ಪುತ್ತೂರು: ಪ್ರಪಂಚದ ಯಾವುದೇ ಸಂಶೋಧನಾಲಯ ಮತ್ತು ಕೈಗಾರಿಕೆಗಳು ಮಣ್ಣನ್ನು ಉತ್ಪತ್ತಿ ಮಾಡಲಾರವು, ಅಂತಹ ಅಮೂಲ್ಯ ನಿಧಿ ಮಣ್ಣು. ತಂತ್ರಜ್ಞಾನ ಎಷ್ಟೇ ಮುಂದುವರಿದರೂ ಮಣ್ಣು ಪ್ರಾಕೃತಿಕವಾಗಿ ರಚನೆಯಾಗಬೇಕು. ಒಂದಡಿ ಮೇಲ್ಮಣ್ಣು ರಚನೆಯಾಗಬೇಕಾದರೆ ಪ್ರಕೃತಿಗೆ ಎರಡೂವರೆ ಸಾವಿರ ವರ್ಷಗಳು ಬೇಕು. ಇಂತಹ ಅಮೂಲ್ಯವಾದ ಮಣ್ಣನ್ನು ಅಭಿವೃದ್ಧಿಯ ನೆಪದಲ್ಲಿ ನಾಶ ಮಾಡಿ ಜೀವಸಂಕುಲವೇ ನಾಶವಾಗುವತ್ತ ನಾವು ಸಾಗುತ್ತಿದ್ದೇವೆ ಎಂದು ಭೂ ವಿಜ್ಞಾನಿ ಡಾ.ಎಚ್. ಎನ್. ಉದಯ ಶಂಕರ್ ಹೇಳಿದರು.
ಅವರು ಪುತ್ತೂರಿನ ವಿವೇಕಾನಂದ ಸಮೂಹ ಸಂಸ್ಥೆಗಳ 43ನೆಯ ಗಣೇಶೋತ್ಸವದ ಸಂದರ್ಭದಲ್ಲಿ 'ಪರಿಸರ ರಕ್ಷಣೆ: ನಮ್ಮೆಲ್ಲರ ಹೊಣೆ' ಎಂಬ ಕಾರ್ಯಾಗಾರದಲ್ಲಿ ವಿದ್ಯಾರ್ಥಿಗಳನ್ನು ಉದ್ದೇಶಿಸಿ ಮಾತನಾಡುತ್ತಿದ್ದರು.
ನಮ್ಮ ಸ್ವಾರ್ಥಕ್ಕಾಗಿ ಪಶ್ಚಿಮಘಟ್ಟವನ್ನು ಅಭಿವೃದ್ಧಿಯ ಹೆಸರಿನಲ್ಲಿ ಹಾಳು ಮಾಡುತ್ತಿದ್ದೇವೆ. ಯುನೆಸ್ಕೋದಿಂದ ಘೋಷಿತವಾದ 'ಜೀವಸಂಕುಲಗಳ ವೈವಿಧ್ಯಮಯ ಪ್ರದೇಶ' ದಲ್ಲಿ ಇಂತಹ ಬೆಳವಣಿಗೆ ಸಲ್ಲದು ಎಂದು ತಿಳಿಸಿದರು.
ಪ್ಲಾಸ್ಟಿಕ್ ತ್ಯಾಜ್ಯದಿಂದ ನಮ್ಮ ನೀರು, ಗಾಳಿ, ನದಿ, ಸಮುದ್ರ, ಸಸ್ಯಗಳು, ಪ್ರಾಣಿಗಳು ತುಂಬಿಹೋಗಿದೆ. 'ಮೈಕ್ರೋ ಹಾಗೂ ನ್ಯಾನೋ ಪ್ಲಾಸ್ಟಿಕ್' ನಮ್ಮ ಆಹಾರ, ನೀರಿನ ಮೂಲಕ ಶರೀರವನ್ನು ಸೇರಿ, ನಮ್ಮ ರಕ್ತದಲ್ಲಿ ಹರಿಯುತ್ತಿದೆ. ಇದು ಮನುಕುಲದ ನಾಶಕ್ಕೆ ನಾಂದಿಯಾಗಿದೆ. ಪ್ಲಾಸ್ಟಿಕ್ ವಸ್ತುಗಳನ್ನು ನೂರು ಶೇಕಡಾ ಸಂಗ್ರಹಿಸಿ ಮರುಬಳಕೆ ಮಾಡಲು ಅಭಿಯಾನ ನಡೆಸಲು ಕರೆ ನೀಡಿದರು.
ಅಧ್ಯಕ್ಷತೆ ವಹಿಸಿದ್ದ ವಿವೇಕಾನಂದ ವಿದ್ಯಾವರ್ಧಕ ಸಂಘದ ಕಾರ್ಯದರ್ಶಿ ಡಾ. ಕೆ.ಎಂ. ಕೃಷ್ಣ ಭಟ್ ಮಾತನಾಡಿದರು. ಗಣೇಶೋತ್ಸವ ಸಮಿತಿಯ ಅಧ್ಯಕ್ಷ ಮಹೇಶ್ ನಿಟಿಲಾಪುರ ಸ್ವಾಗತಿಸಿ, ಪ್ರಧಾನ ಕಾರ್ಯದರ್ಶಿ ಡಾ. ಅರುಣ್ ಪ್ರಕಾಶ್ ವಂದಿಸಿದರು. ಡಾ. ಪ್ರೀತಿ ಎಂ. ಎಸ್. ಕಾರ್ಯಕ್ರಮ ನಿರೂಪಿಸಿದರು. ಈ ಸಂದರ್ಭದಲ್ಲಿ ಕಾಲೇಜಿನ ಪತ್ರಿಕೋದ್ಯಮ ವಿಭಾಗದ ವಿದ್ಯಾರ್ಥಿಗಳ ಪತ್ರಿಕೆ 'ವಿಕಸನ'ವನ್ನು ಬಿಡುಗಡೆಗೊಳಿಸಲಾಯಿತು. ನಂತರ ವೈಭವದ ಮೆರವಣಿಗೆಯಲ್ಲಿ ಗಣೇಶನ ವಿಸರ್ಜನೆ ನಡೆಯಿತು.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ