ಹೆಣ್ಣುಮಗಳೊಬ್ಬರ ಪ್ರಶ್ನೆ ಹುಡುಕುತ್ತಾ ಹೋಗಿ ಈಗ್ಗೆ ಮೂವತ್ತೈದು ವರ್ಷಗಳ ಹಿಂದಿನ ನನ್ನ ಬಾಲ್ಯಕ್ಕೆ ಹೋಗಿ ನಿಂತೆ.
ನಮ್ಮದು ಕರ್ಮಠ ಮಡಿವಂತ ಕುಟುಂಬ. ಅಂದಿನ ಮಲೆನಾಡು ಕರಾವಳಿಯ ಎಲ್ಲಾ ಜಮೀನ್ದಾರರ ಕುಟುಂಬವೂ ಅವಿಭಕ್ತವೇ ಆಗಿದ್ದವು. ಆಗಿನ ಕಾಲದಲ್ಲಿ ಬಹುತೇಕ ಎಲ್ಲರ ಮನೆ ಯಲ್ಲೂ ಹಾಲು ಕರೆವ ಮತ್ತು ಹಸುಗಳಿಗೆ ಮೇವು ಹಾಕುವ ಕೆಲಸ ಮನೆ ಹೆಣ್ಣು ಮಕ್ಕಳದ್ದೇ ಆಗಿತ್ತು. ಮನೆ ತುಂಬಾ ಜನ ಹಾಗೆಯೇ ಕೊಟ್ಟಿಗೆ ತುಂಬಾ ಜಾನುವಾರುಗಳಿದ್ದ ಕಾಲ.
ಮನೆಯ ಹೆಣ್ಣು ಮಗಳೊಬ್ಬಳು (ಸಾಮಾನ್ಯವಾಗಿ ಸೊಸೆ) ರಜ ಆದಾಗ ಆಕೆಗೆ ತಿಂಗಳಿಡಿ ಅಡಿಗೆ ಕೆಲಸ ತೊಳೆಯೋದು ಬಳಿಯೋದು (ಆಗ ಹೆಚ್ಚಿನ ಜನರ ಮನೆಗಳು ಮಣ್ಣಿನ ನೆಲವೇ ಆಗಿದ್ದಿತು. ದೊಡ್ಡ ದೊಡ್ಡ ಮನೆಗಳಾದ್ದರಿಂದ ಒಂದಷ್ಟು ಜನರಿಗೆ ಸಗಣಿ ಹಾಕಿ ನೆಲ ಬಳಿಯೋ ಜವಾಬ್ದಾರಿ ಮನೆಯಲ್ಲಿ ಇರುತ್ತಿತ್ತು) ಪಾತ್ರೆ ಪಡಗ ತೊಳೆಯೋದು, ತಪ್ಪದ ಬಸರಿ ಬಾಣಂತಿಯರ ಸೇವೆ ಮಾಡೋ ಕೆಲಸ ನಿರಂತರವಾಗಿರೋದು.
ಈ ನಡುವೆ ಆ ಕಾಲದಲ್ಲಿ ಹೆಣ್ಣು ಮಕ್ಕಳಿಗೆ ಈ ಆಧುನಿಕ ಕಾಲದ ಸ್ಯಾನಟರಿ ಪ್ಯಾಡುಗಳ ಲಭ್ಯತೆ ಇರುತ್ತಿರಲಿಲ್ಲ. ಈ ಕಾಲದಲ್ಲಿ ಪ್ಯಾಡು ಬಳಸಿ ಎಲ್ಲಾ ಬಗೆಯ ದೈಹಿಕ ಶ್ರಮದ ಕೆಲಸವೂ ಮಹಿಳೆಯರು ಮಾಡುತ್ತಾರೆ. ಒಂದು ಕಡೆ "ರಜ" ದೈಹಕ ಶ್ರಮದ ಸುಸ್ತಿಗೆ ಮತ್ತು ತಿಂಗಳ ಕೆಲಸ ಕಾರ್ಯಗಳಿಗೆ "ಮೂರು ದಿವಸಗಳ ರಜ"ದ ರಜೆ ಹೆಣ್ಣು ಮಕ್ಕಳಿಗೆ "ಮಡಿಯ ನೆಪದಲ್ಲಿ" ಸಾಂಕ್ಷನ್ ಆಗುತ್ತಿತ್ತು.
ಮುಂದೆ ಅವಿಭಕ್ತ ಕುಟುಂಬ ವಿಭಕ್ತ ವಾಯಿತು. ಆಗ ಹೆಣ್ಣು ಮಕ್ಕಳು ರಜ ಅಂತ ಕೊಟ್ಟಿಗೆ ಕೆಲಸವನ್ನು ಮಾಡದೇ ಉಳಿದರೆ ದನ ಕರೆಯೋದು ಮುರ ಕೊಡೋರ ದಿಕ್ಕಿರದಂತಾಗುತ್ತಿತ್ತು. ಆಗ ಈ ಮಡಿ ಅನುಕೂಲ ಸಿಂಧು ವಾಗಿ ರಜ ಕ್ಕೂ ಕೊಟ್ಟಿಗೆ ಕೆಲಸಕ್ಕೂ ಸಂಬಂಧಿಲ್ಲ. ಹೆಣ್ಣು ಮಕ್ಕಳು ರಜ ದಲ್ಲಿ ಕೊಟ್ಟಿಗೆ ಕೆಲಸ ಮಾಡಬಹುದು, ಹಾಲು, ಸಗಣಿ ಮತ್ತು ಗೋಮೂತ್ರ ಎಲ್ಲವನ್ನೂ ಶುದ್ದ ಮಾಡುತ್ತದೆ. ಹಾಲಿಗೆ ಯಾವ ಮಡಿಯೂ ಇಲ್ಲ ಎಂದು ಮಡಿ ಮಾರ್ಪಾಡು ಮಾಡಲಾಯಿತು.
ಇಲ್ಲಿ ಇನ್ನೂ ಒಂದು ಕಾರಣವಿದೆ...
ಮಲೆನಾಡು ಕರಾವಳಿ ದೇಸಿ ತಳಿ ಮಲೆನಾಡು ಗಿಡ್ಡ ತನ್ನ ಹಾಲು ಕರೆಯಲು ಗಂಡಸರಿಗೆ ಬಿಡುತ್ತಿರಲಿಲ್ಲ. ತಿಂಗಳ ಇಪ್ಪತ್ತಾರು ದಿನ ಮನೆಯ ಯಜಮಾನತಿ ಹಾಲು ಕರೆದು ಇಪ್ಪತ್ತೇಳನೇ ದಿನ ಗಂಡಸು ಹಾಲು ಕರೆವ ಪಾತ್ರೆ ತಗೊಂಡು ದನದ ಕಾಲು ಬುಡಕ್ಕೆ ಹೋದ ತಕ್ಷಣ ಗೋವುಗಳು ಜಾಡಿಸಿ ಒದೆಯುತ್ತಿದ್ದವು.
ಆಗ ಊರೂರಿನಲ್ಲಿ ಪ್ಯಾಕೆಟ್ ಹಾಲು ಸಿಗುತ್ತಿರಲಿಲ್ಲ...!! ಮನೆಗೆ ಹಾಲು ಬೇಕೇ ಬೇಕಿತ್ತು. ಆಗ ಅನಿವಾರ್ಯವಾಗಿ ರಜವಾದ ಹೆಣ್ಣು ಮಕ್ಕಳು ಹಾಲು ಕರೆಯಬಹುದು ಎಂದಾಯಿತು.
ಖಂಡಿತವಾಗಿಯೂ ಹೆಣ್ಣು ಮಕ್ಕಳಿಗೆ ರಜ ದ ಸಂಧರ್ಭದಲ್ಲಿ ದೈಹಿಕವಾಗಿ ಸುಸ್ತು ಇಲ್ಲದಿದ್ದರೆ ಗೋವಿನ ಸೇವೆ ಮಾಡಬಹುದು ಅಡ್ಡಿಯಿಲ್ಲ. ಮುಂದೆ ಮಂದೆ ಶಿಕ್ಷಣವನ್ನು ಹಣ್ಣು ಮಕ್ಕಳು ಚೆನ್ನಾಗಿ ಬಳಸಿಕೊಂಡು ವಿಧ್ಯಾಭ್ಯಾಸ ಮಾಡಿ ಪಟ್ಟಣ ಸೇರಿ ಪಟ್ಟಣದ ಹುಡುಗರನ್ನು ಮದುವೆ ಆದರು. ಮೂರನೇ ತಲೆಮಾರು ಮತ್ತು ನಾಲ್ಕನೇ ತಲೆಮಾರಿನ ಹೆಣ್ಣು ಮಕ್ಕಳು ಹಳ್ಳಿಯ ಕೃಷಿ ಜೀವನಕ್ಕೆ ಅಲಭ್ಯವಾದರು.
ಹೆಣ್ಣು ಮಕ್ಕಳು ಮತ್ತು ಮನೆಯ ಗೋವಿಗಳಿಗೂ ನೇರವಾದ ಅನುಭಾದ ಅನುಬಂಧ ಇತ್ತು. ಮನೆಯ ಹೆಣ್ಣು ಮಕ್ಕಳು ಅದೆಲ್ಲಿಂದ ತಮ್ಮ ಕೊಟ್ಟಿಗೆಯ ಹಸುಗಳನ್ನು ಅದರ ಹೆಸರು ಹಿಡಿದು ಕೂಗಿದರೂ ಅಂಬಾ ಎಂದು ಓಡೋಡಿ ಬರುತ್ತಿತ್ತು. ಮನೆಯ ಹೆಂಗಸರು ಕೊಟ್ಟಿಗೆ ಹಸುಗಳ ಜೊತೆಗೆ ಮನೆಯ ಸದಸ್ಯರ ಜೊತೆಗೆ ಮಾತನಾಡಿದಂತೆ ಮಾತನಾಡುತ್ತಿದ್ದರು. ಆದರೆ ಕಾಲ ಬದಲಾಗಿ ಇಪ್ಪತ್ತೊಂದನೇ ಶತಮಾನ ಬರುವ ಹೊತ್ತಿಗೆ ಹಳ್ಳಿಯ ಮನೆಯಲ್ಲಿ ಹೆಣ್ಣು ಮಕ್ಕಳೂ ಇಲ್ಲ. ಹೆಣ್ಣು ಮಕ್ಕಳು ಮುಚ್ಚಟೆಯಿಂದ ಪ್ರೀತಿಯಿಂದ ಗೋ ಸೇವೆ ಮಾಡದ ಕಾರಣ ಈಗ ಎಷ್ಟು ದೊಡ್ಡ ಜಮೀನ್ದಾರರ ಮನೆಯ ಕೊಟ್ಟಿಗೆಯಲ್ಲಿ ಗೋ ಪೂಜೆಗೂ ಹಸು ಇಲ್ಲದಾಗಿದೆ...!!
ಒಂದು ಪ್ರಶ್ನೆಯಲ್ಲಿ ಇವತ್ತಿನ "ಗೋ ಬರ"ದ ಸಾರ ಇದೆ....
ಮುಂದೆ ಮತ್ತೊಂದಷ್ಟು ಇದೇ ಬಗೆಯ ವಿಚಾರವನ್ನು ಮಾತನಾಡೋಣ.
- ಪ್ರಬಂಧ ಅಂಬುತೀರ್ಥ
9481801869
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ