ನಂಬಿಕೆ ಅನ್ನೋದು ನಮ್ಮೊಳಗಿನ ಮಾನಸಿಕ ಸ್ಥಿತಿ. ಅಮೂರ್ತವಾದ ಪರಿಕಲ್ಪನೆ. ನಮ್ಮೆಲ್ಲರ ಅಸ್ತಿತ್ವ ನಂಬಿಕೆಯಿಂದಲೇ ಕೂಡಿದೆ. ಬದುಕಿನಲ್ಲಿ ನಂಬಿಕೆ ಇಲ್ಲದ ಮೇಲೆ ಉಳಿದಿರುವುದಾದರೂ ಏನು ಎಂಬ ಪ್ರಶ್ನೆ ಕಾಡದಿರದು. ಭಾರತೀಯ ಪರಂಪರೆಯಲ್ಲಿ ನಂಬಿಕೆಗೆ ಮಹತ್ವದ ಸ್ಥಾನಮಾನವಿದೆ. ಹಾಗಾದರೆ
ನಂಬಿಕೆ ಎಂದರೇನು? ಯಾವುದು ನಮಗೆ ಕಾಣಿಸದೆ ಹೋದರೂ ಅದರ ಮೇಲೆ ವಿಶ್ವಾಸ ಇಡಲು ಸಿದ್ಧರಾಗಿದ್ದೇವೆಯೋ ಅದೇ ನಂಬಿಕೆ. ಪರೀಕ್ಷೆಯಲ್ಲಿ ನಮಗೆ ಗೆಲುವು ಇನ್ನೂ ಕಾಣಿಸದೆ ಇದ್ದರೂ, ನಾವೇ ಗೆಲ್ಲುತ್ತೇವೆ ಎಂಬ ವಿಶ್ವಾಸವನ್ನು ಹೊಂದಿರುವ ಒಂದು ಮನೋಭಾವವೇ ನಂಬಿಕೆ.
ನಂಬಿಕೆ ಹೆಚ್ಚಿದಂತೆ ವ್ಯಕ್ತಿಯ ಆತ್ಮವಿಶ್ವಾಸ ಹೆಚ್ಚುತ್ತದೆ. ಮನೋಸಂಕಲ್ಪ ದೃಢವಾಗುತ್ತದೆ. ಆತ್ಮಬಲ ವೃದ್ಧಿಸುತ್ತದೆ. ಆತ್ಮಪ್ರಜ್ಞೆ ಜಾಗೃತಗೊಳ್ಳುತ್ತದೆ. ವ್ಯಕ್ತಿಯ ದೈಹಿಕ ಅಂಗಾಂಗಗಳು ಕ್ರಿಯಾಶೀಲತೆ ಪಡೆಯುತ್ತವೆ. ಆಲಸ್ಯತನ ದೂರವಾಗುತ್ತದೆ. ನರನಾಡಿಗಳು ಚೈತನ್ಯವನ್ನು ಹೊಂದುತ್ತವೆ. ಕಣ್ಣುಗಳಲ್ಲಿ ಗುರಿತಲುಪುವ, ಸಾಧನೆಯ ಮಾರ್ಗ ಮಾತ್ರ ಗೋಚರಿಸುತ್ತಿರುತ್ತದೆ.
ಧನಾತ್ಮಕ ಶಕ್ತಿ ಬೆಳೆಯುತ್ತದೆ. ಧನಬಲ ಮತ್ತು ಜನಬಲವು ನಂಬಿಕಾರ್ಹ ವ್ಯಕ್ತಿಯ ಕಡೆಗೆ ಧಾವಿಸುತ್ತದೆ. ಕಾರ್ಯ ವೈಖರಿಯ ವಿಧಾನ ಸಮತೋಲನ ಹೊಂದಿರುತ್ತದೆ. ನಂಬಿಕೆಯಿಂದ ಕೈಗೊಳ್ಳುವ ಕೆಲಸ ಋಷಿಯ ಕಠೋರ ತಪಸ್ಸಿನಂತಿರುತ್ತದೆ ಮತ್ತು ಕಷ್ಟ ಸಹಿಷ್ಣುತೆಯ ಮನೋಭಾವ ಗಟ್ಟಿಯಾಗಿರುತ್ತದೆ. ಆದ್ದರಿಂದಲೇ ಋಷಿಮುನಿಗಳು ಸಾಮಾನ್ಯಜನರಿಗಿಂತ ವಿಭಿನ್ನರಾಗಿ ಕಾಣುತ್ತಾರೆ.
ನಂಬಿಕೆಯಿಂದಲೇ ಯಶಸ್ಸು ಸಿದ್ಧಿಸುತ್ತದೆ. ನಂಬಿಕೆ ಕಡಿಮೆಯಾದಂತೆ ವ್ಯಕ್ತಿಯ ಆತ್ಮವಿಶ್ವಾಸ ಕುಗ್ಗುತ್ತದೆ. ಮನಸ್ಸು ವಿಕಲ್ಪದತ್ತ ವಾಲುತ್ತದೆ. ಆತ್ಮಬಲ ಕಡಿಮೆಯಾಗುತ್ತದೆ. ಆತ್ಮಪ್ರಜ್ಞೆ ಜಾಗೃತಗೊಳ್ಳುವುದಿಲ್ಲ. ವ್ಯಕ್ತಿಯ ದೈಹಿಕ ಅಂಗಾಂಗಗಳು ನಿಷ್ಕ್ರಿಯತೆ ಪಡೆಯುತ್ತವೆ. ಹುರುಪು ಕಡಿಮೆಯಾಗಿ ಸೋಮಾರಿತನ ಹೆಚ್ಚಾಗುತ್ತದೆ. ನರನಾಡಿಗಳು ರೋಗಗ್ರಸ್ತವಾ ಗುತ್ತವೆ. ಸಾಧನೆಯ ಮಾರ್ಗ ಕಾಣುವುದಿಲ್ಲ. ನಕಾರಾತ್ಮಕ ಶಕ್ತಿ ಬೆಳೆಯುತ್ತವೆ.
ಇದರಿಂದಾಗಿ ವ್ಯಕ್ತಿಯ ವ್ಯಕ್ತಿತ್ವದ ಅಧಃಪತನ ಪ್ರಾರಂಭ ವಾಗುತ್ತದೆ. ಕಷ್ಟ ಸಹಿಷ್ಣುತೆಯ ಮನೋಭಾವ ಇರುವುದಿಲ್ಲ. ಮುಂಗೋಪಿಗಳಾಗುತ್ತಾರೆ. ಧನಬಲ, ಜನಬಲ ಮತ್ತು ಮನೋಬಲವನ್ನು ಕಳೆದುಕೊಳ್ಳುತ್ತಾರೆ. ಕಾರ್ಯ ವೈಖರಿಯ ವಿಧಾನ ಅಸಮತೋಲನವಾಗುತ್ತದೆ. ಚಂಚಲತೆ ಪ್ರತಿ ಹಂತದಲ್ಲೂ ಕಂಡುಬರುತ್ತದೆ. ನಂಬಿಕೆಯಿಲ್ಲದಿದ್ದರೆ ಯಾವ ಯಶಸ್ಸು ಸಿದ್ಧಿಸುವುದಿಲ್ಲ. ನಂಬಿಕೆಯ ವಿಚಾರದಲ್ಲಿ ಇಡೀ ವಿಶ್ವದಲ್ಲೇ ಭಾರತೀಯರು ಅನನ್ಯರಾಗಿದ್ದಾರೆ. ಭಾರತೀಯರ ನಂಬಿಕೆ ವಿವಾಹ ಮತ್ತು ಕುಟುಂಬ ಎಂಬ ಎರಡು ಸಂಸ್ಥೆಗಳಲ್ಲಿ ಮೇರುಮಟ್ಟದಲ್ಲಿದೆ.
ಭಾರತೀಯರ ನಂಬಿಕೆ ಶೀಲ, ಸೌಜನ್ಯ, ಸಂಯಮಗಳಲ್ಲಿದೆ. ಭಾರತೀಯರ ನಂಬಿಕೆ ಋಗ್ವೇದ, ಯಜುರ್ವೇದ, ಸಾಮವೇದ, ಅಥರ್ವವೇದ ಇವುಗಳಲ್ಲಿದೆ. ಈಶ, ವ್ಯಾಸ, ಕಠೋ, ಪ್ರಶ್ನ, ಚಾಂಡೂಕ್ಯ, ಮಾಂಡೋಕ್ಯ, ಮುಂತಾದ ಉಪನಿಷತ್ತುಗಳಲ್ಲಿ ಭಾರತೀಯರ ನಂಬಿಕೆಯಿದೆ. ಮಹಾಭಾರತ, ರಾಮಾಯಣ, ಭಗವದ್ಗೀತೆಗಳಲ್ಲಿ ನಂಬಿಕೆಯಿದೆ. ಆಗಮಶಾಸ್ತ್ರಗಳಲ್ಲಿ, ದರ್ಶನಶಾಸ್ತ್ರಗಳಲ್ಲಿ, ಯೋಗಶಾಸ್ತ್ರಗಳಲ್ಲಿ, ವೇದಾಂಗಗಳಲ್ಲಿ, ಅರಣ್ಯಕಗಳಲ್ಲಿ, ಬ್ರಾಹ್ಮಣ್ಯಕಗಳಲ್ಲಿ ತತ್ವಶಾಸ್ತ್ರಗಳಲ್ಲಿ, ಚರಕಸಂಹಿತೆ, ಸುಶ್ರುತ ಸಂಹಿತೆ ಚಾಣಕ್ಯನ ರಾಜನೀತಿ ಶಾಸ್ತ್ರದಲ್ಲಿ ಇತ್ಯಾದಿ ನೀತಿಸಂಹಿತೆಗಳಲ್ಲಿ ಭಾರತೀಯರ ದೃಢವಾದ ನಂಬಿಕೆಯಿದೆ.
ಮಿಗಿಲಾಗಿ ಭಾರತೀಯ ಕಾನೂನು ಶಾಸ್ತ್ರ ನಮ್ಮ ಸಂವಿಧಾನದಲ್ಲಿ ಸದೃಢವಾದ ವಿಶ್ವಾಸವಿದೆ. ಭಾರತದ ಸಂವಿಧಾನವು ನಮಗೆ ನೀಡಿರುವ ಹಕ್ಕುಗಳು ಮತ್ತು ಕರ್ತವ್ಯಗಳ ಮೇಲೆ ನಂಬಿಕೆಯಿದೆ. ನಮ್ಮೆಲ್ಲಾ ಯೋಧರ ಮೇಲೆ ನಮಗೆ ಹೆಮ್ಮೆಯ ನಂಬಿಕೆಯಿದೆ. ಹಗಲು ರಾತ್ರಿಗಳೆನ್ನದೆ ನಮ್ಮ ಯೋಧರು, ತಮ್ಮ ಕರ್ತವ್ಯವನ್ನು ಪ್ರಾಮಾಣಿಕತೆಯಿಂದ ನಿರ್ವಹಿಸುತ್ತಿದ್ದಾರೆ. ನಮಗೆ ಪ್ರತಿನಿತ್ಯದ ಅನ್ನವನ್ನು ನೀಡುವ ಅನ್ನದಾತ ರೈತರ ಮೇಲೆ ಭಾರತೀಯರ ಅಚಲವಾದ ನಂಬಿಕೆಯಿದೆ. ಈ ನಂಬಿಕೆಯಿಂದಲೇ ಭಾರತದ ನೂರ ಮೂವತ್ತೈದು ಕೋಟಿ ಜನರ ಬದುಕು ಸಾಗುತ್ತಿದೆ. ಏಕೆಂದರೆ ನಂಬಿಕೆ ಭಾರತೀಯ ಮನೋಭವನದ ಅಡಿಗಲ್ಲು.
ಇದೇ ಎಲ್ಲಾ ಸಂಬಂಧಗಳ ತಳಪಾಯ. ತಳಪಾಯ ಗಟ್ಟಿಯಾಗಿಲ್ಲದಿದ್ದರೆ, ಅದರ ಮೇಲೆ ನಿರ್ಮಾಣಗೊಂಡ ಮನೆ ಹೇಗೆ ಮುರಿದು ಬೀಳುವುದೋ ಹಾಗೆ ನಂಬಿಕೆ ಗಟ್ಟಿಯಾಗಿಲ್ಲದಿದ್ದರೆ ಮನಸ್ಸುಗಳು ಮುರಿದುಬಿದ್ದು, ಯಾವ ಸಂಬಂಧಗಳೂ ಉಳಿಯಲಾರದು. ತಂದೆ, ತಾಯಿ-ಮಕ್ಕಳ, ಸಹೋದರ-ಸಹೋದರಿ, ಗುರು-ಶಿಷ್ಯ, ಗಂಡ- ಹೆಂಡತಿ, ಬಂಧು- ಬಳಗ, ಸ್ನೇಹಿತರು ಯಾವುದೇ ಸಂಬಂಧವಿರಬಹುದು. ಎಲ್ಲವೂ ನಂಬಿಕೆಯ ಮೇಲೆ ನಿಂತಿರುತ್ತವೆ. ನಂಬಿ ಕೆಟ್ಟವರಿಲ್ಲವೋ... ರಂಗಯ್ಯನಾ ಎಂಬ ದಾಸವಾಣಿಯನ್ನು ನಾವು ಕೇಳಿದ್ದೇವೆ. ಹಾಗೆಂದ ಮಾತ್ರಕ್ಕೆ ಎಲ್ಲವನ್ನೂ, ಎಲ್ಲರನ್ನೂ ನಂಬಬೇಕು ಎಂದೇನೂ ಇಲ್ಲ. ನಂಬಿಕೆಗೂ ಒಂದು ಮಿತಿಯಿರಬೇಕು. ಯಾರನ್ನು, ಯಾವ ಸಮಯದಲ್ಲಿ ಎಷ್ಟು ನಂಬಬೇಕು ಎಂಬ ನಿರ್ಧಾರ ತೆಗೆದುಕೊಳ್ಳುವುದು ಸ್ಪಲ್ಪ ಕಷ್ಟವೇ ಸರಿ. ಆದರೂ ನಂಬಿಕೆ ಬಹಳ ಮಹತ್ವವಿದೆ.
ಮಹಾಕಾವ್ಯ ಮಹಾಭಾರತದಲ್ಲಿ ಅರ್ಜುನನು ಕೌರವ ಸಮೂಹವನ್ನು ಎದುರಿಸಿ ನಿಂತದ್ದು ತನ್ನ ಬಿಲ್ಲು ಬಾಣಗಳಿಂದಲ್ಲ, ಶ್ರೀಕೃಷ್ಣ ತನ್ನ ಜತೆಗಿದ್ದಾನೆ ಎಂಬ ನಂಬಿಕೆಯಿಂದ. ಅಭಿಮನ್ಯು ಚಕ್ರವ್ಯೂಹ ಭೇದಿಸಿದ್ದು ತನ್ನ ಸಾಮರ್ಥ್ಯದ ಮೇಲಿನ ನಂಬಿಕೆಯಿಂದ. ಬಡವನಾದ ಸುಧಾಮನು ಒಂದು ಹಿಡಿ ಅವಲಕ್ಕಿಯನ್ನು ತೆಗೆದುಕೊಂಡು ತನ್ನ ಬಾಲ್ಯ ಸ್ನೇಹಿತ ಕೃಷ್ಣನಲ್ಲಿಗೆ ಬಂದದ್ದು,
ಕೃಷ್ಣನು ತನ್ನ ಬಡತನವನ್ನು ನೀಗಿಸಲು ಸಹಾಯ ಮಾಡುವನು ಎಂಬ ನಂಬಿಕೆಯಿಂದ. ಏಕಲವ್ಯನು ಅರ್ಜುನನನ್ನು ಮೀರಿಸುವಂತೆ ಬಿಲ್ವಿದ್ಯೆಯನ್ನು ಕಲಿತದ್ದು, ಗುರು ದ್ರೋಣಾಚಾರ್ಯರ ಮಣ್ಣಿನ ಮೂರ್ತಿಯಲ್ಲಿ ಸ್ವತಃ ಗುರು ದ್ರೋಣರೇ ಇದ್ದಾರೆ ಎಂಬ ನಂಬಿಕೆಯಿಂದ ಎಂಬುದು ನಮಗೆ ತಿಳಿದುಬರುತ್ತದೆ.
ಇನ್ನು ಸ್ನೇಹ -ಸಂಬಂಧಗಳು ಸುಸ್ಥಿತಿಯಲ್ಲಿರಲು ಪರಸ್ಪರ ನಂಬಿಕೆ ಇರಬೇಕು. ನಂಬಿಕೆ ಇಲ್ಲದ ಸಂಬಂಧ ಒಡೆದು ಹೋದ ಹಾಲಿನಂತೆ, ಮುರಿದು ಬಿದ್ದ ಕನ್ನಡಿಯಂತೆ. ನಂಬಿಕೆಯಿಂದ ಉತ್ಸಾಹ ಹುಟ್ಟುತ್ತದೆ. ಒಂದು ಸಕಾರಾತ್ಮಕ, ಪರಿಶುದ್ಧ ನಂಬಿಕೆ ಬದುಕನ್ನು ಸುಂದರವಾಗಿ ರೂಪಿಸುತ್ತದೆ. ಅಸಾಧ್ಯವನ್ನು ಸಾಧ್ಯವಾಗಿಸಬಲ್ಲದು ಈ ನಂಬಿಕೆ. ತಂದೆ -ತಾಯಿಗೆ ತಮ್ಮ ಮಕ್ಕಳು ಚೆನ್ನಾಗಿ ಓದಿ ವಿದ್ಯಾವಂತರಾಗುತ್ತಾರೆ, ಒಳ್ಳೆಯವರಾಗುತ್ತಾರೆ. ತಾವು ಹೇಳಿದ ಮಾತನ್ನು ಕೇಳುತ್ತಾರೆ ಎಂಬ ನಂಬಿಕೆ. ಮಗುವಿಗೆ ತನ್ನ ತಂದೆ ತಾಯಿ ತಾನು ಕೇಳಿದ್ದನ್ನೆಲ್ಲಾ ಕೊಡಿಸುತ್ತಾರೆ ಎಂಬ ನಂಬಿಕೆ, ವಿದ್ಯಾರ್ಥಿಗಳಿಗೆ ಗುರುಗಳು ಏನೇ ಹೇಳಿಕೊಟ್ಟರೂ ಸರಿಯಾಗಿರುತ್ತದೆ ಎಂಬ ನಂಬಿಕೆ. ಪ್ರೇಮಿಗಳಿಗೆ ಪ್ರೀತಿಯಲ್ಲಿ ನಂಬಿಕೆ.
ಆಸ್ತಿಕರಿಗೆ ದೇವರ ಮೇಲೆ ನಂಬಿಕೆ, ನಾಸ್ತಿಕರಿಗೆ ಎಲ್ಲವೂ ಸುಳ್ಳು ಎಂಬ ನಂಬಿಕೆ. ವಯೋವೃದ್ಧ ತಂದೆ ತಾಯಿಗಳು ಮಕ್ಕಳು ತಮ್ಮ ವೃದ್ಧಾಪ್ಯದಲ್ಲಿ ನೆರವಾಗುತ್ತಾರೆ ಎಂಬ ನಂಬಿಕೆ. ಹೀಗೆಯೇ ಒಬ್ಬೊಬ್ಬರಿಗೆ ಒಂದೊಂದು ರೀತಿಯಲ್ಲಿ ನಂಬಿಕೆಗಳು ತಮ್ಮನ್ನು ಕಾಪಾಡುತ್ತವೆ ಹಾಗೂ ಬೆಳೆಸುತ್ತವೆ ಎಂಬ ನಂಬಿಕೆಯಿಂದಲೇ ಬದುಕುತ್ತಾರೆ. ನಮಗೆ ಹಾಗೂ ನಮ್ಮ ನೆರೆಹೊರೆಯವರಿಗೆ ಯಾವುದೋ ಅಮೂರ್ತ ಶಕ್ತಿಯ ಮೇಲಿನ ನಂಬಿಕೆ ಇದ್ದೇ ಇರುತ್ತದೆ. ನಂಬಿಕೆಯಿಲ್ಲದೆ ಯಾರೂ ಅಸ್ತಿತ್ವದಲ್ಲಿರಲು ಸಾಧ್ಯವಿಲ್ಲ. ಸಾಮಾನ್ಯವಾಗಿ ನಾವು ಆಗಾಗ ಹೇಳುತ್ತಿರುತ್ತೇವೆ.
ಇದು ನನ್ನಿಂದ ಸಾಧ್ಯವಾಗುವುದಿಲ್ಲ, ನನ್ನ ಮನೋಭಾವಕ್ಕೆ ಇದು ಹೊಂದುವುದಿಲ್ಲ, ನನಗೆ ಲಭ್ಯವಿರುವಷ್ಟರಲ್ಲಿ ಇದು ಆಗುವುದಿಲ್ಲ. ಬಡತನವಿದೆ, ಜವಾಬ್ದಾರಿ ಹೆಚ್ಚಿದೆ, ಈಗ ಸಮಯವಿಲ್ಲ ಎಂಬ ಸಮರ್ಥನೆಗಳನ್ನೇ ತುಂಬಿಕೊಂಡು ಬದುಕುತ್ತೇವೆ. ಇಂತಹ ಸಮರ್ಥನೆಗಳು ನಮನ್ನು ನಕಾರಾತ್ಮಕ ಆಲೋಚನೆಗಳಿಗೆ, ಭಾವನೆಗಳಿಗೆ ತಳ್ಳಿಬಿಡುತ್ತವೆ. ನಾವು ನಮಗರಿವಿಲ್ಲದೆಯೇ ಅವುಗಳ ಗುಲಾಮರಾಗಿಬಿಡುತ್ತೇವೆ.
ಆದ್ದರಿಂದ ಈ ಜೀವನದಲ್ಲಿ ನಕಾರಾತ್ಮಕತೆಯಿಂದ ಹೊರಬಂದು ಸಕಾರಾತ್ಮಕವಾಗಿ ಬದುಕಲು ನಂಬಿಕೆಯೇ ಬುನಾದಿ ಎಂಬುದನ್ನು ಅರಿತು, ಮೊದಲು ನಮ್ಮ ಮೇಲೆ ನಮಗೆ ನಂಬಿಕೆ ಇಟ್ಟುಕೊಳ್ಳೋಣ. ನಂಬಿಕೆ ಇಲ್ಲದ ಬದುಕು ಭ್ರಮೆಯಾಗುತ್ತದೆ. ಸ್ವಸಾಮರ್ಥ್ಯದಲ್ಲಿ ನಂಬಿಕೆ ಇಟ್ಟು ಸಾಧಿಸುವ ಛಲಹೊತ್ತು ಸೂಕ್ತ ದಾರಿ ಆಯ್ದುಕೊಂಡರೆ ಉಜ್ವಲವಾದ ಭವಿಷ್ಯ ಕಾಣಬಹುದು. ನಂಬಿಕೆಯ ಮೇಲೆ ನಂಬಿಕೆಯನ್ನಿಟ್ಟು ಬಾಳಿನ ಹಾದಿಯಲ್ಲಿ ಬದುಕಿನ ಬಂಡಿಯನ್ನು ಎಳೆಯೋಣ. ಸಾರ್ಥಕ ಜೀವನ ಸಾಗಿಸೋಣ.
-ಕೆ. ಎನ್. ಚಿದಾನಂದ, ಹಾಸನ.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ