ಸಂಸ್ಕೃತ ಸಾಹಿತ್ಯದ ಬಗ್ಗೆ ಹೆಚ್ಚಿನ ಅರಿವು ಮೂಡಿಸಿ

Upayuktha
0


* ಮೈವಿವಿ ಕುಲಪತಿ ಪ್ರೊ.ಎನ್.ಕೆ.ಲೋಕನಾಥ್ ಸಲಹೆ

* ‘ವಿಶಿಷ್ಟಾದ್ವೈತದ - ನಯಚಿಂತನಂ’ ವಿಚಾರ ಸಂಕಿರಣಕ್ಕೆ ಚಾಲನೆ

  

ಮೈಸೂರು: ಸಂಸ್ಕೃತ ಸಾಹಿತ್ಯಕ್ಕೆ ತನ್ನದೇ ಆದ ಘನತೆ ಇದೆ. ಅದರ ಬಗ್ಗೆ ಹೆಚ್ಚಿನ ಅರಿವು ಮೂಡಿಸಬೇಕು ಎಂದು ಮೈಸೂರು ವಿಶ್ವವಿದ್ಯಾಲಯದ ಕುಲಪತಿ ಪ್ರೊ.ಎನ್.ಕೆ.ಲೋಕನಾಥ್ ಹೇಳಿದರು.


ಮೇಲುಕೋಟೆಯ ಭಗವದ್ ರಾಮಾನುಜ ರಾಷ್ಟ್ರೀಯ  ಸಂಶೋಧನಾ ಸಂಸತ್ ಹಾಗೂ ಮೈಸೂರು ವಿಶ್ವವಿದ್ಯಾಲಯದ ಪ್ರಾಚ್ಯವಿದ್ಯಾ ಸಂಶೋಧನಾಲಯದ ವತಿಯಿಂದ ಮಾನಸಗಂಗೋತ್ರಿಯ ವಿಜ್ಞಾನ ಭವನದಲ್ಲಿ ಬುಧವಾರ ಹಮ್ಮಿಕೊಂಡಿದ್ದ  ‘ವಿಶಿಷ್ಟಾದ್ವೈತದ - ನಯಚಿಂತನಂ ’ ಎಂಬ ಒಂದು ದಿನದ ರಾಜ್ಯಮಟ್ಟದ ವಿಚಾರ ಸಂಕಿರಣ ಉದ್ಘಾಟಿಸಿ ಅವರು ಮಾತನಾಡಿದರು.


ವೇದಾಂತ ಲೋಕಕ್ಕೆ ಪ್ರಪಂಚಕ್ಕೆ ವಿಶಿಷ್ಟವಾದ ಕೊಡುಗೆಗಳನ್ನು ನೀಡಿದ ಮಹನೀಯರಾದ ರಾಮಾನುಜಾಚಾರ್ಯರು, ಮಧ್ವಾಚಾರ್ಯರು ಹಾಗೂ ಶಂಕರಾಚಾರ್ಯರ ವಿಚಾರ ಲಹರಿಗಳನ್ನು ಇಂದಿನ ಹೊಸ ಪೀಲಿಗೆಗೆ ಸಮರ್ಥವಾಗಿ ತಿಳಿಸುವ ಕೆಲಸಗಳನ್ನು  ಮಾಡಬೇಕು. ಇದಕ್ಕೆ ವಿವಿ ಎಲ್ಲ ರೀತಿಯ ನೆರವು, ಉತ್ತೇಜನ ನೀಡಲಿದೆ ಎಂದರು. ವಿಷ್ಣುವಿನಲ್ಲಿ ಅಚಲ ಭಕ್ತಿ ಇಟ್ಟರೆ ಪರಮಾತ್ಮನನ್ನು ಒಲಿಸಿಕೊಳ್ಳಬಹುದು ಎಂಬುದನ್ನು ರಾಮಾನುಜರು ದರ್ಶನ ಮಾಡಿಸಿದರು. ದೇಶಾದ್ಯಂತ ಸಂಚರಿಸಿ ಸಾಮಾನ್ಯ  ಜನರಲ್ಲಿ ವೈಷ್ಣವ ಭಕ್ತಿಯ ಬೀಜವನ್ನು ಬಿತ್ತಿದರು. ತಮ್ಮ ವಿಶಿಷ್ಟಾದ್ವೈತ ಸಿದ್ಧಾಂತದ ಪ್ರವರ್ತಕರಾಗಿ, ಮಹಾ ವಿಷ್ಣುವಿನ ಆರಾಧಕರಾಗಿ ವಿಶಿಷ್ಟಾದ್ವೈತ ಸಿದ್ಧಾಂತವನ್ನು ಹಿಮಾಲಯದೆತ್ತರಕ್ಕೆ ಬೆಳೆಸಿದರು. ಅವರ ಸಂದೇಶ ಇಂದಿಗೂ ಪ್ರಸ್ತುತ ಎಂದು ಲೋಕನಾಥ್ ಹೇಳಿದರು.


ದೊಡ್ಡ ಕ್ರಾಂತಿ ಮಾಡಿದ್ದರು:

ಭಗವದ್ ರಾಮಾನುಜ ರಾಷ್ಟ್ರೀಯ ಸಂಶೋಧನಾ ಸಂಸತ್ ಕುಲಸಚಿವ ಡಾ.ಎಸ್.ಕುಮಾರ್ ಮಾತನಾಡಿ, ಶತಮಾನದ ಹಿಂದೆ ಬಹು ದೊಡ್ಡ ಕ್ರಾಂತಿಯನ್ನೇ ಮಾಡಿದ್ದ ಶ್ರೀ ರಾಮಾನುಜಾಚಾರ್ಯರ ತತ್ವ, ಸಿದ್ಧಾಂತಗಳ ಬಗ್ಗೆ ಇಂದಿನ ಸಮಾಜಕ್ಕೆ ಅರಿವು ಮೂಡಿಸಬೇಕಿದೆ ಎಂದರು. ಶ್ರೀ ರಾಮಾನುಜರ  ವಿಚಾರ ಲಹರಿಗಳು, ವೇದಾಂತ ದರ್ಶನ, ಅವರ ಗ್ರಂಥಗಳಿಗೆ ಸಂಬಂಧಿಸಿದಂತೆ ಸಾಮಾಜಿಕ ಚಿಂತನೆ, ಸಿದ್ಧಾಂತಗಳ ಕೊಡುಗೆಗಳನ್ನು ಪ್ರಚಾರ ಮಾಡುವ ನಿಟ್ಟಿನಲ್ಲಿ ನಮ್ಮ ಸಂಸತ್‌ನಿಂದ  ವಿವಿಧ ಕಾರ್ಯಕ್ರಮಗಳನ್ನು  ಆಯೋಜಿಸಲಾಗಿದೆ. ಇದಕ್ಕೆ  ಮೈಸೂರು ವಿಶ್ವವಿದ್ಯಾಲಯದ ಪ್ರಾಚ್ಯವಿದ್ಯಾ ಸಂಶೋಧನಾಲಯ ಬೆಂಬಲ ನೀಡಿರುವುದು ಶ್ಲಾಘನೀಯ ಎಂದು ಕುಮಾರ್ ಹೇಳಿದರು.


ಕುಲಪತಿ ಸಹಕಾರ ಅನನ್ಯ:

ಪ್ರಾಚ್ಯವಿದ್ಯಾ ಸಂಶೋಧನಾಲಯದ ನಿರ್ದೇಶಕ ಡಾ.ಡಿ.ಪಿ. ಮಧುಸೂದನಾಚಾರ್ಯ ಮಾತನಾಡಿ, ಮೈಸೂರು ವಿವಿ ಕುಲಪತಿಗಳು ವೇದಾಂತ,ಸಾಹಿತ್ಯ ಮತ್ತು ಸಂಸ್ಕೃತಿ ಪ್ರಸಾರದ ಸೇವೆಗೆ ಸದಾ ಚೈತನ್ಯ ತುಂಬಿ ಪ್ರೋತ್ಸಾಹ  ನೀಡುತ್ತಿರುವುದು ನಮ್ಮೆಲ್ಲರ ಭಾಗ್ಯ ಎಂದರು.  ಮೈಸೂರಿನ ಶ್ರೀಮನ್ಮಹಾರಾಜ ಸಂಸ್ಕೃತ ಮಹಾಪಾಠ ಶಾಲೆಯ ಪ್ರಾಂಶುಪಾಲ ಡಾ. ಬಿ.ಸತ್ಯನಾರಾಯಣ, ಪ್ರಾಚ್ಯವಿದ್ಯಾ ಸಂಶೋಧನಾಲಯದ ನಿವೃತ್ತ ಉಪನಿರ್ದೇಶಕ ವಿದ್ವಾನ್ ಡಾ.ಟಿ.ವಿ ಸತ್ಯನಾರಾಯಣ, ಡಾ. ಶ್ರೀನಿಧಿ ಆಚಾರ್ಯ ಪ್ಯಾಟಿ , ಕೃಷ್ಣ ನಾಗಸಂಪಿಗೆ ಇತರರು ಇದ್ದರು. ಸಂಪನ್ಮೂಲ ವ್ಯಕ್ತಿಗಳು ವಿಚಾರ ಮಂಡಿಸಿದರು.



  ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 

Post a Comment

0 Comments
Post a Comment (0)
Maruti Suzuki Festival of Colours
Maruti Suzuki Festival of Colours
To Top