ಇರಾನ್- ಇಸ್ರೇಲ್ ಉದ್ವಿಗ್ನತೆ: ಭಾರತದ ನಿಲುವು ಹೇಗಿರಬೇಕು?

Upayuktha
0


ಯುದ್ಧದ ಬಗ್ಗೆಯೂ ಒಂದು ಮಾತಿದೆ. ಈ ಯುದ್ಧಗಳು ಎಲ್ಲಿ ಹುಟ್ಟಿಕೊಳ್ಳುತ್ತದೆ ಅಂದರೆ ಮನುಷ್ಯರ ಮನಸ್ಸಿನಲ್ಲಿ. ಈಮಾತನ್ನು ಹೇಳಿದವರು ಮತ್ತಾರು ಅಲ್ಲ ಅಮೆರಿಕದ ಮಾಜಿ ಅಧ್ಯಕ್ಷ ಜಾನ್ ಎಫ್ ಕೆನಡಿಯವರು. ಈ ಮಾತು ಸತ್ಯ ಕೂಡಾ. ಯಾವುದೇ ಒಂದು ಯುದ್ಧದ ಹಿಂದಿನ ಸ್ಥಿತಿ ಗತಿ ಕಾರಣ ಹುಡುಕುತ್ತಾ ಹೇೂದಾಗ ನಮಗೆ ಮೊದಲು ಕಾಣುವುದು ಮನುಷ್ಯನ ಮನಸ್ಸಿನಲ್ಲಿ ಹುಟ್ಟಿಕೊಂಡ ದ್ವೇಷ, ಅಸೂಯೆ, ಅಭದ್ರತೆ, ಹೆದರಿಕೆಗಳೇ ಮೂಲ ಪ್ರೇರೇಪಿತ ಕಾರಣಗಳು. ಇದನ್ನು ಮನಶ್ಶಾಸ್ತ್ರಜ್ಞರು ಒಪ್ಪಿಕೊಂಡಿದ್ದಾರೆ.


ಜಗತ್ತಿನಲ್ಲಿ ಸಾವಿರಾರು ಯುದ್ಧಗಳು ನಡೆದು ಹೇೂಗಿದ್ದಾವೆ.ಅದಕ್ಕೆಲ್ಲ ಒಂದೊಂದು ಕಾರಣಗಳನ್ನು ನೀಡುತ್ತಾ ಬಂದಿದ್ದೇವೆ. ರಾಜಕೀಯ, ಧರ್ಮ, ಆರ್ಥಿಕತೆ, ಸಿದ್ಧಾಂತಗಳ ವೈರುಧ್ಯತೆ, ಗಡಿ ತಕರಾರುಗಳು ಭಯೇೂತ್ಪಾದನೆಗಳು ಇತ್ಯಾದಿ.


ಅಂತರರಾಷ್ಟ್ರೀಯ ನೀತಿಯಲ್ಲಿ ಕೂಡಾ ಯುದ್ಧ ಸಾರುವುದು ಕೂಡಾ ಒಂದು ದೇಶದ ವಿದೇಶಾಂಗ ನೀತಿ ಅನ್ನುವುದನ್ನು ಒಪ್ಪಿಕೊಂಡಿದ್ದೇವೆ. ಮಾತ್ರವಲ್ಲ ಯುದ್ಧದಿಂದಾಗಿ ಮೂರು "M"ಗಳು ನಷ್ಟ ಅನ್ನುವುದು ನಮಗೂ ಗೊತ್ತಿದೆ. Men- Money- Materials. ಆದರೂ ಈ ಜಗತ್ತಿನಲ್ಲಿ ಯುದ್ಧ ನಿಂತಿಲ್ಲ. ಜಗತ್ತಿನ ಇತಿಹಾಸದಲ್ಲೇ ಎರಡು ಮಹಾಯುದ್ಧಗಳು ಸಂಭವಿಸಿ ಹೇೂಗಿವೆ. ಅದೆಷ್ಟೋ ಯುದ್ಧಗಳು ಪ್ರಾದೇಶಿಕ ಮಟ್ಟದಲ್ಲಿ  ನಡೆದ ಸಾಕಷ್ಟು ಉದಾಹರಣೆಗಳು ನಮ್ಮ ಮುಂದಿದೆ. ಯುದ್ಧದ ಕುರಿತಾಗಿ ಒಂದು ಮಾತಿದೆ  "ಯುದ್ಧದಲ್ಲಿ ಗೆದ್ದವ ಸೇೂತ ಹಾಗೆ ಸೇೂತವನ್ನು ಸತ್ತ ಹಾಗೆ" ಆದರೂ ಕೂಡಾ ಈ ಯುದ್ಧ ಅನ್ನುವ ವಿದೇಶಾಂಗ ನೀತಿಗೆ ಜಗತ್ತಿನ ದೇಶಗಳು ಇತಿಶ್ರೀ ಹಾಡಲೇ ಇಲ್ಲ. ಬದಲಾಗಿ ಇದನ್ನೇ ವೈಭವೀಕರಿಸುವ ಕೆಲಸ ನಡೆಯುತ್ತಾ ಇದೆ.


ಇಷ್ಟೊಂದು ಪ್ರಾಸ್ತಾವಿಕ ಮಾತುಗಳನ್ನು ಈ ಯುದ್ಧ ಅನ್ನುವ ಮನುಷ್ಯ ವಿರೇೂಧಿ  ನೀತಿ ಅಸ್ತ್ರದ ಕುರಿತಾಗಿ ಬರೆಯ ಬೇಕಾಯಿತು ಕಾರಣವೆಂದರೆ; ಇತ್ತೀಚೆಗೆ ವಿಶ್ವದ ಶಾಂತಿ ಪ್ರಿಯರಲ್ಲಿ ಆತಂಕ ಸೃಷ್ಟಿ ಮಾಡುತ್ತಿರುವ ಸುದ್ದಿ ಅಂದರೆ ಇರಾನ್ ಇಸ್ರೇಲ್ ನಡುವಿನ ಸಮರದ ಛಾಯೆ.

ಒಂದು ಅರ್ಥದಲ್ಲಿ ಈ ಎರಡು ದೇಶಗಳ ನಡುವೆ ಶೀತಲ ಸಮರವೊ ಅಥವಾ ಮುಸುಕಿನ ಯುದ್ಧ ಹಲವು ವರುಷಗಳ ಹಿಂದೇನೆ ಪ್ರಾರಂಭವಾಗಿತ್ತು. ಇದಕ್ಕೆ ಮೂಲ ಕಾರಣ ಮಧ್ಯ ಪ್ರಾಚ್ಯ ರಾಷ್ಟ್ರದಲ್ಲಿನ ಜನಾಂಗೀಯ ದ್ವೇಷ ಮತಧಮ೯ಗಳ ವೈಷಮ್ಯ  ರಾಜಕೀಯ ಅಸ್ಥಿರತೆ ಸರ್ವಾಧಿಕಾರ ಮನ ಸ್ಥಿತಿ ಯ ಪೈಪೇೂಟಿ ಇದರ ನಡುವೆ ಬಡತನ ಭಯೇೂತ್ಪಾದನ ಪಿಡುಗುಗಳೆಂದೇ ಹೇಳ ಬಹುದು.


ಇರಾನ್ ಇರಾಕ್ ಲೆಬನಾನ್ ಇಸ್ರೇಲ್, ಸೌದಿ, ಮುಂತಾದ ಮಧ್ಯ ಪ್ರಾಚ್ಯ ದೇಶಗಳಲ್ಲಿ ಪ್ರಜಾಪ್ರಭುತ್ವದ ನೆಲೆಗಟ್ಟು ಇಲ್ಲದಿರುವ ಕಾರಣ ಸರ್ವಾಧಿಕಾರಿಗಳು ಹೇಳಿದ್ದೇ ಅಂತಿಮ ನಿರ್ಣಯ. ಅವರ ಅಧಿಕಾರ ಪ್ರತಿಷ್ಠೆ ಕುತ್ತು ಬಂದಾಗ ಇಂತಹ ಯುದ್ಧದ ಹೇಳಿಕೆಗಳು ಕಾರ್ಯಗಳು ನಡೆಯುತ್ತಲೇ ಇರುತ್ತದೆ. ಇದಕ್ಕೆ ಸಂಬಂಧಿಸಿದ ಹತ್ತು ಹಲವು ಉದಾಹರಣೆಗಳನ್ನು ನೇೂಡಿದ್ದೇವೆ. ಇರಾಕ್ ಇರಾನ್ ಕುವೈಟ್ ಯುದ್ಧ. ಅದೇ ರೀತಿಯಲ್ಲಿ ಏಶಿಯಾದ ಕಡೆಗೆ ಬಂದಾಗ ಪಾಕಿಸ್ತಾನ, ಅಫ್ಘಾನಿಸ್ತಾನ, ಚೀನಾ, ರಷ್ಯಾ, ಯುಕ್ರೇನ್ ಮುಂತಾದ ದೇಶಗಳಲ್ಲಿ ಸಂಭವಿಸಿದ ಯುದ್ಧದ ಪರಿಸ್ಥಿತಿ ಇವೆಲ್ಲವೂ ಕೂಡಾ ಒಂದು ರೀತಿಯಲ್ಲಿ ಜಗತ್ತಿನಲ್ಲಿ ಪ್ರಕ್ಷುಬ್ಧ ಮತ್ತು ಆತಂಕ ಸೃಷ್ಟಿಸಲು ಹುಟ್ಟಿ ಕೊಂಡ ಯುದ್ಧಗಳೆಂದೇ ವ್ಯಾಖ್ಯಾನಿಸಬಹುದು.


ಈ ಎಲ್ಲಾ ಯುದ್ಧದ ಪ್ರಸಂಗದಲ್ಲಿ ವಿಶ್ವದಲ್ಲೇ ತಾನೇ ದೊಡ್ಡಣ್ಣ ಅನ್ನುವ ತರದಲ್ಲಿ ಕಾಲು ಕೆದರಿಕೊಂಡು ತನ್ನ ಅನುಕೂಲತೆ ಮತ್ತು ಲಾಭ ನೇೂಡಿ ಬೆಂಬಲಕ್ಕೆ ನಿಲ್ಲುವ ಅಮೇರಿಕ, ರಷ್ಯಾ ದಂತಹ ದೇಶಗಳು. ವಿಶ್ವದಲ್ಲೇ ಯಾವುದೇ ಭಿನ್ನಾಭಿಪ್ರಾಯ ಹುಟ್ಟಿಕೊಂಡಾಗ ತನ್ನನ್ನು ಕರೆಯಲಿ ಕರೆಯದೇ ಇರಲಿ ಅಲ್ಲಿ ಮೂಗು ತೂರಿಸಿಕೊಂಡು ಹೇೂಗುವ ದೇಶವಿದ್ದರೆ ಅದು ಅಮೆರಿಕಾ ಅನ್ನುವುದು ಸಾಬೀತಾಗಿ ಬಿಟ್ಟಿದೆ. ಈ ಬಂಡವಾಳಶಾಹಿ ಅಮೆರಿಕದ ವಿರುದ್ಧ ಸದಾ ನಿಲುವ ದೇಶವೆಂದರೆ ಕಮ್ಯುನಿಸ್ಟ್ ಸಿದ್ಧಾಂತ ಒಪ್ಪಿಕೊಂಡ ರಷ್ಯಾ ಮತ್ತು ಚೀನಾ. ಅದು ಇರಾಕ್ ಯುದ್ಧದಲ್ಲೂ ನೇೂಡಿದ್ದೇವೆ. ಯುಕ್ರೇನ್ ಪರಿಸ್ಥಿತಿಯಲ್ಲೂ ನೇೂಡಿದ್ದೇವೆ. ಅಫ್ಘಾನಿಸ್ತಾನದ ನೆಲದಲ್ಲಿಯೂ ನೇೂಡಿದ್ದೇವೆ. ಈಗ ಮತ್ತೆ ಇರಾನ್ ಇಸ್ರೇಲ್ ಯುದ್ಧದ ನೆರಳಿನಲ್ಲಿಯೂ ಕಾಣುತ್ತಿದ್ದೇವೆ. ಇವುಗಳ ಜೊತೆಗೆ ಶ್ರೀಮಂತ ರಾಷ್ಟ್ರಗಳ ಬಣ ರಾಜಕೀಯ ನೀತಿ.


ಇಂದಿನ ಇಸ್ರೇಲ್ ಇರಾನ್ ಯುದ್ಧದ ಛಾಯೇ ಮಹಾ ಯುದ್ಧಕ್ಕೆ ಕಾರಣವಾಗಬಹುದಾ? ಅನ್ನುವ ಪ್ರಶ್ನೆ ಕೆಲವರ ತಲೆಯಲ್ಲಿ ಹೊಳೆದಿರಬಹುದು. ಆದರೆ ಖಂಡಿತವಾಗಿಯೂ ಹೇಳುತ್ತೇನೆ. ಇಂದಿನ ಜಗತ್ತಿಕ ಪರಿಸ್ಥಿತಿಯಲ್ಲಿ ಇದು ಬರೇ ಸ್ಥಳೀಯ ಮಟ್ಟದ ಯುದ್ಧವಾಗಿ ಕೊನೆಗೊಳ್ಳ ಬಹುದು ಹೊರತು ಜಾಗತಿಕವಾದ ದೊಡ್ಡ ಮಟ್ಟದಲ್ಲಿ ಯುದ್ಧಕ್ಕೆ ನಾಂದಿ ಹಾಡಲು ಸಾಧ್ಯವಿಲ್ಲ. ಇದಕ್ಕೂ ಹಲವು ಕಾರಣಗಳಿವೆ. ಇಂದಿನ ಜಗತ್ತು ಹಿಂದಿನ ಹಾಗಿಲ್ಲ. ಇಂದು ಈ ಯುದ್ಧದಂತಹ ಭೀಕರತೆಯ ನಿರ್ಣಯವನ್ನು ರಾಜಕೀಯ ಅಧಿಕಾರಿದಲ್ಲಿ ಕುಳಿತುಕೊಂಡವರು. ಮಾತ್ರ ತೆಗೆದುಕೊಳ್ಳುವುದು ಅಲ್ಲ ಬದಲಾಗಿ ಪ್ರತಿಯೊಂದು ಪ್ರಜಾಪ್ರಭುತ್ವ ದೇಶದಲ್ಲಿ ಜನರ ಅಭಿಪ್ರಾಯವೂ ಮುಖ್ಯ ನಿರ್ಣಾಯಕ ವಾಗಿದೆ. ಹಿಂದೆ ಪರಿಸ್ಥಿತಿ ಹಾಗಿರಲಿಲ್ಲ. ಯಾವುದೇ ಮಾಧ್ಯಮಗಳು ಇರಲಿಲ್ಲ, ಸಾಮಾಜಿಕ ಜಾಲತಾಣ ಗಳಿರಲಿಲ್ಲ. ಅಂದು ಯುದ್ಧಗಳು ನಡೆದದ್ದು ಜನರಿಗೆ ತಿಳಿಯುವಾಗಲೇ ಯುದ್ಧ ನಿಂತಿರುತ್ತಿತ್ತು. ಈಗ ಹಾಗಲ್ಲ. ಯುದ್ಧ ರಣರಂಗದ ಪರಿಸ್ಥಿತಿ ಕ್ಷಣ ಕ್ಷಣಕ್ಕೂ ಪ್ರತಿ ಮನೆಯಲ್ಲಿಯೇ ಕೂತು ಲೈವ್‌ ನೇೂಡುವ ಮಟ್ಟದಲ್ಲಿ ಜಗತ್ತು ಬೆಳೆದು ನಿಂತಿದೆ.

ಇದಾಗಲೇ ಕೊರೊನದ ಹೊಡೆತದಿಂದ ತಲೆ ಎತ್ತಿ ನಿಂತು ಸೆಣಸಾಡುವ ಪರಿಸ್ಥಿತಿ ಇರುವಾಗ ಇನ್ನೊಂದು ಯುದ್ಧವನ್ನು ಖಂಡಿತವಾಗಿಯೂ ಯಾರು ಕೂಡಾ ಬಯಸುವುದಿಲ್ಲ ಅನ್ನುವ ಸತ್ಯ ಎಲ್ಲರಿಗೂ ತಿಳಿದಿದೆ. ಇದು ಅಭಿವೃದ್ಧಿ ಬಯಸುವ ಮಧ್ಯ ಪ್ರಾಚ್ಯ ದೇಶಗಳಿಗೂ ಗೊತ್ತಿದೆ. ಅಮೇರಿಕಾ ರಷ್ಯಾ ಬ್ರಿಟನ್, ಫ್ರಾನ್ಸ್‌ನಂತಹ ದೇಶಗಳಿಗೂ ಗೊತ್ತಿರಲೇಬೇಕು.


ಇಸ್ರೇಲ್ ಇರಾನ್ ನಡುವಿನ ಸಮರದಲ್ಲಿ ಭಾರತದ ನಿಲುವು ಹೇಗಿರಬಹುದು? ಭಾರತ ಮೊದಲಿನಿಂದಲೂ ಒಪ್ಪಿಕೊಂಡು ಬಂದ ಅಂತರರಾಷ್ಟ್ರೀಯ ನೀತಿಯೆಂದರೆ ಪಂಚಶೀಲ ತತ್ವ ಇದರಲ್ಲಿ ನಾವು ಯಾವುದೇ ಸಂದರ್ಭದಲ್ಲಿ ಯಾವುದೇ ದೇಶದ ಪರವಾಗಿ ಬೆಂಬಲಕ್ಕೆ ನಿಲುವುದಿಲ್ಲ. ಅಂದರೆ ಯುದ್ಧದ ಪರಿಸ್ಥಿತಿಯಲ್ಲಿ ತಟಸ್ಥ ನೀತಿ ಅನುಸರಿಸಿಕೊಂಡು ಬಂದಿದ್ದೇವೆ. ಅಂದರೆ ತಟಸ್ಥತೆ ನಿರ್ಲಿಪ್ತತನವಲ್ಲ. ತಪ್ಪಾಗಿದ್ದರೆ ಖಂಡಿತವಾಗಿಯೂ  ಖಂಡಿಸುವ ಹೇಳಿಕೆ ನೀಡುತ್ತೇವೆ. ನಾವು ಅಭಿವೃದ್ಧಿ ಪರ ನಿಲುವು ಬಯಸುವ ರಾಷ್ಟ್ರವಾದ ಕಾರಣ ಬರೇ ಜಗತ್ತಿನ ಸಮಸ್ಯೆಗಳನ್ನು ತಾನಾಗಿಯೇ ಮೈ ಮೇಲೆ ಎಳೆದುಕೊಳ್ಳುವ ದೇಶ ನಮ್ಮದಲ್ಲ. ಅನ್ನುವುದು ಮೊದಲಿನಿಂದಲೂ ಸಾಬೀತಾಗಿದೆ. ಅದು ಯುಕ್ರೇನ್  ರಷ್ಯಾ ಸಂದರ್ಭದಲ್ಲಿ ಇರಬಹುದು  ಅಫ್ಘಾನಿಸ್ತಾನ ವಿಚಾರದಲ್ಲಿಯೇ ಇರಬಹುದು. ಮಾತ್ರವಲ್ಲ ಮಧ್ಯಪ್ರಾಚ್ಯದಲ್ಲಿ ಆದ ಕೆಲವೊಂದು ಯುದ್ಧದ ಸಂದರ್ಭದಲ್ಲಿಯೂ ಅಷ್ಟೇ.


ಭಾರತ ಇಂದು ವಿಶ್ವ ಗುರು ಮನ್ನಣೆಗೆ ಪಾತ್ರವಾಗಿದೆ ಅಂದರೆ ಹೊರ ಜಗತ್ತಿನಲ್ಲಿ ನಮ್ಮ ಶಕ್ತಿ ಪ್ರದರ್ಶನದಿಂದ ಅಲ್ಲ. ನಮ್ಮ ವಿದೇಶಾಂಗ ನೀತಿಯ ಯುಕ್ತಿಯಿಂದಾಗಿ ಅನ್ನುವುದನ್ನು ನಾವು ಒಪ್ಪಿಕೊಳ್ಳಲೇಬೇಕು. ರಷ್ಯಾ ಯುಕ್ರೇನ್ ಯುದ್ಧ ಕಾಲ ಘಟದಲ್ಲೂ ನೇೂಡಿದ್ದೇವೆ. ಯುದ್ಧದಲ್ಲಿ ಸೇೂತು ಸುಣ್ಣ ವಾದ ಯುಕ್ರೇನ್ ರಷ್ಯಾ ಕೊನೆಗೂ ಬಂದ ತೀರ್ಮಾನವೆಂದರೆ ಭಾರತದ ಮಧ್ಯಸ್ಥಿಕೆಯನ್ನೆ. ನಮ್ಮ ಅಭಿವೃದ್ಧಿಯ ದೃಷ್ಟಿಯಿಂದ ನಮಗೆ ಇಸ್ರೇಲೂ ಅನಿವಾರ್ಯ ಇರಾನ್ ಕೂಡಾ ಅಗತ್ಯ. ಹಾಗಾಗಿ ನಮ್ಮ ತಟಸ್ಥ ಯುದ್ಧ ನೀತಿಯೇ ಇಂದಿನ ಅನಿವಾರ್ಯತೆಯು ಹೌದು. ಚುಟುಕು ಬ್ರಹ್ಮ ದಿನಕರ ದೇಸಾಯಿ ಅವರ ಮಾತಿನಂತೆ "ಯಾತಕ್ಕೆ ಯುದ್ಧ ಯಾತಕ್ಕೆ ಮದ್ದು ಎಲ್ಲರೂ ಒಂದೇ ಮನೆಯೊಳಗಿದ್ದು.." ಇದು ಜಗತ್ತಿನ ಶಾಂತಿ ಪ್ರಿಯರ ಭಾವನೆಯೂ ಹೌದು.


- ವಿಶ್ಲೇಷಣೆ: ಪ್ರೊ. ಕೊಕ್ಕರ್ಣೆ ಸುರೇಂದ್ರನಾಥ ಶೆಟ್ಟಿ ಉಡುಪಿ


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 

إرسال تعليق

0 تعليقات
إرسال تعليق (0)
Mandovi Motors Presents MONSOON BONANZA
Mandovi Motors Presents MONSOON BONANZA
To Top