ಯುಎಇ ರಾಜಧಾನಿ ಅಬುಧಾಬಿಯಲ್ಲಿ ಸುಮಾರು ಮೂರೂವರೆ ದಶಕಗಳ ಹಿಂದೆ ಹೊಟೇಲು ಉದ್ಯಮ ಪ್ರಾರಂಭಿಸಿ ಯಶಸ್ವಿ ಕಂಡ ಸುಂದರ ಶೆಟ್ಟಿಯವರು ಮೂಲತ: ಕಾರ್ಕಳದ ಮುನಿಯಾಲ್ ಹಾಗೂ ತೀರ್ಥಹಳ್ಳಿಯಲ್ಲಿ ಹುಟ್ಟಿ ಬೆಳೆದವರು. ಪ್ರಸ್ತುತ ಶೆಟ್ಟಿಯವರ ಅಬುಧಾಬಿಯ ನೇಹಾಲ್ ರೆಸ್ಟೋರೆಂಟ್ ಮತ್ತು ತಂದೂರಿ ಕಾರ್ನರ್ ರೆಸ್ಟೋರೆಂಟ್ ಬಹು ಪ್ರಸಿದ್ಧಿ ಪಡೆದ ಹೋಟೆಲ್ ಅನ್ನುವುದು ಅಬುಧಾಬಿಯ ಗ್ರಾಹಕರ ಮನದಾಳದ ಮಾತು. ಸದ್ಯಕ್ಕೆ ಯುಎಇ ರಾಜಧಾನಿ ಅಬುಧಾಬಿಯಲ್ಲಿ ನಮ್ಮ ಕರಾವಳಿ ಜಿಲ್ಲೆಯವರ ರೆಸ್ಟೋರೆಂಟ್‌ಗಳಲ್ಲಿ ಮೇಲ್ಪಂಕ್ತಿಯಲ್ಲಿ ನಿಂತು ಯಶಸ್ವಿ ಕಾಣುತ್ತಿರುವ ಏಕೈಕ ಹೊಟೇಲ್ ಅನ್ನುವ ಖ್ಯಾತಿ ಸುಂದರ ಶೆಟ್ಟಿಯವರ ನೇಹಾಲ್ ರೆಸ್ಟೋರೆಂಟ್ ಪಾಲಿಗೆ ಇದೆ. ನಮ್ಮೂರಿನಲ್ಲಿ ಹುಟ್ಟಿ ಮುಂಬಯಿಯಲ್ಲಿ ಶೈಕ್ಷಣಿಕ ಮತ್ತು ಹೊಟೇಲು ಸೇವೆಯ ಅನುಭವ ಪಡೆದು ಹೊಟೇಲು ಉದ್ಯಮದಲ್ಲಿ ಯಶಸ್ವಿ ಕಂಡ ಸುಂದರ ಶೆಟ್ಟಿಯವರ ಸ್ವಾದಿಷ್ಟಕರವಾದ ಅನುಭವಗಳನ್ನು ನಮ್ಮ ಜೊತೆ ಹಂಚಿಕೊಂಡಿದ್ದಾರೆ. ಅವರ ಅನುಭವ ಜನ್ಯ ಮಾತುಗಳನ್ನು ತಮ್ಮಮುಂದೆ ಪ್ರಸ್ತುತ ಪಡಿಸುತ್ತಿದ್ದೇವೆ.
ಹೊಟೇಲು ಉದ್ಯಮಿ ಸುಂದರ ಶೆಟ್ಟಿಯವರ ತಾಯಿ ಮನೆ ಕಾರ್ಕಳದ ಮುನಿಯಾಲ್ ತಂದೆ ಮನೆ ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿ. ಇವರು ಹೆಚ್ಚಿನ ಶಿಕ್ಷಣಕ್ಕಾಗಿ ಸುಮಾರು 50 ವರುಷಗಳ ಹಿಂದೇನೆ ಮುಂಬಯಿಗೆ ಹೇೂದವರು. "Earn and learn" ಅನ್ನುವ ಎಳೆಯ ಬದುಕಿನಲ್ಲಿ ಡಿಪ್ಲೋಮ ಶಿಕ್ಷಣ ಮುಗಿಸಿದವರು. ಈ ಶಿಕ್ಷಣ ಪಡೆಯುತ್ತಿರುವ ಹೊತ್ತಿನಲ್ಲಿಯೇ ಮುಂಬಯಿಯ ಅರೆಸರಕಾರಿ ಸ್ವಾಮ್ಯದ ಫೈವ್ ಸ್ಟಾರ್ ಹೊಟೇಲಿನಲ್ಲಿ ಜವಾಬ್ದಾರಿಯುತ ಸ್ಥಾನದಲ್ಲಿ ದುಡಿದ ಅನುಭವ ಇವರಿಗಿದೆ. ಅಲ್ಲಿ ಸೇವೆ ಸಲ್ಲಿಸುತ್ತಿರುವ ಸಂದರ್ಭದಲ್ಲಿ ಹೊಟೇಲು ಉದ್ಯಮದ ಕನಸು ಕಂಡವರು. ಅದೇ ಕನಸನ್ನು ಹೊತ್ತುಕೊಂಡು ಮರು ಭೂಮಿಯಾದ ಅಬುಧಾಬಿಯತ್ತ ಉದ್ಯೋಗಕ್ಕಾಗಿ ಬದುಕಿನ ಪಯಾಣ. ಅದೂ ಕೂಡಾ 1991ರ ಸಮಯ ಕುವೈಟ್- ಇರಾಕ್ ಯುದ್ಧದಿಂದಾಗಿ ಅತಿಯಾದ ಆರ್ಥಿಕ ಪರಿಸ್ಥಿತಿ ಹದಗೆಟ್ಟ ಸಂದರ್ಭದಲ್ಲಿ ಅಬುಧಾಬಿಯಲ್ಲಿ ಹೊಟೇಲು ಉದ್ಯಮಕ್ಕೆ ಕೈ ಹಾಕುವ ಸಾಹಸವನ್ನು ಮಾಡಿದವರು. ಆ ಸಂದರ್ಭದಲ್ಲಿ ಹೆಚ್ಚಿನವರು ಯಾಕೆ ಹುಚ್ಚು ಸಾಹಸಕ್ಕೆಇಳಿಯುತ್ತಿದ್ದೀರಿ ಅನ್ನುವ ಭಯದ ಮಾತುಗಳನ್ನು ಹೇಳಿದವರು ಇದ್ದಾರೆ. ಆದರೆ ಶೆಟ್ಟಿಯವರು ಇದಾವುದಕ್ಕೂ ಕಿವಿಗೊಡದೆ ದೃಢವಾದ ಮನಸ್ಸಿನಿಂದ ಹೊಟೇಲು ಉದ್ಯಮಕ್ಕೆ ಧುಮುಕಿಯೇ ಬಿಟ್ಟರು.
ಅದಾಗಲೇ ನೇಹಾಲ್ ಹೊಟೇಲನ್ನು ಖರೀದಿಸಿ ಅದಕ್ಕೊಂದು ಹೊಸ ವಿನ್ಯಾಸದ ಔಟ್ ಲುಕ್ ನೀಡಿ ಅತ್ಯುತ್ತಮವಾದ ಸೇವೆ ರುಚಿಕರ ಸ್ವಾದಿಷ್ಟವಾದ ಆಹಾರವನ್ನು ಅಬುಧಾಬಿ ಮತ್ತು ಪರ ರಾಷ್ಟ್ರಗಳಿಂದ ಬರುವ ಗ್ರಾಹಕರಿಗೆ ಉಣ ಬಡಿಸುವುದರ ಮೂಲಕ ಗ್ರಾಹಕರು ಮನ ಸೂರೆಗೊಂಡ ಹೆಗ್ಗಳಿಕೆಗೆ ಪಾತ್ರರಾದವರು ಸುಂದರ ಶೆಟ್ಟಿಯವರು.
ಇದೇ ಸಂದರ್ಭದಲ್ಲಿ ಅಬುಧಾಬಿಗೆ ಶ್ರೀಲಂಕಾದ ಪ್ರವಾಸಿಗರು ಬರುತ್ತಿದ್ದನ್ನು ಗಮನಿಸಿದ ಇವರು ಶ್ರೀಲಂಕಾ ರೆಸ್ಟೋರೆಂಟ್ ಹುಟ್ಟು ಹಾಕಿ ಅಲ್ಲಿ ಕೂಡಾ ಯಶಸ್ವಿ ಕಂಡ ತೃಪ್ತಿ ಇವರಿಗಿದೆ. ಇವರ ಶ್ರೀಲಂಕಾ ರೆಸ್ಟೋರೆಂಟ್ ಎಷ್ಟು ಜನಮನ್ನಣೆ ಗಳಿಸಿತು ಅಂದರೆ ಶ್ರೀಲಂಕಾದ ರಾಯಭಾರಿಗಳು ಕೂಡಾ ಸಾಮಾನ್ಯರಾಗಿ ಬಂದು ಊಟ ಮಾಡಿ ಹೇೂದ ಸಂದರ್ಭವನ್ನು ನೆನಪಿಸುತ್ತಾರೆ. ಅದೇ ರೀತಿ ಶ್ರೀಲಂಕಾ ಕ್ರಿಕೆಟ್ ಪಟು ಜಯಸೂರ್ಯ ತಮ್ಮ ಹೊಟೇಲಿನ ಆತಿಥ್ಯ ಸ್ವೀಕರಿಸಿದನ್ನು ಶೆಟ್ಟಿಯವರು ಇಂದಿಗೂ ನೆನಪಿಸಿಕೊಳ್ಳುತ್ತಾರೆ.
ಪ್ರಸ್ತುತ ನೇಹಾಲ್ ಮತ್ತು ತಂದೂರಿ ಕಾನ೯ರ್ ರೆಸ್ಟೋರೆಂಟ್ ನ್ನು ನಡೆಸುತ್ತಿರುವ ಇವರು ಅಬುಧಾಬಿಯ ನೈಸರ್ಗಿಕ ಪರಿಸರ ಅವರಿಗೆ ತುಂಬಾ ಹಿಡಿಸಿದೆ. ಅತ್ಯುತ್ತಮ ಗುಣಮಟ್ಟದ ತರಕಾರಿ ಮತ್ಸ್ಯ ಸಂಪತ್ತು ಇಲ್ಲಿರುವ ಕಾರಣ ಗುಣಮಟ್ಟದ ಆಹಾರ ಸಿದ್ಧ ಪಡಿಸಲು ಸಹಾಯಕ ಅನ್ನುವುದರೊಂದಿಗೆ ಅಬುಧಾಬಿಯ ಬೆಳವಣಿಗೆ ಮತ್ತು ಅಭಿವೃದ್ಧಿ ಪರಿಸರ ಪರಿಕರಗಳು ಕೂಡಾ ಇಲ್ಲಿನ ಹೊಟೇಲು ಉದ್ಯಮವನ್ನು ಮತ್ತಷ್ಟು ಬೆಳೆಸಿದೆ ಅನ್ನುವ ಸಂತಸದ ಮಾತು ಸುಂದರ ಶೆಟ್ಟಿಯವರದು. ಇಲ್ಲಿ ಪ್ರವಾಸೋದ್ಯಮ ಕೂಡಾ ಹೊಟೇಲ್ ಉದ್ಯಮಕ್ಕೆ ಪೂರಕವಾಗಿ ನಿಂತಿದೆ ಅನ್ನುವ ಶೆಟ್ಟಿಯವರು ಉದ್ಯಮಕ್ಕೆ ಸ್ವಲ್ಪ ದೊಡ್ಡ ಹೊಡೆತ ಬಿದ್ದಿರುವುದು ವಿಶ್ವವ್ಯಾಪಿ ಕೇೂವಿಡ್ ಸಂದರ್ಭದಲ್ಲಿ.
ನಮಗೆ ಹೆಚ್ಚಿನ ಗ್ರಾಹಕರು ಬೇರೆ ಬೇರೆ ದೇಶಗಳಿಂದ ಬರುತ್ತಾರೆ. ಭಾರತದಿಂದ ಕೂಡಾ ಗರಿಷ್ಠ ಪ್ರಮಾಣದಲ್ಲಿ ಬರುತ್ತಿರುವ ಕಾರಣಕ್ಕಾಗಿಯೇ ಅವರ ಇಚ್ಛೆ ರುಚಿಗೆ ತಕ್ಕ ರೀತಿಯಲ್ಲಿ ಸ್ಪಂದಿಸಿ ಸತ್ಕಾರ ಮಾಡುವ ಸಿಬ್ಬಂದಿ ವರ್ಗವೇ ನಮಗಿರುವ ದೊಡ್ಡ ಸಂಪತ್ತು.
ತಮ್ಮ ಈ ಸುದೀರ್ಘ ಅನುಭವದಿಂದ ಹೇಳುತ್ತಾರೆ "ನಿಷ್ಠೆ ಪ್ರಾಮಾಣಿಕತೆ ಹಾಗೂ ಸವಾಲುಗಳನ್ನು ಸಮರ್ಥವಾಗಿ ಸ್ವೀಕರಿಸುವ ಮನ ಸ್ಥಿತಿ ಹೊಟೇಲು ಉದ್ಯಮದ ಪ್ರೇರಣಾ ಶಕ್ತಿ "ಅನ್ನುವುದು ಸುಂದರ ಶೆಟ್ಟಿಯವರ ಅನುಭವ ಜನ್ಯ ಮಾತು. ತಾಯಿ ನಾಡಿನಿಂದ ತೆರಳಿ ವಿದೇಶಿ ನೆಲದಲ್ಲಿ ಯಶಸ್ವಿ ಹೊಟೇಲು ಉದ್ಯಮಿ ಅನ್ನಿಸಿಕೊಂಡ ನಮ್ಮೂರ ಸುಂದರ ಶೆಟ್ಟಿಯವರು ಇಂದಿನ ಯುವ ಉದ್ಯಮಿಗಳಿಗೆ ಮಾದರಿಯಾಗಿ ನಿಲ್ಲಬಲ್ಲ ಸರಳ ಸಜ್ಜನಿಕೆಯ ಪರಿಪೂರ್ಣ ವ್ಯಕ್ತಿತ್ವ.
-ಪ್ರೊ. ಕೊಕ್ಕರ್ಣೆ ಸುರೇಂದ್ರನಾಥ ಶೆಟ್ಟಿ (ಅಬುಧಾಬಿ)
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ