ಅಂಗನವಾಡಿ ಕೇಂದ್ರಗಳು ಸುಧಾರಣೆಯಾಗಲಿ: ನ್ಯಾ.ರಾಜೇಶ್ ಎನ್.ಹೊಸಮನೆ

Upayuktha
0


ಬಳ್ಳಾರಿ: 
ಮಕ್ಕಳಿಗೆ ಗುಣಮಟ್ಟದ ಪೌಷ್ಟಿಕಾಂಶಯುಕ್ತ ಆಹಾರ, ಕ್ರಿಯಾಶೀಲ ಚಟುವಟಿಕೆಗಳಿಗೆ ಆದ್ಯತೆ ನೀಡುವುದರ ಜೊತೆಗೆ ಅವರ ಸರ್ವತೋಮುಖ ಬೆಳವಣಿಗೆಗೆ ಜಿಲ್ಲೆಯಲ್ಲಿನ ಅಂಗನವಾಡಿ ಕೇಂದ್ರಗಳು ಸುಧಾರಣೆಯಾಗಬೇಕು ಎಂದು ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಹಾಗೂ ಹಿರಿಯ ಸಿವಿಲ್ ನ್ಯಾಯಾಧೀಶ ರಾಜೇಶ್ ಎನ್. ಹೊಸಮನೆ ಅವರು ಹೇಳಿದರು.

ನಗರದ ನೂತನ ಜಿಲ್ಲಾ ನ್ಯಾಯಾಲಯ ಸಂಕೀರ್ಣದ ಮೂರನೇ ಮಹಡಿಯ ಸಭಾಂಗಣದಲ್ಲಿ ಜಿಲ್ಲೆಯಲ್ಲಿನ ಅಂಗನವಾಡಿ ಶಾಲೆಗಳ ನಗಯೂನತೆ ಕುರಿತಾಗಿ ಗುರುವಾರ ಏರ್ಪಡಿಸಿದ್ದ ಪತ್ರಿಕಾಗೋಷ್ಟಿಯಲ್ಲಿ ಅವರು ಮಾತನಾಡಿದರು.


ಉಚ್ಛ ನ್ಯಾಯಾಲಯದ ಆದೇಶದನ್ವಯ ಕರ್ನಾಟಕ ಉಚ್ಛನ್ಯಾಯಾಲಯದ ನಿವೃತ್ತ ನ್ಯಾಯಮೂರ್ತಿ ಹಾಗೂ ಅಪೌಷ್ಟಿಕತೆ ನಿವಾರಣಾ ರಾಜ್ಯ ಸಲಹಾ ಸಮಿತಿಯ ಅಧ್ಯಕ್ಷರೂ ಆದ ವೇಣುಗೋಪಾಲಗೌಡ ಇವರ ಅಧ್ಯಕ್ಷತೆಯಲ್ಲಿ ರಾಜ್ಯ ಮಟ್ಟದ ಸಮಿತಿ ರಚಿಸಲಾಗಿದೆ. ಸಮಿತಿಯ ಮೂಲಕ ಆಯಾ ಜಿಲ್ಲೆಯ ಅಂಗನವಾಡಿ ಕೇಂದ್ರಗಳ ಸ್ಥಿತಿಗತಿಯ ಬಗ್ಗೆ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದೊಂದಿಗೆ ಚರ್ಚಿಸಿ ಅಂಗನವಾಡಿಗಳಿಗೆ ಭೇಟಿ ನೀಡಿ ಅಲ್ಲಿಯ ಸ್ಥಿತಿ ಗತಿಗಳ ಬಗ್ಗೆ ಮಾಹಿತಿ ಕಳುಹಿಸಿಕೊಡುವಂತೆ ಸೂಚಿಸಿದ್ದಾರೆ ಎಂದು ಅವರು ಹೇಳಿದರು.


ಹಾಗಾಗಿ ಜಿಲ್ಲೆಯ ಎಲ್ಲ ತಾಲ್ಲೂಕುಗಳ ಅಂಗನವಾಡಿ ಕೇಂದ್ರಗಳಿಗೆ ಒದಗಿಸಿರುವ ಮೂಲ ಸೌಲಭ್ಯ, ಅವುಗಳ ಸ್ಥಿತಿಗತಿ ಕುರಿತು ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರವು ಅಂಗನವಾಡಿ ಕೇಂದ್ರಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಲಿದೆ ಎಂದು ಅವರು ಹೇಳಿದರು. ಬಳ್ಳಾರಿ ಜಿಲ್ಲೆಯಲ್ಲಿ 1358 ಮತ್ತು ವಿಜಯನಗರ ಜಿಲ್ಲೆಯಲ್ಲಿ 1590 ಅಂಗನವಾಡಿ ಕೇಂದ್ರಗಳಿದ್ದು, ಬಳ್ಳಾರಿ ಮತ್ತು ವಿಜಯನಗರ ಜಿಲ್ಲೆಗಳ ನ್ನೊಳಗೊಂಡಂತೆ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದಿಂದ ಸಲಹಾ ಸಮಿತಿಯ ಅಧ್ಯಕ್ಷರ ಮೇರೆಗೆ ಈಗಾಗಲೇ ಪ್ರತಿ ತಾಲ್ಲೂಕಿಗೆ ಸಂಬಂಧಿಸಿದಂತೆ ಕೆಲವು ಅಂಗನವಾಡಿ ಕೇಂದ್ರಗಳಿಗೆ ಭೇಟಿ ನೀಡಿ ಪರಿಶೀಲಿಸಲಾಗಿದೆ ಎಂದು ತಿಳಿಸಿದರು.


ಅಂಗನವಾಡಿಗಳ ಮೂಲ ಸೌಕರ್ಯಗಳನ್ನು ಪರಿಶೀಲಿಸಿದಾಗ ಕೆಲವು ನ್ಯೂನತೆಗಳು ಕಂಡುಬಂದಿದ್ದು, ಸರಿಪಡಿಸುವಂತೆ ಸೂಚಿಸಲಾಗಿದೆ. ಸ್ವಚ್ಛತೆ ಬಗ್ಗೆ ಗಮನ ಹರಿಸಲು ಅಂಗನವಾಡಿ ಕಾರ್ಯಕರ್ತೆಯರಿಗೆ, ಸಹಾಯಕರಿಗೆ ಹಾಗೂ ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳಿಗೆ ನಿರ್ದೇಶನ ನೀಡಲಾಗಿದೆ ಎಂದರು. ಇಂದಿನ ಮಕ್ಕಳೇ ಮುಂದಿನ ಪ್ರಜೆಗಳು. ಹಾಗಾಗಿ, ಉತ್ತಮ ಪ್ರಜೆಗಳನ್ನು ರೂಪಿಸುವುದಕ್ಕಾಗಿ ಮಕ್ಕಳಿಗೆ ಬಾಲ್ಯದಲ್ಲೇ ಉತ್ತಮ ಅಡಿಪಾಯ ಹಾಕಬೇಕು. ಅಂಥ ಅಡಿಪಾಯ ಹಾಕುವ ಅಂಗನವಾಡಿಗಳು ಸಬಲೀಕರಣಗೊಳ್ಳಬೇಕು. ಒಂದೇ ಸೂರಿನಡಿ ಪುಟ್ಟ ಮಕ್ಕಳ ಕಲಿಕೆ, ಆಟ, ಶೌಚಾಲಯ, ಅಡುಗೆ ಮನೆ, ಊಟದ ಮನೆ ಸೇರಿದಂತೆ ಎಲ್ಲಾ ಸೌಲಭ್ಯ ಕಲ್ಪಿಸಬೇಕು ಎಂದು ಹೇಳಿದರು.


ಅತಿಹೆಚ್ಚು ಮಕ್ಕಳಿರುವ ಒಂದು ಗುಂಪಿಗೆ ವಿಸ್ತಾರವಾದ ಕೊಠಡಿ ಬೇಕು. ಹಾಗೆಯೇ ಹೊರಾಂಗಣವೂ ಇರಬೇಕು. ಅಂಗನವಾಡಿ ಕೇಂದ್ರಗಳು ವೈಜ್ಞಾನಿಕವಾಗಿ ಮಕ್ಕಳನ್ನು ಆಕರ್ಷಿಸುವ ಕೇಂದ್ರವಾಗಿರಬೇಕು. ವಿಶಾಲವಾದ ಹಾಲ್, ಅಡುಗೆ ಮನೆ, ಶುದ್ಧ ಕುಡಿಯುವ ನೀರು, ವಿದ್ಯುತ್, ಪ್ರತ್ಯೇಕ ಶೌಚಾಲಯ, ಅಡುಗೆ ಮತ್ತು ಮಕ್ಕಳ ಆಟೋಟ ಸಾಮಗ್ರಿಗಳ ದಾಸ್ತಾನಿಗೆ ಪ್ರತ್ಯೇಕ ಕೊಠಡಿ ಇರಬೇಕು ಎಂದು ತಿಳಿಸಲಾಗಿದೆ ಎಂದರು.


ಒಟ್ಟಾರೆ ಅಂಗನವಾಡಿಗಳು ಇನ್ನು ಸುಧಾರಣೆ ಆಗಬೇಕು. ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಅಧಿಕಾರಿಗಳು, ಶಿಶು ಅಭಿವೃದ್ಧಿ ಯೋಜನಾಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಬೇಕು. ವೈದ್ಯರು ಅಂಗನವಾಡಿಗಳಿಗೆ ನಿಯಮಿತವಾಗಿ ಭೇಟಿ ನೀಡಿ ತಿಂಗಳಿಗೊಮ್ಮೆ ಮಕ್ಕಳ ಆರೋಗ್ಯ ಪರೀಕ್ಷಿಸಬೇಕು. ಸುಧಾರಣೆಗೆ ಕ್ರಮವಹಿಸಿ ಮಕ್ಕಳಿಗೆ ಒಳ್ಳೆಯ ವಾತಾವರಣ, ಶುದ್ಧ ಕುಡಿಯುವ ನೀರು, ಶುಚಿ ರುಚಿಯಾದ ಊಟ ಕಲ್ಪಿಸಿ ಮಕ್ಕಳು ದಿನನಿತ್ಯ ಅಂಗನವಾಡಿಗೆ ಬರುವಂತೆ ವಾತಾವರಣ ಸೃಷ್ಟಿಸಬೇಕು ಎಂದು ಹೇಳಿದರು.


ಮಕ್ಕಳ ಹಾಜರಾತಿ ನಿರ್ವಹಿಸಬೇಕು. ಅಂಗನವಾಡಿ ಶಿಕ್ಷಕಿಯರು ಮತ್ತು ಕಾರ್ಯಕರ್ತೆಯರು ಲಭ್ಯವಿಲ್ಲದಿದ್ದಾಗ ಚಲನ-ವಲನ ಪುಸ್ತಕ ವಹಿಯಲ್ಲಿ ನಮೂದಿಸಿರಬೇಕು. ಜಿಲ್ಲೆಯಲ್ಲಿ ಅಪೌಷ್ಟಿಕ ಮಕ್ಕಳು ಕಂಡಿಬಂದಿಲ್ಲ ಎಂದರು.


ಅಪೌಷ್ಟಿಕತೆಯನ್ನು ತಡೆಯಲು ಕ್ರಮವಹಿಸಬೇಕು, ಬಡ ಮಕ್ಕಳೇ ಅಂಗನವಾಡಿ ಕೇಂದ್ರಗಳಿಗೆ ಬರುತ್ತಾರೆ. ಆರೋಗ್ಯವಂತ, ಶಿಕ್ಷಣವಂತ ಮಕ್ಕಳನ್ನು ರೂಪಿಸುವಲ್ಲಿ ಮೂಲ ಬುನಾದಿ ಅಂಗನವಾಡಿ ಕೇಂದ್ರಗಳಾಗಿವೆ. ಸರ್ಕಾರದಿಂದ ಬರುವ ಸೌಲಭ್ಯಗಳು ಸದ್ಭಳಕೆಯಾಗ ಬೇಕು ಎಂದರು.ಈ ವೇಳೆ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸಿಬ್ಬಂದಿ ಹಾಗೂ ಇತರರು ಉಪಸ್ಥಿತರಿದ್ದರು.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 

Post a Comment

0 Comments
Post a Comment (0)
Maruti Suzuki Festival of Colours
Maruti Suzuki Festival of Colours
To Top