ಹಾಸ್ಯ ನಾಟಕಗಳ ರೂವಾರಿಗಳಲ್ಲೊಬ್ಬರಾದ ದಾಶರಥಿ ದೀಕ್ಷಿತ್ ಅವರು ಅನೇಕ ನಾಟಕಗಳನ್ನು ರಚಿಸಿ, ಚಲನಚಿತ್ರಗಳಲ್ಲೂ ಅಭಿನಯಿಸಿದ ಕಲಾವಿದರು. ನಗೆ ಬರಹಗಳು, ನಗೆ ನಾಟಕಗಳು, ಕಾದಂಬರಿಗಳನ್ನು ಬರೆದು, ಸೂತ್ರದ ಬೊಂಬೆಯಾಟಗಾರನಾಗಿಯೂ ಪ್ರಖ್ಯಾತರಾದ ಅದ್ಭುತ ಲೇಖಕರು. ಇವರ ಹಿರಿಯರು ಮೂಲತಃ ಮಲೆನಾಡಿನ ಪ್ರದೇಶವಾದ ಕಾಫಿ ಬೆಳೆಯುವ ತಾಲೂಕು ಕೇಂದ್ರ ಮೂಡಿಗೆರೆಯವರು. ಬಾಲಾಜಿ ದೀಕ್ಷಿತ್ ಮತ್ತು ಗಂಗೂಬಾಯಿ ಅವರ ಪುತ್ರನಾಗಿ, ತಾ॥6-2-1921 ರಂದು ಜನಿಸಿದರು. ದಾಶರಥಿ ದೀಕ್ಷಿತ್ ಅವರ ಪ್ರಾರಂಭಿಕ ಬಾಲ್ಯದ ಶಿಕ್ಷಣ ದಾವಣಗೆರೆ, ಮೊಳಕಾಲ್ಮೂರು, ಚಿತ್ರದುರ್ಗ ಮುಂತಾದ ಕಡೆ ಮಾಡಬೇಕಾಯಿತು. ಬೆಂಗಳೂರಿನ ಕಾಲೇಜಿನಲ್ಲಿ ಇಂಟರ್ ಮಿಡಿಯಟ್ ಪಾಸು ಮಾಡಿ, ಕೆಲ ಕಾಲ ಕರ್ನಾಟಕ ಸರ್ಕಾರದ ವಿದ್ಯುಚ್ಛಕ್ತಿ ಇಲಾಖೆಯಲ್ಲಿ ಕೆಲಸ ಮಾಡಿ, ಬೆಂಗಳೂರಿನ ವಿಮಾನ ಕಾಖಾ೯ನೆಯಲ್ಲಿ ಸೇವೆ ಪ್ರಾರಂಭಿಸಿದರು.
ತಾವು ಬರೆದ ಮೊಟ್ಟಮೊದಲ ಕಥೆಯನ್ನು ಪ್ರಖ್ಯಾತ ಹಾಸ್ಯ ಬರಹಗಾರರಾದ ನಾಡಿಗೇರ್ ಕೃಷ್ಣರಾಯರಿಗೆ ನೀಡಿದ್ದರು. ತದನಂತರ ಆ ಕಥೆ ಪ್ರಜಾಮತದಲ್ಲಿ ಪ್ರಕಟವಾಯಿತು. ಪ್ರಖ್ಯಾತ ಕಾದಂಬರಿಗಾರರಾದ ತ.ರಾ.ಸುಬ್ಬರಾಯರ ಸಲಹೆಯಂತೆ, ದಾಶರಥಿ ದೀಕ್ಷಿತ್ ಅವರು ಹಾಸ್ಯ ಬರಹಗಳನ್ನು ಬರೆಯಲು ಪ್ರಾರಂಭಿಸಿದರು. ಬಾಲ್ಯದಲ್ಲಿ ನಾಟಕಗಳ ಒಲವಿದ್ದ ದೀಕ್ಷಿತರು "ಅಜ್ಜಿ ಆಸ್ತಿ" ಎನ್ನುವ ನಾಟಕ ಕಥಾ ರಚನೆ ಮಾಡಿ, ಪ್ರಯೋಗ ಮಾಡಿದಾಗ ಅದ್ಭುತವಾಗಿ ಮೆಚ್ಚುಗೆ ಪಡೆಯಿತು.
ತದನಂತರ ಅಳಿಯದೇವರು, ಲಂಬೋದರ, ಬೆದರು ಬೊಂಬೆ ಹೀಗೆ ಅನೇಕ ನಾಟಕಗಳನ್ನು ರಚಿಸಿದರು. ಇವರ ಬಹುತೇಕ ನಾಟಕಗಳು, ಶಾಲಾ ಕಾಲೇಜಿನ ವಾಷಿ೯ಕೋತ್ಸವದ ಕಾಯ೯ಕ್ರಮಗಳಲ್ಲಿ ಅಭಿನಯಿಸಲ್ಪಟ್ಟವು. ಕಾದಂಬರಿಗಳ ಸಾರ್ವಭೌಮ ಅ.ನ.ಕೃ ಅವರು, ಇವರ ಅನೇಕ ಲಘು ಬರಹಗಳ ಪ್ರೇತ ಸಂಸಾರ ಸಂಕಲನಕ್ಕೆ ಮುನ್ನುಡಿ ಬರೆದರು. ಈ ಸಂಕಲನ ಕೊರವಂಜಿ ಹಾಸ್ಯ ಪತ್ರಿಕೆಯ ಸಂಪಾದಕರಾಗಿದ್ದ ಎಂ ಶಿವರಾಂ (ರಾಶಿ) ಮೆಚ್ಚಿ, ತಮ್ಮಪತ್ರಿಕೆಯಲ್ಲಿ ಬರೆಯಲು ದೀಕ್ಷಿತರಿಗೆ ಪ್ರೋತ್ಸಾಹ ನೀಡಿದರು. ಅನೇಕ ಲಘುಬರಹಗಳನ್ನು ಬರೆದ ದೀಕ್ಷಿತರ, "ಪಕೋಡಪ್ರಿಯ ದಫೇದಾರ್ ದೇರಣ್ಣ "ಸಂಕಲನಕ್ಕೆ ಡಿ ವಿ ಗುಂಡಪ್ಪನವರು ಮುನ್ನುಡಿ ಬರೆದಿದ್ದು ವಿಶೇಷ!
ದಾಶರಥಿ ದೀಕ್ಷಿತ್ ಅವರು ತಮ್ಮ ಪ್ರಪ್ರಥಮ ಕಾದಂಬರಿಯಾದ "ಬಾಳಬಂಧನ "ಬರೆದರು ತದನಂತರ, ಅನೇಕ ಹಾಸ್ಯ ಕಾದಂಬರಿಗಳನ್ನು ಬರೆದರು. ಮಾವನ ಮನೆ,ಗಂಡಾಗಿ ಕಾಡಿದ್ದ ಗುಂಡ,ಮರಳಿ ಮಠಕ್ಕೆ ಎಂಬ ಪ್ರಸಿದ್ಧ ಕಾದಂಬರಿಗಳು ಜನ ಮೆಚ್ಚುಗೆಗೆ ಪಾತ್ರವಾದವು. ಇಂಗ್ಲೆಂಡ್ ನ ಪ್ರವಾಸದ ಅನುಭವದಿಂದ, "ಗಾಂಪರ ಗುಂಪು"ಎಂಬ ನಗೆ ನಾಟಕವನ್ನು ಬರೆದರು. ಸಿಡಿಲು ಮರಿ, ಡಾ॥ಬ್ರಹ್ಮಚಾರಿ, ತಂಬೂರಿ ತಮ್ಮಯ್ಯ, ಅಜ್ಜನ ಅವಾಂತರ, ಮೊದಲಾದ ನಾಟಕಗಳು, ಮತ್ತು 12 ಕಾದಂಬರಿಗಳನ್ನು, 12 ನಗೆ ಬರಹ ಸಂಕಲನಗಳನ್ನು ಬರೆದು ನಾಡಿಗೆ ನೀಡಿದ ಮಹನೀಯರು.
ಮೈಸೂರು ಪಪೆಟಿಯರ್ಸ್ ಎಂಬ ಸಂಸ್ಥೆ ಸ್ಥಾಪಿಸಿ, ಸೂತ್ರ ಬೊಂಬೆಯಾಟ ಪ್ರದರ್ಶನವನ್ನೂ ಏರ್ಪಡಿಸಿದ ನಾಟಕಕಾರ. ಸಂಸ್ಕಾರ, ಅಬಚೂರಿನ ಪೋಸ್ಟ್ ಆಫೀಸ್, ಮುಯ್ಯಿ, ಫಣಿಯಮ್ಮ, ಭಾಗ್ಯದ ಲಕ್ಷ್ಮೀ ಬಾರಮ್ಮ, ಹೀಗೆ ಅನೇಕ ಚಲನಚಿತ್ರಗಳಲ್ಲೂ ಅಭಿನಯಿಸಿ ಪ್ರಖ್ಯಾತರಾದರು. ಇವರ ಪುತ್ರ ಲೋಕನಾಥ್ ದೀಕ್ಷಿತ್ ಸಹ ಉತ್ತಮ ಹಾಸ್ಯ ಬರಹಗಾರರು. ದಾಶರಥಿ ದೀಕ್ಷಿತರು ಎಲ್ಲಾ ಕಲೆಗಳಲ್ಲಿ ಕೈಯಾಡಿಸಿ,ಅದರಲ್ಲೂ ಹಾಸ್ಯ ನಾಟಕಗಳು, ಕಾದಂಬರಿಗಳು, ಸೂತ್ರ ಬೊಂಬೆಯಾಟ ಹೀಗೆ ಅನೇಕ ಪ್ರಕಾರಗಳಲ್ಲಿ ಖ್ಯಾತರಾಗಿ, ಅಪಾರ ಜನಮೆಚ್ಚುಗೆಗೆ ಪಾತ್ರರಾಗಿ ಪ್ರೇಕ್ಷಕರನ್ನು ನಗೆಗಡಲಿನಲ್ಲಿ ಮುಳುಗಿಸಿ, 28-8-1984ರಂದು ನಗೆ ಲೋಕದಿಂದ ಮರೆಯಾದರು.
ಶ್ರೀಧರ ರಾಯಸಂ
ಗಿರಿನಗರ, ಬೆಂಗಳೂರು.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ