ಹುನಗುಂದ: ಶತಮಾನ ಕಂಡ ಶಾಲೆಯ ಸುತ್ತ ಕೊಳಚೆಯ ಕೂಪ

Upayuktha
0

ಹುನಗುಂದ: ಪಟ್ಟಣದ ಶತಮಾನ ಕಂಡ ಶಾಲೆ ಎಂದೇ ಹೆಸರಾದ ಸ್ಥಳೀಯ ಸರಕಾರಿ ಕೇಂದ್ರ ಶಾಲೆ ಮತ್ತು ಸಮಾಜ ಕೇಂದ್ರ ಶಾಲೆಯ ಸ್ಥಿತಿ ಈಗ ಅಧೋಗತಿ.


ಹೌದು ಒಂದಾನೊ೦ದು ಕಾಲದಲ್ಲಿ 1200 ರಿಂದ 1400 ವಿದ್ಯಾರ್ಥಿಗಳಿಗೆ ಅಕ್ಷರ ಕಲಿಸಿ ಅವರಿಗೆ ಉನ್ನತ ಹುದ್ದೆ ಕಲ್ಪಿಸಿ ಬದುಕು ಕಟ್ಟಿಕೊಟ್ಟ ಈ ಶಾಲೆಯ ಆಕ್ರಂದನ ಕೇಳುವವರು ಯಾರೂ ಇಲ್ಲದಂತಾಗಿದೆ. ಕಾರಣ ಮಳೆಗಾಲದಲ್ಲಿ ಶಾಲೆಯ ಆವರಣದಲ್ಲಿ ಮಲೀನವಾದ ನೀರು ನಿಂತು ದುರ್ನಾತದಿಂದ ಅಲ್ಲಿನ ಮಕ್ಕಳಿಗೆ ಮತ್ತು ಶಿಕ್ಷಕರಿಗೆ ಆಗುತ್ತಿರುವ ತೊಂದರೆ ಅಷ್ಟಿಷ್ಟಲ್ಲ. ಅಚ್ಚರಿ ವಿಷಯವೆಂದರೆ ಜನವಸತಿ ಪ್ರದೇಶದಿಂದ ಗಲೀಜು ನೀರು ಮತ್ತು ಮಳೆಯಿಂದ ಶಾಲೆಯ ಆವರಣದೊಳಗೆ ನುಗ್ಗಿದ ನೀರು ಬೇರೆಲ್ಲೂ ಹೋಗಲು ಅವಕಾಶ ಇಲ್ಲದೆ ಶಾಲೆ ಆವರಣದಲ್ಲಿಯೆ ಕೆರೆಯಂತಾಗಿ ಮಾರ್ಪಡುತ್ತದೆ.


ಈ ನೀರು ತಿಂಗಳು ಗಟ್ಟಲೆ ನಿಂತಲ್ಲಿ ನಿಂತು ದುರ್ನಾತ ಪ್ರಾರಂಭವಾಗುತ್ತದೆ. ಸೊಳ್ಳೆಗಳಿಂದ ಹರಡುವ ಡೆಂಗ್ಯೂ, ಮಲೇರಿಯ ದಂತ ಸಾಂಕ್ರಾಮಿಕ ರೋಗಗಳಿಗೆ ಆಹ್ವಾನದ ತಾಣವಾಗಿದೆ. ಪ್ರಸ್ತುತ ಈ ಶಾಲೆಯಲ್ಲಿ 87 ವಿದ್ಯಾರ್ಥಿಗಳು ಶಿಕ್ಷಣ ಪಡೆಯತ್ತಿದ್ದಾರೆ. 2-3 ವರ್ಷಗಳಿಂದ ಶಾಲೆಯ ಮುಖ್ಯಗುರುಗಳು ಮತ್ತು ಸಹ ಶಿಕ್ಷಕರು ಪುರಸಭೆ, ಸ್ಥಳೀಯ ತಹಸೀಲ್ದಾರ ಹಾಗೂ ಸಂಬಂಧಿಸಿದ ಅಧಿಕಾರಿಗಳಿಗೆ ಸಾಕಷ್ಟು ಸಲ ಮನವಿ ಮಾಡಿದರೂ ಪ್ರಯೋಜನವಾಗಿಲ್ಲ ಎಂದು ಅಸಹಾಯಕತೆ ವ್ಯಕ್ತಪಡಿಸಿದರು.


ಕ್ರಿ.ಶ. 1879ರಲ್ಲಿ ವಿಠೋಭ ದೇವಸ್ತಾನದ ಎದುರಿನ ಕಟ್ಟಡದಲ್ಲಿ ಕೇವಲ 22 ಗಂಡು ಮಕ್ಕಳ ದಾಖಲಾತಿಯೊಂದಿಗೆ ಪ್ರಾರಂಭವಾದ ಶಾಲೆ ಮುಂದೆ 1954 ರ ಡಿಸೆಂಬರ್‌ 1ರಂದು ಸರಕಾರಿ ಕೇಂದ್ರ ಶಾಲೆ ಮತ್ತು ಸಮಾಜ ಕೇಂದ್ರ ಎಂಬ ಹೆಸರಿನೊಂದಿಗೆ ನಾಮಕರಣಗೊಂಡು ಮುಂದುವರೆಯಿತು. 1972 ರಲ್ಲಿ ಆಗಿನ ಶಿಕ್ಷಣ ಮಂತ್ರಿಯಾಗಿದ್ದ ದಿ. ಎಸ್.ಆರ್.ಕಂಠಿಯವರು ಸರ್ಕಾರಿ ಕಟ್ಟಡ ನಿರ್ಮಿಸಿ ಕೊಟ್ಟರು. ಆಗಿನ ಅಖಂಡ ಬಿಜಾಪುರ ಜಿಲ್ಲೆಗೆ ಏಕೈಕ ಮಾದರಿ ಶಾಲೆ ಇದಾಗಿತ್ತು. ಈ ಶಾಲೆಗೆ ಒಟ್ಟು ತಾಲೂಕಿನ 16 ಶಾಲೆಗಳು ಒಳಪಡುತ್ತಿದ್ದವು.


ಅಂದಿನಿಂದ ನಿರಂತರವಾಗಿ ಅಕ್ಷರದ ಹಸಿವನ್ನು ನೀಗಿಸುತ್ತಿರುವ ಈ ಶಾಲೆಯಲ್ಲಿ ಪ್ರಾಥಮಿಕ ಶಿಕ್ಷಣ ಪಡೆದ ಅನೇಕರು ಜಿಲ್ಲಾಧಿಕಾರಿಗಳಿದ್ದಾರೆ. ಮಾಜಿ ರಾಷ್ಟ್ರಪತಿ ಎಪಿಜೆ ಅಬ್ದುಲ್ ಕಲಾಂ ಅವರ ಜೊತೆ ವಿಜ್ಞಾನಿಗಳಾಗಿ ಕಾರ್ಯನಿರ್ವಹಿಸಿದ್ದಾರೆ. ಇಷ್ಟು ಇತಿಹಾಸ ಹಾಗೂ ಶತಮಾನ ಕಂಡ ಶಾಲೆ ಮಳೆಗಾಲದಲ್ಲಿ ಈಜು ಕೊಳವಾಗಿ ಮಾರ್ಪಡುತ್ತಿದೆ. ಇಂತಹ ದುಸ್ಥಿತಿ ಬಂದಿರುವುದು ಶೋಚನೀಯ. ಸರಕಾರ ಅಥವಾ ಸಂಬಂಧಪಟ್ಟ ಅಧಿಕಾರಿಗಳು ಸಮಸ್ಯೆ ಸರಿಪಡಿಸುವ ಪ್ರಯತ್ನ ಮಾಡುತ್ತಾರೆ ಎನ್ನುವ ನಿರಿಕ್ಷೆಯಲ್ಲಿ ಶಾಲೆಯ ಮಕ್ಕಳು ಮತ್ತು ಶಿಕ್ಷಕ ಬಳಗ ಜಾತಕ ಪಕ್ಷಿಯಂತೆ ಕಾಯುತ್ತಿದ್ದಾರೆ.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 

Post a Comment

0 Comments
Post a Comment (0)
Mandovi Motors Presents MONSOON BONANZA
Mandovi Motors Presents MONSOON BONANZA
To Top