ಲೇಖಾ ಲೋಕ-17: ಸ್ವಾಸ್ಥ್ಯ ಸಂರಕ್ಷಕ ಡಾ. ನಾ. ಸೋಮೇಶ್ವರ

Upayuktha
0
ಸೆ. 28 , ಶನಿವಾರ ಪಾಂಚಜನ್ಯ ಪ್ರತಿಷ್ಠಾನದ ಹನ್ನೆರಡನೇ ವಾರ್ಷಿಕೋತ್ಸವ ಮತ್ತು ಆರೋಗ್ಯ ಕ್ಷೇತ್ರದ ಅನನ್ಯ ಸೇವೆಗಾಗಿ ಖ್ಯಾತ ವೈದ್ಯ ಬರಹಗಾರ ಡಾ.ನಾ. ಸೋಮೇಶ್ವರ ಅವರಿಗೆ 2024ನೇ ಸಾಲಿನ ಪ್ರತಿಷ್ಠಿತ ‘ಪಾಂಚಜನ್ಯ ಪುರಸ್ಕಾರ’ ಪ್ರದಾನ ಸಮಾರಂಭ.




ದೂರದರ್ಶನ ಚಂದನ ವಾಹಿನಿಯಲ್ಲಿ ""ಥಟ್ ಅಂತ ಹೇಳಿ " ಕಾಯ೯ಕ್ರಮದ ರೂವಾರಿ ಡಾ॥ ನಾ. ಸೋಮೇಶ್ವರ ಅವರು ಚಿರಪರಿಚಿತರು. ಕನ್ನಡ ಕ್ವಿಜ್ ಕಾಯ೯ಕ್ರಮಶುದ್ಧ ಕನ್ನಡದಲ್ಲಿ ಅನೇಕ ವಿಷಯಗಳ ಪ್ರಶ್ನೆಗಳನ್ನು ಭಾಗವಹಿಸಿದವರಿಗೆ ಕೇಳಿ, ವೀಕ್ಷಕರಿಗೂ ಅದರ ಪರಿಜ್ಞಾನ ತಿಳಿಸುವ ಚಾಕಚಕ್ಯತೆ ಪ್ರವೀಣರು ಡಾ॥ ನಾ. ಸೋಮೇಶ್ವರ ಅವರು. 


ಭಾರತದ ಟೆಲಿವಿಷನ್ ಇತಿಹಾಸದಲ್ಲಿ ಒಂದು ವಿಕ್ರಮ ಸಾಧಿಸಿ, ದಾಖಲೆ ಮಾಡಿ, ಕ್ರಮಬದ್ದ ಕ್ವಿಜ್ ನಡೆಸಿ ಬಹು ಪ್ರಖ್ಯಾತರಾದ ಡಾ॥ ನಾ. ಸೋಮೇಶ್ವರ ಅವರು, ವೃತ್ತಿಯಿಂದ ವೈದ್ಯರಾಗಿ,ಅನೇಕ ಲೇಖನಗಳನ್ನು, ಕೃತಿಗಳನ್ನು ರಚಿಸಿದ ಮಹನೀಯರು. 

ಡಾ॥ ಸೋಮೇಶ್ವರ ಅವರು ನಾರಪ್ಪ ಮತ್ತು ಅಂಜನಾರವರ ಪುತ್ರನಾಗಿ, ಮಲ್ಲೇಶ್ವರ, ಬೆಂಗಳೂರಿನಲ್ಲಿ ತಾ॥14-5-1955 ರಂದು ಜನಿಸಿದರು. ಬಿ ಎಸ್ ಸಿ ಪದವಿ ಗಳಿಸಿ, ನಂತರ ಎಂ ಬಿ ಬಿ ಎಸ್ ಪದವಿಯನ್ನುಬೆಂಗಳೂರಿನ ಮೆಡಿಕಲ್ ಕಾಲೇಜಿನಲ್ಲಿ ಮತ್ತು ಎಸ್ ಆರ್ ಎಂ  ವೈದ್ಯಾಲಯ,ಚೆನ್ನೈ ನಲ್ಲಿ ವೈದ್ಯಕೀಯ ಶಿಕ್ಷಣ ಪಡೆದರು. ವೈದ್ಯಕೀಯ ಸೇವೆ ಮಾಡುತ್ತಾ, ಜೀವನಾಡಿ ಆರೋಗ್ಯ ಮಾಸಿಕ ಪತ್ರಿಕೆಯ ಸಂಪಾದಕರಾಗಿ,ಅನೇಕ ಲೇಖನಗಳನ್ನು, ಉಪನ್ಯಾಸಗಳನ್ನು ತಮ್ಮದೇ ಆದ ಶೈಲಿಯ ಮೂಲಕ ನಾಡಿಗೆ ವಿವರಿಸಿದ ವೈದ್ಯರು. 


ಅನುವಂಶಿಕ ರೋಗಗಳ ಬಗ್ಗೆ ಹಂಪಿ ಕನ್ನಡ ವಿಶ್ವವಿದ್ಯಾಲಯದ ವೈದ್ಯ ವಿಶ್ವಕೋಶದಲ್ಲಿ ಹಲವಾರು ಲೇಖನಗಳನ್ನು ಬರೆದು ಪ್ರಸಿಧ್ಧರಾದ ಡಾಕ್ಟರ್. ದೂರದರ್ಶನ ಮತ್ತು ಆಕಾಶವಾಣಿಯಲ್ಲಿ ವೈದ್ಯಕೀಯ ವಿಜ್ಞಾನದ ಬಗ್ಗೆ ಕಾರ್ಯಕ್ರಮಗಳನ್ನು ರೂಪಿಸಿದ್ದಾರೆ. ಏಳು ಸುತ್ತಿನ ಕೋಟೆಯಲ್ಲಿ ಎಂಟು ಕೋಟಿ ಭಂಟರು, ಮನುಷ್ಯ ದೇಹದ ಸ್ವನಿರೋಧಕ ಶಕ್ತಿ ಬಗ್ಗೆ ವಿವರಣೆಯನ್ನು ನೀಡಿ, ಬದುಕು ನೀಡುವ ಬದಲಿ ಜೋಡಣೆ, ಪ್ರಕೃತಿಯ ಸೂಪರ್ ಕಂಪ್ಯೂಟರ್ ಮಿದುಳು ಮುಂತಾದವು ಪ್ರಮುಖ ಕೃತಿಗಳು. 

ಮೂಢನಂಬಿಕೆಗಳ ನಿವಾರಣೆ, ಆರೋಗ್ಯ ಜಾಗೃತಿ, ಏಡ್ಸ್ ಕುರಿತು ಅನೇಕಸಂಘ ಸಂಸ್ಥೆಗಳಲ್ಲಿ, ಕಾಲೇಜಿನಲ್ಲಿ, ಉಪನ್ಯಾಸ, ಸಂವಾದಗಳನ್ನು ನಡೆಸಿ ಜನಜಾಗೃತಿ ಮಾಡಿದ್ದಾರೆ. ವೈದ್ಯಕೀಯ ಸಂಬಂಧಪಟ್ಟ ಅನೇಕ ಪ್ರಶಸ್ತಿಗಳು ಇವರಿಗೆ ಅರಸಿಬಂದಿವೆ. ವೈದ್ಯ ಸಾಹಿತ್ಯ ಪ್ರಶಸ್ತಿ, ಡಾಕ್ರ‍್ಸ್ ಡೇ ಅವಾರ್ಡ್‌ ,ಕರ್ನಾಟಕ ಸಾಹಿತ್ಯ ಅಕಾಡೆಮಿ ಪ್ರಶಸ್ತಿ, ಆರ್ಯಭಟ ಅಂತರಾಷ್ಟ್ರೀಯ ಪ್ರಶಸ್ತಿ, ವಿದ್ಯಾರತ್ನ ರಾಷ್ಟ್ರೀಯ ಪ್ರಶಸ್ತಿ, ಡಾ॥ಬಿ ಸಿ ರಾಯ್ ವೈದ್ಯ ದಿನಾಚರಣೆ ಪ್ರಶಸ್ತಿ, ರನ್ನಸಾಹಿತ್ಯ ಪ್ರಶಸ್ತಿ, ಎಂ ಜಿ ರಂಗನಾಥನ್ ಸ್ಮಾರಕ ಪುಸ್ತಕ ಬಹುಮಾನ, ಸ್ನೇಹಸೇತು ಪ್ರಶಸ್ತಿ ಲಭಿಸಿವೆ. ಜ್ಞಾನೇಂದ್ರಿಯಗಳು ಮತ್ತು ನಮ್ಮ ಒಡಲ ವಿಸರ್ಜನಾಂಗಗಳು ಕೃತಿಗೆ 2012-13  ಕನಾ೯ಟಕ ಸೈನ್ಸ್ ಮತ್ತು ಟೆಕ್ನಾಲಜಿ ಅಕಾಡೆಮಿಯಿಂದ  ಉತ್ತಮ ಲೇಖಕ  ಎಂದು ಪ್ರಶಸ್ತಿ ಸಂದಿವೆ . 


ದೂರದರ್ಶನ ಚಂದನ ವಾಹಿನಿಯ "ಥಟ್ ಅಂತ ಹೇಳಿ" 2004ರಿಂದ ಪ್ರಾರಂಭವಾಗಿ, ನಿರಂತರ ವಾರದಲ್ಲಿ, ಐದು ದಿವಸ ಕಾಯ೯ಕ್ರಮವನ್ನು ನಡೆಸಿ, ಲಿಮ್ಕಾ ಬುಕ್ ಆಫ್ ರಿಕಾರ್ಡ್ಸ್‌  ದಾಖಲೆ ಮಾಡಿದ್ದಾರೆ. ಡಾ॥ ನಾ.ಸೋಮೇಶ್ವರ ಅವರು  ಬಿಡುವಿಲ್ಲದ ಲೇಖಕರು ಮತ್ತು ನವ ನವೀನ ಪರಿಜ್ಞಾನದ ಸಂಶೋಧಕರು.  22 ವಷ೯ಗಳಲ್ಲಿ, 4750 ಕಂತುಗಳ ಥಟ್ ಅಂತ ಹೇಳಿ  ಕಾರ್ಯಕ್ರಮ ಪ್ರಸಾರ, ದೂರದರ್ಶನ ಮಾಧ್ಯಮದಲ್ಲಿ (ಚಂದನ) ನಿರಂತರ  ಪ್ರಸಾರವಾಗುತ್ತಾ, ಈಗ ಗಿನ್ನೆಸ್ ದಾಖಲೆಯತ್ತ ಸಾಗುತ್ತಿದೆ. ಕತಾರ್, ಮಲೇಷಿಯಾ, ಅಮೆರಿಕ ಕನ್ನಡ ಸಂಘಗಳು ಇವರನ್ನು ಆಹ್ವಾನಿಸಿ ಕ್ವಿಜ್  ಕಾರ್ಯಕ್ರಮಗಳನ್ನು ಏಪ೯ಡಿಸಿವೆ. 2019ರಲ್ಲಿ  ಕ್ವಿಜ್ ಮಾಸ್ಟರ್ ಡಾ॥ ನಾ. ಸೋಮೇಶ್ವರ ಅವರಿಗೆ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ನೀಡಿ ಸನ್ಮಾನಿಸಲಾಯಿತು. ಯಲಹಂಕದಲ್ಲಿ ಜರುಗಿದ ವಿಧಾನಸಭಾ  ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷತೆ ವಹಿಸಿ, ಯಶಸ್ವಿಗೊಳಿಸಿದ ಮಹನೀಯರು. ಕನ್ನಡ ವೈದ್ಯರ ಬರಹಗಾರರ  5 ನೇ ಸಮ್ಮೇಳನದ ಅಧ್ಯಕ್ಷತೆ, ಅಕ್ಕ (ಅಮೆರಿಕ) ಸಮ್ಮೇಳನದ ಆಹ್ವಾನಿತರಾಗಿದ್ದರು. ನಿರಂತರ ಬರಹಗಾರರಾಗಿ ಬಿಡುವಿಲ್ಲದ ಕ್ವಿಜ್ ಮಾಸ್ಟರ್ ಜ್ಞಾನ ಜಿಜ್ಞಾಸುಗಳಿಗೆ ಅಪರೂಪದ ವೈದ್ಯರು.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 

Post a Comment

0 Comments
Post a Comment (0)
Mandovi Motors Presents MONSOON BONANZA
Mandovi Motors Presents MONSOON BONANZA
To Top