ಬಳ್ಳಾರಿ: ಫ್ಯಾಮಿಲಿ ಪ್ಲಾನಿಂಗ್ ಅಸೋಸಿಯೇಷನ್ ಆಫ್ ಇಂಡಿಯಾ, ಬಳ್ಳಾರಿ ಹಾಗೂ ಬಳ್ಳಾರಿ ಜಿಲ್ಲಾ ಪೊಲೀಸ್ ರವರ ಸಹಯೋಗದೊಂದಿಗೆ ಬಳ್ಳಾರಿ ಜಿಲ್ಲೆಯ ಮಹಿಳಾ ಪೊಲೀಸ್ ಸಿಬ್ಬಂದಿಗೆ ಗರ್ಭಕೋಶದ ಕ್ಯಾನ್ಸರ್ ಮತ್ತು ಹೆಚ್ ಪಿ ವಿ ವ್ಯಾಕ್ಸಿನ್ ಬಗ್ಗೆ ಅರಿವು ಮತ್ತು ತಪಾಸಣಾ ಶಿಬಿರವನ್ನು ಬಳ್ಳಾರಿ ಜಿಲ್ಲಾ ಪೊಲೀಸ್ ಕಛೇರಿ ಸಭಾಂಗಣದಲ್ಲಿ ಆಯೋಜಿಸಲಾಗಿತ್ತು.
ಈ ಕಾರ್ಯಕ್ರಮದಲ್ಲಿ ಅಧ್ಯಕ್ಷತೆ ವಹಿಸಿದ್ದ ಬಳ್ಳಾರಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ಶೋಭರಾಣಿ ವಿ.ಜೆ ರವರು ಕಾರ್ಯಕ್ರಮವನ್ನುದ್ದೇಶಿಸಿ ಮಾತನಾಡುತ್ತಾ "ಗರ್ಭಕೋಶ ಮತ್ತು ಸ್ಥನ ಕ್ಯಾನ್ಸರ್ ನಲ್ಲಿ ಸಾವಿನ ಸಂಖ್ಯೆ ಹೆಚ್ಚು ಕಂಡು ಬರುತ್ತಿದೆ. ಅದರಲ್ಲಿಯೂ ಶೇಕಡಾ 77% ರಷ್ಟು ಮಹಿಳೆಯರಲ್ಲಿ ಸಾವು - ನೋವುಗಳು ಹೆಚ್ಚಳವಾಗಿದೆ ಅಂದರೆ ಭಾರತದಲ್ಲಿ ಪ್ರತಿ 8 ನಿಮಿಷಕ್ಕೆ ಒಬ್ಬ ಮಹಿಳೆ ಗರ್ಭಕಂಠದ ಕ್ಯಾನ್ಸರ್ ನಿಂದ ಸಾವನ್ನಪ್ಪುತ್ತಿದ್ದಾರೆ. ಹಾಗಾಗಿಯೇ ಇದರ ಬಗ್ಗೆ ಅರಿವು ಹಾಗೂ ತಪಾಸಣೆಯ ಮಹತ್ವ ಹೆಚ್ಚಿಸಬೇಕೆಂದು ಜಿಲ್ಲೆಯ ಎಲ್ಲಾ ಮಹಿಳಾ ಪೊಲೀಸ್ ಸಿಬ್ಬಂದಿಗೆ ಈ ಶಿಬಿರವನ್ನು ಏರ್ಪಡಿಸಲಾಗಿದೆ" ಎಂದು ಹೇಳಿದರು.
ಕಾರ್ಯಕ್ರಮದ ಉದ್ಘಾಟನೆ ನೆರವೇರಿಸಿ ಫ್ಯಾಮಿಲಿ ಪ್ಲಾನಿಂಗ್ ಅಸೋಸಿಯೇಷನ್ ಆಫ್ ಇಂಡಿಯಾದ ಬಳ್ಳಾರಿ ಶಾಖೆಯ ಅಧ್ಯಕ್ಷರಾದ ಟಿ.ಜಿ.ವಿಠ್ಠಲ್ ರವರು ಕಾರ್ಯಕ್ರಮದ ಕುರಿತು ಮಾತನಾಡಿದರು. "ನಮ್ಮ ಫ್ಯಾಮಿಲಿ ಪ್ಲಾನಿಂಗ್ ಅಸೋಸಿಯೇಷನ್ ಆಫ್ ಇಂಡಿಯಾ ಸಂಸ್ಥೆಯು ಕಳೆದ 75 ವರ್ಷಗಳಿಂದ ಆರೋಗ್ಯ ಸೇವೆ ನೀಡುತ್ತಾ ಬಂದಿದೆ. ಹಾಗೆಯೇ ಇದು ಲಾಭದಾಯಕ ಸಂಸ್ಥೆ ಅಲ್ಲದಿರುವುದರಿಂದ ಕೇವಲ ಆರೋಗ್ಯ ಸೇವೆಗಾಗಿ ಇರುವ ಸಂಸ್ಥೆ ಎಂದು ಹೇಳುತ್ತಾ ಆಧುನಿಕ ತಂತ್ರಜ್ಞಾನ ಬಳಸಿ ಗರ್ಭಕಂಠದ ಕ್ಯಾನ್ಸರ್ ಅನ್ನು ನಿಖರವಾಗಿ ಪತ್ತೆ ಹಚ್ಚಿ ಮತ್ತು ಅದರ ತಪಾಸಣೆಯನ್ನು ಅತೀ ಕಡಿಮೆ ವೆಚ್ಚದಲ್ಲಿ ಮಾಡಿಕೊಡುವ ವ್ಯವಸ್ಥೆಯನ್ನು ಹೊಂದಿದೆ ಎಂದು ತಿಳಿಸಿದರು.
ನಂತರ ಕಾರ್ಯಕ್ರಮದ ಸಂಪನ್ಮೂಲ ವ್ಯಕ್ತಿಗಳಾದ ಖ್ಯಾತ ಸ್ತ್ರೀರೋಗ ತಜ್ಞರು ಹಾಗೂ ಫ್ಯಾಮಿಲಿ ಪ್ಲಾನಿಂಗ್ ಅಸೋಸಿಯೇಷನ್ ಆಫ್ ಇಂಡಿಯಾದ ಬಳ್ಳಾರಿ ಶಾಖೆಯ ಸದಸ್ಯರೂ ಆದ ಡಾ. ಪ್ರಣೀತಾ ಅಜಯ್ ಮಾತನಾಡಿ, ಗರ್ಭಕೋಶದ ಕ್ಯಾನ್ಸರ್ ಹಾಗೂ ಸ್ಥನ ಕ್ಯಾನ್ಸರ್ ಹೇಗೆ ಹರಡುತ್ತದೆ ಹಾಗೂ ಅದು ಬಾರದ ಹಾಗೆ ಮುನ್ನೆಚ್ಚರಿಕೆ ಕ್ರಮ ವಹಿಸುವ ಕುರಿತು ಹಾಗೂ ಹೆಚ್ ಪಿ ವಿ ಲಸಿಕೆಯ ಕುರಿತು ಸುದೀರ್ಘ ಮಾಹಿತಿಯನ್ನು ತಿಳಿಸಿದರು.
ಕಾರ್ಯಕ್ರಮದಲ್ಲಿ ಫ್ಯಾಮಿಲಿ ಪ್ಲಾನಿಂಗ್ ಅಸೋಸಿಯೇಷನ್ ಆಫ್ ಇಂಡಿಯಾದ ಬಳ್ಳಾರಿ ಶಾಖೆಯ ಸದಸ್ಯ ವಿಷ್ಣು, ಶಾಖಾ ವ್ಯವಸ್ಥಾಪಕಿ ವಿಜಯಲಕ್ಷ್ಮಿ.ಎಸ್, ಕಾರ್ಯಕ್ರಮಾಧಿಕಾರಿ ಬಸವರಾಜ್, ಕ್ಷೇತ್ರ ಕಾರ್ಯಕರ್ತೆ ವಿಜಯಲಕ್ಷ್ಮಿ ರಾವ್, ಅಕೌಂಟ್ಸ್ ಆಫೀಸರ್ ಅನಿಲ್ ಶಾಖಾಪುರ್ ಹಾಗೂ ಫ್ಯಾಮಿಲಿ ಪ್ಲಾನಿಂಗ್ ಅಸೋಸಿಯೇಷನ್ ಆಫ್ ಇಂಡಿಯಾದ ಬಳ್ಳಾರಿ ಶಾಖೆಯ ಸಿಬ್ಬಂದಿ ವರ್ಗದವರು ಮತ್ತು ಬಳ್ಳಾರಿ ಜಿಲ್ಲೆಯ ಮಹಿಳಾ ಪೊಲೀಸ್ ವರ್ಗ ಉಪಸ್ಥಿತರಿದ್ದರು.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ