ಇಂದು ಕೃಷ್ಣ ಜಯಂತಿ, ಕೃಷ್ಣಾಷ್ಟಮಿ. ಎಲ್ಲ ಸುಮಂಗಲಿಯರು ಬಾಲಕೃಷ್ಣನನ್ನು ಪೂಜಿಸಿ ಅಲಂಕರಿಸಿದ ತೊಟ್ಟಿಲಲ್ಲಿ ಹಾಕಿ ತೂಗಿ ಪೂಜಿಸಿ ಆತನಿಗೆಂದೇ ನೂರೆಂಟು ಬಗೆಯ ಸಿಹಿ ಖಾರದ ತಿಂಡಿಗಳನ್ನು ಮಾಡಿ ನೈವೇದ್ಯವನ್ನು ಅರ್ಪಿಸುತ್ತಾರೆ. ಸಣ್ಣ ಮಕ್ಕಳಿರುವ ತಾಯಂದಿರು ತಮ್ಮ ಮಕ್ಕಳನ್ನು ಕೃಷ್ಣನ ವೇಷದ ವಿವಿಧ ಬಗೆಯ ರೂಪಗಳಲ್ಲಿ ಅಲಂಕರಿಸಿ ಸಂಭ್ರಮಿಸುತ್ತಾರೆ. ಮತ್ತೆ ಕೆಳಗಡೆ ಕೃಷ್ಣನ ವೇಷ ಧರಿಸಿದ ಮಕ್ಕಳಿಗಾಗಿ ಸ್ಪರ್ಧೆಗಳನ್ನು ಏರ್ಪಡಿಸುತ್ತಾರೆ. ಉತ್ತರ ಭಾರತದಲ್ಲಂತೂ ಕೃಷ್ಣನ ಎಲ್ಲ ದೇವಸ್ಥಾನಗಳಲ್ಲಿ ಶ್ರದ್ಧೆ ಭಕ್ತಿಗಳಿಂದ ಕೃಷ್ಣನನ್ನು ಪೂಜಿಸಿ ಆರಾಧಿಸುತ್ತಾರೆ. ಅವರೆಲ್ಲರಿಗೂ ಕೃಷ್ಣ ಭಕ್ತಿ ವೈರಾಗ್ಯ ಜ್ಞಾನಗಳ ಸಂಕೇತವಾಗಿ ತೋರುತ್ತಾನೆ.
ಕೃಷ್ಣನ ಭಜನೆ ಕೀರ್ತನೆಗಳಲ್ಲಿ ತೊಡಗಿಕೊಳ್ಳುವ ಜನರು ಮೊಸರು ಗಡಿಗೆ ಆಟವನ್ನು ಆಡುತ್ತಾರೆ. ರಾತ್ರಿ ಇಡೀ ಕೃಷ್ಣನ ಸಂಕೀರ್ತನೆ ನಡೆಯುತ್ತದೆ. ಕೃಷ್ಣನ ಬಾಲ ಲೀಲೆಗಳನ್ನು ನಾಟಕ, ನೃತ್ಯಗಳಲ್ಲಿ ಅಭಿನಯಿಸುತ್ತಾರೆ. ಆದರೆ ನಾವು ಕೃಷ್ಣನನ್ನು ಸರಿಯಾಗಿ ಅರ್ಥ ಮಾಡಿಕೊಂಡಿದ್ದೇವೆಯೇ ಎಂದು ಕೇಳಿದರೆ ಉಹೂ೦!! ಖಂಡಿತವಾಗಿಯೂ ಇಲ್ಲ.
ಸೆರೆಮನೆಯಲ್ಲಿ ಜನಿಸಿದ ಕೃಷ್ಣ, ಬೆಣ್ಣೆ ಕದ್ದ ಕೃಷ್ಣ, ನಾರಿಯರ ಸೀರೆ ಕದ್ದ ಕೃಷ್ಣ, 16,000 ಹೆಂಡಂದಿರನ್ನು ಹೊಂದಿದ ಕೃಷ್ಣ, ಸ್ತ್ರೀಲೋಲನಾದ ಕೃಷ್ಣ ಎಂದು ಕೃಷ್ಣನನ್ನು ಹೀಗಳೆಯುವುದೇ ಹೆಚ್ಚು.
ಆದರೆ ಭಗವಾನ್ ಶ್ರೀ ಕೃಷ್ಣ ವಿಷ್ಣುವಿನ ಅವತಾರ. ಹಲವಾರು ರಾಕ್ಷಸರನ್ನು ಕೊಲ್ಲುವ ಉದ್ದೇಶದಿಂದಲೇ ಈ ಧರೆಯಲ್ಲಿ ಜನಿಸಿದವ. ದುಷ್ಟ ಶಿಕ್ಷಣ ಶಿಷ್ಟ ರಕ್ಷಣೆಗಾಗಿ ಅವತಾರವೆತ್ತಿದವ. ನ್ಯಾಯಾನ್ಯಾಯ, ಸರಿ ತಪ್ಪುಗಳ ಅರಿತವ, ಪ್ರೀತಿ ಪ್ರೇಮಗಳ ಮಾಧುರ್ಯವನ್ನು ತಿಳಿಸಿಕೊಟ್ಟವ, ಕರ್ತವ್ಯಕ್ಕಾಗಿ ತ್ಯಾಗವನ್ನು ಮಾಡಬೇಕೆಂದು ಹೇಳಿಕೊಟ್ಟ ಆತ ಕಾಲವನ್ನು ಮೀರಿದ ಕಾಲಾತೀತ, ಗುಣಗಳನ್ನು ಮೀರಿದ ಗುಣಾತೀತನವ.
ಕೃಷ್ಣ ಎಂಬ ಮನೋವಿಜ್ಞಾನಿ:
ಕುರುಕ್ಷೇತ್ರ ಯುದ್ಧದ ಮೊದಲ ದಿನ ಅರ್ಜುನ ಯುದ್ಧದಲ್ಲಿ ತನ್ನ ಎದುರಾಳಿಗಳಲ್ಲಿರುವ ತನ್ನೆಲ್ಲ ಸಂಬಂಧಿಕರನ್ನು ಕಂಡು ಹಿಂಜರಿದು ಯುದ್ಧ ಮಾಡಲು ಮನಸೊಪ್ಪದೆ ಹಿಮ್ಮೆಟ್ಟಿದಾಗ ಧರ್ಮ ಮತ್ತು ಅಧರ್ಮಗಳ ನಡುವಿನ ವ್ಯತ್ಯಾಸವನ್ನು ತಿಳಿಹೇಳಿ, ಲಾಭಾಲಾಭ ಜಯಾಪಜಯಗಳನ್ನು ತಿಳಿ ಹೇಳಿ ಜಗತ್ತಿನ ಎಲ್ಲ ಜಂಜಡಗಳನ್ನು ಹೇಗೆ ಎದುರಿಸಬೇಕು, ನಿರ್ಲಿಪ್ತತೆಯಿಂದ ಹೇಗೆ ಬದುಕಬೇಕು, ಹಿಂಸೆ ಅಹಿಂಸೆಗಳ ನಡುವಿನ ವ್ಯತ್ಯಾಸವನ್ನು ಹೇಗೆ ಅರಿಯಬೇಕು, ಭಕ್ತಿ ಸಿದ್ದಾಂತ,ಕರ್ಮ ಸಿದ್ದಾಂತ, ಜ್ಞಾನ ಸಿದ್ದಾಂತ ಮತ್ತು ಯೋಗ ಸಿದ್ದಾಂತಗಳನ್ನು ಭಗವದ್ಗೀತೆಯ ಮೂಲಕ ಬೋಧಿಸಿದ ಜಗತ್ತಿನ ಮತ್ತು ಮೊದಲ ಮನೋವಿಜ್ಞಾನಿ ಕೃಷ್ಣ.
ಜಗತ್ತಿನ ವಿವಿಧೆಡೆಗಳಲ್ಲಿ ಜನರು ಇನ್ನೂ ಕಣ್ತೆರೆದು ಎದ್ದು ಕುಳಿತಿರುವಾಗಲೇ ಭಗವದ್ಗೀತೆಯಂತಹ ಶ್ರೇಷ್ಠ ಜ್ಞಾನವನ್ನು ನೀಡಿದ ಕೃಷ್ಣನ ಭಗವದ್ಗೀತೆಯ ಜ್ಞಾನ ಸಾರ್ವಕಾಲಿಕ ಸತ್ಯವಾಗಿ ಪರಿಣಮಿಸಿದೆ. ಕೇವಲ ಅದನ್ನು ಪಠಿಸಿದರೆ ಸಾಲದು. ನಮ್ಮ ಜೀವನದಲ್ಲಿಯೂ ಅಳವಡಿಸಿಕೊಳ್ಳಬೇಕು ಎಂಬುದನ್ನು ನಾವು ಅರಿಯಬೇಕು.
ಕೃಷ್ಣ ಎಂಬ ಜಗದ್ರಕ್ಷಕ:
ಪೂತನಿ, ಶಕಟಾಸುರ, ಕಂಸ, ಜರಾಸಂಧರಂತಹ ರಾಕ್ಷಸರನ್ನು ಕೊಂದು, ಆ ಮೂಲಕ ದುಷ್ಟ ಶಿಕ್ಷಣವನ್ನು ಮಾಡುವ ಮಹದುದ್ದೇಶದಿಂದ ಈ ಭೂಮಿಯಲ್ಲಿ ಅವತರಿಸಿದ ಅವತಾರಪುರುಷ ಕೃಷ್ಣ ನೂರೆಂಟು ತಪ್ಪುಗಳನ್ನು ಮಾಡಿದ ಶಿಶುಪಾಲನ ಶಿರವನ್ನು ತನ್ನ ಸುದರ್ಶನ ಚಕ್ರದಿಂದ ಕತ್ತರಿಸಿ ಹಾಕದೇ ಬಿಡಲಿಲ್ಲ. ಪಾಂಡವರೆಂಬ ಶಿಷ್ಟರನ್ನು ರಕ್ಷಿಸಿ ಕೌರವರೆಂಬ ದುಷ್ಟರನ್ನು ಶಿಕ್ಷಿಸಲು ಅಸ್ತ್ರವಾಗಿ ಬಳಸಿದ. ಧರ್ಮದ ಸ್ಥಾಪನೆಗೆ ಕಂಕಣಬದ್ದನಾಗಿ ಕಾರ್ಯನಿರ್ವಹಿಸಿದ.
ನಮ್ಮ ದೇಹವನ್ನು ಮುಚ್ಚಿರುವ ಬಟ್ಟೆಗಳ ಕುರಿತಾದ ನಗ್ನ ಸತ್ಯವನ್ನು ಜಗತ್ತಿಗೆ ವಿವರಿಸಲು, ಕೇವಲ ಬಾಹ್ಯ ಸೌಂದರ್ಯವೊಂದೇ ಸೌಂದರ್ಯದ ಅಳತೆಗೋಲಲ್ಲ ಎಂದು ಆತ್ಮದ ಸೌಂದರ್ಯದಲ್ಲಿ ಆಧ್ಯಾತ್ಮಿಕತೆ ಮಿಳಿತವಾಗಿರಬೇಕು ಎಂದು ಸೂಕ್ಷ್ಮವಾಗಿ ಹೇಳಿಕೊಟ್ಟವನು ಶ್ರೀ ಕೃಷ್ಣ.
ಕೃಷ್ಣ ಎಂಬ ಪ್ರೇಮಮಯಿ:
ನಮ್ಮ ಇಂಗ್ಲಿಷ್ ಕಾವ್ಯಗಳಲ್ಲಿ ಹೇಳಲ್ಪಡುವ ಪ್ಲೆಟಾನಿಕ್ ಲವ್ ಎಂಬ ಪ್ರೀತಿಯನ್ನು ಸಾವಿರಾರು ವರ್ಷಗಳ ಹಿಂದೆಯೇ ತೋರಿದ ಶ್ರೀ ಕೃಷ್ಣ ಗಂಡು ಹೆಣ್ಣಿನ ನಡುವಿನ ಪ್ರೀತಿ ಪ್ರೇಮಗಳು ದೈಹಿಕವಾದುದಲ್ಲ; ಅವು ಸಂಪೂರ್ಣ ಮಾನಸಿಕವಾದ, ಪರಮ ಪವಿತ್ರವಾದ ದೈವಿಕ ಭಾವ ಎಂದು ತೋರಿದನು. ಪ್ರೇಮವೆಂಬುದು ಆಧ್ಯಾತ್ಮಿಕತೆಯ ಮೊದಲ ಮೆಟ್ಟಿಲು ಎಂಬುದನ್ನು ಜಗತ್ತಿಗೆ ತೋರಿಸಿ ಕೊಟ್ಟವನು ಕೃಷ್ಣ.
ಕೃಷ್ಣ ಎಂಬ ದೀನಬಂಧು:
ಕೃಷ್ಣ ಗೋಕುಲವಾಸಿಯಾಗಿದ್ದಾಗ ತನ್ನ ಸಹವರ್ತಿಗಳನ್ನು ಕಾಪಾಡಲು ಕಾಳಿಂಗ ಸರ್ಪವನ್ನು ಮರ್ದಿಸಿದಾತ. ಬಿಡದೆ ಸುರಿಯುತ್ತಿದ್ದ ಮಳೆಯಿಂದ ರಕ್ಷಿಸಲು ಗೋವುಗಳನ್ನು ಮತ್ತು ಗೋಪಾಲಕರನ್ನು ಗೋವರ್ಧನಗಿರಿಯನ್ನು ತನ್ನ ಕಿರು ಬೆರಳಲ್ಲಿ ಎತ್ತಿ ಹಿಡಿದಾತ.
ಸಾಂದೀಪನಿ ಮಹರ್ಷಿಗಳ ಗುರುಕುಲದ ಒಡನಾಡಿ ಸುಧಾಮ ಅತ್ಯಂತ ಬಡತನದಿಂದ ಬಳಲುತ್ತಿದ್ದು ತನ್ನ ಪತ್ನಿಯ ಸಲಹೆಯಂತೆ ರಾಜನಾದ ಶ್ರೀ ಕೃಷ್ಣನ ಬಳಿ ಬಂದಾಗ ಸ್ನೇಹಿತನಾದ ಬಡ ಬ್ರಾಹ್ಮಣ ಸುಧಾಮನ ಪಾದಗಳನ್ನು ಸಪತ್ನಿಕನಾಗಿ ತೊಳೆದು ಅರ್ಘ್ಯವನ್ನಿತ್ತು ಭೂರಿ ಭೋಜನವನ್ನು ಮಾಡಿಸಿದನು. ರಾಜನಾಗಿದ್ದರು ವಿರಾಮದಿಂದ ಕುಳಿತು ಬಾಲ್ಯದ ಸವಿ ನೆನಪುಗಳನ್ನು ನೆನೆದನು.ಸ್ನೇಹಿತನ ಪ್ರೀತಿ ಕಂಡು ಪರವಶನಾದ ಸುಧಾಮ ಏನನ್ನೂ ಕೇಳದೆಯೇ ಹಿಂತಿರುಗಿದರೆ, ಆತನಿಗೆ ಎಲ್ಲವನ್ನು ದಯಪಾಲಿಸಿದ್ದ ಶ್ರೀಕೃಷ್ಣ 'ಹೇಳದೆಯೇ ಮಾಡುವವನು ರೂಢಿಯೊಳಗುತ್ತಮನು' ಎಂದು ಜಗತ್ತಿಗೆ ಸಾರಿ ಹೇಳಿದನು.
ಕೃಷ್ಣ ಎಂಬ ಸ್ತ್ರೀ ರಕ್ಷಕ:
ಪ್ರೀತಿಯಲ್ಲಿರುವ ಅದಮ್ಯ ಶಕ್ತಿಯನ್ನು, ಪ್ರೀತಿಸುವ ಜೀವವನ್ನು ರಕ್ಷಿಸುವ, ಭದ್ರತೆ ಮತ್ತು ಭರವಸೆಗಳನ್ನು ನೀಡುವ ಅವಶ್ಯಕತೆಯನ್ನು ಮನಗೊಂಡು ರಾಕ್ಷಸನ ಸಂಹಾರ ಮಾಡಿ ಆತನಿಂದ ಬಂಧಿತರಾದ ಹದಿನಾರು ಸಾವಿರ ಕನ್ಯೆಯರನ್ನು ಬಿಡುಗಡೆಗೊಳಿಸಿ ಅವರವರ ಪಾಲಕರ ಬಳಿ ಕಳುಹಿಸಲು ಸಜ್ಜಾದ ಶ್ರೀ ಕೃಷ್ಣ, ನಂತರ ಆ 16000 ಕನ್ಯೆಯರ ಅಪೇಕ್ಷೆಯಂತೆ ಅವರೊಂದಿಗೆ ದೈವಿಕ ವಿವಾಹ ಸಂಬಂಧವನ್ನು ಹೊಂದಿ ಭದ್ರತೆಯನ್ನು ಒದಗಿಸಿದ ಸ್ತ್ರೀ ರಕ್ಷಕ ಅಲ್ಲವೇ?
ಕೃಷ್ಣ ಎಂಬ ಧರ್ಮರಕ್ಷಕ:
"ಯದಾ ಯದಾಹಿ ಧರ್ಮಸ್ಯ ಗ್ಲಾನಿರ್ಭವತಿ ಭಾರತ... ಅಭ್ಯುಥ್ಥಾನಂ ಅಧರ್ಮಸ್ಯ ತದಾತ್ಮಾನಾಮ್ ಸೃಜಾಮ್ಯಹಮ್" ಎಂದು ಗೀತೆಯಲ್ಲಿ ಆತನೇ ಬೋಧಿಸಿರುವಂತೆ ಕೃಷ್ಣ ಎಲ್ಲೆಲ್ಲಿ ಅಧರ್ಮಗಳು ನಡೆಯುತ್ತಿವೆಯೋ ಅಲ್ಲೆಲ್ಲ ಅವತರಿಸಿ ಧರ್ಮವನ್ನು ಎತ್ತಿ ಹಿಡಿದಾತ.
ಕ್ಷತ್ರಿಯರ ಕ್ರೀಡೆಯಾದ ಜೂಜಿನಲ್ಲಿ ದ್ರೌಪದಿಯನ್ನು ಪಣಕ್ಕಿಟ್ಟು ಸೋತ ಪಾಂಡವರು ದುಶ್ಯಾಸನನು ದ್ರೌಪದಿಯ ಸೀರೆಯನ್ನು ಸೆಳೆಯುವಾಗ ತಲೆ ಕೆಳಗೆ ಹಾಕಿದ್ದರೆ, ಭೀಷ್ಮ ದ್ರೋಣಾಚಾರ್ಯರಂತಹ ಹಿರಿಯರು ಅಸಹಾಯಕರಾಗಿದ್ದರು. ದೃತರಾಷ್ಟ್ರ ಮೌನವಾಗಿದ್ದರೆ ಸಭಿಕರು ದಿಙ್ಮೂಢರಾಗಿ ನಿಂತಿದ್ದರು. ದ್ರೌಪದಿಯ ಮೊರೆ ಕೇಳಿ ಆಕೆಗೆ ಅಕ್ಷಯಾಂಬರವನ್ನು ದಯಪಾಲಿಸಿ ಆಕೆಯ ಮಾನವನ್ನು ಉಳಿಸಿದಾತ ಆಕೆಯನ್ನೂ, ಧರ್ಮವನ್ನೂ ರಕ್ಷಿಸಿದಾತ ಕೃಷ್ಣ.
ತನ್ನ ತಂಗಿ ಸುಭದ್ರೆಯ ಇಚ್ಛೆಗೆ ವಿರುದ್ಧವಾಗಿ ಅಣ್ಣ ಬಲರಾಮ ಆಕೆಯ ವಿವಾಹವನ್ನು ಮಾಡಲಿಚ್ಚಿಸಿ ದಾಗ ಸುಭದ್ರೆ ಗುಟ್ಟಾಗಿ ಆರಾಧಿಸುತ್ತಿದ್ದ ಅರ್ಜುನನೊಂದಿಗೆ ಕ್ಷಾತ್ರ ಧರ್ಮಾನುಸಾರವಾಗಿ ವಿವಾಹವಾಗಲು ಪ್ರೋತ್ಸಾಹಿಸಿ ಅವರನ್ನು ಒಂದಾಗಿಸಿದಾತ ಕೃಷ್ಣ.
ರಾಜಕೀಯ ಚತುರ/ ಸಂಧಾನಕಾರ ಕೃಷ್ಣ:
ಒಳ್ಳೆಯ ರಾಜನೀತಿ ಪರಿಣತಜ್ಞನಾಗಿದ್ದ ಕೃಷ್ಣ ಹಲವಾರು ರಾಜಕೀಯ ಸಮಸ್ಯೆಗಳನ್ನು ತನ್ನ ಚಾಣಾಕ್ಷತೆಯಿಂದ ಬಗೆಹರಿಸಿದ್ದನು. ಕೌರವ ಪಾಂಡವರ ನಡುವೆ ಸಂಧಾನಕಾರನಾಗಿ ಬಂದ ಕೃಷ್ಣ ಸ್ಥಿತಪ್ರಜ್ಞನಾಗಿ ತನ್ನ ಕರ್ತವ್ಯ ನಿರ್ವಹಿಸಿದನಲ್ಲದೆ, ಮಧ್ಯಸ್ಥಿಕೆ ವಹಿಸಿದ ತಾನು ಕೌರವರ ಆಸ್ಥಾನದಲ್ಲಿ ಉಳಿಯುವುದು ಉಚಿತವಲ್ಲ ಎಂದು ಭಾವಿಸಿ ವಿದುರನ ಮನೆಯಲ್ಲಿ ತಂಗಿದನು.
ಅಹಿಂಸೆ ಪರಮಧರ್ಮ, ಆದರೆ ಹಿಂಸೆಯನ್ನು ಸಹಿಸಿಕೊಳ್ಳುವುದು ಅದಕ್ಕಿಂತಲೂ ಘೋರವಾದ ತಪ್ಪು ಎಂದು ಸಾರಿದ ಕೃಷ್ಣ ಧರ್ಮ ಸೂಕ್ಷ್ಮವನ್ನು, ರಾಜಕೀಯ ಚತುರತೆಯನ್ನು ಅರಿತವನಾಗಿದ್ದ. ಕೃಷ್ಣನ ಹಲವಾರು ಚಾಣಾಕ್ಷ ನಡೆಗಳು ಪಾಂಡವರನ್ನು ಅಪಾಯದಿಂದ ತಪ್ಪಿಸಿದವು.
ಪಾಂಡವರನ್ನು ಲಾಕ್ಷಾಗೃಹದಲ್ಲಿ ದಹಿಸಬೇಕೆಂಬ ಕುರು ರಾಜಕುಮಾರ ದುರ್ಯೋಧನನ ಕುತಂತ್ರವನ್ನು ಅರಿತ ಕೃಷ್ಣ ವಿದುರನ ಮೂಲಕ ಅವರನ್ನು ಉಪಾಯದಿಂದ ಪಾರು ಮಾಡಿದ. ದ್ರೌಪದಿಗೆ ಅಕ್ಷಯ ಪಾತ್ರೆಯನ್ನು ನೀಡಿ ಹರಸಿದ ಕೃಷ್ಣ ಅರಣ್ಯದಲ್ಲಿದ್ದರೂ ಪಾಂಡವರು ಅತಿಥಿ ಸತ್ಕಾರ ಮಾಡಲು ತೊಂದರೆ ಇಲ್ಲದಂತೆ ಅನುಗ್ರಹಿಸಿದ್ದನು. ಅರ್ಜುನನು ಮತ್ಸ್ಯಯಂತ್ರವನ್ನು ಭೇದಿಸುವಾಗ ಹರಿಯುತ್ತಿದ್ದ ನೀರಿನ ಚಲನೆಯನ್ನು ನಿಲ್ಲಿಸಿದಾತ ಕೃಷ್ಣ. ಕುರುಕ್ಷೇತ್ರ ಯುದ್ಧದಲ್ಲಿ ದ್ರೋಣ, ಭೀಷ್ಮರನ್ನು ಸೋಲಿಸಲು ಚಾಣಾಕ್ಷ ನಡೆಯನ್ನು ಅನುಸರಿಸಿದ ಕೃಷ್ಣ ಕರ್ಣನ ಸೋಲಿಗೂ ಕಾರಣನಾಗಿದ್ದ.
ಯುದ್ಧ ಪೂರ್ವದಲ್ಲಿ ತನ್ನ ಕರ್ತವ್ಯವನ್ನು ಸ್ಥಿತಪ್ರಜ್ಞನಾಗಿ ನಿರ್ವಹಿಸು ಎಂದು ಅರ್ಜುನನಿಗೆ ಕರೆ ನೀಡಿದ, ತನ್ನ ವಿಶ್ವರೂಪವನ್ನು ತೋರಿಸಿ ಜಗತ್ತಿನ ಸರ್ವ ಚರಾಚರಗಳು ತನ್ನಿಂದಲೇ ಆಗಿವೆ ತಾನೇ ಸೃಷ್ಟಿಕರ್ತನು ಸ್ಥಿತಿ ಕರ್ತನು ಲಯ ಕರ್ತನು ಆಗಿದ್ದು ಎಲ್ಲವೂ ತನ್ನಿಂದಲೇ ಜನಿಸಿ ತನ್ನಲ್ಲೇ ಲೀನವಾಗುತ್ತವೆ ಎಂಬ ಸತ್ಯವನ್ನು ಅರುಹಿದ ಕೃಷ್ಣ ಯುದ್ಧದಲ್ಲಿ ಗೆದ್ದ ನಂತರ ಸ್ನೇಹಿತ ಅರ್ಜುನನಲ್ಲಿ ಉಂಟಾದ ಅಹಂ ಭಾವವನ್ನು ತೊಡೆದು ಹಾಕಿದನು ಕೂಡ.
ಯುದ್ಧ ನಂತರ ಪಾಂಡವರು ದೃತರಾಷ್ಟ್ರನನ್ನು ಭೇಟಿಯಾಗಲು ಹೋದಾಗ ತನ್ನೆಲ್ಲಾ ಮಕ್ಕಳನ್ನು ಕೊಂದ ಭೀಮನನ್ನು ಆಲಂಗಿಸುವ ಇಚ್ಛೆಯನ್ನು ಧೃತರಾಷ್ಟ್ರ ವ್ಯಕ್ತಪಡಿಸಿದಾಗ, ಆತನಿಂದ ಭೀಮನಿಗೆ ಒದಗುವ ತೊಂದರೆಯನ್ನು ಅರಿತ ಕೃಷ್ಣ ಉಪಾಯವಾಗಿ ದುರ್ಯೋಧನನು ತನ್ನ ಅಭ್ಯಾಸಕ್ಕಾಗಿ ಬಳಸುತ್ತಿದ್ದ ಭೀಮನ ಉಕ್ಕಿನ ಪ್ರತಿ ಕೃತಿಯನ್ನು ದೃತರಾಷ್ಟ್ರನ ಮುಂದೆ ತಳ್ಳಿದನು. ಧೃತರಾಷ್ಟ್ರನ ಆಕ್ರೋಶದ ಬಲಿಷ್ಠ ಆಲಿಂಗನಕ್ಕೆ ಆ ಉಕ್ಕಿನ ಪ್ರತಿ ಕೃತಿ ನುಚ್ಚು ನೂರಾದದ್ದನ್ನು ಕಂಡು ಎಲ್ಲರೂ ಬೆಚ್ಚಿ ಬಿದ್ದರೆ ಪಾಂಡವರು ಭೀಮನನ್ನು ಉಳಿಸಿದ ಕೃಷ್ಣನನ್ನು ಮನದಲ್ಲಿ ವಂದಿಸಿದರು.
ಹೀಗೆ ಅಂದು ಇಂದು ಎಂದೆಂದಿಗೂ ಜಗತ್ತನ್ನು ಕಾಪಾಡುವ ಜಗದ್ರಕ್ಷಕನಾಗಿ, ಕರುಣಾಮಯಿಯಾಗಿ ಪ್ರೇಮಮಯಿಯಾಗಿ ವಾತ್ಸಲ್ಯದ ಪ್ರತಿರೂಪವಾದ ಕೃಷ್ಣ ನಮ್ಮೆಲ್ಲಾ ಮನದ ಕ್ಲೇಶಗಳಿಗೆ ಉತ್ತರ ನೀಡುವ ಭಗವದ್ಗೀತೆಯನ್ನು ಜಗತ್ತಿಗೆ ನೀಡಿದ್ದು ಆತನನ್ನು ಜಗದ್ಗುರುವೆಂದು ಪೂಜಿಸುವ ಜನ "ಕೃಷ್ಣಂ ವಂದೇ ಜಗದ್ಗುರುಮ್" ಎಂದು ಪೂಜಿಸಿ ಭಜಿಸುತ್ತಾರೆ.
- ವೀಣಾ ಹೇಮಂತ್ ಗೌಡ ಪಾಟೀಲ್ ಮುಂಡರಗಿ ಗದಗ್
ನಿರಂತರ ಅಪ್ಡೇಟ್ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ