ವ್ಯಾಸಪೀಠ 13: ಭಗವದ್ಭಕ್ತಿಯ ಗಂಗೋತ್ರಿ ಭಾಗವತ- ಶ್ರೀ ಕೃಷ್ಣ ಕಥಾಮೃತ

Upayuktha
0



ಪುರಾತನ ಸ್ಮೃತಿಗಳನ್ನು ನಿತ್ಯ ನೂತನ ಗೊಳಿಸುವುದೇ ಪುರಾಣ. ಹಿಂತಿರುಗಿ ನೋಡಿದಾಗ ಆಗಿದ್ದು ಅನುಭವಿಸಿದ್ದು ಪ್ರಸಕ್ತ -ಪ್ರಸ್ತುತ ಹಾಗೂ ಸಾರ್ವಕಾಲಿಕವೆನಿಸುತ್ತದೆ. ಇದು ಜೀವನ ಚಕ್ರ. ಮರುಕಳಿಕೆ ಅತಿ ಸಹಜ. ಹಿಂದೆ ನಡೆದ ಘಟನೆಗಳು ಹಿಂದಿನವರು ಸತ್ಯವನ್ನು ಕಂಡ ರೀತಿ ನಡೆದ ನಡವಳಿಕೆ ನಮ್ಮ ನಡೆಗೆ ದಾರಿದೀಪವಾಗಲಿ ಎನ್ನುವುದೇ ಪುರಾಣ ಶ್ರವಣದ ಹಿಂದಿನ ಸತ್ಯ ಅದೇ ಪಾರಾಯಣ.


ಭಗವದ್ ಭಕ್ತಿಯ ಗಂಗೋತ್ರಿ ಭಾಗವತ, ಇದರಿಂದ ಹೊರಹೊಮ್ಮುವ ಭಗವತ್ ಕಥಾ ಗಂಗಾ ಪ್ರವಾಹವು ಸಮಸ್ತ ಮಾನವ ಜನಾಂಗವನ್ನು ಪುನೀತ ಮಾಡುತ್ತದೆ.


ಮುಕ್ತಿಗೆ ಸಾಧನ ಭಕ್ತಿ ಮಾತ್ರ. ಮುಕ್ತಿಪ್ರದನು ವಿಷ್ಣು. ವಿಷ್ಣುವಿನಲ್ಲಿ ಭಕ್ತಿ ಮಾಡಬೇಕು. ಭಕ್ತಿ ಬರಬೇಕಾದರೆ ಮಹಿಮಾ ಜ್ಞಾನ ಬೇಕು, ವಿಷ್ಣು ಮಹಿಮೆಯನ್ನು ಬಹು ಸುಂದರವಾಗಿ ತಿಳಿಸಿಕೊಡುವುದು ಭಾಗವತ.


ಪರಂಪರೆಯ ಮುಕ್ತಿಗೆ ದೊಡ್ಡ ಸಾಧನವಾದ ಭಾಗವತದ ಶ್ರವಣ ಪರೀಕ್ಷಿತನಿಗೆ ಶುಕರು ಹೇಳಿದ್ದನ್ನು, ಗೋಕರ್ಣ ದುಂಧುಕಾರಿಗೆ ಪುನರುಚ್ಚರಿಸಿ, ಸನಕಾದಿಗಳಿಂದ ಹಳೆಯದು ಹೊಸತಾಗಿ ನಾರದರ ಎದುರಿಗೆ ಬಂದು,ಮರೆತದ್ದನ್ನು ಜ್ಞಾಪಿಸುವ ಈ ಭಾಗವತ ಕಾರ್ಯ ಸ್ತುತ್ಯಾರ್ಹ. ಕೇಳಿದ ಪ್ರವಚನವನ್ನು ಬರೆದು ಓದಲು ಮತ್ತು ಮನನ ಮಾಡಲು ಅನುಕೂಲವಾಗುವಂತೆ 30 ಅಧ್ಯಾಯಗಳಲ್ಲಿ ವಿಂಗಡಿಸಿ ಒಟ್ಟು ಮಾಡಿದ ಚಿಂತನೆ ಇದು.

ಶ್ರೀ ಭಾಗವತ ಮಹಾಪುರಾಣವು ಪ್ರತ್ಯಕ್ಷ ಶ್ರೀ ಕೃಷ್ಣನೇ ಆಗಿದೆ ಎಂದು ಪದ್ಮ ಪುರಾಣವು ತಿಳಿಸಿದೆ. ನೂರಾರು ಜನ್ಮಗಳ ಪುಣ್ಯ ಇದ್ದರೆ ಮಾತ್ರ ಈ ಪುರಾಣವನ್ನು ಶ್ರವಣ ಮಾಡುವ ಭಾಗ್ಯ ದೊರೆಯುತ್ತದೆ.


ಈ ಪುರಾಣದ ದಶಮ ಸ್ಕಂದ  ಕೃಷ್ಣ ಕಥಾಮೃತವನ್ನು ಜಗದ್ಗುರು ಶ್ರೀಮನ್ ಮಧ್ವಾಚಾರ್ಯ ಮೂಲ ಮಹಾಸಂಸ್ಥಾನ ಶ್ರೀಮದ್ ಉತ್ತರಾದಿ ಮಠಾಧೀಶ ಪರಮಪೂಜ್ಯ ಶ್ರೀ ಸತ್ಯಾತ್ಮತೀರ್ಥ ಶ್ರೀಪಾದರು ಸತ್ತಿ ಗ್ರಾಮದ ಚಾತುರ್ಮಾಸದ ಸಂದರ್ಭದಲ್ಲಿ ಪ್ರವಚನ ಮಾಡಿದ ಉಪನ್ಯಾಸ ಮಾಲಿಕೆಯನ್ನು ಲಿಖಿತ ರೂಪದಲ್ಲಿ ಸಂಗ್ರಹಿಸುವ ಸಾತ್ವಿಕ ಪ್ರಯತ್ನವನ್ನು ರವೀಂದ್ರ ಕುಷ್ಟಗಿ ಅವರು ಸೇವಾವ್ರತಿಯಾಗಿ ಮಾಡಿರುವುದು ಶ್ಲಾಘನೀಯ ವಿಚಾರ.


ಯುವಕರಿದ್ದಾಗಲೇ ಕಾವಿಯ ನಂಟನ್ನು ಅಂಟಿಸಿಕೊಂಡು ತುರಿಯಾಶ್ರಮವನ್ನು ಸ್ವೀಕರಿಸಿ, ಜಗತ್ತೇ ಬೆರಗಾಗುವಂತಹ ಜ್ಞಾನ ಮತ್ತು ವಿಶ್ವತೋಮುಖ ಸಾಧನೆಗಳುಳ್ಳ ಹಂಸ ನಾಮಕ ಪರಮಾತ್ಮನ ಪೀಠವನ್ನು ಅಲಂಕರಿಸಿದ ಶ್ರೀ ಸತ್ಯಾತ್ಮತೀರ್ಥ ಶ್ರೀಪಾದರು ವಾಮನನಂತೆ ಪ್ರಾರಂಭ ಮಾಡಿ ಸಾಧನೆ ವಿಷಯದಲ್ಲಿ ತ್ರಿವಿಕ್ರಮನಂತೆ ಬೆಳೆದು ಜಗದ್ಗುರುಗಳಾಗಿ ಸಾವಿರಾರು ಭಕ್ತರ ಜ್ಞಾನ ಭಕ್ತ್ಯಾದಿಗಳನ್ನು ಬೆಳೆಸುತ್ತಾ, ಪುರಾಣಗಳ ರಾಜನಾದ ಶ್ರೀ ಕೃಷ್ಣನ ಮತ್ತೊಂದು ರೂಪವಾದ ಮೋಕ್ಷ ಶಾಸ್ತ್ರವಾದ ಶ್ರೀಮದ್ ಭಾಗವತವನ್ನು ಅತ್ಯಂತ ಶಾಸ್ತ್ರೀಯವಾಗಿ ಲೌಕಿಕ ಉದಾಹರಣೆಗಳೊಂದಿಗೆ ಹರಿವಾಯು ಗುರುಗಳ ಮನವಲಿಸುವಂತೆ ಜ್ಞಾನ ಪಿಪಾಸುಗಳಾದ ಸಾವಿರಾರು ಭಕ್ತರಿಗೆ ತಾವು ಅನುಭವಿಸುತ್ತಿರುವುದನ್ನೇ ಉಪದೇಶ ಮಾಡಿ ದಾಸೋಹಂ ಎಂಬ ಭಾವನೆಯನ್ನು ಮೂಡಿಸಿದ ಶ್ರೀಪಾದರ ಪಾದಾರವಿಂದಗಳಲ್ಲಿ ಶಿರಸಾಷ್ಟಾಂಗ ನಮನಗಳು.


ಪ್ರತಿಯೊಂದು ಅಧ್ಯಾಯದಲ್ಲೂ ಶ್ಲೋಕ ಅದರರ್ಥ, ಭಗವಂತನ ಮಹಿಮೆ ಸಾರುವ ಘಟನೆ,ಪೂರಕ ನೀತಿ ಪಾಠ ಮತ್ತು ಶ್ಲೋಕದ ಆಕರಗಳನ್ನು ತಿಳಿಸುತ್ತಾ, ಓದುತ್ತಾ ಹೋದಂತೆ ಕೇಳಿಸಿಕೊಳ್ಳುತ್ತಿ ದ್ದೇವೆಯೋ ಎನ್ನುವ ಅನುಭವ ಉಂಟಾಗುತ್ತದೆ.


ಪೂಜ್ಯರ ವಾಣಿ ಗುಯಿಂಗಿಡ ತೊಡಗುತ್ತದೆ. ತಾದ್ಯಾತ್ಮತೆ ಮೇಳಯಿಸುತ್ತದೆ. ಶ್ರೀ ಮಧ್ವರು ಅರ್ಥೈಸಿದ ಅರ್ಥಗಳಿವೆ. ಶ್ರೀ ಸತ್ಯ ಧ್ಯಾನತೀರ್ಥರ ಮೂಲಕ ಸಾಧಿಸಿದ ಪವಾಡದ ವಕ್ಕಣೆ ಇದೆ. ಧ್ರುವನ ಏಕಾಗ್ರತೆಯ ಐತಿಹ್ಯವಿದೆ, ಭಕ್ತಿಯ ತಾರುಣ್ಯದ ರಹಸ್ಯವಿದೆ, ಆತ್ಮದೇವನ ಕಥೆ ಇದೆ, ಪಾಂಡವರ ರಕ್ಷಣೆಯ ಸಾರವಿದೆ, ಶ್ರೀಗಂಗೆಯ ಮಹತ್ವದ ನಿರೂಪಣೆ ಇದೆ, ನಳಕೂಬ ಮಣಿಗ್ರೀವರ ವಿಮೋಚನೆ ಇದೆ. ರಾಸ ಕ್ರೀಡೆಯ ಅಮಲಿದೆ, ವೇಣುಗಾನದ ಮಾಧುರ್ಯವಿದೆ ಅಕ್ರೂರ ಚರಿತೆ ಇದೆ, ಶಿಷ್ಟ ರಕ್ಷಣೆ ದುಷ್ಟದ ಮನಗಳ ಕಾರಣ ಸಹಿತ ವಿವರಣೆ ಇದೆ, ಸ್ಯಮಂತಕೋಪಾಖ್ಯಾನದ ಸತ್ಯಭಾಮಾ ಪರಿಣಯದ, ಕೃಷ್ಣ ಸರ್ವೋತ್ತಮತ್ವದ ಮಹಾಭಾರತದ ಸಚಿತ್ರ ಸಾಕಾರವಿದೆ.



ಕೃತಿಯ ಹೆಸರು: ಶ್ರೀ ಕೃಷ್ಣ ಕಥಾಮೃತ- ಶ್ರೀಮದ್ ಭಾಗವತ ದಶಮ ಸ್ಕಂದ 

ಜಗದ್ಗುರು ಶೀಮನ್ ಮಧ್ವಾಚಾರ್ಯ ಮೂಲ ಮಹಾಸಂಸ್ಥಾನ ಉತ್ತರಾದಿ ಮಠಾಧೀಶ ಪರಮಪೂಜ್ಯ 

ಶ್ರೀ ಸತ್ಯಾತ್ಮತೀರ್ಥ ಪ್ರವಚನ ಸುರುಳಿಯ ಲಿಖಿತ ರೂಪ 

ಸೇವಾವ್ರತಿ: ರವೀಂದ್ರ ಅ ಕುಷ್ಟಗಿ 

ಪ್ರಕಾಶಕರು: ಶ್ರೀನಿಕೇತನ ಪ್ರಕಾಶನ,ಮಹಾಲಕ್ಷ್ಮಿಪುರಂ ಬೆಂಗಳೂರು 9880592806 

ಪುಟಗಳು: 540 ಬೆಲೆ: ರೂ 300/-


ರವೀಂದ್ರ ಕುಷ್ಟಗಿ ಕಿರುಪರಿಚಯ:



ರವೀಂದ್ರ ಕುಷ್ಟಗಿ ಬಿ.ಇ. ಮೆಕ್ಯಾನಿಕಲ್ ಪ್ರಥಮ ದರ್ಜೆ ವಿತ್ ಡಿಸ್ಟಿಂಕ್ಷನ್‌. ವೃತ್ತಿಯಿಂದ ಲಾರ್ಸನ್ & ಟೂಬ್ರೋ ಲಿಮಿಟೆಡ್ ಬೆಂಗಳೂರಿನಲ್ಲಿ 35 ವರ್ಷ ಸುಧೀರ್ಘ ಸೇವೆ ಮಾಡಿ ಚೀಫ್ ಪರ್ಚೇಸ್ ಮ್ಯಾನೇಜರ್ ಆಗಿ ನಿವೃತ್ತಿ ನಂತರ ಕೆಲಸ ಮಾಡಲು ಅವಕಾಶಗಳು ಬಂದಾಗಲೂ ನಾನು ನನ್ನ ಕುಟುಂಬದ ಜೊತೆಗೆ ಹಾಗೂ ಪುಟ್ಟ ಮೊಮ್ಮಕ್ಕಳ ಜೊತೆಗೆ ವೇಳೆಯನ್ನು ವಿನಿಯೋಗಸೋಣ, ಆನಂದಿಸೋಣ ಅಂತ ವಿಚಾರ ಮಾಡಿ ಮರು ಕೆಲಸಕ್ಕೆ ಸೇರಲಿಲ್ಲ, ಆಧ್ಯಾತ್ಮಿಕ ಚಿಂತನೆ ತೊಡಗಿ ಶ್ರೀಮದುತ್ತರಾದಿ ಮಠಾಧೀಶರಾದ, ಪರಮಪೂಜ್ಯ ಶ್ರೀಸತ್ಯಾತ್ಮತೀರ್ಥ ಶ್ರೀಪಾದಂಗಳವರು ಸತ್ತಿಯಲ್ಲಿ ಪ್ರವಚನ ಮಾಡಿದ 'ಶ್ರೀಕೃಷ್ಣಕಥಾಮೃತ ಶ್ರೀಮದ್ಭಾಗವತ ದಶಮಸ್ಕಂಧ' ಧ್ವನಿಸುರುಳಿಯನ್ನು ಶ್ರವಣ ಮನನ ಮಾಡುತ್ತ ಇರುವಾಗ ಇದನ್ನು ಯಾಕೆ ಲಿಖಿತ ರೂಪದಲ್ಲಿ ತರಬಾರದು ಅಂತ ಪ್ರೇರಣೆಯಾಗಿ ಬರೆಯಲು ಜನವರಿ 2020 ಪ್ರಾರಂಭಿಸಿ ಡಿಸೆಂಬರ್ ತಿಂಗಳು 2021 ನಲ್ಲಿ ಮುಗಿಸಿ. 'ಶ್ರೀಕೃಷ್ಣಕಥಾಮೃತ ಶ್ರೀಮದ್ಭಾಗವತ ದಶಮಸ್ಕಂಧ' ಗ್ರಂಥವು ಮಳಖೇಡದಲ್ಲಿ ಶ್ರೀಜಯತೀರ್ಥ ವಿದ್ಯಾಪೀಠದ ಶ್ರೀಮನ್ನ್ಯಾಯಸುಧಾ ಮಂಗಳಮಹೋತ್ಸವದಲ್ಲಿ ಶ್ರೀಸತ್ಯಾತ್ಮತೀರ್ಥ ಶ್ರೀಪಾದರಿಂದ 11.03.2022 ರಂದು ಬಿಡುಗಡೆಯಾಯಿತು.    


ಶ್ರೀಪಾದರು ಮಹತ್ವವಾದ ತತ್ವಗಳನ್ನು ಸಂದೇಶಗಳನ್ನು ತಿಳಿಸಿ ಅವುಗಳನ್ನು ನಮ್ಮ ಜೀವನದಲ್ಲಿ ಅಳವಡಿಸಿಕೂಳ್ಳಲು ಹೆಚ್ಚಿನ ಸಜ್ಜನರು ಉತ್ಸುಕರಾಗಲಿ ಎಂಬುದೇ ಈ ಲಿಖಿತ ರೂಪದಲ್ಲಿ ತಂದ ಉದ್ದೇಶ ಹಾಗೂ ಇದು ನನ್ನ ಮೊದಲ ಪ್ರಾಮಾಣಿಕ ಪ್ರಯತ್ನ ಇದು ಶ್ರೀಹರಿಗೆ ನಮ್ಮ ಕುಟುಂಬದ ಅಲ್ಪ ಸೇವೆ ಹಾಗೂ ಪ್ರಕಟಿಸಿದ ಗ್ರಂಥಗಳ ಪ್ರತಿಗಳು ಶ್ರೀಮದುತ್ತರಾದಿ ಮಠದಲ್ಲಿ ಇಡಲಾಗಿದೆ ಹಾಗೂ ಈ ಸೇವೆ ಮಠಕ್ಕೇನೆ ತಲುಪುತ್ತದೆ ಎಂದು ವಿನಮ್ರರಾಗಿ ನುಡಿಯುತ್ತಾರೆ. ಕಳೆದ ತಿಂಗಳು ಶ್ರೀಯುತರಿಗೆ ಯೋಗ ಯೂನಿವರ್ಸಿಟಿ ಆಫ್ ಅಮೇರಿಕಾಸ್ – ಫ್ಲೋರಿಡಾ (ಯು.ಎಸ್.ಎ)ರವರರು A thesis on A Study of Bhagavata- Made easy in all respects ಕುರಿತು ಮಂಡಿಸಿದ ಪ್ರೌಢ ಪ್ರಬಂಧಕ್ಕೆ ಡಾಕ್ಟರೇಟ್ ಪದವಿ ನೀಡಿ ಗೌರವಿಸಿರುತ್ತಾರೆ.



ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 

Post a Comment

0 Comments
Post a Comment (0)
Mandovi Motors Presents MONSOON BONANZA
Mandovi Motors Presents MONSOON BONANZA
To Top