ಮಂಗಳೂರು: ಮಂಗಳೂರು: ದಂತ ವೈದ್ಯಕೀಯ ಕಾಲೇಜಿನಲ್ಲಿ ಪ್ರಾಧ್ಯಾಪಕರಾಗಿ, ಸಹಸ್ರಾರು ವೈದ್ಯಕೀಯ ಲೇಖನಗಳ ಪತ್ರಿಕಾ ಅಂಕಣಕಾರರಾಗಿ, ಹತ್ತಾರು ವೈದ್ಯಕೀಯ ಜಾಗೃತಿ ಪುಸ್ತಕಗಳನ್ನು ಬರೆದು ಪ್ರಕಟಿಸಿದ ವೈದ್ಯ ಸಾಹಿತಿ ಡಾ. ಮುರಲೀ ಮೋಹನ್ ಚೂಂತಾರು ಅವರಿಗೆ ರೋಟರಿ ಸಂಸ್ಥೆಯಿಂದ 'ನೇಷನ್ ಬಿಲ್ಡರ್ ಅವಾರ್ಡ್' ನೀಡಿ ಗೌರವಿಸಲಾಯಿತು.
ವಿವಿಧ ಕ್ಷೇತ್ರಗಳಲ್ಲಿ ತೊಡಗಿಸಿಕೊಂಡು ರಾಷ್ಟ್ರ ನಿರ್ಮಾಣ ಕಾರ್ಯದಲ್ಲಿ ಮಹತ್ವದ ಸೇವೆ ಸಲ್ಲಿಸುತ್ತಿರುವವರನ್ನು ಗುರುತಿಸಿ ಗೌರವಿಸುವ ಕೆಲಸವನ್ನು ರೋಟರಿ ಸಂಸ್ಥೆ ಮಾಡುತ್ತಿದೆ.
ದಂತ ವೈದ್ಯರಾಗಿರುವ ಡಾ. ಚೂಂತಾರು ಅವರು ಹಲವು ವರ್ಷಗಳಿಂದ ತಮ್ಮ ವೈದ್ಯಕೀಯ ವೃತ್ತಿಯ ಜತೆಗೆ ಸಾಹಿತ್ಯ, ಸಂಸ್ಕೃತಿ, ಕಲೆ, ಸಮಾಜ ಸೇವೆಯಲ್ಲಿ ತೊಡಗಿಸಿಕೊಂಡಿದ್ದಾರೆ. ಹಲವಾರು ಸಂಘ-ಸಂಸ್ಥೆಗಳಿಂದ ಸನ್ಮಾನ, ಗೌರವಗಳನ್ನು ಪಡೆದಿದ್ದಾರೆ. ಒಂದು ದಶಕದಿಂದ ದ.ಕ.ಜಿಲ್ಲಾ ಗೃಹರಕ್ಷಕ ದಳದ ಸಮಾದೇಷ್ಟರಾಗಿ ಯಶಸ್ವೀ ಸೇವೆ ಸಲ್ಲಿಸಿ, ರಾಷ್ಟ್ರಪತಿಗಳಿಂದ ಶ್ಲಾಘನೀಯ ಸೇವಾ ಪದಕ ಪಡೆದು ಪುರಸ್ಕೃತರಾಗಿದ್ದಾರೆ. ಇವರಿಗೆ ರೋಟರಿ ಸಂಸ್ಥೆಯಿಂದ ರಾಷ್ಟ್ರ ನಿರ್ಮಾಣದಲ್ಲಿ ಶ್ರಮಿಸಿದ ಸಾಧಕರಿಗೆ ಕೊಡಮಾಡುವ “ನೇಷನ್ ಬಿಲ್ಡರ್ ಅವಾರ್ಡ್-2024” ಅನ್ನು ನೀಡುವುದು ಅತೀ ಸಂತಸದ ವಿಷಯವೆಂದು ಕೆ.ಎಂ.ಸಿ. ಡೀನ್ ಡಾ|| ರಘುವೀರ್ ರವರು ನುಡಿದರು.
ಅವರು ಸೆ.10 ರಂದು ಮಂಗಳೂರು ನಗರದ ರೋಟರಿ ಬಾಲಭವನದಲ್ಲಿ ಜರಗಿದ ಗುರುವಂದನಾ ಕಾರ್ಯಕ್ರಮದಲ್ಲಿ ನುಡಿದರು.
ರಾಷ್ಟ್ರ ನಿರ್ಮಾಣದಲ್ಲಿ ಶಿಕ್ಷಕರನ್ನು ಸನ್ಮಾನಿಸಿ ಗೌರವಿಸಿದ ಈ ಸಮಾರಂಭದಲ್ಲಿ ಅತಿಥಿಯಾಗಿ ಆಗಮಿಸಿದ ಡಾ. ಮುರಲೀ ಮೋಹನ್ ಚೂಂತಾರು ರವರು ತನಗೆ ನೀಡಿದ ಈ ರಾಷ್ಟ್ರ ನಿರ್ಮಾಣ ಪ್ರಶಸ್ತಿಯ ಗೌರವ ಸ್ವೀಕರಿಸುತ್ತಾ, ಈ ಗೌರವ ಶಿಕ್ಷಣ ಹಾಗೂ ಸಮಾಜಸೇವೆಯಲ್ಲಿ ತೊಡಗಿಸಿಕೊಂಡ ಮಹಾನ್ ಚೇತನಗಳಿಗೆ ಅರ್ಪಣೆಯೆಂದರು.
ಈ ಸಮಾರಂಭದಲ್ಲಿ ಶಿಕ್ಷಣ ಕ್ಷೇತ್ರದಲ್ಲಿ ಗಣನೀಯ ಸೇವೆ ಸಲ್ಲಿಸಿ ನಿವೃತ್ತರಾದ ಶ್ರೀಮತಿ ಯಶೋದಾ, ಶ್ರೀಮತಿ ಫ್ಲಾವಿ ಮಸ್ಕರೇನಸ್, ಶ್ರೀಮತಿ ಇಂದ್ರಾವತಿ ಮತ್ತು ಶ್ರೀಮತಿ ಜೆಸಿಂತಾ ರೋಡ್ರಿಗಸ್ ರವರನ್ನು ರೋಟರಿ ಪರವಾಗಿ ಸನ್ಮಾನಿಸಿ ಗೌರವಿಸಿದರು. ಕಾರ್ಯಕ್ರಮವನ್ನು ರೋಟರಿ ಮಾಜಿ ಗವರ್ನರ್, ರೋ. ಕೆ. ಕೃಷ್ಣ ಶೆಟ್ಟಿ, ರೋಟರಿ ಜಿಲ್ಲಾ ಕಾರ್ಯದರ್ಶಿ (ತರಬೇತಿ) ಡಾ. ಶಿವಪ್ರಸಾದ್, ರೋಟರಿ ಸಹಾಯಕ ಗವರ್ನರ್ ವಿಶ್ವನಾಥ ಶೆಟ್ಟಿ ಇವರು ನೆರವೇರಿಸಿದರು.
ವೇದಿಕೆಯಲ್ಲಿ ಕ್ಲಬ್ ಅಧ್ಯಕ್ಷ ಮೋಹನ್ ನಾಯರ್, ಗಣೇಶ ಕೃಷ್ಣ ಭಟ್, ನಿಯೋಜಿತ ಅಧ್ಯಕ್ಷ, ಡಾ. ಅರುಣ್ ಕುಮಾರ್ ಶೆಟ್ಟಿ, ಶಿಕ್ಷಕರನ್ನು ಪರಿಚಯಿಸಿದ ಬುಲೆಟಿನ್ ಸಂಪಾದಕ ಅಜಿತ್ ರಾವ್, ಉಪಸ್ಥಿತರಿದ್ದರು. ಪ್ರಾರ್ಥನೆಯನ್ನು ಡಾ. ರಘುವೀರ್, ಅತಿಥಿ ಪರಿಚಯ ಡಾ. ಶಿವಪ್ರಸಾದ್ ಹಾಗೂ ಶಿಕ್ಷಕರ ಪರಿಚಯವನ್ನು ಅಜಿತ್ ರಾವ್ ನೆರವೇರಿಸಿದರು. ಡಾ. ಸತೀಶ್ ಕುಮಾರ್ ಶೆಟ್ಟಿ ವಂದನಾರ್ಪಣೆಗೈದರು.
ನಿರಂತರ ಅಪ್ಡೇಟ್ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ