ಶ್ರೀ ವಾದಿರಾಜ ಗುರುಸಾವ೯ಭೌಮರು, ಅತ್ಯಂತ ಸುಂದರ ದೈವಿಕ ಶೃಂಗಾರ ಕಾವ್ಯ, "ರುಕ್ಮೀಣೀಶ ವಿಜಯ" ರಚಿಸಿ, ಶ್ರೀ ಕೃಷ್ಣ ಮತ್ತು ರುಕ್ಮಿಣಿ ಯ ಪ್ರಣಯ ಕಲಹದ ಲೀಲೆಯನ್ನು ರಚಿಸಿ, ಭಕ್ತರಿಗೆ ನೀಡಿದ ಮಹಾನ್ ಯತಿವರ್ಯರು. ಶ್ರೀ ಕೃಷ್ಣ ಒಬ್ಬನೇ ಅಚ್ಯುತ ಎಂದು ಲಕ್ಷ್ಮೀಸ್ವರೂಪಳಾದ ರುಕ್ಮಿಣಿ, ಶ್ರೀ ಕೃಷ್ಣನ ಗುಣಗಾನ ಮಾಡಿದ ಸಂದರ್ಭ ಭಾಗವತ ತಾತ್ಪರ್ಯ ನಿರ್ಣಯದ ದಶಮ ಸ್ಕಂಧದ 75ನೇ ಅಧ್ಯಾಯದಲ್ಲೂ ವಿವರಿಸಲಾಗಿದೆ!
ಶ್ರೀ ಕೃಷ್ಣನಿಗೆ ರುಕ್ಮಿಣಿಯು ವಿವಾಹ ಪೂರ್ವದ ಪತ್ರ ಸುದೇವನ ಮೂಲಕ (ಶ್ರೀ ವಾದಿರಾಜರ) ರವಾನಿಸಿದ ಪತ್ರ ಅತ್ಯಂತ ಶೃಂಗಾರದಿಂದ ಭಗವಂತನ ಗುಣಗಾನ ಮಾಡಿ, ವರಿಸಿದ್ದು ಅವರಿಬ್ಬರ ಲೀಲೆಯನ್ನು ತೋರಿಸುತ್ತಾ, ಆಜ್ಞರಿಗೆ ಮೋಹ ಉಂಟುಮಾಡುತ್ತದೆ.
ಪತ್ರದಲ್ಲಿ ರುಕ್ಮಿಣಿ ಕೃಷ್ಣನ ಗುಣಗಾನ ಅನೇಕ ರೀತಿಯಿಂದ ಹೃದಯ ತುಂಬಿ ವಣಿ೯ಸುತ್ತಾಳೆ. ಹೇ ತ್ರಿಭುವನ ಸುಂದರ, ನಿಮ್ಮ ಗುಣಗಾನ ಕಿವಿಯ ಮೂಲಕ ಕೇಳಿ, ಅದು ನನ್ನ ಹೃದಯವನ್ನು ಪ್ರವೇಶಿಸಿ, ಒಂದೊಂದು ಅಂಗವೂ, ಜನ್ಮ ಜನ್ಮದ ತಾಪ ಇಂಗಿಸಿ, ತಂಪು ಮಾಡುತ್ತದೆ. ನಿಮ್ಮ ರೂಪ, ಸೌಂದರ್ಯ, ಎಲ್ಲಾ ಕಣ್ಣುಗಳುಳ್ಳ ಭುವಿಯ ಜೀವರಾಶಿಗಳಿಗೆ ನಾಲ್ಕು ಪುರುಷಾಥ೯ ನೀಡಿ, ಸಮಸ್ತ ಸುಖ ನೀಡುತ್ತದೆ. ನಿಮ್ಮ ಗುಣಗಾನಗಳನ್ನು ಶ್ರವಣ ಮಾಡಿದೆ!, ಹೇ ಅಚ್ಯುತ, ನನ್ನ ಚಿತ್ತ, ಲಜ್ಜೆ ಬಿಟ್ಟು ನಿಮ್ಮಲ್ಲಿ ಪ್ರವೇಶ ಮಾಡಲು ಹಾತೊರೆಯುತ್ತಿದೆ.
ಹೇ ಪ್ರೇಮ ಸ್ವರೂಪ ಶ್ಯಾಮಸುಂದರ, ಯಾವ ದೃಷ್ಟಿಕೋನದಿಂದ ನೋಡಿದರೂ ಕುಲ, ಶೀಲ, ಸ್ವಭಾವ, ವಿದ್ಯೆ ಸೌಂದರ್ಯ, ಅವಸ್ಥೆ, ಪ್ರೇಮಧಾಮ ಎಲ್ಲಾ ಕಡೆ ನೀವು ಅದ್ವಿತೀಯ, ಅಸಾಮಾನ್ಯರು! ಮನುಷ್ಯ ಲೋಕದಲ್ಲಿ ಎಷ್ಟೇ ಜೀವಿಗಳಿದ್ದರೂ ಎಲ್ಲರ ಮನಸ್ಸು ನಿಮ್ಮನ್ನು ದಶಿ೯ಸಿ, ಶಾಂತಿಯ ಅನುಭವ ಪಡೆದು ತೃಪ್ತಿ, ಮತ್ತು ಸಂತುಷ್ಟರಾಗುವರು. ಹೇ,ಪುರುಷ ಶ್ರೇಷ್ಠನೇ, ನೀವೇ ಹೇಳಿ? ಯಾವ ಕನ್ಯಾ ಮಹಾಗುಣವತಿ, ಕುಲವತಿ,ಮತ್ತು ಧೈಯ೯ವಂತೆ, ವಿವಾಹಕ್ಕೆಯೋಗ್ಯ ಆಗಿರುವಾಗ, ನಿಮ್ಮನ್ನು ಪತಿ ರೂಪದಲ್ಲಿ ಪಡೆಯಲು ನಿರಾಕರಿಸುವಳೇ? ಅದಕ್ಕಾಗಿ ಪ್ರಿಯತಮ, ನಾನು ನಿಮ್ಮ ಪ್ರತಿರೂಪ ವರಿಸಿದ್ದೇನೆ. ನಾನು, ನಿಮಗೆ ಸಂಪೂರ್ಣ ಆತ್ಮ ಸಮರ್ಪಣೆ ಮಾಡಿಕೊಂಡಿದ್ದೇನೆ. ನೀವು ಮಾತ್ರ ಅಂತರ್ಯಾಮಿಯಾಗಿದ್ದೀರಿ. ನನ್ನ ಹೃದಯದ ಮಾತುಗಳನ್ನು ನಿಮ್ಮಲ್ಲಿ ಮುಚ್ಚಿಡಲು ಸಾಧ್ಯವಿಲ್ಲ! ನೀವು ಇಲ್ಲಿಗೇ ಬಂದು ನನ್ನನ್ನು ಪತ್ನಿ ರೂಪದಲ್ಲಿ ಸ್ವೀಕಾರ ಮಾಡಿರಿ.
ಹೇ ಕಮಲನಾಭ, ಪ್ರಾಣವಲ್ಲಭ, ನಾನು ಸಂಪೂರ್ಣ ನಿಮ್ಮ ವೀರತ್ವಕ್ಕೆ ಸಮರ್ಪಿಸಿಕೊಂಡಿದ್ದೇನೆ ಮತ್ತು ಕೇವಲ ನಿಮಗಾಗಿ ಇದ್ದೇನೆ. ಹೇಗೆ ಸಿಂಹದ ಅಂಗಗಳನ್ನು ಸ್ಪರ್ಶಿಸಲು ಅಸಾಧ್ಯವೋ, ಹಾಗೆ ಶಿಶುಪಾಲ ಮುಂತಾದವರು ನನ್ನನ್ನು ಸ್ಪಶಿ೯ಸದಂತೆ ಏನಾದರೂ ಉಪಾಯ ಮಾಡಿರಿ. ನಾನೇನಾದರೂ ಜನ್ಮ ಜನ್ಮಾಂತರದ ನಿಷ್ಠೆಯಿಂದ ವ್ರತ, ಯಜ್ಞ, ದಾನ, ನಿಯಮ ವ್ರತ, ದೇವತಾ, ಬ್ರಾಹ್ಮಣ, ಗುರು ಮುಂತಾದವರ ಪೂಜೆ ಮಾಡಿದ್ದರೇ, ಶಿಶುಪಾಲ ಇನ್ನಿತರರು ನನ್ನನ್ನು ಸ್ಪರ್ಶ ಮಾಡದಂತೆ ನೀವು ಬಂದು ಪಾಣಿಗ್ರಹಣ ಮಾಡಿರಿ. ಪ್ರಭೋ, ನೀವು ಅಜೇಯರು, ಯಾವ ದಿವಸ ನನ್ನ ವಿವಾಹ ಜರುಗುತ್ತದೆಯೋ, ಒಂದು ದಿನ ಮುಂಚೆಯೇ ನಮ್ಮ ರಾಜಧಾನಿಗೆ ಗುಪ್ತ ರೂಪದಲ್ಲಿ ಬಂದು ಬಿಡಿ. ದೊಡ್ಡ ದೊಡ್ಡ ಮಹಾ ಸೇನಾಧಿಪತಿಯೊಂದಿಗೆ ಬರುವ ಶಿಶುಪಾಲನ ಸೇನೆ ಮತ್ತು ಜರಾಸಂಧನ ಸೇನೆ ಬಗ್ಗು ಬಡಿದು ನಿಶ್ಯಕ್ತಿ ಮಾಡಿ, ನಿಮ್ಮ ಬಲಶಾಲಿಯಾದ ದೈತ್ಯ ಶಕ್ತಿಯ ವೀರತ್ವ ಪ್ರದರ್ಶಿಸಿ ನನ್ನ ಪಾಣಿಗ್ರಹಣ ಮಾಡಿರಿ.
ನಾನು ನಮ್ಮ ಅಂತಃಪುರದ ಕಾವಲಿನಲ್ಲಿರುವವಳು. ನಮ್ಮ ಬಂಧುಬಳಗದವರನ್ನು ಹೊಡೆದು ನಾನು ಹೇಗೆ ಕರೆದುಕೊಂಡು ಹೋಗಬಹುದೆಂದು ನೀವು ಸ್ವತಃ ಯೋಚನೆ ಮಾಡಬಹುದು. ಇದಕ್ಕೆ ನಾನೊಂದು ಉಪಾಯ ತಿಳಿಸುತ್ತೇನೆ.
ನಮ್ಮ ಕುಲದಲ್ಲಿ ಒಂದು ಶಾಸ್ತ್ರ, ನಿಯಮವಿದೆ. ವಿವಾಹದ ಮುಂಚಿನ ದಿನ ಕುಲದೇವತೆಯ ದರ್ಶನಕ್ಕೆ ಬಹುದೊಡ್ಡ ಯಾತ್ರೆ ಹೊರಡುತ್ತದೆ. ಭವ್ಯ, ಸುಂದರ, ಶೋಭಾ ಯಾತ್ರೆ ಹೊರಟಾಗ, ವಿವಾಹವಾಗುವ ಕನ್ಯೆಯನ್ನು ವಧುರೂಪದಲ್ಲಿ ಅಲಂಕರಿಸಿ ನಗರದ ಹೊರಭಾಗದಲ್ಲಿರುವ ಪುರಾತನ ಗಿರಿಜಾದೇವಿಯ ದೇವಾಲಯಕ್ಕೆ ಕರೆದೊಯ್ಯುವ ಸಂಪ್ರದಾಯವಿದೆ. ಹೇ, ಕಮಲನಯನ, ಉಮಾಪತಿ ಶಂಕರನಿಗೆ ಸಮಾನರಾದ ದೊಡ್ಡ ದೊಡ್ಡ ಮಹಾಪುರುಷರು ತಮ್ಮ ಆತ್ಮಶುದ್ಧಿಗಾಗಿ, ನಿಮ್ಮ ಚರಣಕಮಲದ ಧೂಳಿನಲ್ಲಿ ಸ್ನಾನವನ್ನು ಮಾಡಲು ಬಯಸುತ್ತಾರೆ. ಅಂತಹ ನಿಮ್ಮ ಪ್ರಸಾದ ನಿಮ್ಮ ಚರಣ ಧೂಳು ನನಗೆ ಪ್ರಾಪ್ತವಾಗದಿದ್ದರೆ ಸಾವಿರ ಸಾವಿರ ಜನ್ಮ ಕಳೆದು ಎಂದೋ ಒಂದು ದಿವಸ, ನಿಮ್ಮ ಪ್ರಸಾದ ಅವಶ್ಯವಾಗಿ ಪಡೆಯುತ್ತೇನೆ. ಹೀಗೆ ಪತ್ರ ಬರೆದು ರುಕ್ಮಿಣಿ ಸುದೇವನ ಮೂಲಕ ರವಾನಿಸುತ್ತಾಳೆ.
ಅದರಂತೆ ಶ್ರೀ ಕೃಷ್ಣ ಅಂತಃಪುರದ ಹತ್ತಿರ ಬಂದು ರುಕ್ಮಿಣಿಯನ್ನು ರಥದಲ್ಲಿ ಕುಳ್ಳಿರಿಸಿ ಮೂಲಮಾಧವ ಕ್ಷೇತ್ರದಲ್ಲಿ ಬಂದಾಗ ವಿವಾಹದ ನಿಶ್ಚಯವಾಗುತ್ತದೆ. ಶ್ರೀಕೃಷ್ಣನಿಗೆ ರುಕ್ಮಿಣಿಯ ಮಾಲಾರ್ಪಣೆಯಾದ ನಂತರ ವಿವಾಹದ ಸಂದರ್ಭ ಜರುಗಿ ದ್ವಾರಕಾ ಪ್ರವೇಶವಾದಾಗ ಸಕಲ ಮುನಿ ಜನರು ಶ್ರೀ ಕೃಷ್ಣನ ವರ್ಣನೆ ಮಾಡಿ ಧನ್ಯರಾಗುವರು.
ಶ್ರೀ ಕೃಷ್ಣನಿಗೆ ರುಕ್ಮಿಣಿ ಅಷ್ಟಮಹಿಷಿಯರಲ್ಲಿ ಅತಿಶಯ ಪ್ರೀತಿ, ಒಲವು ಅತಿ ಹೆಚ್ಚು ತೋರಿಸಿದ್ದ. ಶ್ರೀ ಕೃಷ್ಣ ರುಕ್ಮಿಣಿಯ ಗಾಢ ಪ್ರೇಮವನ್ನು ಅರಿಯಲು ಕೆಣಕಿಸಿ ತನ್ನ ಲೀಲೆಯನ್ನು ತೋರ್ಪಡಿಸಿದ. ದೇವೋತ್ತಮರಾದ ಶಿಶುಪಾಲಾದಿ ರಾಜರು ನಿನ್ನನ್ನು ವಿವಾಹವಾಗಲು ಬಯಸಿದರು. ನಿನ್ನ ಅಣ್ಣ ರುಕ್ಮಿ ಸಹ ಶಿಶುಪಾಲನಿಗೆ ನಿನ್ನನ್ನು ಕೊಟ್ಟು ವಿವಾಹ ಮಾಡಿಸಲು ವಾಗ್ದಾನ ಮಾಡಿದ್ದ. ನಿನ್ನ ತಂದೆ ಭೀಷ್ಮಕನು ಸಹ ಒಪ್ಪಿದ್ದ. ನಾನಾದರೋ, ಬಲಿಷ್ಠರಾದ ಜರಾಸಂಧಾದಿಗಳನ್ನು ವಿರೋಧಿಸಿ ಹೆದರಿ ಸಮುದ್ರದ್ವೀಪದಲ್ಲಿ ಮನೆ ಮಾಡಿಕೊಂಡಿದ್ದೇನೆ. ಯಯಾತಿಯ ಶಾಪವಿರುವುದರಿಂದ ರಾಜ ಸಿಂಹಾಸನ ತೊರೆದವನು. ನನ್ನ ನಡತೆ ಎಲ್ಲಾ ವಿಚಿತ್ರ! ವಿಲಕ್ಷಣ. ಲೋಕ ವಿಲಕ್ಷಣ ಮಾರ್ಗದಲ್ಲಿ ನಡೆಯುವ ನನ್ನ ಮಾರ್ಗ ಹಿಡಿದರೆ ನಿನಗೆ ಕಷ್ಟ ಬಂದೀತು. ನಾನು ನಿಷ್ಕಿಂಚನ, ದರಿದ್ರ!
ವಿವಾಹಕ್ಕೆ ಧನ, ಸಂಪತ್ತು ಮನೆತನ, ಅಧಿಕಾರ, ಸೌಂದರ್ಯ, ವಿದ್ಯೆ ಪರಸ್ಪರ ಸಂಬಂಧ ಸಮಾನವಾಗಿರಬೇಕು. ವ್ಯತ್ಯಾಸ ಆದರೇ,ಸಂಬಂಧ ಕೂಡುವುದಿಲ್ಲ. ಭಿಕ್ಷುಗಳು ಸುಮ್ಮನೆ ನನ್ನನ್ನು ಹೊಗಳಿದರು. ಅವರ ಹೊಗಳಿಕೆಗೆ ನನ್ನಲ್ಲಿ ತಕ್ಕ ಗುಣವಿಲ್ಲ. ನೀನು ಶ್ರೇಷ್ಠನಾದ ಅನುರೂಪನಾದ ರಾಜನನ್ನು ವಿವಾಹ ಮಾಡಿಕೊಳ್ಳಬಹುದು.
ನಾನು ಸ್ವರಮಣ ಆತ್ಮಾನಂದದಿಂದಲೇ ತೃಪ್ತನಾಗಿರುವವನು. ನನ್ನ ಕೆಲಸಗಳೆಲ್ಲ ಎಲ್ಲರಂತಲ್ಲ! ಶಿಶುಪಾಲ ಮತ್ತು ಮುಂತಾದ ರಾಜರು, ರುಕ್ಮಿಯೂ ನನ್ನನ್ನು ದ್ವೇಷಿಸಿದ್ದರಿಂದ ಅವರ ಎಲ್ಲಾ ಅಹಂಕಾರ ಮಟ್ಟ ಹಾಕಲು ಆ ದುಷ್ಟರ ತೇಜೋವಧೆಗಾಗಿ ನಿನ್ನನ್ನು ಅಪಹರಣ ಮಾಡಿ ತಂದಿದ್ದು. ಹೀಗೆ ಹೇಳಿ ಶ್ರೀ ಕೃಷ್ಣ ರುಕ್ಮಿಣಿಯ ಆಂತರ್ಯ ಅರಿಯಲು ನಾಟಕದ ಮಾತುಗಳನ್ನಾಡಿದ.
ಈ ಸನ್ನಿವೇಶವನ್ನು ಶ್ರೀ ಗುರು ಗೋಪಾಲದಾಸರು (ದಾಸಪ್ಪ ದಾಸರು) ರುಕ್ಮಿಣಿಯನ್ನು ಪ್ರಶ್ನಿಸಿ ಒಂದು ಸುಂದರ ಕೀತ೯ನೆಯನ್ನೇ ರಚಿಸಿ ಭಕ್ತರಿಗೆ ನೀಡಿದ್ದಾರೆ.
ಒಲಿದೆ ಯಾತಕಮ್ಮಾ ಲಕುಮಿ ವಾಸುದೇವಗೆ
ಹಲವಂಗದವನ ಹವಣೆ ತಿಳಿದೂ, ತಿಳಿದೂ ತಿಳಿಯದ ಹಾಗೆ॥
ಕಮಲಗಂಧಿ ಕೋಮಲಾಂಗಿ ಸುಂದರಾಬ್ಜವದನೆ ನೀನು
ರಮಣ ಮತ್ಸ್ಯ ಕಠಿಣ ಕಾಯ ಸೂಕರಾಸ್ಯನು
ರಮಣೀಯ ಸ್ವರೂಪಿ ನೀನು ಅಮಿತಘೋರ ರೂಪನವನು
ನಮಿಪರಿಷ್ಟದಾನಿ ನೀನು ದಾನವ ಬೇಡುವವನಿಗೆ॥
ಲಲಿತೆ ಚಾರುಶೀಲೆ ನೀನು ಕಲ್ಕಿ ಕಲಹಪ್ರಿಯನವನು
ಕುಲದ ಕುರುಹು ಇಲ್ಲ ಗುಣದ ನೆಲೆಯು ಕಂಡಿಲ್ಲ
ಹಲವು ಕಾಲದವನು ಅವನ ಬಂಧು ಬಳಗ ನಿಷ್ಕಿಂಚನರು
ಜಲಧಿ ಆಲದೆಲೆಯ ಮೇಲೆ ಮಲಗಿ ಬೆರಳ ಚೀಪುವವನಿಗೆ ॥
ಸ್ವರತಾನಪೇಕ್ಷಾಕಾಮಿ ನಿದ್ರಾಹೀನ ಅನಶನಿಯು
ಪರುಷರೂಪ ವಾಚ್ಯ ಶಬ್ದ ಅಮಿತ ಭೋಕ್ತನು
ಗುರುಗೋಪಾಲ ವಿಠ್ಠಲನು ನಿರುತ ತನ್ನ ವಕ್ಷದೊಳು
ಅರಮನೆಯ ಮಾಡಿಕೊಂಡು ಮರುಳು ಮಾಡಿದ ಮಾಯಾವಿಗೆ॥
ಶ್ರೀ ಕೃಷ್ಣನ ಕೆಣಕಿದ ಮಾತುಗಳಿಗೆ ಸಮಾಧಾನದಿಂದ ರುಕ್ಮಿಣಿ ಹೀಗೆ ಉತ್ತರಿಸಿ ತನ್ನ ಅಪರಿಮಿತ ಪ್ರೇಮ, ಪ್ರಣಯ ಲೀಲೆ ವ್ಯಕ್ತಪಡಿಸುತ್ತಾಳೆ.
ಹೇ ಕಮಲಾಕ್ಷ, ನಿನಗೆ ಸಮರಿಲ್ಲ. ನಾವಿಬ್ಬರೂ ಸಮಾನರಲ್ಲ. ಪೂರ್ಣನಾದ ನಿನಗೆ ನೀನೇ ಸಮಾನ! ಆತ್ಮಾನಂದ ಮಗ್ನನಾದ ಸರ್ವೇಶ್ವರ ನೀನು.
ತ್ರಿಗುಣಾಭಿಮಾನಿನಿಯಾದ ನಾನು ನಿನ್ನ ಚರಣದಾಸಿ. ನಿತ್ಯ ಮುಕ್ತನಾದ ನಿನಗೆ ಪ್ರಾಕೃತ ಇಂದ್ರಿಯಗಳು ಸದಾ ವಿರೋಧ ಮಾಡುವವು. ಅದಕ್ಕಾಗಿ ನೀನು ಸಮುದ್ರದಲ್ಲಿ ಮನೆ ಮಾಡಿರುವೆ. ಅವು ಎಂದೂ ಪೀಡಿಸುವುದಿಲ್ಲ. ನೀನು ನಿಷ್ಕಿಂಚನ, ದರಿದ್ರನಲ್ಲ. ಅಲ್ಪವಾದ ಪ್ರಾಕೃತ ಸಂಪತ್ತು ನಿನ್ನದಲ್ಲ. ನಿನಗೆ ಅದು ಬೇಕಾಗಿಲ್ಲ! ನಿನ್ನಲ್ಲಿ ಅಪ್ರಾಕೃತವಾದ, ಮಹತ್ತಾದ ಜ್ಞಾನಾದಿ ಸಂಪತ್ತಿದೆ. ಮೋಕ್ಷ ಸಂಪತ್ತು ನೀಡುವವನು. ಅನ್ಯರ ಸಕಲ ಗುಣಗಳಿಗೆ ಹೋಲಿಸಿದರೆ ಸರ್ವಥಾ ಪ್ರಾಶಸ್ತ್ಯವಲ್ಲ.
ಬ್ರಹ್ಮನು ವೈದಿಕ ಶಿರೋಮಣಿ. ಮುಖ್ಯ ಪ್ರಾಣ ಮಂತ್ರಜಪದಲ್ಲಿ ನಿರತ. ಶಿವನು ಮಹಾ ವೈರಾಗ್ಯಶಾಲಿ. ಇಂದ್ರ ಬಹುಬಗೆಯ ಕಾರ್ಯದಲ್ಲಿ ತೊಡಗಿರುವವನು. ಸೂರ್ಯನು ಸದಾ ಸಂಚಾರಿ! ನಿಶಾಚರನಾದ ಚಂದ್ರ ಕಳಂಕವುಳ್ಳವನು. ಕಾಮನಂತೂ ದೇಹರಹಿತ. ಅದಕ್ಕಾಗಿ ಇತರ ದೇವತೆಗಳನ್ನು ಕಡೆಗಣಿಸಿ, ನಿನ್ನನ್ನೇ ವರಿಸಿದ್ದೇನೆ ಎಂದು ರುಕ್ಮಿಣಿ ತನ್ನ ಅಂತರಾಳದ ಪ್ರೀತಿಯನ್ನು ವ್ಯಕ್ತಪಡಿಸಿದಳು. ನೀನು ಹೇಳಿದ ಹಾಗೆ, ಭಿಕ್ಷುಗಳು ಹೊಗಳುವುದು, ನಿನ್ನಲ್ಲಿ ಗುಣವಿಲ್ಲವೆಂದರೇ ತ್ರಿಗುಣಗಳು ಇಲ್ಲ ಎಂದರ್ಥ. ತಿಳಿಯದೇ ನಾನು ವರಿಸಿದೆ ಎಂದು ಹೇಳಿದಿ. ಹೌದು,
ಶಿಶುಪಾಲಾದಿ ಆಯುಷ್ಯ ಧೀರ್ಘವಲ್ಲವೆಂದೇ ನಿನ್ನನ್ನು ಆಲೋಚನೆ ಮಾಡಿ ವರಿಸಿದ್ದು. ತ್ರಿಗುಣಗಳಿಂದ ಜಗತ್ತನ್ನು ಸೃಷ್ಟಿಸುವ ಇಂತಹ ಕಾಲದಲ್ಲಿ, ತ್ರಿಗುಣಾಭಿಮಾನಿನಿಯಾದ ನನ್ನ ಮೇಲೆ ಅಮೋಘವಾದ ಅನುಗ್ರಹ ದೃಷ್ಟಿ ಹಾಯಿಸುವೆ. ಜಗತ್ತಿಗೇ ನೀನು ಒಡೆಯ. ದರಿದ್ರ ಎಂದರೆ ತಪ್ಪಾದೀತು.
ನೀನು ರಾಜಸಿಂಹಾಸನವನ್ನು ಉಗ್ರಸೇನನಿಗೆ ಒಪ್ಪಿಸಿ, ಅದು ಅವನಿಗೆ ತುಂಬಾ ಶ್ರೇಯಸ್ಕರ ಸಾಧನವೆಂದು ವ್ಯಕ್ತ ಮಾಡಿದ್ದೀಯ.
ಜಗದೀಶನಾದ ಸ್ವಾಮಿಯಾದ ನಿನ್ನನ್ನೇ ಅನುರೂಪನಾದ ವರನೆಂದು ವರಿಸಿದ್ದೇನೆ. ನಿನ್ನನ್ನು ಭಜಿಸುವವರು, ಸಂಸಾರದಿಂದ ಮುಕ್ತಿ ಹೊಂದುವರು. ಹೀಗೆ ನಿತ್ಯಮುಕ್ತಳು. ಶ್ರೀಕೃಷ್ಣ ಒಬ್ಬನೇ ಅಚ್ಯುತ ಎಂದು ಲಕ್ಷ್ಮೀ ಸ್ವರೂಪಳಾದ ರುಕ್ಮಿಣಿ ಗುಣಗಾನ ಮಾಡಿ, ತನ್ನ ಅಂತರಂಗದ ಗಾಢವಾದ ಅನುರಾಗ, ಪ್ರೀತಿಯನ್ನು ಪ್ರಣಯ ಕಲಹ ರೂಪದಲ್ಲಿ ನಿಶ್ಚಲವೆಂದು ಸಮರ್ಥಿಸಿಕೊಳ್ಳುತ್ತಾಳೆ.
ಶ್ರೀ ಕೃಷ, ರುಕ್ಮಿಣಿಯ ಲೀಲಾ ಮನೋಹರ ಸಂಭಾಷಣೆ, ನಾಟಕದಂತೆ ಆಡಿದ ಕಲಹದ ಮಾತುಗಳು ಲೋಕ ಕಲ್ಯಾಣಕ್ಕೋಸ್ಕರಕ್ಕಾಗಿ ಹೊರತು, ಆಜ್ಞರಿಗೆ ಮೋಹ ಉಂಟು ಮಾಡುವ ಪ್ರಸಂಗ.
ಶ್ರೀ ಮಧ್ವಾಚಾರ್ಯರ ಗುರು ಪರಂಪರೆಯಲ್ಲಿ ಬಂದ ಶ್ರೀವಾದಿರಾಜ ಗುರುಸಾರ್ವಭೌಮರು ರಚಿಸಿದ ಸುಂದರ ಕಾವ್ಯ "ರುಕ್ಮಿಣೀಶ ವಿಜಯ" ಲೌಕಿಕ ಕಾವ್ಯವಾಗಿರದೆ ಯುಕ್ತಿ, ಚಮತ್ಕಾರಗಳಿಂದ ಕೂಡಿದ ದೈವಿಕ ಶೃಂಗಾರ ಕಾವ್ಯವಾಗಿದೆ. ಈ ಕಾವ್ಯವು ಕಮಲರೂಪನಾಗಿ, ಶ್ರೀ ಹರಿಯ ಪಾದದಲ್ಲಿ ಸಮರ್ಪಿತ ಮತ್ತು ಶ್ರೀ ಮಹಾಲಕ್ಷ್ಮಿ ಕರದಲ್ಲಿ ಶೋಭಿಸುವ ದೇವತೆಗಳ ಉತ್ತಮ ಮನಸ್ಸಿನಲ್ಲಿ ನೆಲೆಗೊಳ್ಳುವ ಮುಖ್ಯ ಪ್ರಾಣನಿಗೆ, ಸರಸ್ವತಿಗೆ, ಆನಂದ ಉಂಟುಮಾಡುವ, ಪರಮಹಂಸ ಯತಿಗಳೂ ಸಹ ಮನಸಾ ಆದರಿಸುವ ಅಪೂರ್ವಕಾವ್ಯ "ರುಕ್ಮಿಣೀಶ ವಿಜಯ".
- ಶ್ರೀಧರ ರಾಯಸಂ
116, 6ನೇ ಮುಖ್ಯ ರಸ್ತೆ
4ನೇ ಬ್ಲಾಕ್, 2ನೇ ಹಂತ
ಬನಶಂಕರಿ 3ನೇ ಘಟ್ಟ
ಬೆಂಗಳೂರು 85. .
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ