ಸುರತ್ಕಲ್ :ವಾಲಿಬಾಲ್ ಕ್ರೀಡೆಯು ಶತಮಾನಗಳ ಇತಿಹಾಸವಿರುವ ಕ್ರೀಡೆಯಾಗಿದ್ದು ಭಾರತೀಯ ವಾಲಿಬಾಲ್ ಕ್ರೀಡಾಳುಗಳು ವಿಶ್ವವಿಖ್ಯಾತರಾಗಿದ್ದಾರೆ. ದೈಹಿಕ ಮತ್ತು ಮಾನಸಿಕ ಸದೃಢತೆಯನ್ನು ವರ್ಧಿಸುವ ವಾಲಿಬಾಲ್ ಕ್ರೀಡೆಯನ್ನು ವಿದ್ಯಾರ್ಥಿಗಳು ಶಾಲಾ ಬದುಕಿನಲ್ಲಿಯೇ ಅಭ್ಯಾಸಿಸಬೇಕಾಗಿದ್ದು ವಾಲಿಬಾಲ್ ತರಬೇತುದಾರ ನಾಗೇಶ್ ಅತ್ತಾವರ ತಮ್ಮ ಬದುಕನ್ನು ವಾಲಿಬಾಲ್ ಕ್ರೀಡಾಳುಗಳನ್ನು ರೂಪಿಸಲು ಮುಡಿಪಾಗಿಟ್ಟಿದ್ದರು. ಸುರತ್ಕಲ್ ಪರಿಸರದಲ್ಲಿ ಪ್ರಥಮಬಾರಿಗೆ ವಾಲಿಬಾಲ್ ರಿಬೌಂಡಿಂಗ್ ವಾಲ್‌ನ ರಚನೆಯಾಗಿದ್ದು ವಿದ್ಯಾರ್ಥಿಗಳ ವಾಲಿಬಾಲ್ ಕ್ರೀಡೆಯ ಅಭ್ಯಾಸಕ್ಕೆ ಉತ್ತಮ ವೇದಿಕೆ ದೊರೆತಂತಾಗಿದೆ ಎಂದು ರಾಜ್ಯ ವಾಲಿಬಾಲ್ ತಂಡದ ಮಾಜಿ ನಾಯಕ ಸುನೀಲ್ ಬಾಳಿಗ ನುಡಿದರು.
ಅವರು ಸುರತ್ಕಲ್ ಸ್ಪೋರ್ಟ್ಸ್ ಕ್ಲಬ್ ಮತ್ತು ಹಿಂದು ವಿದ್ಯಾದಾಯಿನೀ ಸಂಘ (ರಿ), ಸುರತ್ಕಲ್‌ನ ವಿದ್ಯಾದಾಯಿನೀ ಸ್ಪೋರ್ಟ್ಸ್ ಅಕಾಡೆಮಿಯ ಸಹಭಾಗಿತ್ವದಲ್ಲಿ ಸುರತ್ಕಲ್ ವಿದ್ಯಾದಾಯಿನೀ ಪ್ರೌಢಶಾಲೆಯ ಕ್ರೀಡಾಂಗಣದಲ್ಲಿ ಖ್ಯಾತ ವಾಲಿಬಾಲ್ ಕ್ರೀಡಾಪಟು ಹಾಗೂ ತರಬೇತುದಾರ ಎ. ನಾಗೇಶ್ ಅವರ ಸವಿನೆನಪಿಗಾಗಿ ಸುರತ್ಕಲ್ ಸ್ಪೋರ್ಟ್ಸ್ ಕ್ಲಬ್ ಪ್ರಾಯೋಜಕತ್ವದಲ್ಲಿ ನಿರ್ಮಿಸಿರುವ ವಾಲಿಬಾಲ್ ರಿಬೌಂಡಿಂಗ್ ವಾಲ್‌ನ ಉದ್ಘಾಟನಾ ಸಮಾರಂಭದ ಮುಖ್ಯ ಅತಿಥಿಯಾಗಿ ಮಾತನಾಡಿದರು.
ನಾಗೇಶ್ ಅತ್ತಾವರ ಅವರ ಪತ್ನಿ ಹರಿಣಿ ನಾಗೇಶ್ ವಾಲಿಬಾಲ್ ರಿಬೌಂಡಿಂಗ್ ವಾಲ್‌ನ್ನು ಉದ್ಘಾಟಿಸಿದರು. ಅಧ್ಯಕ್ಷತೆ ವಹಿಸಿದ್ದ ಹಿಂದು ವಿದ್ಯಾದಾಯಿನೀ ಸಂಘ(ರಿ), ಸುರತ್ಕಲ್‌ನ ಅಧ್ಯಕ್ಷ ಹೆಚ್. ಜಯಚಂದ್ರ ಹತ್ವಾರ್ ಮಾತನಾಡಿ ವಿದ್ಯಾದಾಯಿನೀ ಶಿಕ್ಷಣ ಸಂಸ್ಥೆಗಳ ಹಲವಾರು ಕ್ರೀಡಾಪಟುಗಳು ರಾಜ್ಯ, ರಾಷ್ಟ್ರಮಟ್ಟದಲ್ಲಿ ಸಾಧನೆಗೈದಿದ್ದಾರೆ. ವಾಲಿಬಾಲ್ ಕ್ರೀಡೆಯ ಅಭ್ಯಾಸಕ್ಕಾಗಿ ವಾಲಿಬಾಲ್ ರಿಬೌಂಡಿಗ್ ವಾಲ್‌ನ್ನು ನಾಗೇಶ್ ಅವರ ನೆನಪಿನಲ್ಲಿ ಸುರತ್ಕಲ್ ಸ್ಪೋರ್ಟ್ಸ್ ಕ್ಲಬ್‌ನವರು ನಿರ್ಮಿಸಿಕೊಟ್ಟಿರುವುದು ಶ್ಲಾಘನೀಯ ಎಂದರು.
ಅನರ್ಘ್ಯ ಅತ್ತಾವರ ಮಾತನಾಡಿ ನಾಗೇಶ್ ಅವರ ವಾಲಿಬಾಲ್ ಕ್ರೀಡೆಯ ಕುರಿತಾದ ಬದ್ಧತೆಯನ್ನು ಸ್ಮರಿಸಿ ಅವರ ವಿದ್ಯಾರ್ಥಿಗಳು ನೀಡುತ್ತಿರುವ ಕೊಡುಗೆ ವಿಶಿಷ್ಟವಾದುದು ಎಂದರು. ಹಿಂದು ವಿದ್ಯಾದಾಯಿನೀ ಸಂಘ (ರಿ), ಸುರತ್ಕಲ್ ನ ಉಪಾಧ್ಯಕ್ಷ ವೈ. ರಮಾನಂದ ರಾವ್, ಕಾರ್ಯದರ್ಶಿ ಶ್ರೀರಂಗ ಹೆಚ್., ಶುಭ ಹಾರೈಸಿದರು.
ಸುರತ್ಕಲ್ ಸ್ಪೋರ್ಟ್ಸ್ ಕ್ಲಬ್‌ನ ವಿನೋದ್ ಪುತ್ರನ್, ಗಿರೀಶ್ ಶೆಣೈ ಮತ್ತು ಮಂಗಳಾ ಸ್ಪೋರ್ಟ್ಸ್ ಕ್ಲಬ್ ಹಾಗೂ ಸುರತ್ಕಲ್ ಸ್ಪೋರ್ಟ್ಸ್ ಕ್ಲಬ್‌ನ ಸದಸ್ಯರು ಉಪಸ್ಥಿತರಿದ್ದರು. ಮಂಗಳಾ ಸ್ಪೋರ್ಟ್ಸ್ ಕ್ಲಬ್‌ನ ವತಿಯಿಂದ ವಿದ್ಯಾರ್ಥಿಗಳ ವಾಲಿಬಾಲ್ ಕ್ರೀಡಾ ತರಬೇತಿಗಾಗಿ ಚೆಂಡುಗಳನ್ನು ಕೊಡುಗೆಯಾಗಿ ನೀಡಿದರು. ಕೆ.ಕೆ. ಪೇಜಾವರ ಸ್ವಾಗತಿಸಿ ಕಾರ್ಯಕ್ರಮ ನಿರೂಪಿಸಿದರು. ವಿದ್ಯಾದಾಯಿನೀ ಸ್ಪೋರ್ಟ್ಸ್ ಅಕಾಡೆಮಿಯ ಸಂಯೋಜಕ ಸುಬ್ರಹ್ಮಣ್ಯ ಟಿ. ವಂದಿಸಿದರು.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ