ಭಾರತವನ್ನು ವಿಶ್ವಗುರುವನ್ನಾಗಿಸುವ ಜವಾಬ್ದಾರಿ ಯುವಜನತೆಯದು

Upayuktha
0

ವಿವೇಕಾನಂದ ಕಾಲೇಜಿನ ವಿದ್ಯಾರ್ಥಿ ಸಂಘ ಉದ್ಘಾಟಿಸಿದ ಮಾಜಿ ಸಂಸದ ಪ್ರತಾಪ ಸಿಂಹ



ಪುತ್ತೂರು:  ಜೀವನದ ಶ್ರೇಯಸ್ಸು ಹಾಗೂ ಸಾರ್ಥಕತೆ ನಾವು ಎಷ್ಟು ವರ್ಷ ಬದುಕಿದ್ದೇವೆ ಎನ್ನುವುದರಲ್ಲಿಲ್ಲ. ಬದಲಾಗಿ ನಾವು ಯಾವ ರೀತಿ ಬದುಕಿದ್ದೇವೆ ಎನ್ನುವುದರಲ್ಲಿದೆ. ವಿದ್ಯೆಗೆ ಯಾವುದೇ ತಾರತಮ್ಯವಿಲ್ಲ. ಅದನ್ನು ನಮ್ಮ ಬದುಕಿನಲ್ಲಿ ಎಷ್ಟರ ಮಟ್ಟಿಗೆ ಸಿದ್ಧಿಸಿಕೊಳ್ಳುತ್ತೇವೆ ಎನ್ನುವುದು ಮುಖ್ಯ..ಇಂದಿನ ಯುವಜನತೆ ಸಾಮಾಜಿಕ ಮಾಧ್ಯಮದಲ್ಲಿ ಕಳೆದುಹೋಗಬೇಡಿ. ನಮ್ಮ ಬುದ್ಧಿಶಕ್ತಿಯ ಮುಂದೆ ಎಲ್ಲವೂ ಶೂನ್ಯ ವಿದ್ಯೆಯು ನಮ್ಮ ಭವಿಷ್ಯದ ಜೊತೆ ರಾಷ್ಟ್ರದ ಭವಿಷ್ಯವನ್ನು ನಿರ್ಧರಿಸುತ್ತದೆ. ಆದ್ದರಿಂದ ಭಾರತವನ್ನು ವಿಶ್ವ ಗುರು ಮಾಡುವ ಜವಾಬ್ದಾರಿ ಯುವ ಜನತೆಯ ಕೈಯಲ್ಲಿದೆ ಎಂದು ಮೈಸೂರು, ಕೊಡಗು ಮಾಜಿ ಸಂಸದ, ಖ್ಯಾತ ಅಂಕಣಕಾರ ಪ್ರತಾಪ್ ಸಿಂಹ ಹೇಳಿದರು.


ಇವರು ಪುತ್ತೂರಿನ ವಿವೇಕಾನಂದ ಕಲಾ, ವಿಜ್ಞಾನ ಮತ್ತು ವಾಣಿಜ್ಯ ಮಹಾವಿದ್ಯಾಲಯ (ಸ್ವಾಯತ್ತ)ಇಲ್ಲಿ ನಡೆದ 2024-2025 ನೇ ಸಾಲಿನ ವಿದ್ಯಾರ್ಥಿ ಸಂಘವನ್ನು ಉದ್ಘಾಟಿಸಿ ಮಾತನಾಡಿದರು. 


ನಮ್ಮ ಸಮಾಜ ಅಭಿವೃದ್ಧಿಯಾಗಬೇಕಾದರೆ ಎಲ್ಲಾ ಕ್ಷೇತ್ರಗಳು ಅಭಿವೃದ್ಧಿಯಾಗಬೇಕಾಗುತ್ತದೆ. ಹಾಗಾಗಿ ಶಿಕ್ಷಕರು ವಿದ್ಯಾರ್ಥಿಗಳಲ್ಲಿರುವ ಕೌಶಲ್ಯವನ್ನು ಗುರುತಿಸಿ ಅವರನ್ನು ಪ್ರೋತ್ಸಾಹಿಸಬೇಕು. ಕಷ್ಟಗಳು ಮನುಷ್ಯನ ಬದುಕಿನ ವ್ಯಕ್ತಿತ್ವವನ್ನು ರೂಪಿಸುತ್ತದೆ. ವಿದ್ಯೆಯು  ಒಬ್ಬ ವ್ಯಕ್ತಿಯನ್ನು ಯಶಸ್ಸಿನೆಡೆಗೆ  ಕೊಂಡೊಯ್ಯುವ ಒಂದು ಅಸ್ತ್ರ. ಹಾಗಾಗಿ ವಿದ್ಯಾರ್ಥಿ ದೆಸೆಯಲ್ಲಿ ಶ್ರಧ್ದೆಯಿಂದ ಜ್ಞಾನಾರ್ಜನೆಯನ್ನು ಮಾಡಿ ದೇಶದ ಅಭಿವೃದ್ಧಿಯನ್ನು ಮಾಡಿ ಎಂದು ಆಶಿಸಿದರು.


ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ  ವಿವೇಕಾನಂದ ವಿದ್ಯಾವರ್ಧಕ ಸಂಘದ ಅಧ್ಯಕ್ಷ ಡಾ. ಪ್ರಭಾಕರ್ ಭಟ್ ಕಲ್ಲಡ್ಕ ಮಾತನಾಡಿ, ನಾವು ದೇಶಕ್ಕಾಗಿ ಮತ್ತು ಸಮಾಜದ ಒಳಿತಿಗಾಗಿ  ಬದುಕಬೇಕು. ಅಂತಹ ವ್ಯಕ್ತಿಗಳನ್ನು ಮಾತ್ರ ಸಮಾಜ ನೆನಪಿಟ್ಟುಕೊಳ್ಳಲು ಸಾಧ್ಯ. ಸಮಾಜದ ಏಳಿಗೆಗಾಗಿ  ಉತ್ತಮವಾದ ಅವಕಾಶ ದೊರೆತಾಗ ಯುವ ಜನತೆ ಅದನ್ನು ಬಳಸಿಕೊಂಡು ಜನರ ಸೇವೆ ಮಾಡಬೇಕು. ಇಡೀ ಜಗತ್ತು ನಮ್ಮನ್ನು ಆದರ್ಶವಾಗಿಟ್ಟುಕೊಂಡು ಹೋಗುವಂತ ಪೀಳಿಗೆ ನಮ್ಮದಾಗಬೇಕು ಎಂದರು.


ಕಾಲೇಜಿನ ಆಡಳಿತ ಮಂಡಳಿಯ ಅಧ್ಯಕ್ಷ  ಪ್ರೊ. ಶ್ರೀಪತಿ ಕಲ್ಲೂರಾಯ ಮತ್ತು ಸಂಚಾಲಕ ಮುರಳಿಕೃಷ್ಣ ಕೆ. ಎನ್ ವಿದ್ಯಾರ್ಥಿಗಳಿಗೆ ಶುಭ ಹಾರೈಸಿದರು.


ಕಾಲೇಜಿನ ಪ್ರಾಂಶುಪಾಲ ಪ್ರೊ.ವಿಷ್ಣು ಗಣಪತಿ ಭಟ್ ವಿದ್ಯಾರ್ಥಿಗಳಿಗೆ ಭಗವದ್ಗೀತೆ ಪುಸ್ತಕವ್ನು ನೀಡಿ ಪ್ರಮಾಣ ವಚನವನ್ನು ಬೋಧಿಸಿದರು.  ವೇದಿಕೆಯಲ್ಲಿ ಕಾಲೇಜಿನ ವಿಶೇಷ ಅಧಿಕಾರಿ ಹಾಗೂ ಇತಿಹಾಸ ವಿಭಾಗದ ಮುಖ್ಯಸ್ಥ ಡಾ ಶ್ರೀಧರ್ ನಾಯ್ಕ್ .ಬಿ ಉಪಸ್ಥಿತರಿದ್ದರು.


ಕಾರ್ಯಕ್ರಮದಲ್ಲಿ ವಿದ್ಯಾರ್ಥಿ ಸಂಘದ ಅಧ್ಯಕ್ಷ  ಕೆ ಆಶಿಶ್ ಆಳ್ವ ಪ್ರಾಸ್ತಾವಿಕ ಮಾತುಗಳನ್ನಾಡಿ, ಕಾರ್ಯದರ್ಶಿ ನಿಖಿಲ್ ಕುಮಾರ್ ಕೆ.ಟಿ ಸ್ವಾಗತಿಸಿ, ಜೊತೆ ಕಾರ್ಯದರ್ಶಿ ಪೃಥ್ವಿ ಆರ್ ಆಳ್ವ ವಂದಿಸಿ, ತೃತೀಯ ಕಲಾವಿಭಾಗದ ವಿದ್ಯಾರ್ಥಿನಿ  ಪ್ರಸಾದಿನಿ ಕೆ ನಿರ್ವಹಿಸಿದರು.


ಕಾರ್ಯಕ್ರಮದಲ್ಲಿ ಕಾಲೇಜಿನ ವಿದ್ಯಾರ್ಥಿ ಸಂಘದ ಚುನಾವಣಾ ವಿಶೇಷವಾಗಿ ರೂಪಿಸಿದ  ತೃತೀಯ ಪತ್ರಿಕೋದ್ಯಮ ವಿದ್ಯಾರ್ಥಿಗಳ  ಪ್ರಾಯೋಗಿಕ ಪತ್ರಿಕೆ ‘ವಿಕಸನ’ವನ್ನು ಮಾಜಿ ಸಂಸದ ಪ್ರತಾಪ್ ಸಿಂಹ ಬಿಡುಗಡೆಗೊಳಿಸಿದರು.


Post a Comment

0 Comments
Post a Comment (0)
Mandovi Motors Presents MONSOON BONANZA
Mandovi Motors Presents MONSOON BONANZA
To Top