ಶ್ರೀ ಸತ್ಯಾತ್ಮವಾಣಿ– 38: ಲೌಕಿಕ ಕಾರ್ಯಗಳಿಗಾಗಿ ಪರಮಾತ್ಮನ ಸ್ಮರಣೆ ಬಿಡಬಾರದು

Upayuktha
0


ಶ್ರೀಕೃಷ್ಣ ಪರಮಾತ್ಮನ ಬಾಲ ಲೀಲೆಗಳನ್ನು ವರ್ಣನೆ ಮಾಡುತ್ತಾ ಶ್ರೀಮದ್‌ ಭಾಗವತದಲ್ಲಿ ಪ್ರಸಿದ್ಧವಾದ ಲೀಲೆಯನ್ನು ಕೇಳಿದ್ದೀರಿ. ಯಶೋದೆ ಗೋಕುಲದ ರಾಣಿ, ಅವಳು ತಾನು ಸ್ವತಃ ಮೊಸರು ಕಡೆಯುವುದಕ್ಕೆ ಕಾರಣವನ್ನು ಭಾಗವತ ಹೇಳುತ್ತದೆ. ಯಶೋದೆಯು ತಾನೆ ಸ್ವತಃ ಕೆಲಸ ಮಾಡುವುದಕ್ಕೆ ಕಾರಣ ಮನೆ ತುಂಬ ಕೆಲಸ ಇರುತ್ತದೆ. ಗೃಹಕೆಲಸವನ್ನು ಬೇಸರಿಸದೇ ಮಾಡಬೇಕು ಎಂದು ತೋರಿಸುತ್ತಾಳೆ. ಮೂಲ ರೂಪದಲ್ಲಿ ವಸು ಪತ್ನಿ ಧರಾ ದೇವಿ ಗೃಹ ಕೃತ್ಯ ಮಾಡುವಾಗ ಭಗವಂತನ ಕೆಲಸ ಎಂದು ತಾನೇ ಸ್ವತಃ ಮಾಡಬೇಕೆಂದು ತೋರಿಸುತ್ತಾಳೆ. ಮೊಸರು ಕಡಿಯುವಾಗ ಒಂದು ತರಹದ ಧ್ವನಿ ಬರುತ್ತದೆ. ಅದು ಪರಮಾತ್ಮನ ಗುಣವನ್ನು ಕೊಂಡಾಡುತ್ತದೆ ಎಂದು ಶ್ರೀಮದಾಚಾರ್ಯರು ಕರ್ಮ ನಿರ್ಣಯದಲ್ಲಿ ಹೇಳುತ್ತಾರೆ. ಎಲ್ಲ ದೇವತೆಗಳು ಭಕ್ತಿಯಿಂದ ಪರಮಾತ್ಮನ ಆಜ್ಞೆಯನ್ನು ಪರಿಪಾಲನೆ ಮಾಡುತ್ತಾರೆ ಆದರೆ ತಮಗೆ ದಂಡವಿದೆ ಎಂಬ ಭಯ ಕೂಡ ಇರುತ್ತದೆ. ಇಂತಹ ಜಗತನ್ನೇ ಭಯದಿಂದ ತನ್ನ ವಶದಲ್ಲಿಟ್ಟುಕೊಂಡವನು ಪರಮಾತ್ಮ. 


ಮುಂಜಾನೆ ಎದ್ದು ಮುಖ ತೊಳೆದು ಕುಂಕುಮ ಹಚ್ಚಿಕೊಂಡು ಮೊಸರನ್ನು ಕಡೆದರೆ ಸಾಕು ಎನ್ನುವಂತಿಲ್ಲ. ಹೆಂಡತಿ ಮೊಸರನ್ನು ಕಡೆಯಬೇಕು ಗಂಡ ಆ ಸದ್ದು ಇಬ್ಬರೂ ಕೇಳಬೇಕು. ದೇವರು ಯಾರೇ ತಪ್ಪು ಮಾಡಲಿ ಆ ತಪ್ಪಿಗೆ ಶಿಕ್ಷೆಯನ್ನು ಕೊಡುತ್ತಾನೆ. ಸಾಮಾನ್ಯರಿಗೆ ನರಕ, ಜ್ಞಾನಿಗಳಿಗೆ ಮೋಕ್ಷದಲ್ಲಿ ಆನಂದ ಹ್ರಾಸ, ದೇವತೆಗಳಿಗೆ ಕೂಡ ಆನಂದದಲ್ಲಿ ಹ್ರಾಸ ಎಂದು ದೇವರು ಶಿಕ್ಷೆಯನ್ನು ಇಟ್ಟಿದ್ದಾನೆ. ನಮ್ಮ ತಲೆಗೆ ಬಂದಂತೆ ಮನಸ್ಸಿಗೆ ಬಂದಂತೆ ನಡೆಯಬಾರದು ಎಂದು ಹೇಳುತ್ತಾರೆ. 


ಯಶೋದೆ ಮೊಸರು ಕಡೆಯುವಾಗ ಹಾಡನ್ನು ಹಾಡುತ್ತಿದ್ದಾಳೆ. ಶೈಶವ ಅವಸ್ಥೆಯಲ್ಲಿ ಶ್ರೀಕೃಷ್ಣ ಪರಮಾತ್ಮ ಇರುವಾಗ ಅಷ್ಟೇ ಸಮಯದಲ್ಲಿ ಅವನ ಲೀಲೆಗಳನ್ನು ವರ್ಣನೆಯನ್ನು ಮಾಡಿರಬಹುದು ಪರಮಾತ್ಮನ ಹೆಜ್ಜೆಗಳು, ಮಾತುಗಳನ್ನು ವರ್ಣನೆ ಮಾಡುತ್ತಾ ಹಾಡುತ್ತಿದ್ದಳು. ದ್ವಾಪರದಲ್ಲಿಯೇ ಹಾಡುಗಳ ರಚನೆಯಾಗಿದ್ದವು. ಬಾಲ್ಯಾವಸ್ಥೆಯ ತೋರಿದ ಲೋಲೆಗಳ ಬಾಲಚರಿತೆಯ ವರ್ಣನೆಯ ಹಾಡುಗಳಿದ್ದವು. ಅವುಗಳನ್ನು ಹಾಡುತ್ತಾ ಯಶೋದೆ ಮೊಸರನ್ನು ಕಡೆಯುತ್ತಲಿದ್ದಳು. ಒಂದು ಕಡೆ ಮಗ ಎಂಬ ಅಭಿಮಾನ ಇನ್ನೊಂದು ಕಡೆಗೆ ಭಗವಂತ ಎಂಬ ಅನುಸಂಧಾನ ಮಾಡುತ್ತಾ ಹಾಡುತ್ತಾ ಇದ್ದಳು. ಮನಸ್ಸಿನಲ್ಲಿ ಸ್ಮರಣೆ, ಬಾಯಿಯಿಂದ ಹಾಡುತ್ತಾಳೆ, ಜೊತೆಗೆ ಮೊಸರನ್ನು ಕಡೆಯುತ್ತಾಳೆ.


ನಾಮಸ್ಮರಣೆಯನ್ನು ಮಾಡಲು ಸಮಯ ಹೊಂದಿಸಿಕೊಂಡು ನಾಮಸ್ಮರಣೆ ಮಾಡಬೇಕಿಲ್ಲ, ಕೆಲಸ ಮಾಡುತ್ತಾ ಸ್ಮರಣೆ ಮಾಡಬಹುದು. ಮನೆಯಲ್ಲಿ ಘರ್ಷಣೆಯ ಕಾಲದಲ್ಲಿ ಕೂಡ ಪರಮಾತ್ಮನ ಸ್ಮರಣೆ ಮಾಡಿದರೆ ಉತ್ತಮ ಫಲವೇ ಬೆಣ್ಣೆಯ ರೂಪದಲ್ಲಿ ದೊರೆಯುವುದು ಎಂದು ಹೇಳುತ್ತಾರೆ. ಶ್ರೀಕೃಷ್ಣ ಪುಟ್ಟ ಹೆಜ್ಜೆ ಇಡುತ್ತಾ ತೊದಲು ಮಾತನಾಡುತ್ತಾ ಹಾಲು ಬೇಡಿ ಬಂದ ಕೃಷ್ಣ ಮೊಸರನ್ನು ಕಡಿಯುವುದನ್ನು ನಿಲ್ಲಿಸೆಂದು ಕಡಗೋಲು ಕೈಲಿ ಗಟ್ಟಿಯಾಗಿ ಹಿಡಿದು ಹಾಲು ಕುಡಿಸುವಂತೆ ಕೇಳಿದ. ಶ್ರೀಕೃಷ್ಣ ಪರಮಾತ್ಮನಿಗೆ ಪ್ರೀತಿಯಿಂದ ಹಾಲು ಕುಡಿಸುವಾಗ ಅವಳಿಗೆ ಒಲೆಯ ಮೇಲೆ ಹಾಲು ಉಕ್ಕುತ್ತಿರುವುದನ್ನು ನೋಡಿ ಅದನ್ನು ನಿಲ್ಲಿಸಲು ಕೂಸನ್ನು ಕೆಳಗೆ ಮಲಗಿಸಿ ಹೋದಳು. ಆಗ ಸಿಟ್ಟಿಗೆದ್ದ ಪರಮಾತ್ಮ ಕಲ್ಲನ್ನು ಹೊಡೆದು ಮೊಸರಿನ ಗಡಿಗೆಯನ್ನು ಒಡೆದು ಬೆಣ್ಣೆಯನ್ನು ತೆಗೆದುಕೊಂಡು ಹೊರಟ. ಶ್ರೀಕೃಷ್ಣ ಪರಮಾತ್ಮ ಏಕೆ ಹೇಗೆ ಮಾಡಿದ ಎಂದು ಕೇಳಿದರೆ, ದೇವರ ಎದುರಿನಲ್ಲಿ ಹಾಲು ತುಪ್ಪ ಮೊಸರು ಬೆಣ್ಣೆಯನ್ನು ನೈವೇದ್ಯವನ್ನು ಮಾಡಿ ಸ್ವೀಕಾರ ಮಾಡುತ್ತೇವೆ. ಕೋಟಿ ಕೋಟಿ ಚಂದ್ರಾಯಣ ವ್ರತ ಮಾಡಿದ ಪುಣ್ಯ ಬರುತ್ತದೆ ಎಂದು ಹೇಳುತ್ತಾರೆ.


ಶ್ರೀಕೃಷ್ಣ ಪರಮಾತ್ಮನಿಗೆ ಹೊರಗಿನ ಆಹಾರದ ಅಗತ್ಯವಿಲ್ಲ. ಆದರೆ ಅವತಾರದಲ್ಲಿ ಲೀಲೆ ತೋರಿಸುತ್ತಾನೆ. ಪರಮಾತ್ಮನ ಆಹಾರ ಬೇರೆಯೇ ಇರುತ್ತದೆ ಲೋಕವಿಲಕ್ಷಣವಾಗಿರುತ್ತದೆ. ಆದರೆ  ಅವತಾರದಲ್ಲಿ ಸ್ಥೂಲವಾದದ್ದನ್ನು ಸ್ವೀಕರಿಸುತ್ತಾನೆ. ಯಶೋದೆಯ ಭಾಗ್ಯ ಬಹಳ ದೊಡ್ಡದು, ಇಲ್ಲಿ ಉಕ್ಕಿದ ಹಾಲನ್ನು ಕೆಳಗಿಳಿಸಬೇಕೆಂದು ಯಶೋದೆ ಹೋದಳೆ? ಯೋಗ್ಯತೆ ಮೀರಿದ ಪುಣ್ಯ ಮಾಡಿದ ಕಾರಣ ಅವಳ ಪುಣ್ಯ ಕಡಿಮೆ ಮಾಡಲು ಹೋದಳೆ ಎಂದು ಯೋಚಿಸಬೇಕು. ದೇವರ ಮಹಿಮೆ, ಪ್ರವಚನ ಮೊದಲಾದವುಗಳನ್ನು ಬಿಟ್ಟು ಲೌಕಿಕ ವಿಷಯಗಳ ಕಡೆಗೆ ಮನಸ್ಸು ಹೋದರೆ ನಾವು ಯಾವುದರ ಸಲುವಾಗಿ ಶ್ರಮ ಪಡುತ್ತೇವೆ, ಅದನ್ನೇ ಕೊಡುವುದಿಲ್ಲ ಎಂದು ಶಾಸ್ತ್ರ ಹೇಳುತ್ತದೆ. ದೇವರ ಪೂಜೆ ನಡೆದಿರುತ್ತದೆ. ಅವನ ದರ್ಶನ ಮಾಡಿಕೊಳ್ಳುವ ಅವಕಾಶ ಇದೆ. ಆದರೆ ದರ್ಶನ ಮಾಡಿಕೊಳ್ಲದೇ ಅವಸರದಿಂದ ಹೋದರೆ ಆಗ ಬೇಕಾದ ಕಾರ್ಯ ತಡವಾಗುತ್ತದೆ. ಯಾವುದಕ್ಕಾಗಿ ಅವಸರ ಮಾಡಿ ಧಾವಿಸುತ್ತಾನೆ ಆ ಕಾರ್ಯ ತಡವಾಗಿರುತ್ತದೆ. ದೇವರನ್ನು ಮರೆತು ಉದಾಸೀನ ಮಾಡಿ ಲೌಕಿಕ ಕಾರ್ಯಗಳನ್ನು ಮಾಡಿ ಲೌಕಿಕ ಕಾರ್ಯಗಳನ್ನು ಮಾಡಿಕೊಳ್ಳಿ ಎಂದು ಸಂದೇಶ ಪರಮಾತ್ಮ ನೀಡುತ್ತಲಿದ್ದಾನೆ.


ಅಕ್ಷರ ರೂಪ: ಶ್ರೀಮತಿ ಮಾಧುರಿ ದೇಶಪಾಂಡೆ, ಬೆಂಗಳೂರು


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 

Post a Comment

0 Comments
Post a Comment (0)
Maruti Suzuki Festival of Colours
Maruti Suzuki Festival of Colours
To Top