ರಾಜ್ಯದ ಅತೀ ಹಿರಿಯ ಸಂತ ಶ್ರೀ ತಂಬಿಹಳ್ಳಿ ಮಠಾಧೀಶರಿಗೆ 93 ವಸಂತ

Upayuktha
0

ಶ್ರೀ ವಿದ್ಯಾಸಾಗರ ಮಾಧವ ತೀರ್ಥರಿಗೆ ಇಂದು ಅಭಿವಂದನ ಸಮಾರಂಭ 





ಉಡುಪಿ: ಪ್ರಾಯಃ, ಪ್ರಸ್ತುತ ಕರ್ನಾಟಕದ ಎಲ್ಲ ಮತ ಪರಂಪರೆಯ ಮಠಾಧೀಶರುಗಳ ಪೈಕಿ ಅತ್ಯಂತ ಹಿರಿಯ ವಯಸ್ಸಿನವರಾಗಿರುವ ಜಗದ್ಗುರು ಮಧ್ವಾಚಾರ್ಯ ಸಂಸ್ಥಾನ ಶ್ರೀ ತಂಬಿಹಳ್ಳಿ ಮಾಧವ ತೀರ್ಥ ಮಠದ 28ನೇ ಯತಿಗಳಾಗಿರುವ ಶ್ರೀ ಶ್ರೀ ವಿದ್ಯಾಸಾಗರ ಮಾಧವ ತೀರ್ಥ ಶ್ರೀಪಾದರಿಗೆ ಇದೀಗ 93 ವಸಂತಗಳ ಸಾರ್ಥಕ ಸಂಭ್ರಮ.


ಆ ನಿಮಿತ್ತವಾಗಿ ಇವತ್ತು 13/102024 ಭಾನುವಾರ ಬೆಂಗಳೂರಿನ ಪೂರ್ಣಪ್ರಜ್ಞ ವಿದ್ಯಾಪೀಠದಲ್ಲಿ ಪರಮಪೂಜ್ಯರುಗಳಾದ ಶ್ರೀ ಪೇಜಾವರ ಶ್ರೀ ವಿಶ್ವಪ್ರಸನ್ನ ತೀರ್ಥ ಶ್ರೀಪಾದರು, ಶ್ರೀ ಮಂತ್ರಾಲಯ ರಾಘವೇಂದ್ರ ಮಠದ ಶ್ರೀ ಶ್ರೀ ಸುಬುಧೇಂದ್ರ ತೀರ್ಥ ಶ್ರೀಪಾದರು, ಶ್ರೀ ಸೋಸಲೆ ವ್ಯಾಸರಾಜ ಮಠದ ಶ್ರೀ ಶ್ರೀ ವಿದ್ಯಾಶ್ರೀಶತೀರ್ಥ ಶ್ರೀಪಾದರು ಮತ್ತು ಇನ್ನಿತರ ಅನೇಕ ಮಠಾಧೀಶರು, ವಿವಿಧ ಕ್ಷೇತ್ರಗಳ ಗಣ್ಯ ಮಹನೀಯರು ಹಾಗೂ ಅಸಂಖ್ಯ ಭಕ್ತರ  ಉಪಸ್ಥಿತಿಯಲ್ಲಿ ಶ್ರೀಗಳವರ ಅಭಿವಂದನೋತ್ಸವವು ನೆರವೇರುತ್ತಿದೆ.‌ ಮುಂಜಾನೆಯಿಂದ ವಿವಿಧ ಧಾರ್ಮಿಕ ವಿಧಿ ವಿಧಾನಗಳು ಮತ್ತು ಸಂಜೆ ಬೃಹತ್ ಸಭಾ ಕಾರ್ಯಕ್ರಮ ನಡೆಯಲಿದ್ದು ಹಿರಿಯ ಸಂತ ಶ್ರೇಷ್ಠರನ್ನು ನಾಡಿನ ಸಮಸ್ತ ಆಸ್ತಿಕ ಸಮೂಹದ ಪರವಾಗಿ ಅಭಿವಂದಿಸುವ ಅತ್ಯಂತ ಸಂದರ್ಭೋಚಿತ ಕಾರ್ಯಕ್ರಮ ನಡೆಯುತ್ತಿರುವುದು ಬಹಳ ಸಂತೋಷದ ಸಂಗತಿ.


ಜಗದ್ಗುರು ಮಧ್ವಾಚಾರ್ಯರಿಂದ ಸ್ಥಾಪಿಸಲ್ಪಟ್ಟ ಮಾಧ್ವ ಮಠಗಳಲ್ಲಿ ಒಂದಾಗಿರುವ ತಂಬಿಹಳ್ಳಿ ಮಠವು ಕೋಲಾರ ಜಿಲ್ಲೆಯಲ್ಲಿದೆ . ಶ್ರೀ ಮಧ್ವ ಗುರುಗಳ ಶಿಷ್ಯರಾದ ಶ್ರೀ ಮಾಧವ ತೀರ್ಥರು ಈ ಮಠದ ಮೂಲಯತಿಗಳು.‌  ಶ್ರೀ ರಾಮದೇವರು ಮಠದ ಪಟ್ಡದ ದೇವರು .‌ಅನೇಕ ಮಹಾ ಮಹಾ ಜ್ಞಾನಿಗಳನ್ನು ಪ್ರಾತಃ ಸ್ಕರಣೀಯ ಯತಿಗಳನ್ನು ಕಂಡಿರುವ ಶ್ರೀ‌ಮಠವು ನಾಡಿನ ಧರ್ಮ ಪರಂಪರೆಗೆ ಶ್ರೇಷ್ಠ ಕೊಡುಗೆಗಳನ್ನು ನೀಡುತ್ತಲೇ ಬಂದಿದೆ.


ಶ್ರೀ ವಿದ್ಯಾಸಾಗರ ಮಾಧವ ತೀರ್ಥ ಶ್ರೀಪಾದರು ವೇದವೇದಾಂತಾದಿ ಸಕಲ ಶಾಸ್ತ್ರ ಸಂಪನ್ನರೂ, ಸಂಸ್ಕೃತ, ಕನ್ನಡ, ತಮಿಳು, ತೆಲುಗು, ಮಲಯಾಳ, ಇಂಗ್ಲೀಷ್ ಮೊದಲಾದ ಬಹುಭಾಷಾ ಕೋವಿದರೂ ಆಗಿದ್ದು, ಪರಮ ದಿವ್ಯ ಜ್ಞಾನ ಭಕ್ತಿ ವೈರಾಗ್ಯಗಳಿಂದ ಶ್ರೀ ಮಠದ ಪೀಠಾಧಿಕಾರಿಗಳಾಗಿ ದ್ವೈತ ವೇದಾಂತ ಸಾಮ್ರಾಜ್ಯವನ್ನು ಸಮರ್ಥವಾಗಿ ಮುನ್ನಡೆಸುತ್ತಿದ್ದಾರೆ. ಮಹಾಭಾರತದ ವಿಷಯವೊಂದರ ಮೇಲೆ ಅಧ್ಯಯನಾತ್ಮಕ ಪ್ರಬಂಧಕ್ಕಾಗಿ ಪಿ ಎಚ್ ಡಿ ಪದವಿಯನ್ನು ಪಡೆದಿರುವುದು ಹಾಗೂ ನೂರಾರು ಹರಿಕೀರ್ತನೆಗಳನ್ನೂ ರಚಿಸಿ ಕೀರ್ತನಕಾರರೂ ಆಗಿರುವುದು ಶ್ರೀಗಳವರ ವಿಶೇಷತೆಯಾಗಿದೆ.


ಈ ಎಲ್ಲ ಹಿನ್ನೆಲೆಯಲ್ಲಿ ವಯೋ ವೃದ್ಧರೂ ಜ್ಞಾನವೃದ್ಧರೂ ಆಗಿರುವ, 93 ಸಾರ್ಥಕ ವಸಂತಗಳನ್ನು ಕಾಣುವ ಮೂಲಕ ಪ್ರಸ್ತುತ ರಾಜ್ಯದ ಎಲ್ಲ ಮಠಾಧೀಶರು ಸಾಧು ಸಂತರ ಪೈಕಿ ಅತ್ಯಂತ ಹಿರಿಯರಾಗಿರುವ ಶ್ರೀ ಶ್ರೀ ವಿದ್ಯಾಸಾಗರ ಮಾಧವ ತೀರ್ಥ ಶ್ರೀಪಾದರ ಅಭಿವಂದನೋತ್ಸವ ಅತ್ಯಂತ ಔಚಿತ್ಯಪೂರ್ಣ ಮತ್ತು ಸಮಸ್ತ ಆಸ್ತಿಕ ಜನತೆಗೆ ಅದರಲ್ಲೂ ಸಮಸ್ತ ಮಾಧ್ವರೂ ಹೆಮ್ಮೆ ಅಭಿಮಾನ‌ಪಡಬೇಕಾದ ಸಂಗತಿಯಾಗಿದೆ .‌ಪರಮಪೂಜ್ಯರ ಅನುಗ್ರಹದ ಕೃಪೆ ನಮ್ಮೆಲ್ಲರ ಮೇಲೆ ಸದಾ ಇರಲಿ. ಪೂಜ್ಯರು ಇನ್ನೂ ಬಹುಕಾಲ ಆರೋಗ್ಯಪೂರ್ಣರಾಗಿ ನಮ್ಮೊಂದಿಗಿದ್ದು ಸಮಾಜಕ್ಕೆ ಉತ್ತಮ ಮಾರ್ಗದರ್ಶನ ನೀಡುವಂತಾಗಲೆಂದು ಶ್ರೀ ಮಧ್ವಗುರುಗಳ ಅಂರ್ತಯಾಮಿಯಾದ ಶ್ರೀ ಕೋದಂಡರಾಮದೇವರಲ್ಲಿ ಪ್ರಾರ್ಥಿಸೋಣ.


- ಜಿ ವಾಸುದೇವ ಭಟ್ ಪೆರಂಪಳ್ಳಿ



ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 

Post a Comment

0 Comments
Post a Comment (0)
Maruti Suzuki Festival of Colours
Maruti Suzuki Festival of Colours
To Top