ಮಾನವ ಜನ್ಮ ದೊಡ್ಡದು, ಆತ್ಮಹತ್ಯೆ ಪರಿಹಾರವಲ್ಲ

Upayuktha
0


ದುಕಿಗಾಗಿ ಹೋರಾಟ ಅನಿವಾರ್ಯ. ಆದರೆ ಇತ್ತೀಚಿಗಿನ ದಿನಗಳಲ್ಲಿ ಬದುಕು ಮುಗಿಸಿಕೊಳ್ಳಲು ಹೋರಾಟ ಹೆಚ್ಚುತ್ತಿರುವುದನ್ನು ಕಂಡಾಗ ಕಸಿವಿಸಿಯಾಗುತ್ತದೆ. ಕೆಲವರು ಸಣ್ಣಪುಟ್ಟ ಸಮಸ್ಯೆಗಳಿಗೂ ಆತ್ಮಹತ್ಯೆಯ ದಾರಿ ಹಿಡಿಯುತ್ತಿದ್ದಾರೆ. ಮೊಬೈಲ್​ನಲ್ಲಿ ಹೆಚ್ಚು ಮಾತನಾಡುವುದಕ್ಕೆ ಆಕ್ಷೇಪಿಸಿದ ತಾಯಿಯ ಮೇಲೆ ಮುನಿಸಿಕೊಂಡು ಮಗಳು ಆತ್ಮಹತ್ಯೆ ಮಾಡಿಕೊಂಡಂತಹ ಘಟನೆಗಳು ಜೀವ ಮತ್ತು ಜೀವನ ಅರ್ಥ ಕಳೆದುಕೊಳ್ಳುತ್ತಲಿದೆ ಎಂದೆನ್ನಸದೆ ಇರದು.


'ಆತ್ಮಹತ್ಯೆಯ ನಿರೂಪಣೆಯನ್ನು ಬದಲಾಯಿಸೋಣ' 

ಆತ್ಮಹತ್ಯೆ ಮಾಡಿಕೊಳ್ಳಲು ಯತ್ನಿಸುವವರ ಮನಃ ಪರಿವರ್ತನೆ ಮಾಡಲು ಹಾಗೂ ಮಾನಸಿಕ ಆರೋಗ್ಯದ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸಲು ಪ್ರತಿವರ್ಷ ಸೆಪ್ಟೆಂಬರ್ 10 ಅನ್ನು ವಿಶ್ವ ಆತ್ಮಹತ್ಯೆ ತಡೆ ದಿನವನ್ನಾಗಿ ಆಚರಿಸಲಾಗುತ್ತದೆ. ನಿರ್ದಿಷ್ಟ ಧೈಯದೊಂದಿಗೆ ವಿಶ್ವ ಆರೋಗ್ಯ ಸಂಸ್ಥೆ ವಿಶ್ವ ಆತ್ಮಹತ್ಯೆ ತಡೆ ದಿನವನ್ನು ಆಚರಿಸುತ್ತದೆ. 2024-2026ರ ವರೆಗೆ 'ಆತ್ಮಹತ್ಯೆಯ ನಿರೂಪಣೆಯನ್ನು ಬದಲಾಯಿಸೋಣ' ಎಂಬ ಧೈಯವಾಕ್ಯದೊಂದಿಗೆ ಆತ್ಮಹತ್ಯೆಗೆ ಯತ್ನಿಸುವ ವ್ಯಕ್ತಿಯನ್ನು ಮಾತನಾಡಿಸುವುದು, ಅವರ ದುಃಖದಲ್ಲಿ ನಾವು ಭಾಗಿಯಾಗೋಣ ಈ ಮೂಲಕ ಆತನನ್ನು ಅಪಾಯದಿಂದ ಪಾರು ಮಾಡೋಣ ಎಂಬ ಉದ್ದೇಶ ಹೊಂದಿದೆ.


ಆತಂಕಕಾರಿ ಅಂಕಿಅಂಶ

ಜೀವ ಹಾಗೂ ಜೀವನ ಎರಡೂ ಬಹು ಅಮೂಲ್ಯವಾದುದು. ಸಮಸ್ಯೆಗಳಿಗೆ ಬೆದರಿ ಆತ್ಮಹತ್ಯೆಗೆ ಮನಸ್ಸು ಮಾಡಿದರೆ ಸಮಸ್ಯೆ ಬಗೆಹರಿಯದು. ಅದು ಇನ್ನಷ್ಟು ಉಲ್ಬಣಿಸಿ ಇಡೀ ಕುಟುಂಬವನ್ನೇ ಘಾಸಿಗೊಳಿಸುತ್ತದೆ. ಓರ್ವನ ಆತ್ಮಹತ್ಯೆ 125 ಜನರ ಮೇಲೆ ಪರಿಣಾಮ ಬೀರುತ್ತದೆ ಎನ್ನುತ್ತಾರೆ ಮನಶಾಸ್ತ್ರಜ್ಞರು. 


ಪ್ರತಿ ವರ್ಷ 720 000 ಕ್ಕೂ ಹೆಚ್ಚು ಜನರು ಅಂದರೆ ವಿಶ್ವದ ಪ್ರತಿ 100 ಸಾವುಗಳಲ್ಲಿ ಒಬ್ಬರು ಆತ್ಮಹತ್ಯೆಯಿಂದ ಸಾಯುತ್ತಾರೆ. ಇದರ 20 ಪಟ್ಟು ಮಂದಿ ಆತ್ಮಹತ್ಯೆ ಮಾಡಿಕೊಳ್ಳಲು ಪ್ರಯತ್ನಿಸುತ್ತಾರೆ. 15-29 ವರ್ಷ ವಯಸ್ಸಿನವರಲ್ಲಿ ಆತ್ಮಹತ್ಯೆಯು ಸಾವಿಗೆ ನಾಲ್ಕನೇ ಪ್ರಮುಖ ಕಾರಣವಾಗಿದೆ. ಜಾಗತಿಕ ಆತ್ಮಹತ್ಯೆಗಳಲ್ಲಿ ಶೇ. 73 ರಷ್ಟು ಆತ್ಮಹತ್ಯೆಗಳು ಕಡಿಮೆ ಮತ್ತು ಮಧ್ಯಮ-ಆದಾಯದ ದೇಶಗಳಲ್ಲಿ ಸಂಭವಿಸುತ್ತವೆ.


ಭಾರತದಲ್ಲಿ ರಾಷ್ಟ್ರೀಯ ಅಪರಾಧ ದಾಖಲೆಗಳ ಸಂಸ್ಥೆಯ 2022ರ ಅಂಕಿ-ಅಂಶಗಳ ಪ್ರಕಾರ, ವಾರ್ಷಿಕವಾಗಿ 1.7 ಲಕ್ಷ ಮಂದಿ ಆತ್ಮಹತ್ಯೆಯಿಂದ ಸಾವನ್ನಪ್ಪಿದ್ದಾರೆ. ಅದರಲ್ಲಿ 1.21 ಲಕ್ಷ ಪುರುಷರು ಮತ್ತು 44 ಸಾವಿರ ಮಹಿಳೆಯರಿದ್ದಾರೆ. ಆತ್ಮಹತ್ಯೆಯ ಪ್ರಮಾಣವು 1,00,000 ಕ್ಕೆ 12.4 ಕ್ಕೆ ಹೆಚ್ಚಾಗಿದೆ. ಭಾರತದಲ್ಲಿ ಇದುವರೆಗೆ ದಾಖಲಾದ ಅತ್ಯಧಿಕ ದರ ಇದಾಗಿದೆ. ಆತಂಕಕಾರಿ ಅಂಶ ಎಂದರೆ ಎಲ್ಲಾ ಆತ್ಮಹತ್ಯೆ ಪ್ರಕರಣಗಳಲ್ಲಿ ಶೇಕಡಾ 40 ಕ್ಕಿಂತ ಹೆಚ್ಚು 30 ವರ್ಷಕ್ಕಿಂತ ಕಡಿಮೆ ವಯಸ್ಸಿನ ಯುವ ವಯಸ್ಕರಲ್ಲಿದೆ.


NCRB ವರದಿ (2024)

ಭಾರತದಲ್ಲಿ ಒಟ್ಟಾರೆ ಆತ್ಮಹತ್ಯೆ ಪ್ರಮಾಣಗಳು ವಾರ್ಷಿಕವಾಗಿ ಶೇ.2 ರಷ್ಟು ಹೆಚ್ಚಿದ್ದರೆ, ವಿದ್ಯಾರ್ಥಿಗಳ ಆತ್ಮಹತ್ಯೆಯ ಪ್ರಮಾಣವು ಶೇ.4 ರಷ್ಟು ಹೆಚ್ಚಾಗಿದೆ ಎಂಬ ಆಘಾತಕಾರಿ ಅಂಶದತ್ತ ರಾಷ್ಟ್ರೀಯ ಅಪರಾಧ ದಾಖಲೆಗಳ ಬ್ಯೂರೋ (NCRB) ವರದಿ (2024) ಆಧಾರಿತ ಅಧ್ಯಯನವು ಬೊಟ್ಟುಮಾಡುತ್ತದೆ.


’ವಿದ್ಯಾರ್ಥಿ ಆತ್ಮಹತ್ಯೆ ಎಂಬ ಸಾಂಕ್ರಾಮಿಕ ರೋಗ’ ವರದಿಯಲ್ಲಿ ವರ್ಷದಿಂದ ವರ್ಷಕ್ಕೆ ವಿದ್ಯಾರ್ಥಿ ಆತ್ಮಹತ್ಯೆಗಳು ಭಾರತದ ವಾರ್ಷಿಕ ಜನಸಂಖ್ಯಾ ಬೆಳವಣಿಗೆ ದರವನ್ನು ಮೀರಿಸುತ್ತಿದೆ ಎಂದು ಉಲ್ಲೇಖಿಸಲಾಗಿದೆ. 2013ರಲ್ಲಿ6,654 ಇದ್ದ ವಿದ್ಯಾರ್ಥಿ ಆತ್ಮಹತ್ಯೆ ಸಂಖ್ಯೆ 10 ವರ್ಷಗಳ ಬಳಿಕ 2023ರ ಹೊತ್ತಿಗೆ 13,044ರ ವರೆಗೆ ಏರಿಕೆ ಕಂಡಿದೆ.


ವಿದ್ಯಾರ್ಥಿಗಳ ಆತ್ಮಹತ್ಯೆಗಳ ಪ್ರಮಾಣವು ಜನಸಂಖ್ಯೆಯ ಬೆಳವಣಿಗೆ ಮತ್ತು ಒಟ್ಟಾರೆ ಆತ್ಮಹತ್ಯೆ ಪ್ರವೃತ್ತಿಗಳೆರಡನ್ನೂ ಸತತವಾಗಿ ಮೀರಿಸಿದೆ. ಕಳೆದ ಒಂದು ದಶಕದಲ್ಲಿ(2013-2024), 0-24 ವರ್ಷ ವಯಸ್ಸಿನ ವ್ಯಕ್ತಿಗಳ ಜನಸಂಖ್ಯೆಯು 582 ಮಿಲಿಯನ್‌ನಿಂದ 581 ಮಿಲಿಯನ್‌ಗೆ ಇಳಿದಿದ್ದರೆ, ವಿದ್ಯಾರ್ಥಿಗಳ ಆತ್ಮಹತ್ಯೆಗಳ ಸಂಖ್ಯೆಯು 6,654 ರಿಂದ 13,044 ಕ್ಕೆ ತೀವ್ರವಾಗಿ ಏರಿದೆ" ಎಂದು ವರದಿ ಹೇಳಿದೆ. ಕಳೆದ ಎರಡು ದಶಕಗಳಲ್ಲಿ ಒಟ್ಟು ಆತ್ಮಹತ್ಯೆಗಳು ವಾರ್ಷಿಕವಾಗಿ ಸರಾಸರಿ ಶೇ.2 ರಷ್ಟು ಹೆಚ್ಚಿವೆ ಆದರೆ ವಿದ್ಯಾರ್ಥಿಗಳ ಆತ್ಮಹತ್ಯೆಗಳು ಶೇ. 4 ರಷ್ಟು ಹೆಚ್ಚಾಗಿದೆ.


ಭಾರತದಲ್ಲಿ 15 ಮತ್ತು 24 ವರ್ಷದೊಳಗಿನ ಏಳು ಯುವಕರಲ್ಲಿ ಒಬ್ಬರು ಖಿನ್ನತೆ ಮತ್ತು ನಿರಾಸಕ್ತಿಯ ಲಕ್ಷಣಗಳನ್ನು ಒಳಗೊಂಡಂತೆ ಕಳಪೆ ಮಾನಸಿಕ ಆರೋಗ್ಯವನ್ನು ಹೊಂದಿರುವುದು ಆತಂಕಕಾರಿ ಅಂಶ. ಮಕ್ಕಳ ಮನೋಸ್ಥೈರ್ಯ ಹೆಚ್ಚಿಸಬೇಕು ಈ ಆಘಾತಕಾರಿ ಅಂಕಿ ಅಂಶಗಳು ನಮ್ಮ ಶಿಕ್ಷಣ ಸಂಸ್ಥೆಗಳಲ್ಲಿ ಮಾನಸಿಕ ಆರೋಗ್ಯ ಸವಾಲುಗಳನ್ನು ಪರಿಹರಿಸುವ ತುರ್ತು ಅಗತ್ಯವನ್ನು ನೆನಪಿಸುತ್ತದೆ. ನಮ್ಮ ಶೈಕ್ಷಣಿಕ ಗಮನವು ಮಕ್ಕಳ ಕಲಿಕಾ ಸಾಮರ್ಥ್ಯಗಳನ್ನು ಪೋಷಿಸಿ ಅವರ ಒಟ್ಟಾರೆ ಯೋಗಕ್ಷೇಮವನ್ನು ಬೆಂಬಲಿಸಬೇಕೇ ವಿನಃ ಸ್ಪರ್ಧಾತ್ಮಕತೆಯನ್ನು ಉತ್ತೇಜಿಸಬಾರದು. ಸೋತಾಗ ಕುಗ್ಗದಂತೆ ಧೈರ್ಯದ ಮಾತುಗಳಿಂದ ಮಕ್ಕಳಿಗೆ ನಂಬಿಕೆ, ವಿಶ್ವಾಸವನ್ನು ತುಂಬಬೇಕು. ಶಾಲೆ ಎಂದರೆ ಓದು ಬರಹವಷ್ಟೇ ಅಲ್ಲ, ಮಕ್ಕಳ ಸರ್ವತೋಮುಖ ಬೆಳವಣಿಗೆಗೆ ಪೂರಕವಾದ ಅಂಶವಿರಬೇಕು. 


ಮಕ್ಕಳ ಮನೋಸ್ಥೆರ್ಯ ತುಂಬುವ ಕಾರ್ಯಗಳು  ನಿರಂತರವಾಗಿ ಪಠ್ಯದ ಭಾಗವಾಗಿಯೇ ನಡೆಯಬೇಕು. ಪ್ರತಿ ಮಗುವಿನ ಸಾಮರ್ಥ್ಯಕ್ಕೆ ಅನುಗುಣವಾಗಿ ಕೌಶಲ್ಯವರ್ಧನೆ ಹಾಗೂ ವೃತ್ತಿ ಮಾರ್ಗದರ್ಶನ ಇಂದಿನ ಅಗತ್ಯ. ಈ ಚಟುವಟಿಕೆಗಳು ಮಾನವ ಸಂಪನ್ಮೂಲದ ಸದ್ಭಳಕೆಗೂ ಪೂರಕ. ಮಕ್ಕಳಿಗೆ ನೈತಿಕ ಸ್ಥೈರ್ಯ ತುಂಬಿ ಉತ್ತಮ ಅಭ್ಯಾಸದಲ್ಲಿ ತೊಡಗುವಂತೆ ಮಾಡುವುದೇ ಇಂದಿನ ಸವಾಲು.


ವಿದ್ಯಾರ್ಥಿ, ಮಕ್ಕಳ ಆತ್ಮಹತ್ಯೆಗೆ ನಾನಾ ಕಾರಣ, ಹಿನ್ನೆಲೆ ಇರುತ್ತದೆ. ಪೋಷಕರ ನಿರೀಕ್ಷೆ, ಅತಿಯಾದ ಶೈಕ್ಷಣಿಕ ಒತ್ತಡ, ಕಡಿಮೆ ಅಂಕ ಗಳಿಸಿದರೆ ಜೀವನವೇ ಹಾಳಾಗುತ್ತದೆ ಎಂಬ ಭಾವನೆಯನ್ನು, ಮಾನಸಿಕ ಖಿನ್ನತೆ, ಜಿಗುಪ್ಸೆ, ಹತಾಶೆ ,ಒತ್ತಡ ಬೀರುವ ವಾತಾವರಣ, ಸಂಬಂಧಗಳಲ್ಲಿ ಏರುಪೇರು ಹೀಗೆ ಹಲವು ಕಾರಣಗಳು ಮಕ್ಕಳ ದುಡುಕಿನ ತೀರ್ಮಾನಕ್ಕೆ ಕಾರಣವಾಗಬಹುದು. ಮಕ್ಕಳು ದುಡುಕು ತೀರ್ಮಾನ ಕೈಗೊಳ್ಳಲು ಕಾರಣವಾದ ಅಂಶಗಳು, ವಿದ್ಯಾರ್ಥಿಗಳು ಎದುರಿಸುತ್ತಿರುವ ಸವಾಲುಗಳು, ಮಕ್ಕಳಲ್ಲಿ ಒತ್ತಡ ನಿವಾರಣೆಗೆ ಪೋಷಕರು ಹಾಗೂ ಶಿಕ್ಷಕರು ಗಮನ ಕೊಡಬೇಕಾದ ಅನಿವಾರ್ಯತೆ ಇದೆ. ಮಕ್ಕಳು ಒತ್ತಡಕ್ಕೆ ಸಿಲುಕದಂತೆ ತಡೆಗಟ್ಟುವಲ್ಲಿ ಪೋಷಕರು, ಶಾಲೆ, ಸಮಾಜ ಎಲ್ಲರ ಪಾತ್ರವಿದೆ. 


ನದಿಯ ಹರಿವಿಗೆ ಒಂದು ಇಬ್ಬದಿಯ ತಡೆ ಬೇಕು ನದಿಯ ಹರಿವಿಗೆ ಒಂದು ಇಬ್ಬದಿಯ ತಡೆ ಬೇಕು. ಇಲ್ಲದಿದ್ದರೆ ಅದು ದಿಕ್ಕುದೆಸೆಯಿಲ್ಲದೆ ಹರಿಯುತ್ತದೆ. ಅದಕ್ಕೆ ಇಬ್ಬದಿಯ ಕಟ್ಟೆ ನಿರ್ಮಿಸಿದರೆ ಅದು ಸರಾಗವಾಗಿ ತನ್ನ ಗಮ್ಯವನ್ನು ಸೇರುವುದಷ್ಟೇ ಅಲ್ಲ ತನ್ನ ಹರಿವಿನ ಸುತ್ತಲಿನ ಪ್ರದೇಶವನ್ನು ಸಸ್ಯಶ್ಯಾಮಾಲವಾಗಿಸುವ ಕೆಲಸಕ್ಕೂ ಉಪಯೋಗಕ್ಕೆ ಬರುತ್ತದೆ. ಅದರ ಹರಿವಿನ ಆಧಾರದ ಮೇಲೆ ಉತ್ಪತ್ತಿಯಾಗುವ. ಶಕ್ತಿ ಹಲವಾರು ಉಪಯೋಗಕ್ಕೆ ಬರುತ್ತದೆ. ಹಾಗಾಗಿ ನದಿಯ ಎರಡೂ ಬದಿ ಕಟ್ಟೆಯನ್ನು ಕಟ್ಟಬೇಕು.


ನಮ್ಮಲ್ಲಿ ಸುಪ್ತವಾಗಿರುವ ಶಕ್ತಿ ಸಾಮರ್ಥ್ಯಕ್ಕೆ ಒಂದು ವೇದಿಕೆ ಬೇಕು. ಶಿಕ್ಷಣದ ಮೂಲ ಉದ್ದೇಶವೇ ನಮ್ಮಲ್ಲಿ ಸುಪ್ತವಾಗಿರವ ಶಕ್ತಿ, ಕೌಶಲಗಳ ಅನಾವರಣ.  ‘ನದಿ’ ಗೆ ಯಾರಾದರೂ ಕಟ್ಟೆ ಕಟ್ಟಿದಂತೆ ನಮ್ಮೊಳಗಿರುವ ಶಕ್ತಿಗೂ ಒಂದು ಕಟ್ಟೆ ಬೇಕು. ಅದನ್ನು ನಮಗೆ ನಮ್ಮ ಬಾಲ್ಯದಲ್ಲಿ ತಮ್ಮ ತಂದೆ ತಾಯಿಯರು ನಿರ್ಮಿಸುತ್ತಾರೆ. ಹಾಗೆ ಮಾಡದಿದ್ದರೆ ನಮ್ಮಲ್ಲಿರುವ ಶಕ್ತಿ ವ್ಯರ್ಥವಾಗಿ ನಾವು ಏನಾಗಬಹುದಾಗಿತ್ತೋ ಅದಾಗದೆ ಏನೇನೋ ಆಗಿಬಿಡುತ್ತೇವೆ. ನಮ್ಮ ಶಕ್ತಿಯ ಸದುಪಯೋಗದಲ್ಲಿ ನಮ್ಮ ಪಾತ್ರವೂ ಅವಶ್ಯ ಇದೆ. ನಮಗೆ ಸ್ವತಂತ್ರವಾಗಿ ಯೋಚಿಸಲು ಸಾಧ್ಯವಾದಾಗ ನಮ್ಮ ಕ್ಷಮತೆಯನ್ನು ನಾವೇ ಗುರುತಿಸಿಕೊಂಡು ಅದನ್ನು ಸರಿಯಾದ ರೀತಿಯಲ್ಲಿ ಉಪಯೋಗಿಸಿಕೊಂಡರೆ ನಾವು ಏನಾಗಬೇಕೆಂದುಕೊಂಡರೆ ಅದಾಗಬಹುದು. ಗುಡಿಸುತ್ತಲೇ ಇರಬೇಕು. 


ಹೇಗೆ ಗದ್ದೆಯಲ್ಲಿ ಬೀಜ ಹಾಕಿಲ್ಲವೆಂದರೆ ಅಲ್ಲಿ ಹುಲ್ಲುಕಡ್ಡಿ ಬೆಳೆಯುತ್ತದೆಯೋ ಹಾಗೆ ಬುದ್ಧಿಯಲ್ಲಿ ಸಕಾರಾತ್ಮಕ ವಿಚಾರಗಳು ತುಂಬಿಲ್ಲವೆಂದರೆ ನಕಾರಾತ್ಮಕ ವಿಚಾರಗಳು ಆ ಜಾಗವನ್ನು ಆಕ್ರಮಿಸಿಕೊಳ್ಳುತ್ತದೆ.


ಮನಸ್ಸಿನಲ್ಲಿ ದನಾತ್ಮಕ ಹಾಗ ಋಣಾತ್ಮಕ ಭಾವಗಳು ಮೂಡುತ್ತಾ ಇರುತ್ತದೆ. ಅದರೊಡನೆ ಅಂತರಾತ್ಮದ ನೀರು ಕಲಕಿ ಕೆಸರಾದರೆ, ಸ್ವಲ್ಪ ಸಮಯದಲ್ಲಿ ಸಹಜವಾಗಿ ಶಭ್ರಗೊಳ್ಳುತ್ತದೆ. ಅಂತೆಯೇ ನಮ್ಮ ಋಣಾತ್ಮಕ ಆಲೋಚನೆ, ಕ್ರಿಯೆಗಳು ಸ್ವಯಂ ಅವಲೋಕನೆಗೆ ಒಳಪಟ್ಟಾಗ ನಮ್ಮ ಮನವನ್ನು ಸಂತೈಸಿ ಸರದಾರಿಯಲ್ಲಿ ನಡೆಯುವಂತೆ ಅಂತರಾತ್ಮ ಪ್ರೇರೇಪಿಸುತ್ತಿರುತ್ತದೆ.


ಮನಸ್ಸೆಂಬುದು ಒಂದು ವಿಶಾಲವಾದ ಹಜಾರದಂತೆ. ಬದುಕಿನ ಜಂಜಡದ ವಿಷಯಗಳೆಲ್ಲಾ ಅಲ್ಲಿಗೆ ದೂಳು, ಕಸದಂತೆ ಹಾರಿ ಬರುತ್ತಲೇ ಇರುತ್ತದೆ. ಮನೆಯಲ್ಲಿ ದಿನಕ್ಕೆರಡು ಬಾರಿ ಕಸ ಗುಡಿಸಿದಂತೆ ಮನವನ್ನು ಅನುಕ್ಷಣವೂ ಗುಡಿಸುತ್ತಲೇ ಇರಬೇಕು.  ಮನಸ್ಸನ್ನು ಗೆದ್ದವನು ಜಗತ್ತನ್ನು ಗೆಲ್ಲುತ್ತಾನೆ.


ಕ್ರಾಕ್ಲಿನ್ ರೂಸವೆಲ್ಟ್ ಹೇಳುತ್ತಾನೆ. ‘Men are prisoners of their own minds’ ಮನುಷ್ಯ ತನ್ನದೇ ಮನಸ್ಸಿನ ಸೆರೆಯಾಳು. ಈ ಮನಸ್ಸನ್ನು ಒಲಿಸುವುದು ಒಂದು ಸಾಹಸ. ಯಾವುದನ್ನು ಮರೆಯಬೇಕೆಂದು ಪ್ರಯತ್ನ ಮಾಡುತ್ತೇಯೆಯೋ ಅದೇ ಧುತ್ತೆಂದು ಬಂದು ಕಾಡುತ್ತದೆ. ಅದಕ್ಕೇ ಒಂದು ಸುಭಾಷಿತ ‘ಜಿತಂ ಜಗತ್ತೇನ ಮನೋ ಹಿ ಯೇನ’, ಎಂದರೆ ‘ಮನಸ್ಸನ್ನು ಗೆದ್ದವನು ಜಗತ್ತನ್ನು ಗೆಲ್ಲುತ್ತಾನೆ’ ಎನ್ನುತ್ತದೆ.


ಮಾನವ ಜನ್ಮ ದೊಡ್ಡದು  ದುಃಖ, ಸಂಕಷ್ಟದ ಸಮಯದಲ್ಲಿ ದುಡುಕಿನ ನಿರ್ಧಾರಗಳ ಬದಲು ಸ್ವಲ್ಪ ವಿವೇಕ ಬಳಸಿ, ತಾಳ್ಮೆ ವಹಿಸಿದರೆ ನಿಧಾನವಾಗಿ ಪರಿಹಾರ ಗೋಚರಿಸುತ್ತದೆ. ಸಂಕಷ್ಟದ ಸಮಯದಲ್ಲಿ ಸಂಯಮ ಜೀವನ ಮಂತ್ರವಾದರೆ ಇತರರಿಗೆ ಕಷ್ಟ ಕೊಡದೆ, ಸಾವಕಾಶವಾಗಿ ಬಿಕ್ಕಟ್ಟಿನಿಂದ ಹೊರಬರಬಹುದಲ್ಲವೇ. 


ಮಾನವ ಜನ್ಮ ದೊಡ್ಡದು, ಇದ ಹಾನಿ ಮಾಡಲು ಬೇಡಿ ಹುಚ್ಚಪ್ಪಗಳಿರಾ... ಮಾನವ ಜನ್ಮ ದೊಡ್ಡದು... ದಾಸರು ಹಾಡಿರುವ ಈ ಹಾಡೊಂದೇ ಸಾಕು ಮಾನವ ಜನ್ಮ ಎಷ್ಟು ಮಹತ್ವದ್ದೆಂದು ತಿಳಿಯಲು. ಈ ಜನುಮವನ್ನು ಸಾರ್ಥಕವಾಗಿಸುವ ಜವಾಬ್ದಾರಿ ನಮ್ಮ ಕೈಯಲ್ಲಿಯೇ ಇದೆ. ಅದಮ್ಯ ವಿಶ್ವಾಸ, ಸಕಾರಾತ್ಮಕ ಚಿಂತನೆ, ಆಶಾವಾದ, ಕಠಿಣ ಪರಿಶ್ರಮ ನಮ್ಮ ಜೀವನದ ಭಾಗವಾಗಲಿ.


-ಡಾ.ಎ.ಜಯ ಕುಮಾರ ಶೆಟ್ಟಿ

ನಿವೃತ್ತ ಪ್ರಾಂಶುಪಾಲರು, 

ಎಸ್‌ಡಿಎಂ ಕಾಲೇಜು ಉಜಿರೆ


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 




Post a Comment

0 Comments
Post a Comment (0)
Maruti Suzuki Festival of Colours
Maruti Suzuki Festival of Colours
To Top