ಎಂಭತ್ತರ ದಶಕದಲ್ಲಿ ದ.ಕ ಜಿಲ್ಲೆಯಲ್ಲಿ ಏರ್ಪಾಡಾಗಿದ್ದ ಪರಿಸರ ಸಂಬಂಧಿಸಿದ ವಿಚಾರ ಸಂಕಿರಣದ ಉದ್ಘಾಟನಾ ಭಾಷಣದಲ್ಲಿ ಅವರೊಂದು ಎಚ್ಚರಿಕೆ ಮಾತು ಹೇಳಿದ್ದರು. (ಆ ವಿಚಾರ ಸಂಕಿರಣದಲ್ಲಿ ಪರಿಸರ ರಕ್ಷಣೆಯಲ್ಲಿ ಪತ್ರಿಕೆಗಳ ಪಾತ್ರ ಕುರಿತು ನನಗೂ ಪ್ರಬಂಧ ಮಂಡಿಸುವ ಅವಕಾಶವಾಗಿತ್ತು). ಕಾರಂತರ ಭಾಷಣದಲ್ಲಿ "ಇವತ್ತು ಯಾರಾದರೂ ಸಾರ್ವಜನಿಕ ಆಸ್ತಿಯ ಮೇಲೆ ಯಾರ್ಯಾರಿಂದಲೋ ಹಲ್ಲೆಯಾಗುತ್ತಿರುವಾಗ ಪ್ರಶ್ನಿಸಿದರೆ, ಏನಿದು ನಿಮ್ಮಪ್ಪನ ಆಸ್ತಿಯೇನು?' ಎಂದು ಮರುಪ್ರಶ್ನೆ ಬರುತ್ತದೆಂದಿದ್ದರು.
ಈಗ ನೆನಪಿಸಿಕೊಳ್ಳುವುದಾದರೆ,, ನಮ್ಮ ಕರ್ನಾಟಕದ ದೈತೋಟದಿಂದ ಕೇರಳದ ತೋಟದ ಬಯಲಿನ ಪ್ರಾಥಮಿಕ ಶಾಲೆಗೆ ಹೋಗುತ್ತಲಿದ್ದ ಕಾಲವದು. ನಮ್ಮ ಕುಟುಂಬದಿಂದ ಐದಾರು ಮಂದಿ ಮಕ್ಕಳು ಜೊತೆಯಾಗಿ ಹೋಗುತ್ತಿದ್ದೆವು. ನಮ್ಮ ಜೊತೆ ನಮಗಿಂತ ಹಿರಿಯಳೂ, ಶಾಲಾ ವಿದ್ಯಾಭ್ಯಾಸಕ್ಕೆ ತಡವಾಗಿ ಸೇರಿದ್ದ ಧೂಮಾಳು ಎಂಬ ಬಾಲಕಿಯೊಬ್ಬಳಿದ್ದಳು. ತನ್ನ ತಲೆಗೆ "ಶಾಲೆ ಬರವು ಹತ್ತುವುದಿಲ್ಲ'' ಎಂದು ಅವಳು ಶಾಲೆಗೆ ಬರಲೊಪ್ಪುತ್ತಿರಲಿಲ್ಲ.
ಅವಳಮ್ಮ ನಮಗೆ ದಮ್ಮಯ್ಯ ಗುಡ್ಡೆ ಹಾಕಿ ತನ್ನ ಮಗಳನ್ನು ದಿನವೂ ಶಾಲೆಗೆ ಕರೆದೊಯ್ಯುವ ಹೊಣೆಯನ್ನು ನಮ್ಮ ಹೆಗಲಿಗೇರಿಸಿದ್ದಳು. ತನ್ನ ಹರುಕಲು ಚೀಲದೊಂದಿಗೆ ನಮಗಿಂತ ಕಿರಿಯ ಮಕ್ಕಳ ಶಾಲೆ ಚೀಲಗಳನ್ನೂ ಹೊತ್ತುಕೊಂಡು ನಮ್ಮ ಒತ್ತಾಯಕ್ಕೆ ಅವಳು ನಮ್ಮನ್ನು ಹಿಂಬಾಲಿಸುತ್ತಿದ್ದಳು. ಅವಳ ಹರಿದ ಚೀಲದಲ್ಲಿದ್ದ ಸ್ಲೇಟು ಒಡೆದಿರುತ್ತಿತ್ತು. ಬರೆಯಲು ನಾವೇ ಹಳೆಯ ಬಳಪ ನೀಡುತ್ತಿದ್ದೆವು.
ನಮ್ಮ ಶಾಲೆಯ ರಸ್ತೆಯಲ್ಲಿ ಒಬ್ಬ ಕುಡುಕ ಸಂಚರಿಸುತ್ತಿದ್ದ. ಆತ ದಿನವೂ ಮಧ್ಯಾಹ್ನ ರಸ್ತೆ ಬದಿಯ ಸರಕಾರಿ ಜಾಗದಿಂದ ಮರ ಕಡಿದು ಊರಾಚೆಯಿದ್ದ ಗಡಂಗಿಗೆ ಹಾಕಿ, ಪುಕ್ಕಟೆ ಕಳ್ಳು ಕುಡಿಯುತ್ತಾ ಯಾರನ್ನೋ ಬೈಯ್ಯುತ್ತಾ ಬರುತ್ತಿದ್ದ. ಆತನ ಬೈಗುಳಗಳಿಗೆ ಹೆದರಿ ನಾವು ಬಿಡಿ, ದೊಡ್ಡವರೂ ಆತನಿಗೆ ಏನೂ ಹೇಳುವ ಧೈರ್ಯ ತೋರುತ್ತಿರಲಿಲ್ಲ. ಶಾಲೆ ಪುಸ್ತಕದಲ್ಲಿ ಮರ ಎಂಬ ಪಾಠವೊಂದಿತ್ತು. ಧೂಮಾಳು ಆ ಪಾಠದ ತರಗತಿಯಲ್ಲಿದ್ದಳು. ಯಾರೂ ಮರ ಕಡಿಯಬಾರದು, ಅದರಿಂದ ಉಸಿರಾಟಕ್ಕೆ ಬೇಕಾದ ಜೀವಗಾಳಿ (ಆಮ್ಲಜನಕ) ಬರುತ್ತದೆ ಎಂದೆಲ್ಲ ಮೇಷ್ಟ್ರು ಮನದಟ್ಟು ಮಾಡಿದ್ದರು.
ಅದೇನನಿಸಿತೋ ಧೂಮಾಳಿಗೆ- ಆಕೆ ಎದ್ದು ನಿಂತು "ಸಾರೆ, ದಾರಿಯಲ್ಲಿ ನಾವು ಬರುವಾಗ ಯಾರೋ ಒಬ್ಬ ದಿನಾಲೂ ಮರ ಕಡಿಯುತ್ತಾನೆ, ಅದು ತಪ್ಪಲ್ವಾ ಸಾರೆ" ಎಂದು ಕೇಳಿಯೇ ಬಿಟ್ಟಳು. ಮೇಷ್ಟ್ರು ಹೌದೆಂದರು. ಶಾಲೆಯಿಂದ ವಾಪಸಾಗುತ್ತಿರುವಾಗ ಎಂದಿನಂತೆ ಕುಡುಕನ ಮರ ಕಡಿಯುವಿಕೆ ನಡೆದಿತ್ತು. ಅವಳಿಗೇನಾಯಿತೋ! ನಮ್ಮೆಲ್ಲರನ್ನು ಹಿಂದೆ ತಳ್ಳಿ ಮುಂದೆ ನಿಂತು ಸೊಂಟದ ಮೇಲೆ ಎರಡೂ ಕೈಗಳನ್ನು ಇಟ್ಟುಕೊಂಡು- "ಯಾರೋ ನೀನು? ದಿನಾಲೂ ಮರ ಯಾಕೋ ಕಡಿಯುತ್ತೀಯಾ? ಮರ ಕಡೀಬೇಡ" ಎಂದು ಅಬ್ಬರಿಸಿಯೇ ಬಿಟ್ಟಳು. ಇನ್ನೇನು ಕುಡುಕ ಕತ್ತಿ ಹಿಡಿದು ನಮ್ಮೆಲ್ಲರ ತಲೆ ಕಡಿಯುತ್ತಾನೆ ಎಂಬ ಭಯದಲ್ಲಿ ನಾವೆಲ್ಲರೂ ತತ್ತರಿಸಿದೆವು.
"ನಾನು ಮರ ಕಡಿದೇ ಕಡೀತೇನೆ. ನಿನಗೇನು ಸಂಕಟ ಅದ್ರಿಂದ" ಎಂದು ಕುಡುಕ ಗೊರ ಗೊರ ಸ್ವರದಲ್ಲಿ ಧಮ್ಕಿ ಹಾಕಿದ. ಶಾಲೆಗೆ ಬರಲೇ ಉದಾಸೀನ ಮಾಡುವ, ಪರೀಕ್ಷೆಗಂತೂ ತಪ್ಪಿಸುವ ಈ ಹರಕಲು ಚೀಲ- ಲಂಗದ ಹುಡುಗಿ "ಮರ ಕಡಿದ್ರೆ ನಮಗೆಲ್ಲಾ ಗಾಳಿ ಬರಲ್ಲ, ನಾವೆಲ್ಲ ಸತ್ತೋಗಿ ಬಿಡುತ್ತೀವಿ. ಕಡೀಬೇಡ" ಎಂದು ದಬಾಯಿಸಿಯೇ ಬಿಟ್ಟಳು.
"ನಾನು ಕಡೀತೀನಿ, ನೀನೇನು ಮಾಡುತ್ತೀಯಾ" ಎಂದು ಆತ ಮರು ಅಬ್ಬರಿಸಿದ. ಆ ಹುಡುಗಿ ಧೈರ್ಯಗುಂದದೆ "ನಾನು ಹೋಗಿ ಮೇಷ್ಟ್ರಿಗೆ ಹೇಳುತ್ತೇನೆ" ಎಂದು ಪ್ರತ್ಯುತ್ತರಿಸಿದಳು. ಅದೇನಾಯ್ತೋ ಕುಡುಕನಿಗೆ ! ಕತ್ತಿ ಬಿಸಾಕಿ ಅಲ್ಲಿಂದ ಓದಿ ಹೋದವನು ಮತ್ತೆಂದೂ ಅಲ್ಲಿ ಮರ ಕಡಿಯುವುದು ಕಾಣಲಿಲ್ಲ.
ಧೂಮಾಳು ಪ್ರಾಥಮಿಕ ವಿದ್ಯಾಭ್ಯಾಸವನ್ನೂ ಪೂರ್ತಿ ಮಾಡಲಿಲ್ಲ. ಅವಳಪ್ಪ ತೀರಿಕೊಂಡಿದ್ದರು. ತಾಯಿ ಒಬ್ಬರೇ, ಇಬ್ಬರು ಮಕ್ಕಳ ಜವಾಬ್ದಾರಿ ಹೊರಬೇಕಿತ್ತು. ಇನ್ನೂ ಚಿಕ್ಕವಳಾಗಿದ್ದಾಗಲೇ ಅವಳು ವಿವಾಹವಾಗಿ ತೆರಳಿಯೇಬಿಟ್ಟಳು.
ಈಗ ನಮ್ಮೂರಿನಲ್ಲಿ ರಾತೋರಾತ್ರಿ ಮರ ಕಡಿದು ಕಳ್ಳಸಾಗಾಣಿಕೆ ಆಗುತ್ತದೆ. ಅವರನ್ನು ನಿಲ್ಲಿಸಲು ಯಾರೂ ಧೈರ್ಯ ಮಾಡುವುದಿಲ್ಲ. ಒಬ್ಬ ಅನಕ್ಷರಸ್ಥ ಪುಟ್ಟ ಬಾಲಕಿಗಿದ್ದ ಪ್ರಾಮಾಣಿಕ ಧೈರ್ಯ, ಕಾಳಜಿ ಇಂದು ಯಾರಿಗೂ ಇಲ್ಲ.
ನಿರಂತರ ಅಪ್ಡೇಟ್ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ