ಅರಳುಮಲ್ಲಿಗೆ ಪಾರ್ಥಸಾರಥಿಯವರಿಗೆ ವಿಷ್ಣುಗುಪ್ತ ರಾಷ್ಟ್ರೀಯ ಸಮ್ಮಾನ ಪ್ರದಾನ

Upayuktha
0

ಘನತತ್ವದ ಅನುಸಂಧಾನದಿಂದ ಜೀವನ ಪಾವನ: ರಾಘವೇಶ್ವರ ಶ್ರೀ


ಗೋಕರ್ಣ: ಘನತತ್ವವೊಂದರ ಅನುಸಂಧಾನದಲ್ಲಿ ತೊಡಗಿ ಇಡೀ ಜೀವನವನ್ನು ಅದಕ್ಕೆ ಮುಡಿಪಾಗಿ ಇಡುವುದು ಕೂಡಾ ಒಂದು ಬಗೆಯ ತಪಸ್ಸು. ಇದಕ್ಕೆ ಅದ್ಭುತ ಫಲವಿದೆ ಎಂದು ಶ್ರೀಮಜ್ಜಗದ್ಗುರು ಶಂಕರಾಚಾರ್ಯ ಶ್ರೀ ರಾಘವೇಶ್ವರ ಭಾರತೀ ಮಹಾಸ್ವಾಮೀಜಿ ನುಡಿದರು.


ಅಶೋಕೆಯ ಗುರುದೃಷ್ಟಿಯಲ್ಲಿ ಚಾತುರ್ಮಾಸ್ಯ ವ್ರತ ಕೈಗೊಂಡಿರುವ ಶ್ರೀಗಳು, 52ನೇ ದಿನವಾದ ಮಂಗಳವಾರ ಡಾ.ಅರಳುಮಲ್ಲಿಗೆ ಪಾರ್ಥಸಾರಥಿಯವರಿಗೆ ವಿಷ್ಣುಗುಪ್ತ ರಾಷ್ಟ್ರೀಯ ಸಮ್ಮಾನ ಪ್ರದಾನ ಮಾಡಿ ಶ್ರೀಗಳು ಆಶೀರ್ವಚನ ನೀಡಿದರು.


ವಿವಿವಿಯಿಂದ ಕೊಡಮಾಡುವ ವಿಶಿಷ್ಟ ಸನ್ಮಾನ ಇಂದು ಪಾರ್ಥಸಾರಥಿಯವರಿಗೆ ಸಂದಿದೆ. ಒಂದು ಘನತತ್ವಕ್ಕೆ ಮನಸ್ಸು ನೀಡಿದ ಅಪರೂದ ವ್ಯಕ್ತಿತ್ವ ಅರಳುಮಲ್ಲಿಗೆಯವರದ್ದು. ಘನತತ್ವದ ಅನುಸಂಧಾನದಲ್ಲಿ ಎಲ್ಲವನ್ನೂ ಮರೆಯಬೇಕು ಎನ್ನುವುದು ಹನುಮಮತನ ಉಪದೇಶ. ಹಾಗೆ ವಿಷ್ಣುಸಹಸ್ರನಾಮದ ಅನುಸಂಧಾನದಲ್ಲಿ ತನ್ನನ್ನೇ ಮರೆತ ಅಪರೂಪದ ವ್ಯಕ್ತಿ ಎಂದು ಬಣ್ಣಿಸಿದರು.


ಲಕ್ಷಾಂತರ ಮಂದಿ ವಿಷ್ಣುಸಹಸ್ರನಾಮ ಪಠಣಕ್ಕೆ ಅವರು ಪ್ರೇರಣೆಯಾಗಿದ್ದಾರೆ. ದೇಶ- ವಿದೇಶಗಳಲ್ಲಿ ಇದು ಪಸರಿಸಿದೆ. ಈ ಮೂಲಕ ಭಕ್ತರನ್ನು ಭಗವಂತನ ಜತೆ ಜೋಡಿಸಿದ ಪುಣ್ಯ ಅವರದ್ದು. ಗೋವರ್ಧನಗಿರಿಧಾರಿಯ ಕ್ಷೇತ್ರವನ್ನು ವಿಷ್ಣುಸಹಸ್ರನಾಮ ಕ್ಷೇತ್ರವಾಗಿ ಪರಿವರ್ತಿಸುವಲ್ಲಿ ಅವರ ಕೊಡುಗೆ ಅಪಾರ. ಇಂಥವರಿಗೆ ಪ್ರಶಸ್ತಿ ನೀಡುವ ಮೂಲಕ ಸಂಸ್ಥೆಗೆ ವಿಶೇಷ ಗೌರವ ಸಂದಿದೆ ಎಂದರು.


ಇಂದಿನ ಅನಾವರಣದ ಬಗ್ಗೆ ಉಲ್ಲೇಖಿಸಿ, ಕೃಷ್ಣಭಕ್ತಿಯ ಸಂಚಾರವಾಗಿ ನಮ್ಮ ಪೂರ್ವಾಚಾರ್ಯರು ಗೋವರ್ಧನಗಿರಿಧಾರಿ ಗೋಪಾಲಕೃಷ್ಣನ ಪ್ರತಿಷ್ಠಾಪನೆ ಮಾಡಿದ್ದು, ನಿರ್ಮಿಸಿದ ಅಪೂರ್ವ ದೇವಾಲಯದ ಅನಾವರಣ ಇಂದು ನಡೆದಿದೆ. ಮಠದ ಎದುರಿನ ಗುಡ್ಡದ ಮೇಲೆ ಗೋವುಗಳ ಮಧ್ಯೆ ಇದನ್ನು ವೈಭವೋಪೇತವಾಗಿ ನಿರ್ಮಿಸಲಾಯಿತು. ನೂರೆಂಟು ಸೋಪಾನಮಾಲಿಕೆ. ವಿಷ್ಣು ಸಹಸ್ರನಾಮದ 108 ಶ್ಲೋಕಗಳನ್ನು ಹೇಳುತ್ತಾ ಈ ಮೆಟ್ಟಲುಗಳನ್ನು ಏರಿದಾಗ ಕೃಷ್ಣನ ದರ್ಶನವಾಗುತ್ತದೆ. ಅದು ಪಂಚ ಪರಿಕ್ರಮ ಕ್ಷೇತ್ರವಾಗಿ ಪರಿವರ್ತನೆಯಾಗುತ್ತಿದೆ ಎಂದು ವಿವರಿಸಿದರು.


ಸೃಷ್ಟಿಯಲ್ಲಿ ನಾರಾಯಣನಿಲ್ಲದ ಸ್ಥಳವಿಲ್ಲ. ಅವನು ಸರ್ವತ್ರ ವ್ಯಾಪ್ತಿಯುಳ್ಳವನು. ಕೆಲವೊಮ್ಮೆ ಆತನ ಅಭಿವ್ಯಕ್ತಿ ವಿಶೇಷವಾಗಿ ಆಗುತ್ತದೆ. ಅಂಥ ವಿಶೇಷ ಅಭಿವ್ಯಕ್ತಿ ಇಂದು ಆಗಿದೆ ಎಂದು ಹೇಳಿದರು.


ಪ್ರಶಸ್ತಿ ಸ್ವೀಕರಿಸಿ ಮಾತನಾಡಿದ ಅರಳುಮಲ್ಲಿಗೆ ಪಾರ್ಥಸಾರಥಿಯವರು ಮಾತನಾಡಿ, "ಏಳೆಂಟು ವರ್ಷಗಳಿಂದ ಕಲ್ಲುಮುಳ್ಳುಗಳಿಂದ ಕೂಡಿದ್ದ ನೆಲದಲ್ಲಿ ಇಡೀ ಜಗತ್ತೇ ಬೆರಗಿನಿಂದ ನೋಡುವಂತೆ ವಿಷ್ಣುಗುಪ್ತ ವಿಶ್ವವಿದ್ಯಾಪೀಠವನ್ನು ಕಟ್ಟಿ ಬೆಳೆಸಿರುವುದು ನಾವೆಲ್ಲರೂ ಸಾಕ್ಷಿಗಳಾಗಿರುವ ಪವಾಡ. ನೈಮಿಷಾರಣ್ಯದ ಮರುಸೃಷ್ಟಿ ಅಶೋಕೆಯಲ್ಲಿ ಆಗಿದೆ. ಶಂಕರರು ಮೂರು ಬಾರಿ ಇಲ್ಲಿ ಓಡಾಡಿದ ಪರಮ ಪವಿತ್ರ ಸ್ಥಳ ಇದು. ಪ್ರಾಚೀನ ಕಾಲದಿಂದ ಇದ್ದ ಮಲ್ಲಿಕಾರ್ಜುನ ಇಲ್ಲಿಗೆ ಸಾಧು ಸಂತರು, ಸಾಧಕರನ್ನು ಅನುಗ್ರಹಿಸುತ್ತಿದ್ದ. ಇಂದು ಇಡೀ ಜಗತ್ತು ಅಚ್ಚರಿಪಡುತ್ತಿದೆ. ಜ್ಞಾನ, ಚಿಂತನೆ, ವಿದ್ಯಾ ಬುದ್ಧಿ ದಾನದ ಕೇಂದ್ರವಾಗಿ ರೂಪುಗೊಂಡಿದೆ" ಎಂದು ಬಣ್ಣಿಸಿದರು.


ಬೇಲೂರು, ಹಳೆಬೀಡನ್ನು ಮೀರಿಸುವಂಥ ಚಂದ್ರಮೌಳೀಶ್ವರ ದೇಗುಲವನ್ನು ಹೊಸನಗರ ರಾಮಚಂದ್ರಾಪುರ ಮಠದ ಆವರಣದಲ್ಲಿ ನಿರ್ಮಿಸಿದ್ದಾರೆ. ದೇಶದ ಎಲ್ಲ ತಳಿಯ ಗೋವುಗಳನ್ನು ಸಂರಕ್ಷಿಸುವ ಅಪೂರ್ವ ಕಾಮಧೇನು ಆಲಯ, ಅದರ ನಡುವೆ ಗೋವರ್ಧನಗಿರಿಧಾರಿ ಕ್ಷೇತ್ರವಿದೆ. ಇದನ್ನು ವಿಷ್ಣುಸಹಸ್ರನಾಮ ಕ್ಷೇತ್ರವಾಗಿ ಪರಿವರ್ತಿಸಲು ಕೇಳಿಕೊಂಡೆ. 100 ಬಿಲಿಯನ್ ಡಾಲರ್ ಕೊಟ್ಟರೂ ಇಂಥ ಪರಿಸರ ನಿರ್ಮಿಸಲು ಸಾಧ್ಯವಿಲ್ಲ; ಇಂಥ ದೈವೀಶಕ್ತಿಯ ಕ್ಷೇತ್ರ ನಿರ್ಮಾಣ ಸಾಧ್ಯವಿಲ್ಲ ಎಂದು ಅಭಿಪ್ರಾಯಪಟ್ಟರು.


ವಿಷ್ಣು ಸಹಸ್ರನಾಮ ಬಿಟ್ಟರೆ ಕಲಿಯುಗದಲ್ಲಿ ಜನಸಾಮಾನ್ಯರಿಗೆ ಆತ್ಮೋದ್ಧಾರಕ್ಕೆ ಅನ್ಯಮಾರ್ಗಗಳಿಲ್ಲ. ಅಂಥ ಪವಿತ್ರಕ್ಷೇತ್ರವನ್ನು ಅಭಿವೃದ್ಧಿಪಡಿಸಿ, ಲಕ್ಷಾಂತರ ಮಂದಿಯ ಉದ್ಧಾರಕ್ಕೆ ನೀಡಿದ ಕೊಡುಗೆ ಅನನ್ಯ ಎಂದು ಹೇಳಿದರು. ತೀರ್ಥಕ್ಷೇತ್ರಗಳಲ್ಲಿ, ನದಿತೀರದಲ್ಲಿ, ದೈವೀಸನ್ನಿಧಿಯಲ್ಲಿ ಪಠಿಸಿದರೆ ಅಪಾರ ಪುಣ್ಯ ಸಂಪಾದನೆಯಾಗುತ್ತದೆ ಎಂದರು.


ಧರ್ಮದೇವತೆ ಸಾಕ್ಷಾತ್ ಅವತಾರವೆತ್ತಿದಂತೆ ರಾಘವೇಶ್ವರರು ಸಮಾಜದ ಉದ್ಧಾರಕ್ಕೆ ಪಣ ತೊಟ್ಟಿದ್ದಾರೆ. ಸಮಸ್ತ ಸಮಾಜ ಇದರ ಪ್ರಯೋಜನ ಪಡೆಯಬೇಕು ಎಂದು ಸೂಚಿಸಿದರು. ಪ್ರಪಂಚದ ವಿಶ್ವದ ಎಲ್ಲ ಮೇಧಾವಿಗಳು ಇಲ್ಲಿಗೆ ಬಂದು ಜ್ಞಾನಪಡೆಯುವ ಕೇಂದ್ರವಾಗಿ ವಿವಿವಿ ಸದ್ಯದಲ್ಲೇ ರೂಪುಗೊಳ್ಳಲಿದೆ. ವಿದ್ಯಾರಣ್ಯರ ಅತಿಮಾನುಷ ಶಕ್ತಿಯಿಂದ ವಿಜಯ ನಗರ ಸಾಮ್ರಾಜ್ಯ ರೂಪುಗೊಂಡಂತೆ, ರಾಘವೇಶ್ವರರ ಕರ್ತೃತ್ವ ಶಕ್ತಿಯಿಂದ ಧರ್ಮಸಾಮ್ರಾಜ್ಯ ಸ್ಥಾಪನೆಯಾಗಲಿದೆ ಎಂಬ ವಿಶ್ವಾಸ ವ್ಯಕ್ತಪಡಿಸಿದರು.


ಕಾಲ ಸರಣಿಯಲ್ಲಿ ಪ್ರವಚನ ಅನುಗ್ರಹಿಸಿದ ಶ್ರೀಗಳು, ಜ್ಯೋತಿಷ್ಯದಲ್ಲಿ ತಾಂಬೂಲದ ಮಹತ್ವವನ್ನು ಮತ್ತು ತಾಂಬೂಲದ ಔಷಧೀಯ ಗುಣಗಳನ್ನು ವಿವರಿಸಿದರು. ನೇತ್ರರೋಗಿಗಳು, ರಕ್ತಪಿತ್ತ ಇರುವವರು, ಮೂರ್ಛೆ ರೋಗ ಇರುವವರು, ಶ್ವಾಸಕೋಶ ಸಮಸ್ಯೆ ಇರುವವರು ತಾಂಬೂಲ ಸೇವಿಸಬಾರದು. ತಾಂಬೂಲದ ಜತೆಗೆ ತಂಬಾಕು ಸೇವನೆಯಿಂದ ತಾಂಬೂಲಕ್ಕೂ ಕಳಂಕ ಬಂದಿದೆ. ಶಾಸ್ತ್ರವಿಧಿಸಿದ ಕ್ರಮದಂತೆ ತಾಂಬೂಲ ಸೇವಿಸುವುದು ಒಳ್ಳೆಯದು ಎಂದು ಅಭಿಪ್ರಾಯಪಟ್ಟರು. 


ವಿಷ್ಣುಸಹಸ್ರನಾಮ ಗ್ಲೋಬಲ್ ಫೌಂಡೇಷನ್‍ನ ಮುಖ್ಯಸ್ಥರಾದ ಮಂಗಳಾ ಭಾಸ್ಕರ್, ವಿವಿವಿ ಗೌರವಾಧ್ಯಕ್ಷ ಡಾ.ಡಿ.ಡಿ.ಶರ್ಮಾ, ವಿವಿವಿ ಕೇಂದ್ರೀಯ ಸಮಿತಿ ಗೌರವಾಧ್ಯಕ್ಷ ಡಾ.ಆರ್.ಎಸ್.ಹೆಗಡೆ ಹರಗಿ, ಅಧ್ಯಕ್ಷ ಎಸ್.ಎಸ್.ಹೆಗಡೆ, ಉದ್ಯಮಿ ಜಿ.ಎಂ.ಹೆಗಡೆ,  ಹವ್ಯಕ ಮಹಾಮಂಡಲ ಪ್ರಧಾನ ಕಾರ್ಯದರ್ಶಿ ಉದಯಶಂಕರ ಭಟ್ ಮಿತ್ತೂರು, ಚಾತುಮಾಸ್ಯ ಸೇವಾ ಸಮಿತಿ ಅಧ್ಯಕ್ಷ ಮಂಜುನಾಥ ಸುರ್ವಣಗದ್ದೆ, ಪ್ರಧಾನ ಕಾರ್ಯದರ್ಶಿ ಶ್ರೀಕಾಂತ ಪಂಡಿತ್, ವಿವಿವಿ ಹಿರಿಯ ಲೋಕಸಂಪರ್ಕಾಧಿಕಾರಿ ಜಿ.ಕೆ.ಹೆಗಡೆ, ಜಿ.ವಿ.ಹೆಗಡೆ, ಶ್ರೀಕಾರ್ಯದರ್ಶಿ ಜಿ.ಕೆ.ಮಧು, ಶ್ರೀಶ ಶಾಸ್ತ್ರಿ, ಅರವಿಂದ ಬಂಗಲಗಲ್ಲು, ದೈವಜ್ಞರಾದ ಕೇಶವ ಭಟ್ ಮಿತ್ತೂರು ಮತ್ತಿತರರು ಉಪಸ್ಥಿತರಿದ್ದರು.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 

إرسال تعليق

0 تعليقات
إرسال تعليق (0)
Maruti Suzuki Festival of Colours
Maruti Suzuki Festival of Colours
To Top