ದೀಪಾವಳಿಯ ಮುನ್ನಾದಿನ 30ನೇ ತಾರೀಖಿನಂದು ಡಾ.ಮೀರಾ ಎಚ್‌ಎನ್‌ರವರ ಏಕವ್ಯಕ್ತಿ ರಂಗ ಪ್ರಯೋಗವು ನಗರದ ಮಲ್ಲೇಶ್ವರಂ ಲೇಡಿಸ್ ಅಸೋಸಿಯೇಷನ್‌ನ ಆರ್ ಆರ್ ಆಡಿಟೋರಿಯಂನಲ್ಲಿ ನಡೆಯಿತು. ಪಂಚವರ್ಣೆ ಮಹಾಭಾರತದ ನಾಯಕಿ ಪಾಂಚಾಲಿ ಮತ್ತು ಮಹಾಭಾರತದ ಅನೇಕ ಸ್ತ್ರೀ ಪಾತ್ರಗಳ ಆಂತರ್ಯವನ್ನು ಮಹಾಭಾರತ ಹಾಗೂ ಸ್ತ್ರೀ ಭಾರತದ ಮನವನ್ನು ಬಿಚ್ಚಿಟ್ಟ ಅದ್ಭುತವಾದ ಏಕವ್ಯಕ್ತಿ ಅಭಿನಯವಾಗಿತ್ತು. ಮೂಲತಃ ಕಾಲೇಜು ಪ್ರಾಧ್ಯಾಪಕಿ ಹಾಗೂ ಕೂಚುಪುಡಿ ನೃತ್ಯಗಾತಿಯಾಗಿರುವ ಡಾ.ಮೀರಾರವರು ಸತತ 75 ನಿಮಿಷಗಳ ನಟನೆಯನ್ನು ಡಾ.ಬೇಲೂರು ರಘುನಂದನ್‌ರವರ ರಚನೆ, ವಿನ್ಯಾಸ ಮತ್ತು ನಿರ್ದೇಶನದಲ್ಲಿ ಬಹಳ ಅದ್ಭುತವಾಗಿ ನಟಿಸಿ ರಂಗಮಂದಿರಲ್ಲಿ ತುಂಬಿದ್ದ 250ಕ್ಕೂ ಹೆಚ್ಚು ಜನರನ್ನು ಮಂತ್ರಮುಗ್ಧಗೊಳಿಸಿದರು.
ಮಹಿಳಾ ಸಂವೇದನೆಗಳ ಅಭಿವ್ಯಕ್ತಿಗೆ ಅತ್ಯುತ್ತಮ ರಚನೆಗಳನ್ನು ಮಾಡಿರುವ ಡಾ. ಬೇಲೂರು ರಘುನಂದನ್‌ರವರ ಮತ್ತೊಂದು ಏಕವ್ಯಕ್ತಿ ಪ್ರಯೋಗ ಪಂಚವರ್ಣೆಯಾಗಿದ್ದು ಇದರಲ್ಲಿ ದ್ರೌಪದಿಯ ಆಂತರ್ಯ ತುಮುಲಗಳನ್ನು ಬಹಳ ಸೂಕ್ಷ್ಮವಾಗಿ ಪ್ರದರ್ಶಿಸುತ್ತಾ ಇಂದಿಗೂ ಕೂಡ ಸ್ತ್ರೀಯರ ಮನಸಿನ ತುಮುಲಗಳನ್ನು ಮುಟ್ಟುವ ಅದ್ಭುತವಾದ ರಚನೆಯನ್ನು ಅವರ ಭಾವಕ್ಕೆ ತಕ್ಕಂತೆ ಬಹಳ ಅದ್ಭುತವಾಗಿ ನಟಿಸಿರುವ ಡಾ.ಮೀರಾರವರ ಅಭಿನಯವು ಖ್ಯಾತನಟಿ ಬಿ. ಸರೋಜಾದೇವಿಯವರ ನಟನೆಯನ್ನು ನೆನಪಿಸಿತು. ಅವರ ಡೈಲಾಗ್ ಡೆಲಿವರಿ ಮತ್ತು ಅವರ ಧ್ವನಿ ಬಹಳ ಆಕರ್ಷಕವೂ ಮತ್ತು ಮನಸೂರೆಗೊಂಡಿತು, ರಂಗಮಂಚದ ಸಂಪೂರ್ಣ ಸ್ಥಳವನ್ನು ಬಹಳ ಬಳಸಿಕೊಂಡು ಮಹಾಭಾರತದ ಲೋಕಕ್ಕೆ ಪ್ರೇಕ್ಷಕರನ್ನು ಕರೆದೊಯ್ದರು . ಪ್ರತಿಯೊಂದು ಪಾತ್ರವನ್ನು ಮಾಡುವಾಗಲೂ ಆಯಾ ವ್ಯಕ್ತಿಯ ಭಾವಾಭಿವ್ಯಕ್ತಿಯನ್ನು ಬಹಳ ಸೊಗಸಾಗಿ ನಟಿಸಿದರು. ರಂಗದಲ್ಲಿ ಬಳಸಿದ ರಂಗ ಪರಿಕರಗಳು ಪ್ರಾಚೀನತೆಯ ಜೊತೆಗೆ ಇಂದಿನ ಕಾಲದ ಮನೋಭಾವಕ್ಕೂ ಸೂಕ್ತವೆನಿಸುವ ರೀತಿಯಲ್ಲಿತ್ತು. ಬೆಳಕಿನ ನಿರ್ವಹಣೆ ಕೂಡ ಸನ್ನಿವೇಶಕ್ಕೆ ಸೂಕ್ತವಾಗಿತ್ತು. ನಿರ್ದೇಶಕ ಡಾ. ರಘುನಂದನ್‌ರವರು ಬಹಳ ಹಿಂದೆಯೇ ತಯಾರಾದ ಪಂಚವರ್ಣೆಯ ಪಾತ್ರಕ್ಕೆ ಸೂಕ್ತರಾದ ನಟಿ ದೊರಕಿ ಈಗ ರಂಗಾಭಿನಯಕ್ಕೆ ಬಂದಿದೆ ಎಂದರು.
ಸತತ ಮೂರು ತಿಂಗಳ ಅಭ್ಯಾಸದಿಂದ ಮೊದಲ ಪ್ರದರ್ಶನ ಬಹಳ ಅದ್ಭುತವಾಗಿತ್ತು. ರಂಗಸಜ್ಜಿಕೆ, ರಂಗ ಪರಿಕರ ಮತ್ತು ಸಂಗೀತ ನಿರ್ವಹಣೆ ಮಾಡಿದ ಶ್ರೀನಿ ಸಂಪತ್‌ಲಕ್ಷ್ಮಿಯವರ ಪರಿಶ್ರಮವೂ ಶ್ಲಾಘನೀಯ. ಬೆಳಕಿನ ವಿನ್ಯಾಸವನ್ನು ರವಿಶಂಕರ್ ಬೆಳಕುರವರ ಬಹಳ ಅಪ್ಯಾಯಮಾನವಾಗುವಂತೆ ಮಾಡಿದ್ದರು. ಹಿನ್ನೆಲೆ ಸಂಗೀತವನ್ನು ನೀಡಿ ಗಾಯನವನ್ನು ಮಾಡಿದ ಶ್ರೀನಿವಾಸ್ ಪಿ ಎಚ್‌ರವರ ಹಿನ್ನೆಲೆ ಗಾಯನ ನಾಟಕಕ್ಕೆ ಮೆರುಗನ್ನು ನೀಡಿತು. ಪಂಚವರ್ಣೆಯ ಯಶಸ್ವಿ ಪ್ರದರ್ಶನದಲ್ಲಿ 6 ಜನರ ಪುರುಷರ ಸಹಕಾರದಿಂದ ಡಾ. ಮೀರಾ ಎಚ್ ಎನ್‌ರವರ ಅಭಿನಯ ಅವರು ಕೆಲಸ ಮಾಡುತ್ತಿರುವ ಸಂಸ್ಥೆಯಾದ ಮಲ್ಲೇಶ್ವರಂ ಲೇಡಿಸ್ ಅಸೋಸಿಯೇಷನ್‌ರವರ ಸಂಪೂರ್ಣ ಸಹಕಾರ ಅವರ ಕುಟುಂಬದವರ ಪ್ರೀತಿ ವಿಶ್ವಾಸಗಳಿಂದ ನೆರವೇರಿತು.
ಕಾರ್ಯಕ್ರಮಕ್ಕೆ ಆಗಮಿಸಿದ್ದ ಕರ್ನಾಟಕ ನಾಟಕ ಅಕಾಡೆಮಿಯ ಸದಸ್ಯ ಜಗದೀಶ ಜಾಲರವರು ಡಾ.ರಘುನಂದನರವರ ನಿರ್ದೇಶನವನ್ನು ಮತ್ತು ಡಾ. ಮೀರಾರವರ ಅಭಿನಯವನ್ನು ಶ್ಲಾಘಿಸಿದರು. ಪ್ರಸಿದ್ಧ ರಂಗಚಿಂತಕರು ಮತ್ತು ಪತ್ರಕರ್ತ ದಿಲಾವರ್ ರಾಮದುರ್ಗರವರು ಮಹಿಳೆಯಾದ ಕಾರಣ ದ್ರೌಪದಿ ಅಂತಹ ಪರಿಸ್ಥಿತಿಯನ್ನು ಎದುರಿಸಿದಳು. ಪುರುಷರಾಗಿದ್ದರೆ ಸಾಧ್ಯವಾಗುತ್ತಿರಲಿಲ್ಲವೇನೋ ಒಂದೇ ವ್ಯಕ್ತಿಯಲ್ಲಿ ಎಲ್ಲ ಗುಣಗಳು ಸಿಗದ ಕಾರಣ ದ್ರೌಪದಿ ಕೇಳಿದ ವರಕ್ಕೆ ಐದು ಜನ ಪತಿಯನ್ನು ನೀಡಿ ವರ ಮತ್ತು ಶಿಕ್ಷೆಯನ್ನು ಕೊಟ್ಟಿರಬಹುದೆಂಬ ಭಾವನೆಯನ್ನು ವ್ಯಕ್ತ ಪಡಿಸಿ ಡಾ.ಮೀರಾರವರ ನಟನೆಯನ್ನು ತಂಡದ ಪರಿಶ್ರಮವನ್ನು ಪ್ರಶಂಸಿಸಿದರು. ಡಾ. ಮೀರಾ ಅವರಿಗೆ ತಮ್ಮ ಸಂಸ್ಥೆಯಿಂದ ಸಹಕಾರ ನೀಡಿದ ಎಂ ಎಲ್‌ಎ ಸಂಸ್ಥೆಯ ಕಾರ್ಯದರ್ಶಿಗಳಾದ ಡಾ.ಲಕ್ಷ್ಮಿ ವಿ ಮತ್ತು ಅಧ್ಯಕ್ಷರಾದ ಶೈಲಜಾ ಶ್ರೀನಿವಾಸ್ ಹಾಗೂ ಕಾಲೇಜಿನ ಪ್ರಾಂಶುಪಾಲೆ ಪದ್ಮಜಾರವರು ಮೀರಾರವರ ಪ್ರತಿಭೆ ಹಾಗೂ ಪರಿಶ್ರಮಕ್ಕೆ ಪ್ರಶಂಸಿಸಿದರು.
ಪಂಚವರ್ಣೆಯ ಮನದ ಮಾತು ದ್ರೌಪದಿ ಸ್ವಯಂವರದಿಂದ ಆರಂಭವಾಗಿ ಮದುವೆಯ ವಿಚಾರದಲ್ಲಿ ಹೆಣ್ಣು ಮಕ್ಕಳ ಆಸೆ ಅಭಿಪ್ರಾಯವನ್ನು ಕೇಳದೇ ನಿಷ್ಕರ್ಷ ಮಾಡುವ ಪದ್ಧತಿ ಪುರಾಣಕಾಲದಿಂದಲೂ ಇರುವ ಬಗೆಗೆ, ಯುಧಿಷ್ಠಿರನ ಶಾಂತ ಸ್ವಭಾವ, ಭೀಮನ ಶೌರ್ಯ, ಅರ್ಜುನನ ಪ್ರಣಯ ಪೂರ್ವಕ ಸಂತೈಸುವಿಕೆ ನಕುಲ ಸಹದೇವರ ಆರಾಧನೆಯ ಭಾವವನ್ನು ಎಲ್ಲವನ್ನೂ ಬಯಸದೇ ಹೋದರೂ ಅವಳ ಪ್ರೀತಿಯ ಹುಡುಕಾಟ, ಮನದ ದುಗುಡ, ಮಕ್ಕಳ ಬಗೆಗಿನ ಕಾಳಜಿ, ವನವಾಸ ಪಡಿಪಾಟಲು, ಎಲ್ಲವನ್ನೂ ಸೊಗಸಾಗಿ ನಟಿಸಿದರು. ಇಂದಿನ ಕಾಲದಲ್ಲಿ 5 ಪತಿಗಳು ಇಲ್ಲದೇ ಹೋದರೂ ಒಂದೇ ಪತಿಯ ಹತ್ತಾರು ಸ್ವಭಾವಗಳನ್ನು ನಿಭಾಯಿಸುವ ಸಹಿಸಿ ಹೊಂದಿಕೊಂಡು ಹೋಗುವ ಇಂದಿನ ಮಹಿಳೆ ಕೂಡ ಪಂಚವರ್ಣೆಯೇ ಆಗಿದ್ದಾಳೆ ಎಂಬ ಸಂದೇಶದೊಂದಿಗೆ ಭಾರತವು ಕೂಡ ಮಹಿಳೆಯರ ಅನೇಕ ತ್ಯಾಗ ಬಲಿದಾನದೊಂದಿಗೆ ಮುನ್ನಡೆಯುತ್ತಿರುವ ತ್ರಿವರ್ಣೆ ಎಂಬುದನ್ನು ಬಹಳ ಮನೋಜ್ಞವಾಗಿ ಬಿಂಬಿಸುವಲ್ಲಿ ಡಾ. ರಘುನಂದನ್‌ರವರು ಮತ್ತು ಅಭಿನಯಿಸುವಲ್ಲಿ ಡಾ. ಮೀರಾ ಎಚ್ ಎನ್ ರವರು ಯಶಸ್ವಿಯಾಗಿದ್ದಾರೆ. ಮೊದಲೆಲ್ಲಾ ಧಾರಾವಾಹಿ ಮತ್ತು ನಾಟಕಗಳಲ್ಲಿ ನಟಿಸಿರುವ ಡಾ. ಮೀರಾರವರು ಮೊಟ್ಟ ಮೊದಲ ಭಾರಿಗೆ ಏಕವ್ಯಕ್ತಿ ರಂಗ ಪ್ರಯೋಗವನ್ನು ಯಶಸ್ವಿಯಾಗಿ ನಡೆಸಿ ಮೆಚ್ಚುಗೆಯನ್ನು ಪಡೆದರು.
- ಮಾಧುರಿ ದೇಶಪಾಂಡೆ, ಬೆಂಗಳೂರು
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ