಮೇಂದ್ರಿಯಗಳು ಪಂಚ ಜ್ಞಾನೇಂದ್ರಿಯಗಳು ಮತ್ತು ನಾಲ್ಕು ಅಂತಃಕರಣಗಳು.


ದೇವಿ ಮಹಾತ್ಮೆಯಲ್ಲಿ ಬರುವ ಎಲ್ಲ ರಾಕ್ಷಸರು ನಮ್ಮಲ್ಲಿ ಮನೆ ಮಾಡಿರುವ ಅರಿಷಡ್ವರ್ಗಗಳು. ಕಾಮ, ಕ್ರೋಧ, ಲೋಭ, ಮೋಹ,ಮದ  ಮತ್ತು ಮತ್ಸರಗಳು ಇವೇ ಆ ಅರಿ ಷಡ್ವರ್ಗಗಳು. ಆರಿ ಎಂದರೆ ವೈರಿ... ನಮ್ಮ ದೇಹ ಮತ್ತು ಮನಸ್ಸನ್ನು ಹಾಳು ಮಾಡುವ, ಗೊಂದಲಕ್ಕೆ ದೂಡುವ ಆರು ವಿಧದ ವೈರಿಗಳು ನಮ್ಮ ಜೀವನವನ್ನು ಅಧಃಪಾತಾಳಕ್ಕೆ ದೂಡಬಲ್ಲವು. ಈ ಅರಿಷಡ್ವರ್ಗಗಳನ್ನು ನಮ್ಮ ಅಧೀನದಲ್ಲಿ ಇಟ್ಟುಕೊಳ್ಳುವುದು ಎಂದರೆ ತನ್ನ ಸಂಗಾತಿಯಲ್ಲಿ ಮಾತ್ರ ಸಮಯೋಚಿತವಾದ ದಾಂಪತ್ಯ ತೃಪ್ತಿಯನ್ನು ಹೊಂದಬೇಕು, ಪಾಪಿಷ್ಟರಾದ ದುಷ್ಟ ಮಾನವರ ವಿಷಯದಲ್ಲಿ ಮಾತ್ರ ಕೋಪ ತಳೆಯಬೇಕು, ಸದ್ಧರ್ಮ ನಿರತ ಪುಣ್ಯ ಸಂಪಾದನೆಯಲ್ಲಿ ಲೋಭವನ್ನ ಅನುಸರಿಸಬೇಕು, ಸತ್ಪುರುಷರಲ್ಲಿ ಮೋಹ ಉಳ್ಳವರಾಗಬೇಕು, ಅನ್ಯಾಯದ ವಿಷಯದಲ್ಲಿ ನ್ಯಾಯ ನಿಷ್ಟುರತೆಯುಳ್ಳವರಾಗಬೇಕು, ದುಷ್ಟ ಕಾರ್ಯ ಮಾಡುವವರಲ್ಲಿ ಮತ್ಸರವುಳ್ಳವನಾಗಬೇಕು ಹೀಗೆ ಶಿಷ್ಟಾಚಾರಗಳನ್ನು ಹೊಂದಿದರೆ ಅರಿಷಡ್ವರ್ಗಗಳನ್ನು ಗೆಲ್ಲಬಹುದು. ಒಂದಾನೊಂದು ಕಾಲದಲ್ಲಿ ಇಂದ್ರಾದಿ ದೇವತೆಗಳು ಕೂಡ ಪರಬ್ರಹ್ಮ ವಸ್ತುವಿನ ಮಹಿಮೆಯನ್ನು ಅರಿಯದೆ ಅರಿಷಡ್ವರ್ಗಗಳ ದಾಸಾನುದಾಸರಾಗಿ ತಮ್ಮ ಶಕ್ತಿಯನ್ನು ಕಳೆದುಕೊಂಡರು. ಮುಂದೆ ಅರಿವು ತಿಳಿದೆದ್ದು ದೇವಿಗೆ ಶರಣಾಗತರಾಗಲು ದೇವಿಯು ಅವರನ್ನು ರಕ್ಷಿಸಿದಳು.


ಶ್ರೀದೇವಿ ಮಹಾತ್ಮೆಯಲ್ಲಿ ಬರುವ ಶುಂಭ ಮತ್ತು ನಿಶುಂಭರು ಕೂಡ ಅಹಂ ಮತ್ತು ಇದಂ ಎಂಬ ಅಹಂಕಾರಗಳಿಗೆ ಗುರಿಯಾದವರು. ಧೂಮ್ರಲೋಚನನು ಕೋಪಾವೇಶ ವಿಕಾರವುಳ್ಳ ರಾಕ್ಷಸ. ಚಂಡ ಮುಂಡರು ದುರಾಗ್ರಹಗಳನ್ನು ಬಿಡದಿರುವ ಮತ್ತು ಸಾಯಲೇ ಬಾರದೆಂಬ ದುರಾಸೆಯನ್ನು ಹೊಂದಿರುವ ರಾಕ್ಷಸರು. ಶ್ರೀದೇವಿ ಮಹಾತ್ಮೆಯಲ್ಲಿ ಬರುವ ರಕ್ತಬೀಜನು ಮನುಷ್ಯನ ಅತಿಯಾದ ಆಸೆಗೆ ದೃಷ್ಟಾಂತವಾಗಿ ಬರುತ್ತಾನೆ ಆಸೆಗೆ ಆದಿ ಇಲ್ಲ ಅಂತ್ಯವೂ ಇಲ್ಲ... ಕಂಡ ಕಂಡದ್ದನ್ನೆಲ್ಲ ಬಯಸುವ ಆಸೆಯನ್ನು  ರಾಗ ಅಥವಾ ಮೋಹ ಎನ್ನಬಹುದು ಇದನ್ನು ಕೂಡ ನಾವು ಅಂಕೆಯಲ್ಲಿ ಇಟ್ಟುಕೊಳ್ಳಲೇಬೇಕು ಎಂಬ ಉದ್ದೇಶದಿಂದಲೇ ದೇವಿಯು ರಕ್ತ ಬೀಜಾಸುರನನ್ನು ಕೊಂದಳು. ಆಸೆ ಎನ್ನುವುದು ಅತೃಪ್ತಿಯನ್ನು ಉಂಟುಮಾಡುತ್ತದೆ ಆಸೆ ನಮಗೆ ಅಜ್ಞಾನವನ್ನು ದೌರ್ಬಲ್ಯವನ್ನು ನೀಡುತ್ತದೆ. ನಮ್ಮ ಜೀವಿತಾವಧಿಯಲ್ಲಿ ನಮಗೆ ಎಷ್ಟು ಲಭ್ಯವೋ ಅಷ್ಟನ್ನು ಮಾತ್ರ ನಾವು ಪಡೆಯಲು ಸಾಧ್ಯ.


ನಮ್ಮ ಲಭ್ಯತೆಯ ಕೊಡ ಸಮುದ್ರ ಹೊಕ್ಕರು ಬಾವಿಯಲ್ಲೇ ತುಂಬಿದರು ಕೊಡಕ್ಕೆ ಎಷ್ಟು ಹಿಡಿಯುತ್ತದೆಯೋ ಅಷ್ಟನ್ನು ಮಾತ್ರ ತುಂಬಲು ಸಾಧ್ಯ ಅಂದರೆ ನಮ್ಮ ಯೋಗದಲ್ಲಿ ಬರೆದಿರುವ ಪ್ರಮಾಣದಷ್ಟು ಮಾತ್ರ ನಮಗೆ ಲಭ್ಯವಾಗುತ್ತದೆ. ನಾನು ನನ್ನದು ಎಂಬ ಅಹಂಕಾರವೇ ನಿಶುಂಬ ಎಂಬ ರಾಕ್ಷಸ ರೂಪದಲ್ಲಿದ್ದರೆ  ದುರಹಂಕಾರವು ಶುಂಭನ ರೂಪದಲ್ಲಿ ಬರುತ್ತದೆ. ಅಹಂ ನಾಶವಾಗಿ ನಿಜ ಸ್ವರೂಪದ ವಿಚಾರ ಹೊಳೆಯಬೇಕಾದರೆ ಪ್ರಧಾನ ಶತ್ರುವಾದ ದುರಹಂಕಾರ ಅಳಿದು ಹೋಗಬೇಕು. ನಾನು, ನನ್ನದು, ನನ್ನಿಂದ, ನನಗಾಗಿ ಎಂಬ ಭಾವಗಳು ನಮ್ಮನ್ನು ಸುಳ್ಳಿನ ಸಾಮ್ರಾಜ್ಯದಲ್ಲಿ ಇರಿಸುತ್ತವೆ. ನಮ್ಮ ಈ ದೇಹವು ನಮ್ಮದಲ್ಲ... ನಮ್ಮ ಕಾರಣ ಶರೀರವು ನಾವು ವಾಸಿಸುವ ಮನೆ. ನಾವು ಧರಿಸಿದ ಅಂಗಿ ಇದ್ದಂತೆ, ಒಂದಲ್ಲ ಒಂದು ದಿನ ನಾವು ಇದನ್ನು ಬಿಟ್ಟು ಹೋಗಲೇಬೇಕು. ಆದ್ದರಿಂದ ಆತ್ಮಜ್ಞಾನವು ಅತಿ ಮುಖ್ಯ ಎಂಬುದನ್ನು ಶ್ರೀದೇವಿ ಮಹಾತ್ಮೆಯಲ್ಲಿ ಶೃಂಗ ನಿಶುಂಭರ ಸಂಹಾರದ ಮೂಲಕ ಅರಿಯಬಹುದು. ಇಲ್ಲಿ ಶ್ರೀದೇವಿಯು ಒಬ್ಬೊಬ್ಬ ರಾಕ್ಷಸನನ್ನು ನಿರ್ನಾಮ ಮಾಡುವುದು ನಮ್ಮಲ್ಲಿರುವ ಅಷ್ಟಮದಗಳನ್ನು, ಅರಿಷಡ್ವರ್ಗಗಳನ್ನು ನಾವು ತಮ್ಮ ವ್ಯಕ್ತಿತ್ವದ ನಿರ್ಮಾಣ ಮಾಡಿಕೊಳ್ಳುವ ಮೂಲಕ, ಸಚಿಂತನೆ ಸದಾಚಾರಗಳನ್ನು ಪಾಲಿಸುವುದರ ಮೂಲಕ ನಿರ್ನಾಮಗೊಳಿಸ ಬೇಕೆಂಬ ಅಂತಿಮ ಸತ್ಯದ ಸಂಕೇತವೇ ಆಗಿದೆ.


ಪಾರ್ವತಿಯು ದೇವಿಯ ಅವತಾರವೇ. ಆಕೆಯು ಶಿವನನ್ನು ವರಿಸಿದರೂ ಶಿವನಿಗಿಂತ ಆಕೆಯೇ ಒಂದು ಕೈ ಮೇಲು ಎಂದು ಹೇಳಬಹುದು. ಆದ್ದರಿಂದಲೇ ಶಿವನು ಆಕೆಗೆ ತನ್ನ ದೇಹದ ಅರ್ಧ ಭಾಗವನ್ನು ನೀಡಿ ಅರ್ಧನಾರೀಶ್ವರನೆನಿಸಿಕೊಂಡನು. ಭಗವಾನ್ ಮಹಾವಿಷ್ಣುವಿನ ದಶಾವತಾರಗಳು ದೇವಿಯ ಸ್ವರೂಪಗಳೇ ಆಗಿವೆ. ಪಾರ್ವತಿಯ ಅವತಾರಗಳೇ ಶ್ರೀ ಚಕ್ರದ ಬಿಂದು, ಬೀಜ, ದಳಗಳು. ಮಣಿಪುರ ವಿಶುದ್ಧಿ ಚಕ್ರಗಳು ಪಾರ್ವತಿಯ ವಾಸಸ್ಥಾನಗಳು. ಪಾರ್ವತಿಯೇ ಜೀವ ಸುಧೆ. ಆಕೆಯೇ ನಾದರೂಪಳು ಸರ್ವ ಜೀವರಾಶಿಗಳು, ಕ್ರಿಮಿ, ಕೀಟ, ದೇವ, ಅಸುರಾಸುರ, ಪರಬ್ರಹ್ಮ ಎಲ್ಲವೂ ಆಕೆಯೇ. ಪಾರ್ವತಿಯ ದೆಶೆಯಿಂದಲೇ ಶಿವನು ಪರಶಿವ ಎಂದು ಕರೆಯಲ್ಪಡುತ್ತಾನೆ.... ಆದ್ದರಿಂದಲೇ ಎಲ್ಲಾ ಮಂಗಳ ಕಾರ್ಯಕ್ರಮಗಳಲ್ಲಿ ಪಾರ್ವತಿ ಪತಿ ಹರ ಹರ ಮಹಾದೇವ ಎಂದು ಪಾರ್ವತಿ ದೇವಿಯನ್ನು ಮೊದಲುಗೊಂಡು ಪೂಜಿಸುತ್ತಾರೆ. ಗಂಗೆಯನ್ನು ಧರಿಸಿ ಗಂಗಾಧರ, ಉಮೆಯ ಪತಿ ಮಹೇಶ್ವರ, ಗೌರಿಯ ಪತಿ ಗೌರಿಶಂಕರ ಎಂದು ಶಿವನು ಕರೆಯಲ್ಪಡುವುದು ದೇವಿಯ ಮಹಿಮೆಯಿಂದಲೇ. ಈ ಸೃಷ್ಟಿಯಲ್ಲಿ ಗಂಡಿನಷ್ಟೇ ಅಲ್ಲ ಗಂಡಿಗಿಂತ ಹೆಚ್ಚಿನ ಜವಾಬ್ದಾರಿಯನ್ನು, ಅಸೀಮಶಕ್ತಿಯನ್ನು ಅಪಾರ ಕರುಣೆಯನ್ನು ಹೊಂದಿದವಳು ಶ್ರೀದೇವಿ.


ಅಂತೆಯೇ ದೇವಿಯನ್ನು ಸ್ತೋತ್ರ ಜಪ ತಪ ಧ್ಯಾನಗಳನ್ನು ಮಾಡುವ ಮೂಲಕ ಪೂಜಿಸಬಹುದು. ದೇವಿ ಮಹಾತ್ಮೆಯನ್ನು ಓದಲು ಭಯ ಬೇಕಿಲ್ಲ... ಭಕ್ತಿ ಮತ್ತು ವಿಶ್ವಾಸಗಳು ಇದ್ದರೆ ಸಾಕು. ಯಾವುದೇ ರೀತಿಯ ಕಾಮನೆಗಳನ್ನು ಹೊಂದದೆ ನಿಷ್ಕಾಮ ಭಕ್ತಿಯಿಂದ ದೇವರನ್ನು ಪೂಜಿಸಿ ಪ್ರಾರ್ಥಿಸಬೇಕು.


ದೇವಿಯು ಸಾಧಕನನ್ನು ಸದಾ ಬೆಂಗಾವಲಾಗಿ ನಿಂತು ಸಲಹುತ್ತಾಳೆ. ದೇವಿಯು ಅಪಾರ ಕರುಣಾಸಾಗರಳು. ಮಾತೃ ಹೃದಯಿ, ಮಮತಾಮಯಿ. ಆಕೆಯು ಸತ್ ಚಿತ್ ಆನಂದಗಳನ್ನು ಹೊಂದಿರುವ ಸಚ್ಚಿದಾನಂದ ಪರಬ್ರಹ್ಮ ಸ್ವರೂಪಿ, ಎಂದೂ ನಾಶವಾಗದ ಪೂರ್ಣ ಚೈತನ್ಯ ಸ್ವರೂಪಿ. ಆದ್ದರಿಂದ ದೇವಿಯನ್ನು ಸತತವಾಗಿ ಪೂಜಿಸಿ ಆರಾಧಿಸಿ ಆಕೆಯ ಕೃಪೆಗೆ ಪಾತ್ರರಾಗಬೇಕು.

ಎಲ್ಲರಿಗೂ ಆ ದೇವಿಯು ಆಯುರಾರೋಗ್ಯ ಸುಖ ಸಮೃದ್ಧಿಯನ್ನು ನೀಡಲಿ ಎಂದು ಹೃತ್ಪೂರ್ವಕವಾಗಿ ಹಾರೈಸುತ್ತಾ, ಎಲ್ಲರಿಗೂ ಮತ್ತೊಮ್ಮೆ ನವರಾತ್ರಿಯ ಶುಭಾಶಯಗಳು.


- ವೀಣಾ ಹೇಮಂತ್ ಗೌಡ ಪಾಟೀಲ್, ಮುಂಡರಗಿ, ಗದಗ್


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 



Post a Comment

0 Comments
Post a Comment (0)
Maruti Suzuki Festival of Colours
Maruti Suzuki Festival of Colours
To Top