ನವರಾತ್ರಿ ವಿಶೇಷ: ಕಟೀಲು ಶ್ರೀ ದುರ್ಗಾ ಪರಮೇಶ್ವರೀ ದೇವಿ

Upayuktha
0


ಮಂಗಳೂರಿನಿಂದ ಪೂರ್ವದ ಕಡೆಗೆ ಪ್ರಯಾಣ ಮಾಡುವಾಗ 27 ಕಿ.ಮೀ ದೂರದಲ್ಲಿ ಸಿಗುವ ಕಟೀಲು ದುರ್ಗಾ ಪರಮೇಶ್ವರಿ ದೇವಾಲಯವು ಸ್ವಯಂ ಉದ್ಭವ ಮೂರ್ತಿಯೊಂದು ಸುಂದರ ವಾಸ್ತುಶಿಲ್ಪ ಹೊಂದಿರುವ ದೇವಾಲಯವಾಗಿದೆ. ಮತ್ತು ಕರ್ನಾಟಕದ ಪ್ರಮುಖ ಶಕ್ತಿಪೀಠಗಳಲ್ಲಿ ಒಂದಾಗಿದೆ. ನಂದಿನಿ ನದೀಯಿಂದ ದ್ವೀಪದಂತಿರುವ ಈ ಊರಿನ ದೇವಿಯು ಬಹಳ ಪ್ರಸಿದ್ಧ ಮತ್ತು ಸತ್ವವುಳ್ಳದ ದೇವಿಯಾಗಿದ್ದಾಳೆ. ಈ ದೇವಾಲಯದಲ್ಲಿ ಅನ್ನದಾನ ವಿದ್ಯಾದಾನ ಮಾಡುತ್ತಿರುವ ಕರ್ನಾಟಕದ 4ನೇ ಶ್ರೀಮಂತ ದೇವಾಲಯವಾಗಿದೆ.


ಇಲ್ಲಿಯ ಸ್ಥಳ ಮಹಾತ್ಮೆಯನ್ನು ತಿಳಿಯುವುದಾದರೆ ಆದಿ ಶಕ್ತಿಯು ಶುಂಬ ನಿಶುಂಭನನ್ನು ಕೊಂದ ಮೇಲೆ ಅವರ ಮಂತ್ರಿಯಾದ  ಅರುಣಾಸುರನೆಂಬ ದೈತ್ಯನು ಎಲ್ಲ ದೈತ್ಯರನ್ನು ಕೂಡಿಸಿ ಭೂಮಿಯ ಮೇಲೆ ಉಪದ್ರವ ಕೊಡಲು ಆರಂಭಿಸಿದನು ಯಜ್ಞ ಯಾಗಾದಿಗಳು ನಡೆಯದಂತೆ ತಡೆದರು, ಆ ಅರುಣಾಸುರನಿಗೆ ಬ್ರಹ್ಮ ದೇವರ ವರವಿತ್ತು. ಅದೆನೇಂದರೆ ಎಂದರೆ 2 ಅಥವಾ ನಾಲ್ಕು ಕಾಲುಗಳ ಪ್ರಾಣಿಯು ಅವನನ್ನು ಸಂಹರಿಸಲು ಆಗಬಾರದು ಎಂದು. ಈ ವರವನ್ನು ಪಡೆಯಲು ಬ್ರಹ್ಮದೇವರ ಕುರಿತು ತಪಸ್ಸು ಮಾಡಿ ವಿಶೇಷ ವರವನ್ನು ಪಡೆದು ಜನರಿಗೆ ಉಪದ್ರವವನ್ನು ಕೊಡುತ್ತಿರುತ್ತಾನೆ.


ದೇವತೆಗಳು ದೈತ್ಯರ ಉಪದ್ರವವನ್ನುತಾಳಲಾರದೇ, ಯಜ್ಞ ಯಾಗದಿಗಳ ಹವಿಸ್ಸು ಇಲ್ಲದೇ ಮಳೆಯನ್ನು ನಿಲ್ಲಿಸಿದರು. ಆಗ ಮತ್ತಷ್ಟು ದರೋಡೆ ಮತ್ತು ಹಿಂಸೆಯನ್ನು ಮಾಡಿದರು. ಮಹರ್ಷಿ ಜಾಬಾಲಿಯು ಬ್ರಹ್ಮದೇವರಿಗೆ ಯಜ್ಞ ಮಾಡಲು ಪವಿತ್ರವಾದ ಹಸುವನ್ನು ಅವರ ಸಹಾಯಕ್ಕೆ ಕಳುಹಿಸೆಂದು ಬೇಡಿಕೊಂಡರು. ಬ್ರಹ್ಮದೇವರು ಹೇಳಿದಾಗ ಕಾಮಧೇನುವಿನ ಮಗಳು ನಂದಿನಿ ಬರಲು ಒಪ್ಪದೇ ಇದ್ದಾಗ ನದಿಯಾಗಿ ಹರಿಯೆಂದು ಶಾಪವನ್ನು ನೀಡಿದರು. ನಂದಿನಿಯು ತಪ್ಪನ್ನು ಕ್ಷಮಿಸಲು ಕೇಳಿದಾಗ ಋಷಿಗಳು ಆದಿಶಕ್ತಿಯನ್ನು ಮೊರೆ ಹೋಗಲು ಹೇಳುತ್ತಾರೆ, ಆಗ  ನಂದಿನಿಯು ಆದಿಶಕ್ತಿಗೆ ಬೇಡುತ್ತಾಳೆ. ಆಗ ದೇವಿಯು ನೀನು ನದಿಯ ರೂಪದಲ್ಲಿ ಹರಿಯಲೇ ಬೇಕು. ನಂತರ ನಿನ್ನ ಮಗಳಾಗಿ ಜನಿಸುವೆ ಎಂದು ಹೇಳುತ್ತಾಳೆ. ಆಗ ನಂದಿನಿಯು ಕಟೀಲಿನಲ್ಲಿ ನದೀಯ ರೂಪದಲ್ಲಿ ಹರಿಯಲು ಆರಂಭಿಸಿದಳು.  


ದೇವಿಯು ಸುಂದರ ಮೋಹಿನಿ ರೂಪವನ್ನು ಧರಿಸಿದಳು ಮತ್ತು ಉದ್ಯಾನದಲ್ಲಿ ಸಂಚರಿಸುತ್ತಿರುತ್ತಾಳೆ. ಅವಳ ರೂಪಕ್ಕೆ ಮರುಳಾಗಿ ದೈತ್ಯನು ಅವಳನ್ನು ಮದುವೆಯಾಗೆಂದು ಕೇಳಿ ಅವಳನ್ನು ಮುಟ್ಟಲು ಹೋದಾಗ ದುರ್ಗಾದೇವಿಯು ಕಲ್ಲಿನ ರೂಪದಲ್ಲಿ ಕುಳಿತುಕೊಳ್ಳುತ್ತಾಳೆ. ಅರುಣಾಸುರನು ಕಲ್ಲನ್ನು ಪುಡಿ ಪುಡಿ ಮಾಡಲು ಪ್ರಯತ್ನಿಸುತ್ತಾನೆ. ಆಗ ದೇವಿಯು ದುಂಬಿಯ ರೂಪದಲ್ಲಿ ಬಹಳಷ್ಟು ದುಂಬಿಗಳ ಗುಂಪೊಂದರ ಜೊತೆಗೆ ಬಂದು ಅರುಣಾಸುರನನ್ನು ಕೊಲ್ಲುತ್ತವೆ. ಈ ಅಸುರನ ಸಂಹಾರವನ್ನು ಸಂಭ್ರಮಿಸಲು ಋಷಿ ಮುನಿಗಳು ಕಟೀಲಿನಲ್ಲಿ ದುರ್ಗಾ ಪರಮೇಶ್ವರಿಯ ದೇವಾಲಯವನ್ನು ಸ್ಥಾಪಿಸಿದರು. ಅಲ್ಲಿ ಲಿಂಗರೂಪದಲ್ಲಿ ವಾಸಿಸುತ್ತಾಳೆ. 


ಕಟೀಲು ದೇವಾಲಯವು ಕೇರಳ ಶಿಲ್ಪದಲ್ಲಿದೆ. ದೇವಾಲಯದ ಮುಂದೆ ದೊಡ್ಡದಾದ ಬಂಡೆಯಿದೆ. ದೇವಿ ಇಲ್ಲಿಂದಲೇ ದುಂಬಿಯ ರೂಪದಲ್ಲಿ ಹೊರಬಂದಳೆಂದು ಹೇಳುತ್ತಾರೆ. ಅವಳಿಗೆ ಭ್ರಮರಾಂಬಾ ಎಂಬುದಾಗಿಯೂ ಕರೆಯುತ್ತಾರೆ. ಈ ಬಂಡೆಗೂ ಮೂರು ಕಾಲವೂ ದಿನ ನಿತ್ಯವೂ ಮಾಡಲಾಗುತ್ತದೆ. ದೇವಿಗೆ ಪುಷ್ಪಾಲಂಕಾರ ವಿಶೇಷ ಅದರಲ್ಲೂ ನವರಾತ್ರಿಯಲ್ಲಿ ವಿಶೇಷ ಪೂಜೆಗಳು ನಡೆಯುತ್ತವೆ. ಇಲ್ಲಿ ಪಟ್ಟೆ ಸೀರೆ ಹರಕೆ ಪ್ರಸಿದ್ಧವಾಗಿದೆ. ಕಟೀಲಿನ ದೇವಿಗೆ ಪಟ್ಟೆ ಸೀರೆ ಅರ್ಪಿಸುವ ಹರಕೆ ಹೊತ್ತರೆ ಬೇಡಿದ ಇಷ್ಟಾರ್ಥಗಳನ್ನು ನೀಡುತ್ತಾಳೆ ಎಂಬ ನಂಬಿಕೆ ಇದೆ. ಇಲ್ಲಿ ಎಳನೀರಿನ ಅಭಿಷಷೇಕವು ದೇವಿಗೆ ಬಹಳ ಪ್ರಿಯವೆಂದು ಹೇಳುತ್ತಾರೆ. 


- ಮಾಧುರಿ ದೇಶಪಾಂಡೆ, ಬೆಂಗಳೂರು



ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 

Post a Comment

0 Comments
Post a Comment (0)
To Top