ಸಂಶೋಧನೆಯಿಂದ ಪ್ರಗತಿ ಪ್ರಕ್ರಿಯೆಯ ನವೀಕರಣ:ಡಾ.ಸತೀಶ್ಚಂದ್ರ ಎಸ್
ಉಜಿರೆ:ಸಂಶೋಧನಾ ಪ್ರಜ್ಞೆಯು ಕೇವಲ ಜ್ಞಾನವನ್ನಷ್ಟೇ ರೂಪಿಸುವುದಿಲ್ಲ. ಇದು ಸಾಮಾಜಿಕ ಪ್ರಗತಿಯ ಪ್ರಕ್ರಿಯೆಯನ್ನು ನಿಖರಗೊಳಿಸುತ್ತದೆ. ಬದಲಾವಣೆಯ ಗತಿಶೀಲತೆಯನ್ನು ನವೀಕರಿಸುವಷ್ಟರ ಮಟ್ಟಿಗೆ ಪ್ರಖರವಾಗಿರುತ್ತದೆ ಎಂದು ಎಸ್.ಡಿ.ಎಂ. ಶಿಕ್ಷಣ ಸಂಸ್ಥೆಯ ಕಾರ್ಯದರ್ಶಿ ಡಾ.ಸತೀಶ್ಚಂದ್ರ ಎಸ್ ಅಭಿಪ್ರಾಯಪಟ್ಟರು. ಉಜಿರೆಯ ಎಸ್.ಡಿ.ಎಂ ಸ್ನಾತಕೋತ್ತರ ಕೇಂದ್ರದ ಬೆಳ್ಳಿಹಬ್ಬದ ಹಿನ್ನೆಲೆಯಲ್ಲಿ ಎಸ್.ಡಿ.ಎಂ ಕಾಲೇಜಿನ ಸಂಶೋಧನಾ ಅಭಿವೃದ್ಧಿ ಘಟಕವು ಸ್ನಾತಕೋತ್ತರ ಮನಃಶಾಸ್ತ್ರ ಮತ್ತು ರಸಾಯನಶಾಸ್ತ್ರ ವಿಭಾಗಗಳ ಸಹಯೋಗದೊಂದಿಗೆ ಏರ್ಪಡಿಸಿರುವ ಐದು ದಿನಗಳ ಫ್ಯಾಕಲ್ಟಿ ಡೆವಲೆಪ್‌ಮೆಂಟ್ ಕಾರ್ಯಕ್ರಮವನ್ನು ಮಂಗಳವಾರ ಉದ್ಘಾಟಿಸಿ ಅವರು ಮಾತನಾಡಿದರು.
ಶಿಕ್ಷಣ ವಲಯದಲ್ಲಿ ಕ್ಷಿಪ್ರಗತಿಯ ಪಲ್ಲಟಗಳಾಗುತ್ತಿವೆ. ಜ್ಞಾನಾರ್ಜನೆಗಷ್ಟೇ ಶೈಕ್ಷಣಿಕ ರಂಗ ಸೀಮಿತವಲ್ಲ ಎಂಬುದನ್ನು ಈ ಬಗೆಯ ಪಲ್ಲಟಗಳು ಸ್ಪಷ್ಟವಾಗಿ ನಿರೂಪಿಸುತ್ತಿವೆ. ಜ್ಞಾನವು ಪ್ರೇರಣೆ ಮತ್ತು ಮಾರ್ಗದರ್ಶನದ ಹೊಣೆಗಾರಿಕೆಗಳ ಜೊತೆಗೆ ಸ್ಪರ್ಧಾತ್ಮಕ ಜಗತ್ತಿನ ಅಗತ್ಯಗಳಿಗೆ ಅನುಗುಣವಾಗಿ ವಿದ್ಯಾರ್ಥಿಗಳನ್ನು ಸಿದ್ಧಗೊಳಿಸುವ ಪಾತ್ರವನ್ನು ನಿಭಾಯಿಬೇಕಾಗಿದೆ. ಎಲ್ಲಕ್ಕಿಂತ ಮುಖ್ಯವಾಗಿ ದಾಟಿಸಲ್ಪಡುವ ಜ್ಞಾನವು ವಿದ್ಯಾರ್ಥಿಗಳನ್ನು ಜವಾಬ್ದಾರಿಯುತ ನಾಗರಿಕರನ್ನಾಗಿ ರೂಪಿಸಬೇಕಾಗಿದೆ. ಈ ದೃಷ್ಟಿಯಿಂದ ಸಂಶೋಧನಾ ಪ್ರಜ್ಞೆಯು ಶೈಕ್ಷಣಿಕ ವಲಯದ ಸಾಧ್ಯತೆಗಳನ್ನು ವಿಸ್ತರಿಸಲು ಸಹಾಯಕವಾಗುತ್ತದೆ ಎಂದು ಹೇಳಿದರು.
ತಂತ್ರಜ್ಞಾನ ಬದಲಾಗುತ್ತಿದ್ದಂತೆ ಶೈಕ್ಷಣಿಕ ವಲಯದ ಆದ್ಯತೆಗಳೂ ಬದಲಾಗುತ್ತಿವೆ. ಅದಕ್ಕನುಗುಣವಾಗಿ ವ್ಯಕ್ತಿಗತ ಕೌಶಲ್ಯಗಳೂ ಮರುರೂಪ ಪಡೆಯುವ ಅವಶ್ಯಕತೆ ಇದೆ. ಹೊಸತಾದ ಕಾರ್ಯತಂತ್ರಗಳ ಅನ್ವಯಿಸುವಿಕೆಯ ಅಗತ್ಯವಿದೆ. ಸಂಶೋಧನೆಯ ಸೃಜನಶೀಲತೆಯ ಮೂಲಕ ಈ ಅಗತ್ಯಗಳಿಗೆ ತಕ್ಕಂತೆ ಶೈಕ್ಷಣಕ ವಲಯಕ್ಕೆ ಹೊಸ ಕಾಯಕಲ್ಪ ನೀಡಬಹುದು ಎಂದು ನುಡಿದರು.
ಮುಖ್ಯ ಅತಿಥಿ, ಹಾವೇರಿ ವಿಶ್ವವಿದ್ಯಾಲಯದ ಕುಲಸಚಿವ ಡಾ.ಎಸ್.ಟಿ.ಬಾಗಲಕೋಟಿ ಪ್ರಧಾನ ಆಶಯ ಭಾಷಣ ಪ್ರಸ್ತುತಪಡಿಸಿದರು. ಅಧ್ಯಾಪಕರು ತರಗತಿಗಳಲ್ಲಿ ವಿದ್ಯಾರ್ಥಿಗಳ ಸದ್ಯದ ಜ್ಞಾನಜಿಜ್ಞಾಸೆಯ ನಿರೀಕ್ಷೆಗಳಿಗೆ ತಕ್ಕಂತೆ ಬೋಧನಾಕ್ರಮ ರೂಢಿಸಿಕೊಳ್ಳುವುದಕ್ಕೆ ಸಂಶೋಧನಾ ಪ್ರಜ್ಞೆ ಪೂರಕವಾಗುತ್ತದೆ. ತರಗತಿಗಳಲ್ಲಿ ಹೊಚ್ಚಹೊಸ ಪರಿಕಲ್ಪನೆಗಳನ್ನು ಪ್ರಸ್ತುತಪಡಿಸುವುದಕ್ಕೆ ನೆರವಾಗುತ್ತದೆ ಎಂದು ಹೇಳಿದರು.
ಕೃತಕ ಬುದ್ಧಿಮತ್ತೆಯ ನೂತನ ತಂತ್ರಜ್ಞಾನವನ್ನು ವಿಜ್ಞಾನ, ಮಾನವಿಕ, ತಾಂತ್ರಿಕ ವಲಯದ ಸಂಶೋಧಕರು ಹೇಗೆ ಬಳಸಿಕೊಳ್ಳಬಹುದು ಎಂಬುದನ್ನು ತಿಳಿಸಿಕೊಟ್ಟರು. ಸ್ವಸಾಮರ್ಥ್ಯದ ಆಲೋಚನೆ, ಬರವಣಿಗೆಯ ಕೌಶಲ್ಯಗಳನ್ನು ಮೊದಲು ಅನ್ವಯಿಸಿಕೊಂಡು ಆಮೇಲೆ ಕೃತಕಬುದ್ಧಿಮತ್ತೆಯ ತಾಂತ್ರಿಕತೆಯನ್ನು ಪೂರಕವಾಗಿ ಬಳಸಿಕೊಳ್ಳುವುದರ ಕಡಗೆ ಗಮನ ನೀಡಿದರೆ ಸಂಶೋಧನೆಗೆ ಸಮಗ್ರತೆಯ ಸ್ವರೂಪ ದಕ್ಕುತ್ತದೆ ಎಂದು ಹೇಳಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಎಸ್.ಡಿ.ಎಂ ಕಾಲೇಜಿನ ಪ್ರಾಂಶುಪಾಲರಾದ ಡಾ.ಬಿ.ಎ.ಕುಮಾರ ಹೆಗ್ಡೆ ಮಾತನಾಡಿದರು. ಕಾಲೇಜಿನಲ್ಲಿ ಪ್ರತಿವರ್ಷವೂ ರಚನಾತ್ಮಕ ಸಂಶೋಧನಾತ್ಮಕ ಚಟುವಟಕೆಗಳನ್ನು ಆಯೋಜಿಸಲಾಗುತ್ತಿದೆ. ಸಂಶೋಧನೆ ಕೈಗೊಳ್ಳಲು ಇಚ್ಛಿಸುವವರಿಗೆ ಸೀಡ್ ಮನಿ ಸೌಲಭ್ಯ, ಸಂಶೋಧನಾರ್ಥಿಗಳಿಗೆ ನೆರವಾಗುವಂಥ ಕಾರ್ಯಾಗಾರ, ಕಾರ್ಯಕ್ರಮಗಳು ಬೋಧಕರು ಮತ್ತು ವಿದ್ಯಾರ್ಥಿಗಳಿಗೆ ಅನುಕೂಲಕರವಾಗಿವೆ ಎಂದರು.
ಕಾಲೇಜಿನ ಉಪಪ್ರಾಂಶುಪಾಲರಾದ ಪ್ರೊ.ಎಸ್.ಎನ್.ಕಾಕತ್ಕರ್, ಎಸ್.ಡಿ.ಎಂ ಸ್ನಾತಕೋತ್ತರ ಕೇಂದ್ರದ ಡೀನ್ ಡಾ.ವಿಶ್ವನಾಥ ಪಿ ಉಪಸ್ಥಿತರಿದ್ದರು. ಸಂಶೋಧನಾ ಅಭಿವೃದ್ಧಿ ಘಟಕದ ನಿರ್ದೇಶಕಿ ಡಾ.ಸೌಮ್ಯ ಬಿ.ಪಿ ಪ್ರಾಸ್ತಾವಿಕ ಮಾತುಗಳನ್ನಾಡಿದರು. ಕಾರ್ಯಕ್ರಮ ಸಂಘಟನಾ ಸಮಿತಿಯ ಡಾ.ವಂದನಾ ಜೈನ್ವಂ ದಿಸಿದರು. ಡಾ.ನಫೀಸತ್ ಕಾರ್ಯಕ್ರಮವನ್ನು ನಿರೂಪಸಿದರು.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ