ಮಾತುಕತೆಗಳಲ್ಲಿ ಕಳೆಯುವ ಸಮಯಕ್ಕೂ, ಮನುಷ್ಯನ ಮಿದುಳಿನ ಚಿಂತನಾ ವಿಭಾಗದ ಗಾತ್ರಕ್ಕೂ ಸಂಬಂಧವಿದೆ. ಸಮಾಜದಲ್ಲಿ ಗುಂಪಾಗಿ ಜೀವಿಸಲು ಬೇಕಾದ ಸಂಕೀರ್ಣ ಕ್ರಿಯೆಯಿಂದ ಉಂಟಾದ ಪರಿಸರವೇ ಮನುಷ್ಯ ಮಿದುಳನ್ನು ಪ್ರಾಣಿಗಳಿಗಿಂತ ದೊಡ್ಡದಾಗಿಸಿತು ಎಂದು ವಿಕಾಸವಾದ ಸ್ಥಿರೀಕರಿಸಿದೆ. ಹರಟೆಯಿಂದ ನಾವ್ಯಾರು, ನಾವೆಲ್ಲಿದ್ದೇವೆ ಎಂಬ ಸೋಶಿಯಲ್ ಸ್ಟೇಟಸ್ ಅರಿಯಲು ಕೂಡಾ ಸಹಾಯವಾಗುತ್ತದೆ.
ನಮ್ಮಪ್ಪ ಹಳ್ಳಿಯ ತೋಟದ ಮನೆಯಲ್ಲಿ ಗಿಡಮೂಲಿಕೆ ವೈದ್ಯರಾಗಿದ್ದರು. ದಿನವೂ ಹತ್ತಾರು ಕುಟುಂಬಗಳು ಅವರಿಂದ ಗುಳಿಗೆ, ನಾಡಿ ಪರೀಕ್ಷೆ, ಮಾಹಿತಿ ಪತ್ರ ಬರೆದುಕೊಡುವಿಕೆ, ಇತ್ಯಾದಿ ಶಾಸ್ತ್ರೀಯ ಕ್ರಮಗಳಿಂದ ರೋಗ ಪರೀಕ್ಷೆ ಮಾಡಿಸಿಕೊಳ್ಳುತ್ತಿದ್ದರು. ಎಲ್ಲರೂ ಕ್ಯೂನಲ್ಲಿ ಕೂತಿದ್ದು ಬರಬೇಕಿತ್ತು. ಆ ವೇಳೆಗೆ ನಮ್ಮಜ್ಜಿ ಕ್ಯೂ ಕೊನೆಯಲ್ಲಿದ್ದವರೊಂದಿಗೆ ಹರಟೆ ಹೊಡೆಯುವುದಕ್ಕೆಂತಲೂ ಕೆದಕಿ, ಕೆದಕಿ ಕೇಳಿ ಉತ್ತರ ಪಡೆಯುವುದರಲ್ಲಿ ಹುಶಾರು. ನಿಮ್ಮ ಹೆಸರೇನು? ಮದುವೆಯಾಗಿದೆಯಾ, ಮಕ್ಕಳೆಷ್ಟು, ಹೆಣ್ಣೆಷ್ಟು, ಗಂಡೆಷ್ಟು, ಅವರನ್ನು ಎಲ್ಲಿಗೆಲ್ಲಿಗೆ ಕೊಟ್ಟಿದೆ, ಎಲ್ಲಿಂದೆಲ್ಲಾ ಸೊಸೆಯರನ್ನು ತಂದಿದೆ, ಅಳಿಯನ ಸಂಬಳ ಎಷ್ಟು? ಗಿಂಬಳ ಎಷ್ಟು ಎಂದೆಲ್ಲಾ ತಲೆ ತಿನ್ನುವ ಪ್ರಶ್ನೆಗಳಿಂದ ಕಾಡುತ್ತಿದ್ದರು. ಎಳೆಯನಾಗಿದ್ದ ನಾನು "ಅಜ್ಜಿ, ನಿಮಗೆ ಬುದ್ಧಿಯಿಲ್ಲ, ಅಪರಿಚಿತರ ಬಳಿ ಈ ರೀತಿ ಎಲ್ಲಾ ಕೇಳುತ್ತಾ ಹೋದರೆ ಅವರಿಗೆಷ್ಟು ಬೇಜಾರಾದೀತೆಂದು" ಜೋರಾಗಿ ಕೇಳಿಯೇ ಬಿಟ್ಟಿದ್ದೆ.
"ಬಾಯ್ಮುಚ್ಚಿ ಕೂತ್ಕೋ. ನಿನ್ನಪ್ಪನ ಅಮ್ಮ ನಾನು. ನೀನು ಶಾಲೆಗೆ ಹೋಗುತ್ತೀಯಾ, ಊರೂರು ಸವಾರಿ ಮಾಡುತ್ತೀಯಾ, ನಾನು ಮುದುಕಿ ಕೂತಲ್ಲೇ ಊರಿನ ಸುದ್ದಿ ತಿಳಿಯಬೇಡವೇ, ಬಂದವರನ್ನು ಕೇಳದೆಯೇ ನನಗೆ ಗೊತ್ತಾಗುವುದು ಹೇಗೆ? ಎಂದು ದಬಾಯಿಸಿಯೇ ಬಿಟ್ಟಿದ್ದರು. ಅಜ್ಜಿಯದು ನ್ಯೂಸ್ ಆನ್ ಡಿಮಾಂಡ್. ಈಗ ಡಿಜಿಟಲ್ ಟೆಕ್ನಾಲಜಿ ಅದುವೇ ಕೆಲಸ ಮಾಡುತ್ತಿದೆ. ನಮಗೆ ಬೇಕೋ ಬೇಡವೋ, ಒಳ್ಳೆಯದು ಕೆಟ್ಟದ್ದು ಎಲ್ಲವನ್ನೂ ಹೊತ್ತುಗೊತ್ತಿಲ್ಲದೆಯೇ ರಾಶಿ ಹಾಕುತ್ತಿದೆ. ನ್ಯೂಸ್ ಬೇಕೇ ಬೇಕು. ಏಕೆಂದರೆ ಅದರಿಂದ ಹರಟೆಗೆ ಸರಕು ಸಿಗುತ್ತದೆ. ಕುಟುಂಬದೊಳಗಿನ, ಸಮಾಜದ ನಡುವೆ ಪರಸ್ಪರ ಸಂಪರ್ಕ ಸದಾ ಇರಬೇಕು. ಸುದ್ದಿ ತಿಳಿಯಿರಿ, ಮುಖಾಮುಖಿ ಹರಟೆ ಹೊಡೆಯಿರಿ.
ಇತ್ತೀಚೆಗೆ ದೂರ ಸಂಬಂಧದ ಒಬ್ಬ ಅಜ್ಜಿ ಸಿಕ್ಕಿದಳು. "ನೋಡಿ ನೀವು ಪೇಪರಿನಲ್ಲಿ ಬರೀಬೇಕು. ಈಗಿನ ಕಾಲದ ನಮ್ಮ ಮಕ್ಕಳೆಲ್ಲಾ ಅಮೇರಿಕದಲ್ಲೋ, ಆಸ್ಟ್ರೇಲಿಯಾದಲ್ಲೋ ಕೆಲಸಕ್ಕೆ ಸೇರಿ ಅಲ್ಲೇ ಮದುವೆ, ಮನೆ ಮಾಡಿಕೊಂಡು ಊರಿಗೆ ಬರುವುದು ಕಮ್ಮಿಯಾಗಿದೆ. ಮೊಮ್ಮಕ್ಕಳನ್ನು ಸ್ಕೈಪ್, ಪೈಪ್ ಎಂದೆಲ್ಲಾ ಹೇಳಿ ಟಿವಿಯಲ್ಲಿ ತೋರಿಸುತ್ತಾರೆ. ನಾವು ಅವರೊಡನೆ ಮಾತನಾಡಬಹುದು ನಿಜ. ಆ ನನ್ನ ಮೊಮ್ಮಕ್ಕಳನ್ನು ಸರಿಯಾಗಿ ಎತ್ತಿ ಮುದ್ದಾಡಿಲ್ಲ, ತಬ್ಕೊಂಡಿಲ್ಲ, ಅವು ನನ್ನ ಸೀರೆಯಲ್ಲಿ ಒಂದು ಬಾರಿಯೂ ಉಚ್ಚೇನೆ ಹೊಯಿದಿಲ್ಲ. ಇದೆಂತಹ ಬದುಕಾಗಿ ಬಿಟ್ಟಿದೆ ನಮ್ಮದು ಅಜ್ಜಿಯರದು" ಎಂದು ಅಲವತ್ತುಕೊಂಡರು.
ನಾವು ಮುಖಾಮುಖಿ ಸಂಬಂಧಗಳಿಗೆ ಮಹತ್ವ ಕೊಡಬೇಕು. ಅದು ನಮ್ಮ ಸಂಸ್ಕೃತಿಯಲ್ಲಿ ಬಂದಿದೆ. ಅದನ್ನು ಉಳಿಸಿಕೊಳ್ಳಬೇಕು. ಮಾಯಿಲಕೋಟೆ ನಮಗೆ ಸದಾ ಪ್ರಕೃತಿಯೊಂದಿಗೆ ಸಹಬಾಳ್ವೆ ಸಂಸ್ಕೃತಿಯ ನೆನಪು ಕೊಡುತ್ತದೆ. ಮನುಷ್ಯ, ಪ್ರಾಣಿ, ಪಕ್ಷಿ ಗಿಡಮರ, ಕ್ರಿಮಿ ಕೀಟಗಳೆಲ್ಲ ಒಂದೇ ಜಗತ್ತಿನ ಅವಿಭಾಜ್ಯ ಅಂಗಗಳು. ಅದು ನೇರ್ಪಿನಲ್ಲಿ ಉಳಿದರೆಯೇ ಮಾನವ ಬದುಕಿ ಬೆಳೆಯಲು ಸಾಧ್ಯ.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ