ಮಂಗಳೂರು: ಕೆನರಾ ಕಾಲೇಜಿನ ಕೊಂಕಣಿ ಭಾಷಾ ವಿದ್ಯಾರ್ಥಿ ಮಂಡಲದ ವತಿಯಿಂದ ಕೊಂಕಣಿ ಮಾನ್ಯತಾ ದಿವಸವನ್ನು ಇಂದು ಆಚರಿಸಲಾಯಿತು. ಸಂಪನ್ಮೂಲ ವ್ಯಕ್ತಿಯಾಗಿ ಆಗಮಿಸಿದ ಕೊಂಕಣಿ ಅಧ್ಯಯನ ಪೀಠದ ಸಂಯೋಜಕರು ಮಂಗಳೂರು ವಿಶ್ವವಿದ್ಯಾನಿಲಯ ಹಾಗೂ ವಿ.ವಿ ಕಾಲೇಜು, ಅರ್ಥಶಾಸ್ತ್ರ ವಿಭಾಗದ ಮುಖ್ಯಸ್ಥರು ಮತ್ತು ಪ್ರಾಧ್ಯಾಪಕರಾಗಿರುವ ಡಾ. ಜಯವಂತ ನಾಯಕ್ ದೀಪ ಬೆಳಗಿಸಿ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು.
ಕೊಂಕಣಿ ಭಾಷೆಗೆ ನಮ್ಮ ದೇಶದ ಸಂವಿಧಾನದಲ್ಲಿ ಮಹತ್ತರ ಸ್ಥಾನಮಾನವಿದೆ. ನಮಗೆ ನಮ್ಮ ಭಾಷೆ, ಸಂಸ್ಕೃತಿ, ಪರಂಪರೆ ಹಾಗೂ ಸಮುದಾಯದ ಬಗ್ಗೆ ಅಭಿಮಾನವಿರಬೇಕು. ಭಾಷೆಯು ಒಂದು ಮಾಧ್ಯಮವಾಗಿದ್ದು ನಾವು ನಮ್ಮ ಮಾತೃಭಾಷೆಯನ್ನು ಪ್ರೀತಿಸಬೇಕು ಹಾಗೂ ಗೌರವಿಸಬೇಕು. ರಾಷ್ಟ್ರ ನಿರ್ಮಾಣಕ್ಕೆ ನಮ್ಮ ಕೊಂಕಣಿ ಸಮುದಾಯದವರು ಕೊಟ್ಟ ಕೊಡುಗೆ ಮಹತ್ತರವಾದದ್ದು ಎಂದು ನುಡಿದರು.
ಸಂವಿಧಾನಕ್ಕೆ ಐವರು ಮಹಾನ್ ವ್ಯಕ್ತಿಗಳ ಕೊಡುಗೆಯನ್ನು, ವಿದ್ಯೆಯಿಂದ ಉತ್ತಮ ಭವಿಷ್ಯ ನಿರ್ಮಾಣ ಸಾಧ್ಯ ಎಂದು ನುಡಿದ ಕೆನರಾ ಶಿಕ್ಷಣ ಸಂಸ್ಥೆಯ ಸಂಸ್ಥಾಪಕರಾದ ಅಮ್ಮೆಂಬಳ ಸುಬ್ಬರಾವ್ ಪೈಯವರನ್ನು ಅವರು ಈ ಸಂದರ್ಭದಲ್ಲಿ ಸ್ಮರಿಸಿದರು. ನಮ್ಮ ಭಾಷೆ,ಸಂಸ್ಕೃತಿ ಹಾಗೂ ಪರಂಪರೆಯ ಬಗ್ಗೆ ಅಭಿಮಾನಪಟ್ಟು ದುಡಿಯುವುದು ನಮ್ಮ ಅಸ್ತಿತ್ವಕ್ಕೆ ಕಾರಣವಾಗಿರುವುದು. ಕೀಳರಿಮೆ ಹಾಗೂ ಶ್ರೇಷ್ಠತೆಯ ಭಾವನೆಗಳು ಇದ್ದಲ್ಲಿ ನಮ್ಮ ವ್ಯಕ್ತಿತ್ವ ವಿಕಸನವು ಸಾಧ್ಯವಿಲ್ಲ ಎಂದು ಅವರು ಅಭಿಪ್ರಾಯಪಟ್ಟರು. ನಮ್ಮ ಹೆತ್ತವರ ಬಗ್ಗೆ ಗೌರವ ಅಭಿಮಾನ ಇರಬೇಕು, ಅವರ ಮಾತನ್ನು ಚಾಚು ತಪ್ಪದೇ ಪಾಲಿಸಿದಲ್ಲಿ ಜೀವನದಲ್ಲಿ ಗುರಿ ತಲುಪುವುದು ಖಂಡಿತ ಸಾಧ್ಯವೆಂದು ಅವರು ತಿಳಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ ಕಾಲೇಜಿನ ಪ್ರಾಂಶುಪಾಲರಾದ ಡಾ. ಪ್ರೇಮಲತಾ ವಿ. ಅವರು ನಮ್ಮ ಭಾಷೆಯನ್ನು ನಾವು ಉಳಿಸಿ ಬೆಳೆಸಬೇಕೆಂಬ ಮನೋಭಾವನೆ ಪ್ರತಿಯೊಬ್ಬ ರಲ್ಲಿ ಇರಬೇಕೆಂದು ನುಡಿದರು. ಅಂತಿಮ ವಾಣಿಜ್ಯ ವಿಭಾಗದ ವಿದ್ಯಾರ್ಥಿ ವರದರಾಜ ಭಕ್ತ ಅವರು ಅತಿಥಿಗಳನ್ನು ಪರಿಚಯಿಸಿ ಸ್ವಾಗತಿಸಿದರು. ಪ್ರಥಮ ವಾಣಿಜ್ಯ ವಿಭಾಗದ ವಿದ್ಯಾರ್ಥಿನಿ ಕುಮಾರಿ ಕೆ.ಅಶ್ವಿನಿ ಶೆಣೈ ಅವರು ವಂದಿಸಿ, ಪ್ರಥಮ ವಾಣಿಜ್ಯ ವಿಭಾಗದ ಕುಮಾರಿ ಜೆ. ಸಪ್ತಮಿ ಭಟ್ ಅವರು ಕಾರ್ಯಕ್ರಮವನ್ನು ನಿರೂಪಿಸಿದರು.
ಪ್ರಥಮ ವಾಣಿಜ್ಯ ವಿಭಾಗದ ವಿದ್ಯಾರ್ಥಿನಿಯರಾದ ವೈಭವಿ ಶೆಣೈ, ರೀಶ್ಮ ಪ್ರಭು, ಜೆ.ಸಪ್ತಮಿ ಭಟ್ ಹಾಗೂ ಕೆ. ಅಶ್ವಿನಿ ಶೆಣೈ ಅವರು ಭಜನೆಯನ್ನು ಹಾಡಿ ಕುಮಾರಿ ಪ್ರಾರ್ಥನಾ ಭಟ್ ಅವರು ಸ್ವರಚಿತ ಕವನವನ್ನು ವಾಚಿಸಿದರು. ಕೊಂಕಣಿ ಭಾಷಾ ವಿದ್ಯಾರ್ಥಿ ಮಂಡಲದ ಸಂಯೋಜಕಿ ಶ್ರೀಮತಿ ಸುಜಾತ ಜಿ. ನಾಯಕ್, ಹಿಂದಿ ವಿಭಾಗದ ಮುಖ್ಯಸ್ಥೆಯಾದ ಡಾ. ಕಲ್ಪನಾ ಪ್ರಭು, ಶ್ರೀಮತಿ ಉಷಾ ನಾಯಕ್ ಹಾಗೂ ವಿನೋದ ವಿ ನಾಯಕ್ ಅವರು ಉಪಸ್ಥಿತರಿದ್ದರು.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ