ವೈದಿಕರ ಮನೆಗೆ ನಾನೊಲ್ಲೆ ಅಮ್ಮಾ
ಎಂದು ವೈಯ್ಯಾರ ಮಾಡಿದಳವಳು
ಯಾಕೆ ಎಂದು ಕೇಳಿದರೇ ಬೆಡಗಿ
ಹೇಳಿದಳು ನಸು ನಾಚುತ ಜರುಗಿ!
ವೈದಿಕರ ಮನೆಯಲಿ ಊಟ ತಡ
ಯಾವಾಗಲೂ ಮಡಿ ಮಡಿ ಎಂದು
ಹಾರುವರು ಅಡಿಗಡಿಗೆ ಎನ್ನುತಲಿ
ಅವಳು ಉಪಗಾರಣಿ ತಿಕ್ಕುವುದು
ಗ್ವಾಮಾ ಹಚ್ಚುವುದು ಬರೀ ಅವಲಕ್ಕಿ
ಮುಕ್ಕುವುದು ಹೂಸು ಬಿಡುವುದು!
ಹಸಿಬಿಸಿ ಪಂಚೆಯಲಿ ಊರ ತುಂಬಾ
ತಿರುಗುವನ ಕಟ್ಟಿಕೊಂಡು ನಾನ್ಹೇಗೆ ಏಗಲಿ?
ರಸಿಕತೆ ಗಂಧವಿಲ್ಲ ಧಾರಾವಾಹಿ ಗುಂಗಿಲ್ಲ
ಬರೀ ಇನ್ಕ್ರಿಮೆಂಟಿನ ಲೆಕ್ಕಾಚಾರವೇ ಸರಿ!
ಮೊಬೈಲ್ ನೋಡಲು ಬಿಡುತಿಲ್ಲ ಅತ್ತೆಯು
ಕುಟುಕ್ತಾಳೆ ನಿಂತಲ್ಲಿ ಕುಂತಲ್ಲಿ ಬರೀ ರಗಳೆ
ಇಲ್ಲದ್ದು ಹುಡುಕಿ ತೆಗೆದು ರಂಪಾಟ ಮಾಡೋ
ನಾದಿನಿ ಬರೀ ಹಂಗಿಸುವುದೇ ಆಯ್ತ ಇವರ್ದು!
ಹನ್ನೆರಡು ಮಕ್ಕಳು ಹಡೆ ಆಮೇಲೆ ನೀ ನಡೆ
ವೈಕುಂಠದಲಿ ನಮಗೂ ಸ್ವಲ್ಪ ನೀ ಜಾಗ ಹಿಡಿ
ಎಂದರ್ಪದಿಂ ಹೇಳೋ ಮಾವಂದು ಅಸಂರಂತ
ಪಿಟಿಪಿಟಿ ತಾಸಿಗೊಮ್ಮೆ ಚಾ ಕೊಡ್ಬೇಕು ಇವ್ರಿಗೆಲ್ಲ
ನಾ ಕಾಸುರಹಿತ ಆಳು ಯಾರಿಗೆ ಬೇಕು ಗೋಳು?
ಭಾವ ಮೈದುನರ ಕಾಟ ನಿಗಿಣ್ಣಿ ಗೊಣ್ಣೆ ನೋಟ
ಮನೆ ತುಂಬಾ ಮಕ್ಕಳ ಬಾಲ ಮುಂದಿರವೇ ಸೈ
ತಿಂಗಳ್ಗೊಮ್ಮೆ ಮೂಲೇಲಿ ಪವಡಿಸೋ ಸೌಭಾಗ್ಯ
ಎತ್ತರದಿಂದ ಸುರಿಯೋ ನೀರು ಮೇಲೆ ಅಕ್ಕಿಯನು
ಆರಿಸಿ ಕೊಡಬೇಕು ಚಿಂದಿ ಉಟ್ಟು ನಲಿಯಬೇಕು!
ಇದೇ ಆ ಪತ್ರೋಳಿ ಉಡುಗೊರೆ ಬೇಕಾದರೇ ನೀ
ಕೇಳು ನಮ್ಮ ಹುಲಿ ಉತ್ತರಭೂಪ ಅರುಣ ಶೌರಿಗೆ!
ನವರಾತ್ರಿಯಲಿ ಒಂಭತ್ತು ದಿನ ನೌವಾರಿ ಸೀರಿನ
ಉಟ್ಗೊಂಡು ಮಡಿಲೇ ಅಡಿಗೆ ಮಾಡ್ಬೇಕೊ ಅಪ್ಪ
ತಿಕ್ಕಿತಿಕ್ಕಿ ತೊಳೆದು ನನ್ನ ಮೈ ಉಸಿರೇ ನಿಂತ್ಹೋದ್ರೆ
ಮುತೈದೆಗೆ ಮುಕ್ತಿ ಸಿಕ್ತು ವೈಕುಂಠಕೆ ಎನ್ನುವರವರು!
ತಮ್ಮ ಮನೆ ಮಗಳ ಕಷ್ಟಕ್ಕೆ ಶಪಿಸುವರು ಅವರು
ಬೀಗರನ್ನ ಭಲೇ ಭಲೇ ಬೈಗುಳದ ರಂಗೋಲಿ ಹಚ್ಚಿ
ತಿಕ್ಕಿ ತೊಳೆದು ಒಣಗ್ಹಾಕುವರು ಬಿರು ಬಿಸಿಲಿಗೆನೇ!
ಬೈಗುಳ ಕೇಳಿ ಕಂಗಾಲಾಗಿ ಬಡಿದಾಟಕೆ ಸಿದ್ದ ಎಂದು
ಬಂದೇ ಬಿಡುವರು ದೀಪಾವಳಿ ಪಗಡಿ ಪಟ್ಟಾ ಹಾಸಿ!
ಹೆಣ್ಣಿನ ಜನುಮಕ ತಾಳಿಯೊಂದು ಶೋಭೆ ಎಂದು
ಹೇಳುವರು ನೋಡು ಇವರೇ ತುಂಬಿದ ಸಭೆಯಲಿ
ಮನೇಲಿ ಮಣ್ಣು ತಿನುವ ಕೆಲಸ ಮಾಡಿ ಬೀಗುವರು
ಇವ್ರಿಗೆ ಅಂತೇಲೆ ಕರೆಯುವರು ಗಂಡು ಹೆತ್ತವರೆಂದು!
ಲಗ್ನದಾಗ ರುಕ್ಕೋತಕು ಚೌಕಲಾಣಿಗೂ ತಕರಾರು
ಸೀರೆ ಕೊಟ್ಟಿಲ್ಲ ಛಂದಂದು ನೀವು ಮಾತಾಡಿದಂಗ
ಶುರುವಾಯ್ತು ನೋಡ್ರಿ ಸಾರಿಗೆ ಉಪ್ಪಿಲ್ಲ ತುಪ್ಪಿಲ್ಲ
ಗ್ಯಾರಂಟಿ ತಕರಾರು ಇವರು ತೆಗೆಯುವರು ನೋಡು!
ಅದಕವಳ ತಾಯಿ ಹೇಳಿದಳು ನಕ್ಕು ನಕ್ಕು ಸುಸ್ತಾಗಿ
ಹುಚ್ಚಿ ಕನಸು ಕಂಡೆ ಏನು? ಯಾವ ಕಾಲದಲಿದ್ದಿ ನೀ?
ನೀನೆಳಿದ್ದು ತಿರುಗಾ ಮುರುಗಾ ಆಯ್ತು ನೋಡೀಗ
ಕಾಲಚಕ್ರ ತಿರುಗಿದೆ ಗಂಡು ನಸು ನಾಚಿದೆ ಬಾರಮ್ಮ
ನೋಡಿಗ ಹೆಣ್ಣು ಸಿಕ್ಕರೇ ಸಾಕು ಗಂಡುಗಳ ಸರತಿಯ
ಸಾಲು ನೋಡಲ್ಲಿ ಹನುಮಂತನ ಬಾಲದಂತಿಲ್ಲವೇ?
ಹೆಣ್ಣು ಹೆತ್ತವರೀಗಿಗ ಬಂಪರ್ ಲಾಟರಿ ನೋಡು
ನಾವು ಹೇಳಿದ್ದಕ್ಕೆಲ್ಲ ತಲೆಯಾಡಿಸುವರು ಅವರು
ಕೂಡು ಅಂದ್ರೆ ಕೂಡ್ಬೇಕು ನಿಲ್ಲಂದ್ರs ನಿಲ್ಲಬೇಕು
ನೋಡು ಅದರಲಿ ಯಾವ ಮುಲಾಜು ಇಲ್ಲವಮ್ಮ!
ನಿನಗೆ ಅತ್ತೆ ಮಾವರಿದ್ದ ಮನೆ ಬೇಡವೋ ಹೇಳು
ಅದನೇ ತಪ್ಪದೆ ಪರಿಪಾಲಿಸುವ ಗಂಡು ಬಿಟ್ಟು ಬರು
ವನು ಅವರನು ವೃದ್ಧಾಶ್ರಮಕೆ ಬೇಕೆಂದರೇ ನಾನೂ
ಬಂದು ಇರುವೆನಲ್ಲೇ ಕಾಯಂ ಮನೆ ಮಾಲಕ್ತಿಯಾಗಿ!
ಹೆಣ್ಣು ಸಿಕ್ಕರೇ ಸಾಕು ಗಂಡಿನ ಜನುಮ ಪಾವನವೀಗ
ಏನು ಬೆಲೆ ತೆತ್ತಾದರೂ ಪಡೆವ ಸಾಹಸ ಮಾಡುವರು
ಇಲ್ಲದಿರೇ ಅವರಿಗೆ ಮೋಕ್ಷ ಮರೀಚಿಕೆ ನೋಡು ನೀ
ತಯಾರಾಗು ರಾಣಿ ಕಿರೀಟ ಧರಿಸಿ ರಾಜ್ಯವಾಳಲು
ಬೇಗ ಹುಕುಂ ಚಲಾಯಿಸಬೇಕಲ್ಲಾ ಗಂಡನ ಮೇಲೆ?
ಹೀಂಗಾ? ಅಂದ್ರೆ ಸರಿ ನಾನೀಗ ಲಗ್ನಕೆ ಎಂದ್ಳವಳು
ಗಜಗಮನೆ ಎದ್ದು ಹೊಂಟಳು ಗಾಂಭೀರ್ಯದಿಂದ
ಯಾವ ಬಕ್ರಾ ಬೀಳುವುದೋ ನೋಡ್ಬೇಕು ಇವ್ಳಿಗೆ
ಪಾಪದವನ ಪುಣ್ಯ ಅಳಿದಿರಬೇಕು ಝರಝರನೇ!
-ಶ್ರೀನಿವಾಸ ಜಾಲವಾದಿ, ಸುರಪುರ
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ