ಧಾರವಾಡ: 93 ವರ್ಷ ಪೂರೈಸಿದ ಹಿರಿಯ ಹರಿದಾಸಿ ಶ್ರೀಮತಿ ನಾಮಗಿರಿಯಮ್ಮನಿಗೆ ಮೈತ್ರೇಯಿ ಕನ್ನಡ ಮಹಿಳಾ ಹರಿದಾಸ ಟ್ರಸ್ಟ್ ನ ವತಿಯಿಂದ ಸೆ.5ರಂದು ಅವರ ಸ್ವಗೃಹದಲ್ಲಿ ಜೀವಮಾನ ಸಾಧನೆ ಪ್ರಶಸ್ತಿಯನ್ನು ನೀಡಿ ಗೌರವಿಸಿದರು.
ಹರಿದಾಸಿ ಶ್ರೀಮತಿ ನಾಮಗಿರಿಯಮ್ಮ ಶೇಷಗಿರಿರಾವ್ ಇವರ ತಂದೆ ಕೃಷ್ಣಮೂರ್ತಿರಾವ್ ತಾಯಿ ಶಾರದಮ್ಮ ಪತಿ ದಿವಂಗತ ಹೆಚ್ ಆರ್ ಶೇಷಗಿರಿರಾವ್ ಇವರಿಗೆ ಇಬ್ಬರು ಪುತ್ರಿಯರು ಹಾಗೂ ಒಬ್ಬ ಪುತ್ರ.
ಶ್ರೀಮತಿ ನಾಮಗಿರಿಯಮ್ಮನವರು ಸೋಸಲೆ ಮಠಾಧೀಶ ಶ್ರೀ ಶ್ರೀ ವಿದ್ಯಾಪ್ರಸನ್ನತೀರ್ಥರ ಪೂರ್ವಾಶ್ರಮದ ಅಕ್ಕನ ಮಗಳು. ಹಿಂದಿನ ಕಾಲದಲ್ಲಿ ಹೊರಗಡೆ ಹೋಗಿ ಕಲಿಯಲು ಅವಕಾಶವಿರಲಿಲ್ಲ ರೇಡಿಯೋದಲ್ಲಿ ಬರುವ ಹಾಡುಗಳನ್ನು ಕೇಳಿ, ತಾವೂ ಸಂಗೀತ ಕಲಿಯಬೇಕೆಂಬ ಆಸಕ್ತಿ ಬೆಳೆಸಿಕೊಂಡವರು. ಇವರು ಉತ್ತಮ ಗಾಯಕಿ ಅಷ್ಟೇ ಅಲ್ಲ, ಶ್ರೇಷ್ಠ ರಚನೆಕಾರರೂ ಕೂಡಾ. ತಮ್ಮ ಕೃತಿಗಳನ್ನು ರಚಿಸಿ ಸ್ವತಃ ತಾವೇ ರಾಗ ಹಾಕಿ ಹಾಡುತ್ತಾರೆ. ರಚನೆಯಾದ ಮರುಕ್ಷಣವೇ ರಾಗ ತಾಳ ಗುರುತಿಸುವ ಪ್ರತಿಭೆ ಇವರಲ್ಲಿದೆ. ಇವರಿಗೆ ದಾಸ ಸಾಹಿತ್ಯದಲ್ಲಿ ಅಪಾರ ಒಲವು. ಪತಿ ಹೆಚ್ ಆರ್. ಶೇಷಗಿರಿರಾವ್ ಇವರು, ಟಿ ಎ ಪೈ ಮ್ಯಾನೇಜಮೆಂಟ್ ಮಣಿಪಾಲ್ ಸಂಸ್ಥೆಯ ಸ್ಥಾಪಕ ನಿರ್ದೇಶಕರಾಗಿದ್ದವರು.
ಅವರು ಮದ್ರಾಸ್ ದಲ್ಲಿ ಕೆಲಸದಲ್ಲಿದ್ದಾಗ, ಒಮ್ಮೆ 1970-72 ರಲ್ಲಿ ಇವರು ಅಡುಗೆ ಮಾಡುತ್ತಿರುವಾಗ ಒಮ್ಮೆಲೆ ಮನದಲ್ಲಿ ಶಬ್ದಗಳು ಹಾಡು ಮೂಡಿ ಬಂದಂತೆನಿಸಿ ಅಲ್ಲಿಯೇ ಇದ್ದ ಇದ್ದಲಿನಿಂದ ಗೋಡೆಯ ಮೇಲೆ "ಮಂತ್ರಾಲಯ ನಿಲಯ" ಎಂಬ ಹಾಡನ್ನು ಬರೆದರು. ನಂತರ ಮತ್ತೆ ಅಡುಗೆಯ ಸಮಯದಲ್ಲೇ ಎರಡನೆಯ ಹಾಡು, “ಕಂಡೆ ಗುರುಚರಣ” ಎಂಬ ಹಾಡನ್ನೂ ಗೋಡೆಯ ಮೇಲೆ ಇದ್ದಲಿಂದ ಬರೆದರು. ಆಗ ಅವರಿಗೆ ನನ್ನಲ್ಲಿ ಏನೋ ಪ್ರೇರಣೆ ಚೈತನ್ಯವಿದೆ ಎಂದುಕೊಂಡು ತಾವು ಬರೆದಿರುವ ಹಾಡಿಗಳನ್ನು ಪುಸ್ತಕದಲ್ಲಿ ಬರೆದಿಡತೊಡಗಿದರು. ಯಜಮಾನರು ಮತ್ತು ವಿದ್ವಾನರಾದ ತಂದೆಯ ಕೃಷ್ಣಮೂರ್ತಿ ರಾವ್ ರವರಲ್ಲಿ ಹೇಳಿಕೊಂಡಾಗ ತಂದೆಯೇ ಇವರಿಗೆ "ಶೇಷಾದ್ರಿ ಕೃಷ್ಣ" ಎಂಬ ಅಂಕಿತ ನೀಡಿದರು. ಅಂದಿನಿಂದ ಇದೇ ಅಂಕಿತದಿಂದ ಸುಮಾರು 300 ಕ್ಕೂ ಹೆಚ್ಚು ಕೃತಿಗಳನ್ನು ರಚಿಸಿದರು.
ಕೇವಲ 6 ನೇ ತರಗತಿ ಓದಿದ ಇವರು, ಮನೆಯ ಧಾರ್ಮಿಕ ವಾತಾವರಣದಲ್ಲಿ ಭಾರತ ಭಾಗವತಾದಿ ಗ್ರಂಥಗಳನ್ನು ಶಾಸ್ತ್ರಗಳನ್ನು ಕೇಳಿ ಕಲಿತಿದ್ದೇ ಹೆಚ್ಚು. ಅದ್ಭುತ ಪ್ರತಿಭೆಯ ಇವರ ಕೃತಿಗಳು 15-20 ವರ್ಷದವರೆಗೆ ಯಾರಿಗೂ ಪರಿಚಯವಿರಲಿಲ್ಲ. ನಂತರ ಶೇಷಗಿರಿರಾವ್ ಅವರಿಗೆ ಮಣಿಪಾಲ್ ಗೆ ವರ್ಗಾವಣೆಯಾದಾಗ, B.G.ಶೃಂಗಾರಮ್ಮ, M.B. ಕಿರೀಟಿಯಮ್ಮ, ಸುಶೀಲಮ್ಮ ಅವರಲ್ಲಿ ಅಲ್ಪ ಸಂಗೀತ ಅಭ್ಯಾಸ ಮಾಡಿದರು. ಅಲ್ಲಿ ವಿದೂಷಿ ಲಕ್ಷ್ಮಿ ಅಯ್ಯಂಗಾರ ಅವರಿಗೆ ತಮ್ಮ ರಚನೆಯ ಹಾಡುಗಳನ್ನು ನೀಡಿದರು. ಅಯ್ಯಂಗಾರ ದಂಪತಿಗಳಿಬ್ಬರು ಇವರ ಪ್ರತಿಭೆಗೆ ಪುರಸ್ಕಾರ ಸಿಗಲೆಬೇಕೆಂದು ಪೂರ್ಣ ಜವಾಬ್ದಾರಿ ತೆಗೆದುಕೊಂಡು, 2007ರಲ್ಲಿ ಭಕ್ತಿಗೀತೆಗಳ ಸಂಕಲನ "ಭಕ್ತಿ ಮುಕ್ತಾವಳಿ" ಎಂಬ ಪುಸ್ತಕ ಬಿಡುಗಡೆ ಮಾಡಿದರು.ಬರೆದು ಪೆಟ್ಟಿಗೆಯಲ್ಲಿ ಭದ್ರವಾಗಿಟ್ಟಿದ್ದ ಹಾಡುಗಳಿಗೆ ಅಂದು ಬೆಳಕಿನ ಭಾಗ್ಯ ಕಂಡವು.
ತದ ನಂತರವೂ ಕೃತಿಗಳ ರಚನೆ ಮಾಡಿರುವರು ಈ ಇಳಿ ವಯಸ್ಸಿನಲ್ಲೂ ಆಗಾಗ ಒಮ್ಮೆ ಬರೆಯುತ್ತಾರೆ ಹಾಡುತ್ತಾರೆ. ಬದುಕಿನುದ್ದಕ್ಕೂ ಸಂಗೀತ ಸಾಹಿತ್ಯಗಳೇ ನನಗೆ ಸಂಗಾತಿ. ದೇವರ ದಯದಿಂದ ನನ್ನ ಕೆಲಸ ನಾನೇ ಮಾಡಿಕೊಳ್ಳುವಷ್ಟು ಆರೋಗ್ಯದಿಂದ ಇದ್ದೇನೆ ಎಂದು ಹೇಳುತ್ತಾರೆ. ಇತ್ತಿಚೆಗೆ ಗೌರಿ ಪೂಜೆಯ ಸಂಪ್ರದಾಯದ ಹಾಡನ್ನು ಬಹಳ ಸುಂದರವಾಗಿ ಬರೆದಿದ್ದಾರೆ.
ಶ್ರೀಮತಿ ನಾಮಗಿರಿಯಮ್ಮ ಅವರ ಈ ಸಾಧನೆಯನ್ನು ಗೌರವಿಸಿ, ಶ್ರೀಮತಿ ನಾಮಗಿರಿಯಮ್ಮನಿಗೆ ಮೈತ್ರೇಯಿ ಕನ್ನಡ ಮಹಿಳಾ ಹರಿದಾಸ ಟ್ರಸ್ಟ್ ನ ವತಿಯಿಂದ ಅಧ್ಯಕ್ಷರಾದ ಡಾ. ಸುಧಾ ದೇಶಪಾಂಡೆ, ಉಪಾಧ್ಯಕರಾದ ಡಾ. ಶಾಂತಾ ರಘೂತ್ತಮ, ಪ್ರಧಾನ ಕಾರ್ಯದರ್ಶಿ ಡಾ. ವೃಂದಾ ಸಂಗಮ್, ಸದಸ್ಯರಾದ ಶ್ರೀಮತಿ ಸುನಂದ ಹಾಗೂ ಶ್ರೀಮತಿ ಭಾರ್ಗವಿ ಗೋಪಾಲಾಚಾರ್ ಇವರುಗಳೆಲ್ಲರು ಶ್ರೀಮತಿ ನಾಮಗಿರಿಯಮ್ಮನಿಗೆ ಅವರ ಸ್ವಗೃಹದಲ್ಲಿ ಜೀವಮಾನ ಸಾಧನೆ ಪ್ರಶಸ್ತಿ ನೀಡಿ ಗೌರವಿಸಿ, ಆಯುರಾರೋಗ್ಯವನ್ನು ಭಗವಂತ ನೀಡಲಿ ಎಂದು ಪ್ರಾರ್ಥಿಸಿದರು.
- ವೀಣಾ ಬರಗಿ
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


