ಗೃಹಲಕ್ಷ್ಮೀ ಯೋಜನೆಗೆ ಷರತ್ತು: ಬಳ್ಳಾರಿ ಜೆಡಿಎಸ್ ಜಿಲ್ಲಾಧ್ಯಕ್ಷ ಮೀನಳ್ಳಿ ತಾಯಣ್ಣ ಆಕ್ರೋಶ

Upayuktha
0



ಬಳ್ಳಾರಿ: ಗೃಹ ಲಕ್ಷ್ಮೀ ಯೋಜನೆಗೆ ಸರ್ಕಾರ ಜಿಎಸ್‌ಟಿ ಶಾಕ್ ನೀಡಿದ್ದು, ಇದರಿಂದ ರಾಜ್ಯದ ಸಾವಿರಾರು ಮಹಿಳೆಯರು ಯೋಜನೆಯಿಂದ ವಂಚಿತರಾಗಿದ್ದಾರೆ, ಸರ್ಕಾರ ಕೂಡಲೇ ವಿಧಿಸಿದ ಷರತ್ತುಗಳನ್ನು ಸಡಿಲಗೊಳಿಸಬೇಕು, ನೀಡಿದ ಮಾತಿನಂತೆ ನಡೆದುಕೊಳ್ಳಬೇಕು, ನಿರ್ಲಕ್ಷಿಸಿದರೆ ಪ್ರತಿಭಟನೆಯ ಸ್ವರೂಪ ಬದಲಾಗಲಿದೆ ಎಂದು ಜೆಡಿಎಸ್ ಜಿಲ್ಲಾಧ್ಯಕ್ಷ ಮೀನಳ್ಳಿ ತಾಯಣ್ಣ ಅವರು ಆಕ್ರೋಶ ವ್ಯಕ್ತಪಡಿಸಿದ್ದಾರೆ.


ಈ ಕುರಿತು ಪ್ರಕಟಣೆ ನೀಡಿದ ಅವರು, ಅಧಿಕಾರಕ್ಕೆ ಬರುವ ಮುನ್ನ ಕಾಂಗ್ರೆಸ್, ಎಲ್ಲ ಮಹಿಳೆಯರಿಗೂ ಪ್ರತಿ ತಿಂಗಳು 2 ಸಾವಿರ ರೂ.ನೀಡಲಾಗುವುದು ಎಂದು ಕರಪತ್ರಗಳ ಮೂಲಕ ರಾಜ್ಯದ ಮಹಿಳೆಯರಿಗೆ ಭರವಸೆ ನೀಡಿತ್ತು. ಅವರಿಂದ ಮತ ಪಡೆದು, ಅಧಿಕಾರಕ್ಕೆ ಬಂದ ಬಳಿಕ ಗೃಹ ಲಕ್ಷ್ಮೀ ಯೋಜನೆಗೆ ಸರ್ಕಾರ ಜಿಎಸ್‌ಟಿ ನಿಯಮ ವಿಧಿಸಿದ ಹಿನ್ನೆಲೆ ರಾಜ್ಯದ ಸಾವಿರಾರು ಮಹಿಳೆಯರು ಯೋಜನೆಯಿಂದ ವಂಚಿತರಾಗಿರುವುದು ಬಹಿರಂಗವಾಗಿದೆ.


ಚುನಾವಣೆ ಪೂರ್ವದಲ್ಲಿ ರಾಜ್ಯದ ಮಹಿಳೆಯರಿಗೆ ನೀಡಿದ ಮಾತಿನಂತೆ ನಡೆದುಕೊಳ್ಳುವಲ್ಲಿ ಕಾಂಗ್ರೆಸ್ ಸಂಪೂರ್ಣ ವಿಫಲವಾಗಿದೆ. ಮಹಿಳೆಯರು ಅಧಿಕಾರಿಗಳನ್ನು ಪ್ರಶ್ನಿಸಿದರೆ ಜಿಎಸ್ಟಿ ತಾಂತ್ರಿಕ ಕಾರಣಕ್ಕಾಗಿ ಈ ಗೃಹ ಲಕ್ಷ್ಮೀ ಯೋಜನೆ ಹಣ ಪಾವತಿಯಾಗುತ್ತಿಲ್ಲ ಎನ್ನುವ ಉತ್ತರಗಳು ಸಾಮಾನ್ಯವಾಗಿವೆ. ಪತಿ ಹಾಗೂ ಮಕ್ಕಳು ಸಾಲ ಪಡೆದು ಜಿಎಸ್ ಟಿ ಪಾವತಿಸಿದ ಹಿನ್ನೆಲೆ ಮನೆ ಯಜಮಾನಿ ಗೃಹ ಲಕ್ಷ್ಮೀ ಯೋಜನೆಯ ಪಟ್ಟಿಯಿಂದ ಹೊರಗುಳಿಯುವಂತಾಗಿದೆ. 


ಕೂಡಲೇ ಸರ್ಕಾರ ರಾಜ್ಯದ ಮಹಿಳೆಯರಿಗೆ ನೀಡಿದ ಮಾತಿನಂತೆ ನಡೆದುಕೊಳ್ಳಬೇಕು, ವಚನ ಭ್ರಷ್ಟರಾಗದೇ, ವಿಧಿಸಿದ ನಿಯಮವನ್ನು ಸಡಿಲಗೊಳಿಸಬೇಕು, ನಿರ್ಲಕ್ಷ್ಯ ವಹಿಸಿದರೆ ಪ್ರತಿಭಟನೆ ಅನಿವಾರ್ಯವಾಗಲಿದೆ ಎಂದು ಎಚ್ಚರಿಸಿದ್ದಾರೆ. ಎಸ್ ಸಿಪಿ, ಟಿ ಎಸ್ ಪಿ ಯೋಜನೆಯ ಅನುದಾನವನ್ನು ಸರ್ಕಾರ ಗ್ಯಾರಂಟಿಗಳಿಗೆ  ಬಳಕೆ ಮಾಡಿಕೊಳ್ಳುತ್ತಿರುವುದು ಅತ್ಯಂತ ಖಂಡನೀಯ, ಹಿಂದುಳಿದ ವರ್ಗದವರ ಕಲ್ಯಾಣಕ್ಕಾಗಿ ಮೀಸಲಿಟ್ಟ ಅನುದಾನವನ್ನು ಸರ್ಕಾರ ಗ್ಯಾರಂಟೀ ಯೋಜನೆಗಳಿಗೆ ಬಳಕೆ ಮಾಡಿಕೊಳ್ಳುತ್ತಿದ್ದು, ಇದೆ ರೀತಿ ಮುಂದುವರೆಸಿದರೆ ಪ್ರತಿಭಟನೆಯ ಸ್ವರೂಪ ಬದಲಾಗಲಿದೆ ಎಂದು ಎಚ್ಚರಿಸಿದ್ದಾರೆ.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 

Post a Comment

0 Comments
Post a Comment (0)
Mandovi Motors Presents MONSOON BONANZA
Mandovi Motors Presents MONSOON BONANZA
To Top