ಕೊಪ್ಪ: ಮಲೆನಾಡಿನ ಪ್ರಸ್ತುತ ಸಮಸ್ಯೆಗಳಾದ ಒತ್ತುವರಿ ತೆರವು ಮತ್ತು ಅವೈಜ್ಞಾನಿಕ ಕಸ್ತೂರಿ ರಂಗನ್ ವರದಿ ಜಾರಿಗಳಿಂದ ಮಲೆನಾಡು-ಕರಾವಳಿ ಭಾಗದ ರೈತರಿಗೆ, ರೈತಕಾರ್ಮಿಕರಿಗೆ ಮತ್ತು ನಾಗರಿಕರಿಗೆ (ನೆಲವಾಸಿಗಳಿಗೆ) ಆಗುತ್ತಿರುವ ಸಮಸ್ಯೆಗಳು ಮತ್ತು ಪರಿಹಾರಗಳ ಕುರಿತು ಚರ್ಚಿಸಲು ಮಲೆನಾಡು-ಕರಾವಳಿ ಜನಪರ ಒಕ್ಕೂಟದಿಂದ ಇಂದು (ಸೆಪ್ಟೆಂಬರ್ 01 ಕ್ಕೆ) ಬಾಳೆಹೊನ್ನೂರಿನ ಶ್ರೀ ರಂಭಾಪುರಿ ಮಠದ ಶ್ರೀ ರೇಣುಕಾಚಾರ್ಯ ಸಮುದಾಯ ಭವನದಲ್ಲಿ ನಡೆದ ದುಂಡುಮೇಜಿನ ಕಾರ್ಯಕ್ರಮ ಒಂದು ಯಶಸ್ವೀ ಕಾರ್ಯಕ್ರಮವೇ ಸರಿ.
ಸಮಸ್ಯೆಗಳ ವಾಸ್ತವಾಂಶಗಳನ್ನು ಮತ್ತು ಅದಕ್ಕೆ ಸೂಕ್ತ ಪರಿಹಾರಗಳನ್ನು ಕಾನೂನಾತ್ಮಕವಾಗಿಯೂ, ಅದನ್ನು ಮೀರಿ ಹೋರಾಟ ರೂಪದಲ್ಲೂ ಕಂಡುಕೊಳ್ಳಲು ಬೇಕಾಗುವ ಮಾಹಿತಿಗಳು ಇಂದಿನ ಸಭೆಯಲ್ಲಿ ದೊರೆತಿದ್ದು, ಅನಿವಾರ್ಯ ಪರಿಸ್ಥಿತಿಯಲ್ಲಿ ರಂಭಾಪುರಿ ಮಠದ ಶ್ರೀಗಳು ಪಕ್ಷಾತೀತವಾದ ಹೋರಾಟದಲ್ಲಿ ಬೆಂಬಲಿಸಿ ಭಾಗವಹಿಸುವುದಾಗಿ ಆಶೀರ್ವದಿಸಿ ಭರವಸೆ ನೀಡಿದ್ದಾರೆ.
ಸಭೆಯಲ್ಲಿ, ಭಾಗವಹಿಸಿದ್ದ ಪಶ್ಚಿಮಘಟ್ಟದ ನೆಲವಾಸಿಗರ ಅಭಿಪ್ರಾಯ, ಸಲಹೆ, ಸೂಚನೆ, ಪ್ರಶ್ನೆಗಳನ್ನೆಲ್ಲ ಕ್ರೋಢೀಕರಿಸಿ ಅನೇಕ ನಿರ್ಣಯಗಳನ್ನು ಮಾಡಲಾಯಿತು. ಮಾಡಿದ ನಿರ್ಣಯಗಳ ಆಧಾರದ ಮೇಲೆ ಮುಂದಿನ ಹೋರಾಟಗಳನ್ನು ಮಲೆನಾಡು-ಕರಾವಳಿಯ ಎಲ್ಲ ಪಕ್ಷದ ಜನ ಪ್ರತಿನಿಧಿಗಳನ್ನು, ಎಲ್ಲ ಧರ್ಮಗಳ ಧರ್ಮಗುರುಗಳನ್ನೂ ಒಟ್ಟಾಗಿಸಿಕೊಂಡು, ಹೋರಾಟವನ್ನು ಮುಂದಿನ ಹಂತಕ್ಕೆ ಕೊಂಡೊಯ್ಯುವ ನಿರ್ಧಾರಗಳನ್ನು ಕೈಗೊಳ್ಳಲಾಯಿತು.
ಕಲ್ಕುಳಿ ವಿಠಲ್ ಹೆಗಡೆ ಮತ್ತುರವೀಂದ್ರನಾಥ್ ನಾಯಕ್‌ರವರು ಅರಣ್ಯ ಕಾಯಿದೆಗಳು, ಕಸ್ತೂರಿ ರಂಗನ್ ವರದಿ ಹೇಗೆ ಅವೈಜ್ಞಾನಿಕ, ಹೋರಾಟ ತೀವ್ರತೆಗೆ ಮಾಡಬೇಕಾದ ಕ್ರಮಗಳನ್ಬು ಸವಿಸ್ತಾರವಾಗಿ ಪ್ರಚುರಪಡಿಸಿದರು.
ಒಟ್ಟಿನಲ್ಲಿ, ಕಳೆದ ತಿಂಗಳು ನೆಡೆದ ಮೂರು ತಾಲೂಕುಗಳ ಬಂದ್ ಮತ್ತು ಪ್ರತಿಭಟನೆಯ ಮುಂದಿನ ಭಾಗವಾಗಿ ಮತ್ತು ಅಷ್ಟೇ ಯಶಸ್ವಿಯಾಗಿ ಇವತ್ತಿನ ಕಾರ್ಯಕ್ರಮ ಸಂಪನ್ನವಾಯ್ತು.
ಅವೈಜ್ಞಾನಿಕ ಕಸ್ತೂರಿ ರಂಗನ್ ವರದಿಯ ವೈಜ್ಞಾನಿಕ ಪರಿಷ್ಕರಣೆಗೆ, ಮತ್ತು ಮಲೆನಾಡು ಕರಾವಳಿಯ ನೆಲವಾಸಿಗರನ್ನು ಆತಂಕಕ್ಕೆ ತಳ್ಳುತ್ತಿರುವ ಒತ್ತುವರಿ ತೆರವಿನ ವಿರುದ್ದದ ಹೋರಾಟಕ್ಕೆ ಮತ್ತಷ್ಟು ಬಲ ಸಿಕ್ಕಿದಂತಾಗಿದೆ ಇಂದಿನ ಸಭೆಯಲ್ಲಿ
- ಅರವಿಂದ ಸಿಗದಾಳ್, ಮೇಲುಕೊಪ್ಪ
9449631248
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ