ಮತ್ತೆ ಭೂಕುಸಿತ: ಮಂಗಳೂರು- ಬೆಂಗಳೂರು ರೈಲು ಸಂಚಾರ ಅಸ್ತವ್ಯಸ್ತ

Upayuktha
0



ಪ್ರತ್ಯಕ್ಷದರ್ಶಿ ವರದಿ

ಬಾಳ್ಳುಪೇಟೆ: ಸಕಲೇಶಪುರ- ಬಾಳ್ಳುಪೇಟೆ ಮಧ್ಯೆ ಮತ್ತೆ ಇಂದು ಬೆಳಗ್ಗೆ 10 ಗಂಟೆ ಸುಮಾರಿಗೆ ಭೂಕುಸಿತ ಸಂಭವಿಸಿದ್ದು, ಮಂಗಳೂರು-ಬೆಂಗಳೂರು ರೈಲು ಸಂಚಾರ ಅಸ್ತವ್ಯಸ್ತಗೊಂಡಿದೆ.

ಬೆಂಗಳೂರು ಯಶವಂತಪುರದಿಂದ ಇಂದು ಬೆಳಗ್ಗೆ 7 ಗಂಟೆಗೆ ಕಾರವಾರಕ್ಕೆ ಹೊರಟಿದ್ದ ರೈಲು 10 ಗಂಟೆ ವೇಳೆಗೆ ಬಾಳುಪೇಟೆ ಸ್ಟೇಷನ್ ಗೆ ಬಂದು ನಿಲುಗಡೆ ಆಗಿದೆ. ಮಧ್ಯಾಹ್ನ 2:15 ಆದರೂ ರೈಲು ಇಲ್ಲೇ ನಿಲುಗಡೆ ಆಗಿದ್ದು, ಬಹುತೇಕ ಇಂದಿನ ಸಂಚಾರ ರದ್ದಾಗಲಿದೆ.

ಸ್ವಲ್ಪ ಹೊತ್ತಿನಲ್ಲಿ ರೈಲು ಮರಳಿ ಹಾಸನಕ್ಕೆ ತೆರಳಲಿದ್ದು, ಅಲ್ಲಿಂದ ಪ್ರಯಾಣಿಕರು ಬಸ್‌ಗಳ ಮೂಲಕ ತಮ್ಮ ಊರುಗಳಿಗೆ ತೆರಳಬೇಕಾಗಿದೆ.

ಸಕಲೇಶಪುರ ವ್ಯಾಪ್ತಿಯಲ್ಲಿ ನಿನ್ನೆ ರಾತ್ರಿ ಮಳೆ ಸುರಿದ ಕಾರಣ, ಮೊನ್ನೆ ಭೂಕುಸಿತ ಸಂಭವಿಸಿದ ಜಾಗದಲ್ಲೇ ಇಂದು ಮತ್ತೆ ಕುಸಿತ ಉಂಟಾಗಿದೆ. ರೈಲ್ವೇ ಸುರಕ್ಷತಾ ಅಧಿಕಾರಿಗಳು ಸ್ಥಳದಲ್ಲಿ ಬೀಡುಬಿಟ್ಟಿದ್ದು ಹಳಿಗಳಿಂದ ಮಣ್ಣು ತೆರವು ಕಾರ್ಯಾಚರಣೆ ನಡೆಸುತ್ತಿದ್ದಾರೆ. ಆದರೆ ಮತ್ತೆ ಮತ್ತೆ ಕುಸಿತ ಉಂಟಾಗುತ್ತಿರುವುದರಿಂದ ಕಾರ್ಯಾಚರಣೆ ಬೇಗನೆ ಮುಗಿಯುವಂತೆ ಕಾಣುತ್ತಿಲ್ಲ. ಜತೆಗೆ ಈಗ ಮಳೆ ಶುರುವಾಗಿದೆ.




ಕಾರವಾರದಿಂದ ಯಶವಂತಪುರಕ್ಕೆ ಹೊರಟಿರುವ ರೈಲು ಕೂಡ ಮಂಗಳೂರಿನಲ್ಲಿ ನಿಲುಗಡೆ ಆಗಿದೆ.

ರೈಲು ನಿಲುಗಡೆ ಆಗಿರುವ ಕಾರಣ ವಿಚಾರಿಸಿದಾಗ ಸ್ಟೇಶನ್ ಮಾಸ್ಟರ್‌ ಭೂಕುಸಿತ ಉಂಟಾದ ಮಾಹಿತಿ ನೀಡಿದರು. ರೈಲ್ವೆ ಇಲಾಖೆ ಕಾರ್ಮಿಕರು ಮಣ್ಣು ತೆರವು ಮಾಡುತ್ತಿದ್ದಾರೆ. ಮಧ್ಯಾಹ್ನ ಎರಡೂವರೆ ಹೊತ್ತಿಗೆ ಕ್ಲಿಯರ್ ಮಾಡಬಹುದು ಅಂತ  ಬಾಳ್ಳುಪೇಟೆ ಸ್ಟೇಷನ್ ಮಾಸ್ಟರ್ ಮಾಹಿತಿ ನೀಡಿದ್ದಾರೆ. ಆದರೆ  ಮತ್ತೆ ಜೋರಾಗಿ ಮಳೆ ಸುರಿಯುತ್ತಿರುವುದರಿಂದ  ಮಣ್ಣು ತೆರವು ಕಾರ್ಯಾಚರಣೆ ಮುಗಿಯುವುದು ಕಷ್ಟ.

ಹಾಗಾಗಿ  ಸಾವಿರಾರು ಪ್ರಯಾಣಿಕರು  ರೈಲು ಬಿಟ್ಟು ಬಸ್‌ಗಳತ್ತ ಮುಖ ಮಾಡಿದ್ದಾರೆ. ಬಸ್‌ ನಲ್ಲಿ ತಮ್ಮ ತಮ್ಮ ಊರುಗಳಿಗೆ ತೆರಳುತ್ತಿದ್ದಾರೆ.


ಕಳೆದ ವಾರ ಇದೇ ರೀತಿ ಭೂಕುಸಿತದ ಕಾರಣ ಎರಡು ಬಾರಿ ರೈಲುಗಳ ಸಂಚಾರ ರದ್ದಾಗಿತ್ತು. ಮಣ್ಣು ತೆರವು ಕಾರ್ಯಾಚರಣೆಗೆ ಒಂದು ವಾರ ಕಾಲಾವಕಾಶ ಬೇಕಾಯಿತು. ಪದೇ ಪದೇ ಉಂಟಾಗುವ ಭೂಕುಸಿತದಿಂದ ಕರಾವಳಿ ಮತ್ತು ರಾಜಧಾನಿ ಬೆಂಗಳೂರು ನಡುವಣ ರೈಲ್ವೇ ಸಂಪರ್ಕ ಆಗಾಗ್ಗೆ ಕಡಿತವಾಗುತ್ತಿದೆ. ಇದರಿಂದ ರೈಲನ್ನೇ ಆಶ್ರಯಿಸಿ ಪ್ರಯಾಣಿಸುವ ಸಾವಿರಾರು ಪ್ರಯಾಣಿಕರಿಗೆ ತೊಂದರೆಯಾಗುತ್ತಿದೆ.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 






Post a Comment

0 Comments
Post a Comment (0)
To Top